ಮಗನನ್ನು ಕ್ರಿಕೆಟರ್ ಮಾಡಲು ಇದ್ದ ಜಮೀನು ಮಾರಿದ ವೈಭವ್ ತಂದೆ! ಅವರ ತ್ಯಾಗಕ್ಕೆ ಸೆಲ್ಯೂಟ್

Synopsis
14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಈ ಬಿಹಾರದ ಹುಡುಗ, ಗುಜರಾತ್ ಟೈಟಾನ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ. ವೈಭವ್‌ರ ಈ ಸಾಧನೆಯ ಹಿಂದೆ ಅವರ ಪರಿಶ್ರಮ ಮತ್ತು ಪೋಷಕರ ತ್ಯಾಗ ಅಡಗಿದೆ.
ಬೆಂಗಳೂರು: ವೈಭವ್ ಸೂರ್ಯವಂಶಿ ಎನ್ನುವ ಹದಿನಾಲ್ಕು ವರ್ಷದ ಹುಡುಗ ಇವತ್ತು ದೇಶದ ಮನೆಮಾತಾಗಿದ್ದಾನೆ. 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಬಿಹಾರ ಮೂಲದ ಹುಡುಗ, ಗುಜರಾತ್ ಟೈಟಾನ್ಸ್ ಎದುರು ಶತಕ ಸಿಡಿಸಿದ್ದಾನೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಶತಕ ಸಿಡಿಸಿದ ಅತ್ಯಂತ ಕಿರಿಯ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾನೆ. ವೈಭವ್ ಸೂರ್ಯವಂಶಿ ಶತಕ ಸಿಡಿಸಿದಾಗ ಆತನ ವಯಸ್ಸು ಕೇವಲ 14 ವರ್ಷ 32 ದಿನಗಳು ಮಾತ್ರ.
ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಎದುರಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಎನ್ನುವ 14 ವರ್ಷದ ಪೋರ ಕೇವಲ 35 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ಸೌದಿ ಅರೆಬಿಯಾದ ಜೆದ್ದಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಈ ಹಾಲುಗಲ್ಲದ ಹುಡುಗನಿಗೆ ಬರೋಬ್ಬರಿ 1.1 ಕೋಟಿ ನೀಡಿ ಖರೀದಿಸಿತ್ತು. ಇಷ್ಟು ಸಣ್ಣ ಹುಡುಗನನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಕೇವಲ ವಾಟರ್ ಬಾಯ್ ಮಾಡಿಕೊಳ್ಳಲಿದೆ ಎಂದು ಹಲವರು ಕೊಂಕು ನುಡಿದಿದ್ದರು.
ಇದನ್ನೂ ಓದಿ: ಐಪಿಎಲ್ 2025ರಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು!
ಆದರೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಈ ಹುಡುಗನ ಮೇಲೆ ವಿಶ್ವಾಸವಿಟ್ಟು ಲಖನೌ ಸೂಪರ್ ಜೈಂಟ್ಸ್ ಎದುರು ಕಣಕ್ಕಿಳಿಸಿತು. ತಾನಾಡಿದ ಮೊದಲ ಪಂದ್ಯದ ಮೊದಲ ಎಸೆತದಲ್ಲೇ ಸಿಕ್ಸರ್ ಚಚ್ಚುವ ಮೂಲಕ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ನಾನು ಘರ್ಜಿಸಲು ರೆಡಿ ಎನ್ನುವ ಸುಳಿವು ಬಿಟ್ಟುಕೊಟ್ಟಿದ್ದ. ಆದರೆ ಇದೀಗ ತಾನಾಡಿದ ಮೂರನೇ ಐಪಿಎಲ್ ಪಂದ್ಯದಲ್ಲೇ ಶತಕ ಸಿಡಿಸಿ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾನೆ.
ಅಂದಹಾಗೆ ಈ ವೈಭವ್ ಸೂರ್ಯವಂಶಿ ಅದೃಷ್ಟದಿಂದ ಮೇಲೆ ಬಂದಿಲ್ಲ. ಬದಲಾಗಿ ಈ ಹಂತಕ್ಕೇರಲು ರಕ್ತದಂತೆ ಬೆವರನ್ನು ಬಸಿದಿದ್ದಾನೆ. ಅವರ ತಂದೆ-ತಾಯಿ ಮಗನನ್ನು ವೃತ್ತಿಪರ ಕ್ರಿಕೆಟಿಗನನ್ನಾಗಿ ಮಾಡಲು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಬಿಹಾರದ ಸಮಸ್ತಿಪುರ ಎನ್ನುವ ಪುಟ್ಟ ಹಳ್ಳಿಯ ನಿವಾಸಿಯಾಗಿದ್ದ ವೈಭವ್‌ನಲ್ಲಿನ ಕ್ರಿಕೆಟ್ ಟ್ಯಾಲೆಂಟ್ ಗಮನಿಸಿ, ಈತನನ್ನು ಕ್ರಿಕೆಟರ್ ಮಾಡಲು ತೀರ್ಮಾನಿಸಿಬಿಟ್ಟರು.
ಇದನ್ನೂ ಓದಿ: ತಮ್ಮ ಗುರುವಿನ ಮನಗೆದ್ದ ವೈಭವ್ ಸೂರ್ಯವಂಶಿ; ನಾನಂತೂ ಎಂಜಾಯ್ ಮಾಡ್ದೆ ಎಂದ ಲಾರಾ!
ಸಾಮಾನ್ಯ ಕುಟುಂಬದ ಹಿನ್ನಲೆ ಹೊಂದಿರುವ ವೈಭವ್‌ಗಾಗಿ ಎಲ್ಲಾ ಸಮಯ, ಶ್ರಮ ಹಾಗೂ ಸಂಪತ್ತನ್ನು ಅವರ ಪೋಷಕರು ಮೀಸಲಿಡಲು ತೀರ್ಮಾನಿಸಿದರು. ಇದಕ್ಕಾಗಿ ತಮ್ಮ ಬಳಿಯಿದ್ದ ಜಮೀನನ್ನು ಮಾರಾಟ ಮಾಡಿ ಹಣ ಹೊಂದಿಸಿದರು. ವೈಭವ್ ತಮ್ಮ 10ನೇ ವಯಸ್ಸಿನಲ್ಲೇ ಸಮಸ್ತಿಪುರದಿಂದ 100 ಕಿಲೋಮೀಟರ್ ದೂರದಲ್ಲಿದ್ದ ಪಾಟ್ನಾಗೆ ಜರ್ನಿ ಮಾಡುತ್ತಿದ್ದ. ಪಾಟ್ನಾದಲ್ಲಿ 16-17 ವರ್ಷದ ಹುಡುಗರ ಎದುರು ಪ್ರತಿದಿನ ವೈಭವ್ ಸೂರ್ಯವಂಶಿ 600 ಬಾಲ್‌ಗಳನ್ನು ಎದುರಿಸುತ್ತಿದ್ದ. ಅವರ ತಂದೆ ಸಂಜೀವ್ ಸೂರ್ಯವಂಶಿ, ತಮ್ಮ ಮಗನ ಜತೆಗೆ ಬೌಲಿಂಗ್ ಮಾಡುವ ಆ ಹತ್ತ ಹುಡುಗರಿಗೂ ಟಿಫನ್ ಬಾಕ್ಸ್ ತರುತ್ತಿದ್ದರು. ಆ ಎಲ್ಲಾ ಶ್ರಮಕ್ಕೆ ವೈಭವ್ ಇದೀಗ ನ್ಯಾಯ ಒದಗಿಸಿದ್ದಾನೆ.
ವೈಭವ್ ಸೂರ್ಯವಂಶಿ ಕಳೆದ ವರ್ಷ ತಮ್ಮ 12 ವರ್ಷ 284 ದಿನಗಳಿದ್ದಾಗ ಬಿಹಾರ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ. ಇದಷ್ಟೇ ಅಲ್ಲದೇ ಕಳೆದ ವರ್ಷ ಚೆನ್ನೈನಲ್ಲಿ ನಡೆದ ಅಂಡರ್ 19 ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದ. ಸದ್ಯ ವೈಭವ್ ಸೂರ್ಯವಂಶಿ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೂರು ಪಂದ್ಯಗಳನ್ನಾಡಿ 222.05ರ ಸ್ಟ್ರೈಕ್‌ರೇಟ್‌ನಲ್ಲಿ ಒಂದು ಶತಕ ಸಹಿತ 151 ರನ್ ಬಾರಿಸಿದ್ದಾನೆ.