ನಮ್ಮ ಮೆಟ್ರೋ ಸೌಂದರ್ಯ ಗಬ್ಬೆಬ್ಬಿಸಲು ಬಿಎಂಆರ್ಸಿಎಲ್ ಜಾಹೀರಾತು ಒಪ್ಪಂದ
ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳು, ಆವರಣಗಳು ಮತ್ತು ರೈಲುಗಳ ಒಳಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಬಿಎಂಆರ್ಸಿಎಲ್ ಎರಡು ಸಂಸ್ಥೆಗಳೊಂದಿಗೆ ವಾರ್ಷಿಕ 3.5 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಸುಂದರ ಮತ್ತು ಸ್ವಚ್ಛವಾಗಿರುವ ನಮ್ಮ ಮೆಟ್ರೋವನ್ನು ಗಬ್ಬೆಬ್ಬಿಸಲು ಮುಂದಾಗಿದೆ.

ನಮ್ಮ ದೇಶದಲ್ಲಿ ಹಲವು ನಗರಗಳಲ್ಲಿ ಮೆಟ್ರೋ ರೈಲು ಸೇವೆ ಇದ್ದರೂ ಅತ್ಯಂತ ಸ್ವಚ್ಛ ಮತ್ತು ಸುಂದರ ಮೆಟ್ರೋಗಳಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಕೂಡ ಒಂದಾಗಿತ್ತು. ಆದರೆ, ಬಿಎಂಆರ್ಸಿಎಲ್ ಸಂಸ್ಥೆಗೆ ಧನ ದಾಹ ಹೆಚ್ಚಾಗಿದ್ದು, ಹಣಕ್ಕಾಗಿ ಬೆಂಗಳೂರು ನಗರದಲ್ಲಿ ಬ್ಯಾನ್ ಮಾಡಲಾದ ಜಾಹೀರಾತು ಪ್ರದರ್ಶನವನ್ನು ಮೆಟ್ರೋದಲ್ಲಿ ಜಾರಿಗೊಳಿಸಿ ಗಬ್ಬೆಬ್ಬಿಸಲು ಮುಂದಾಗಿದೆ. ಇನ್ನುಮುಂದೆ ಮೆಟ್ರೋ ನಿಲ್ದಾಣಗಳು, ಮೆಟ್ರೋ ಆವರಣಗಳು, ಮೆಟ್ರೋ ರೈಲಿನ ಒಳಭಾಗದಲ್ಲಿಯೂ ಜಾಹೀರಾತು ಪ್ರದರ್ಶನ ಮಾಡುವುದಕ್ಕೆ ಎರಡು ಸಂಸ್ಥೆಗಳೊಂದಿಗೆ ವಾರ್ಷಿಕ 3.5 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನುಯ ಹೊರಡಿಸಿರುವ ಬಿಎಂಆರ್ಸಿಎಲ್, ಜಾಹೀರಾತು ಆದಾಯ ಗಳಿಕೆಗಾಗಿ ಬಿಎಂಆರ್ಸಿಎಲ್ ಮುದ್ರಾ ವೆಂಚರ್ಸ್ ಮತ್ತು ಲೋಕೇಶ್ ಔಟ್ಡೋರ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ಪರ್ಪಲ್ ಲೈನ್ ಮತ್ತು ಹಸಿರು ಮಾರ್ಗದ ರೈಲುಗಳಲ್ಲಿ ಜಾಹೀರಾತು ಹಕ್ಕುಗಳಿಗಾಗಿ ಕ್ರಮವಾಗಿ ಮುದ್ರಾ ವೆಂಚರ್ಸ್ ಮತ್ತು ಲೋಕೇಶ್ ಔಟ್ ಡೋರ್ ಸಂಸ್ಥೆಗಳೊಂದಿಗೆ ಪ್ರತ್ಯೇಕ ಒಪ್ಪಂದಗಳಿಗೆ 7 ವರ್ಷಕ್ಕೆ ಒಂಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಸಹಕಾರವು ಸುಮಾರು ₹ 25 ಕೋಟಿ ಆದಾಯ ನಿರೀಕ್ಷೆಯಲ್ಲಿದ್ದು, ಬೆಂಗಳೂರು ಮೆಟ್ರೋ ಮಾರ್ಗಗಳಲ್ಲಿ ಕಂಡುಬರುವ ಹೆಚ್ಚಿನ ಪ್ರಯಾಣಿಕ ಸಂಖ್ಯೆಯ ಲಾಭವನ್ನು ತೆಗೆದುಕೊಳ್ಳುವ ಗುರಿಯಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗೆ ಹೊಸ ಎಂಟ್ರಿ-ಎಕ್ಸಿಟ್; ಸಂಸದ ಡಾ.ಸಿ.ಎನ್. ಮಂಜುನಾಥ್
ಈ ಒಪ್ಪಂದದಡಿಯಲ್ಲಿ ರೈಲು ರಾಪಿಂಗ್ ಹಾಗೂ ರೈಲಿನ ಒಳಾಂಗಣ ಜಾಹೀರಾತು ಸೇರಿದಂತೆ ವಿವಿಧ ಜಾಹೀರಾತು ಮಾಧ್ಯಮಗಳ ಬಳಕೆಯು ನಡೆಯಲಿದೆ. ಇದರ ಮೂಲಕ ಬ್ರಾಂಡ್ಗಳು ಮೆಟ್ರೋದಲ್ಲಿ ಪ್ರತಿದಿನ ಪ್ರಯಾಣಿಸುವ ಲಕ್ಷಾಂತರ ಜನರಿಗೆ ತಲುಪುವ ಅಪರೂಪದ ಅವಕಾಶವನ್ನು ಪಡೆಯಲಿವೆ. ಬಿಎಂಆರ್ಸಿಎಲ್ ತನ್ನ ಟಿಕೆಟ್ ಮಾರಾಟದ ಆದಾಯವಲ್ಲದೆ ಬದಲಿಯಾಗಿ ಶಾಶ್ವತ ಆದಾಯ ಮಾರ್ಗಗಳನ್ನು ಹುಡುಕುವ ಪ್ರಯತ್ನದ ಭಾಗವಾಗಿ ಈ ಕ್ರಮವನ್ನು ಕೈಗೊಂಡಿದೆ.
ಟ್ರಾನ್ಸಿಟ್ ಮೀಡಿಯಾ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿರುವ ಮುದ್ರಾ ವೆಂಚರ್ಸ್ ಮತ್ತು ಲೋಕೇಶ್ ಔಟ್ಡೋರ್, ಪರ್ಪಲ್ ಮತ್ತು ಹಸಿರು ಮಾರ್ಗಗಳಲ್ಲಿ ಆಕರ್ಷಕ ವಿನ್ಯಾಸ ಹಾಗೂ ನವೀನ ಜಾಹೀರಾತು ಮಾದರಿಗಳನ್ನು ಪರಿಚಯಿಸುವ ಮೂಲಕ ಬೆಂಗಳೂರು ಮೆಟ್ರೋ ವ್ಯವಸ್ಥೆಯನ್ನು ಇನ್ನಷ್ಟು ಜೀವನವಾದ ಸಾರ್ವಜನಿಕ ಸ್ಥಳವನ್ನಾಗಿ ಮಾಡಲಿದ್ದಾರೆ.
ಮುದ್ರಾ ವೆಂಚರ್ಸ್ ಮತ್ತು ಲೋಕೇಶ್ ಔಟ್ಡೋರ್ ಸಂಸ್ಥೆಗಳೊಂದಿಗೆ ಈ ಸಹಕಾರದ ಮೂಲಕ, ಬಿಎಂಆರ್ಸಿಎಲ್ ವಿಶ್ವಮಟ್ಟದ ಮೆಟ್ರೋ ಸೇವೆಗಳನ್ನು ನೀಡುವುದರ ಜೊತೆಗೆ ನೂತನ ವ್ಯಾಪಾರ ಮಾದರಿಗಳನ್ನು ಅಳವಡಿಸಿಕೊಂಡು ಆರ್ಥಿಕ ಶಾಶ್ವತತೆಯನ್ನು ಖಚಿತಪಡಿಸಲು ಮತ್ತು ನಗರ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾಗುತ್ತದೆ.
-ಎಂ. ಮಹೇಶ್ವರ ರಾವ್, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್ಸಿಎಲ್
ಇದನ್ನೂ ಓದಿ: ಬಿರು ಬೇಸಿಗೆಗೆ ಕೆರೆ, ಜಲಾಶಯ ಖಾಲಿ ಖಾಲಿ : ರಾಜ್ಯದ 17,000 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು!
ಬೆಂಗಳೂರಿನಲ್ಲಿ ಜಾಹೀರಾತು ಪ್ರದರ್ಶನ ನಿಷೇಧ:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯಾವುದೇ ಮಾದರಿಯ ಜಾಹೀರಾತು ಪ್ರದರ್ಶನ ಮಾಡಬಾರದು ಎಂದು ನ್ಯಾಯಾಲಯವು ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಆದ್ದರಿಂದ ಬಿಬಿಎಂಪಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಿದ್ದು, ಯಾರೇ ಜಾಹೀರಾತು ಪ್ರದರ್ಶನದ ಬ್ಯಾನರ್, ಬಂಟಿಂಗ್ಸ್ ಹಾಕಿದ್ದರೂ ಅವುಗಳನ್ನು ತೆರವು ಮಾಡುತ್ತದೆ. ಜೊತೆಗೆ, ಜಾಹೀರಾತು ಪ್ರದರ್ಶನ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಜೊತೆಗೆ ಇತರೆ ಕ್ರಮ ಜರುಗಿಸುತ್ತದೆ. ಆದರೂ, ಬಿಬಿಎಂಪಿ ಕೆಲವೊಂದು ಸ್ಕೈವಾಕ್, ಬಸ್ ತಂಗುದಾಣ, ಶೌಚಾಲಯ ಸೇರಿದಂತೆ ಇತರೆ ನಿರ್ಮಾಣಗಳನ್ನು ಮಾಡಲು ಹಣ ಹೂಡಿಕೆ ಮಾಡುವ ಸಂಸ್ಥೆಗಳಿಗೆ ತಮ್ಮ ಜಾಹೀರಾತು ಪ್ರದರ್ಶನಕ್ಕೆ ವಾಮ ಮಾರ್ಗದ ಮೂಲಕ ಅವಕಾಶ ಮಾಡಿಕೊಟ್ಟಿದೆ. ಇದರಲ್ಲಿ ಪಾಲಿಕೆ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಬಿಎಂಟಿಸಿ ಬಸ್ಗಳ ಅಂದಗೆಡಿಸಿದ ಜಾಹೀರಾತು:
ಬೆಂಗಳೂರಿನಲ್ಲಿ ಜಾಹೀರಾತು ಪ್ರದರ್ಶನ ನಿಷೇಧ ಮಾಡಿದ್ದರೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಾಮ ಮಾರ್ಗದಲ್ಲಿ ಬಸ್ ಮೇಲೆಲ್ಲಾ ಜಾಹೀರಾತು ಫಲಕಗಳನ್ನು ಅಂಟಿಸಿಕೊಂಡು ನಗರದೆಲ್ಲಡೆ ಸಂಚಾರ ಮಾಡುತ್ತಿವೆ. ಈ ಮೂಲಕ ಜಾಹೀರಾತು ನಿಷೇಧದ ಮೂಲ ಪರಿಕಲ್ಪನೆಯನ್ನೇ ಗಾಳಿಗೆ ತೂರಲಾಗಿದೆ. ಜೊತೆಗೆ, ಬಹುತೇಕ ಬಿಎಂಟಿಸಿ ಬಸ್ಗಳ ಸೌಂದರ್ಯವೂ ಸಂಪೂರ್ಣವಾಗಿ ಹಾಳಾಗಿದೆ. ಇದೀಗ ಎಲ್ಲ ಬಸ್ಗಳು ಜಾಹೀರಾತುಗಳನ್ನು ಹೊತ್ತು ಸಾಗುವ ವಾಹನಗಳಂತಾಗಿವೆ. ಇಲ್ಲಿ ಪ್ರಯಾಣಿಕರ ಟಿಕೆಟ್ ದರದ ಆದಾಯಕ್ಕಿಂತ ಜಾಹೀರಾತಿನ ಆದಾಯಕ್ಕೆ ಬಸ್ಗಳು ಸಂಚಾರ ಮಾಡುವಂತೆ ಕಾಣುತ್ತಿವೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಊಟ ಮಾಡಿದ ಮಹಿಳೆಗೆ ₹500 ದಂಡ ಹಾಕಿದ BMRCL