userpic
user icon
0 Min read

ತಮ್ಮ ಗುರುವಿನ ಮನಗೆದ್ದ ವೈಭವ್ ಸೂರ್ಯವಂಶಿ; ನಾನಂತೂ ಎಂಜಾಯ್ ಮಾಡ್ದೆ ಎಂದ ಲಾರಾ!

Brian Lara fan Vaibhav Suryavanshi sets new record in IPL kvn
Vaibhav Suryavanshi

Synopsis

ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್, ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಹೊಸ ದಾಖಲೆ ನಿರ್ಮಿಸಿದರು.

ಬೆಂಗಳೂರು: ಕೇವಲ 14 ವರ್ಷದ ಹುಡುಗ ಈಗ ಐಪಿಎಲ್‌ನ ಪೋಸ್ಟರ್ ಬಾಯ್ ಆಗಿ ಹೊರಹೊಮ್ಮಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಎದುರಾಳಿ ತಂಡದ ವಿಶ್ವದರ್ಜೆಯ ಬೌಲರ್‌ಗಳೆದುರು ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಇದೀಗ ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿದ ಅತಿಕಿರಿಯ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ತಮ್ಮ ಗುರು ಬ್ರಿಯನ್ ಲಾರಾ ಅವರ ಮನ ಗೆಲ್ಲುವಲ್ಲಿ ವೈಭವ್ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ.

ಹೌದು, ಬಿಹಾರ ಮೂಲದ ವೈಭವ್ ಸೂರ್ಯವಂಶಿ ಅವರನ್ನು ಕಳೆದ ವರ್ಷದ ಕೊನೆಯಲ್ಲಿ ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 1.1 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಕಳೆದ ಏಪ್ರಿಲ್ 20ರಂದು ಲಖನೌ ವಿರುದ್ದ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಮೂಲಕ, ಐಪಿಎಲ್ ಆಡಿದ ಅತಿಕಿರಿಯ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.

ಒಂದೇ ಮ್ಯಾಚ್‌ನಲ್ಲಿ ಮೂರು ಅಪರೂಪದ ದಾಖಲೆ ಬರೆದ 14 ವರ್ಷದ ವೈಭವ್!

ಇದೀಗ ವೈಭವ್ ಸೂರ್ಯವಂಶಿ, ಗುಜರಾತ್ ಟೈಟಾನ್ಸ್ ನೀಡಿದ್ದ ಬೆಟ್ಟದಷ್ಟು ಗುರಿಯನ್ನು ಲೀಲಾಜಾಲವಾಗಿ ರಾಜಸ್ಥಾನ ರಾಯಲ್ಸ್ ಬೆನ್ನತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದಿ ವೈಭವ್ ಸೂರ್ಯವಂಶಿ, ಈ ಆವೃತ್ತಿಯ ಐಪಿಎಲ್‌ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು. ಇಷ್ಟಕ್ಕೆ ಸುಮ್ಮನಾಗದ ವೈಭವ್ ಕೇವಲ 35 ಎಸೆತಗಳಲ್ಲು ಮೂರಂಕಿ ಮೊತ್ತ ದಾಖಲಿಸುವ ಮೂಲಕ ಐಪಿಎಲ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಇದೀಗ ಯೂಸುಪ್ ಪಠಾಣ್ ಅವರ 37 ಎಸೆತಗಳ ಶತಕ ದಾಖಲೆಯನ್ನು ಅಳಿಸಿ, ಐಪಿಎಲ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆಗೆ ವೈಭವ್ ಪಾತ್ರರಾಗಿದ್ದಾರೆ.ಇನ್ನು ಐಪಿಎಲ್ ಇತಿಹಾಸದಲ್ಲಿ ಅತಿವೇಗದ ಶತಕ ಸಿಡಿಸಿದ ದಾಖಲೆ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಐಪಿಎಲ್‌ನಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

ಗುರುವಿನ ಮನ ಗೆದ್ದ ವೈಭವ್:
ಇನ್ನು ಐಪಿಎಲ್‌ನಲ್ಲಿ ಆಡುವ ಅರ್ಹತೆ ಪಡೆದ ವೈಭವ್ ಸೂರ್ಯವಂಶಿ ಅವರನ್ನು ಸಂದರ್ಶನವೊಂದರಲ್ಲಿ ನಿಮ್ಮ ಕ್ರಿಕೆಟ್ ಐಡಲ್ ಯಾರು ಎಂದು ಪ್ರಶ್ನಿಸಿದ್ದರು. ಆಗ ವೈಭವ್ ಸೂರ್ಯವಂಶಿ ಯಾವುದೇ ಆಲೋಚನೆ ಮಾಡದೇ, ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯನ್ ಲಾರಾ ಎಂದಿದ್ದರು. ಇದೀಗ ಕೆರಿಬಿಯನ್ ದಂತಕಥೆ, ವೈಭವ್ ಸ್ಪೋಟಕ ಬ್ಯಾಟಿಂಗ್ ಮಾಡುವ ವಿಡಿಯೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರ ಜತೆಗೆ ನಾನು ಎಂಟರ್‌ಟೈನ್ ಮಾಡಿದೆನಾ? ನೀನು ನಿಜವಾಗಿಯೂ ನನ್ನನ್ನು ಎಂಟರ್‌ಟೈನ್ ಮಾಡಿದೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

 ವೈಭವ್ ಆಟಕ್ಕೆ ಮನಸೋತ ಕ್ರಿಕೆಟ್ ಜಗತ್ತು:

14 ವರ್ಷದ ಈ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಈ ನಿರ್ಭೀತ  ಬ್ಯಾಟಿಂಗ್‌ಗೆ ಇಡೀ ಕ್ರೀಡಾ ಜಗತ್ತೇ ಮನ ಸೋತಿದೆ. ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, 'ವೈಭವ್ ನಿರ್ಭಿತ ಬ್ಯಾಟಿಂಗ್ ಶೈಲಿ, ಬ್ಯಾಟ್ ಸ್ಪೀಡ್, ಲೆಂಗ್ತ್‌ ಅನ್ನು ಆರಿಸಿಕೊಳ್ಳುವ ರೀತಿ ಬಾಲ್‌ ಬಾರಿಸಲು ಬಳಸುವ ಶಕ್ತಿ ನೋಡುವುದೇ ಕಣ್ಣಿಗೆ ಹಬ್ಬ, ಅದ್ಭುತ ಇನ್ನಿಂಗ್ಸ್ ಇದು. ಚೆನ್ನಾಗಿ ಆಡಿದೆ ಎಂದು ಶಬ್ಬಾಶ್ ಹೇಳಿದ್ದಾರೆ. 

ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಕೃಷ್ಣಮಾಚಾರಿ ಶ್ರೀಕಾಂತ್ ಸೇರಿದಂತೆ ಹಲವು ದಿಗ್ಗಜರು ಸಾಮಾಜಿಕ ಜಾಲತಾಣಗಳ ಮೂಲಕ ವೈಭವ್ ಆಟವನ್ನು ಕೊಂಡಿದ್ದಾರೆ.

Latest Videos