ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ, ಭಾರತದ ಪರ ಜಸ್ಪ್ರೀತ್ ಬುಮ್ರಾ ಆಡುತ್ತಿದ್ದಾರೆ.

ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಹೈವೋಲ್ಟೇಜ್ ಪಂದ್ಯವನ್ನು ನಿರೀಕ್ಷಿಸಲಾಗಿದೆ.

ಒಂದು ದಿನ ಮೊದಲೇ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿತ್ತು. ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವು ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು, ಜೋಶ್ ಟಂಗ್ ಬದಲಿಗೆ ಅನುಭವಿ ವೇಗಿ ಜೋಫ್ರಾ ಆರ್ಚರ್ 4 ವರ್ಷಗಳ ಬಳಿಕ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ.

ಇನ್ನು ಭಾರತ ಕ್ರಿಕೆಟ್ ತಂಡದಲ್ಲೂ ಒಂದು ಬದಲಾವಣೆ ಮಾಡಲಾಗಿದ್ದು, ನಿರೀಕ್ಷೆಯಂತೆಯೇ ಜಸ್ಪ್ರೀತ್ ಬುಮ್ರಾ ತಂಡ ಕೂಡಿಕೊಂಡಿದ್ದು, ಪ್ರಸಿದ್ದ್ ಕೃಷ್ಣ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಇನ್ನು ಕರುಣ್ ನಾಯರ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅಚ್ಚರಿ ರೀತಿಯಲ್ಲಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ದ್ ಕೃಷ್ಣ ನೀರಸ ಬೌಲಿಂಗ್ ಪ್ರದರ್ಶನ ತೋರಿದ್ದರು. ಇಡೀ ಟೆಸ್ಟ್ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಕಬಳಿಸಿದ್ದು ಬಿಟ್ಟರೇ, ಹೆಚ್ಚು ರನ್ ಬಿಟ್ಟುಕೊಟ್ಟು ದುಬಾರಿ ಎನಿಸಿದ್ದರು. ಹೀಗಾಗಿ ಪ್ರಸಿದ್ದ್ ಕೃಷ್ಣ ಅವರಿಗೆ ವಿಶ್ರಾಂತಿ ನೀಡಿ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾಗೆ ಮಣೆ ಹಾಕಿದ್ದಾರೆ. ಇದೀಗ ಕಳೆದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ್ದ ಆಕಾಶ್‌ದೀಪ್ ಸಿಂಗ್ ಹಾಗೂ ಜಸ್ಪ್ರೀತ್ ಬುಮ್ರಾ ಹೊಸ ಚೆಂಡಿನಲ್ಲಿ ದಾಳಿ ನಡೆಸಲು ರೆಡಿಯಾಗಿದ್ದಾರೆ.

5 ಪಂದ್ಯಗಳ ಆಂಡರ್‌ಸನ್-ತೆಂಡುಲ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವು ಸಾಧಿಸಿತ್ತು. ಹೆಡಿಂಗ್ಲೆ ಟೆಸ್ಟ್‌ನಲ್ಲಿ ಅನುಭವಿಸಿದ್ದ ಸೋಲಿನಿಂದ ಎಚ್ಚೆತ್ತುಕೊಂಡ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಭಾರೀ ಅಂತರದ ಗೆಲುವು ಸಾಧಿಸುವ ಮೂಲಕ ಇಂಗ್ಲೆಂಡ್‌ಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು 1-1ರ ಸಮಬಲ ಸಾಧಿಸಿದ್ದು, ಮೂರನೇ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಲು ಎರಡು ತಂಡಗಳು ತುದಿಗಾಲಿನಲ್ಲಿ ನಿಂತಿವೆ.

Scroll to load tweet…

 

ಇನ್ನು ಕಳೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಕರುಣ್ ನಾಯರ್ ಮತ್ತೊಮ್ಮೆ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿದ್ದರು. ಹೀಗಿದ್ದೂ ಕರುಣ್ ನಾಯರ್‌ಗೆ ಭಾರತ ಟೆಸ್ಟ್ ತಂಡದಲ್ಲಿ ಮತ್ತೊಂದು ಅವಕಾಶ ಸಿಕ್ಕಿದೆ. ಈ ಅವಕಾಶವನ್ನು ಕರುಣ್ ನಾಯರ್ ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಅದೇ ರೀತಿ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲು ಇನ್ನೊಂದು ಅವಕಾಶ ಸಿಕ್ಕಿದೆ.

ಎರಡನೇ ಟೆಸ್ಟ್‌ನಲ್ಲಿ ಆಘಾತಕಾರಿ ಸೋಲು ಕಂಡಿರುವ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಪಡೆ ಭಾರತಕ್ಕೆ ತಿರುಗೇಟು ನೀಡಲು ತುದಿಗಾಲಿನಲ್ಲಿ ನಿಂತಿದೆ.

ಆಟಗಾರರ ಪಟ್ಟಿ

ಭಾರತ : ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್‌, ಕರುಣ್, ಶುಭ್‌ಮನ್ ಗಿಲ್ (ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ನಿತೀಶ್, ವಾಷಿಂಗ್ಟನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್‌, ಆಕಾಶ್‌ ದೀಪ್.

ಇಂಗ್ಲೆಂಡ್ : ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಪೋಪ್, ರೂಟ್, ಬ್ರೂಕ್, ಸ್ಟೋಕ್ಸ್(ನಾಯಕ), ಜೆಮೀ ಸ್ಮಿತ್, ವೋಕ್ಸ್, ಬ್ರೆಡನ್

ಕಾರ್ಸ್, ಆರ್ಚರ್, ಬಶೀರ್.

ಪಂದ್ಯ: ಮಧ್ಯಾಹ್ನ 3.30ರಿಂದ(ಭಾರತೀಯ ಕಾಲಮಾನ)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.