ಒಂದೇ ಮ್ಯಾಚ್‌ನಲ್ಲಿ ಮೂರು ಅಪರೂಪದ ದಾಖಲೆ ಬರೆದ 14 ವರ್ಷದ ವೈಭವ್!

Synopsis
14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಶತಕ ಸಿಡಿಸಿ ಹೊಸ ಮೈಲಿಗಲ್ಲು. ಈ ಆವೃತ್ತಿಯ ಐಪಿಎಲ್‌ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ಸಾಧನೆ.
ಜೈಪುರ: ಐಪಿಎಲ್ ಇತಿಹಾಸದಲ್ಲಿ ಹೊಸ ತಾರೆಯೊಂದರ ಉಗಮವಾಗಿದೆ. ಕೇವಲ 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಇಂದು ಗುಜರಾತ್ ಟೈಟಾನ್ಸ್ ಎದುರು ಶತಕ ಸಿಡಿಸುವ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಇದಷ್ಟೇ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಇದೀಗ 2025ರ ಐಪಿಎಲ್ ಟೂರ್ನಿಯಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ಅಪರೂಪದ ಸಾಧನೆಯನ್ನು ಮಾಡಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನ ಎರಡನೇ ದಿನ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಬರೋಬ್ಬರಿ 1.1 ಕೋಟಿ ರುಪಾಯಿ ನೀಡಿ ವೈಭವ್ ಸೂರ್ಯವಂಶಿ ಅವರನ್ನು ಖರೀದಿಸಿತ್ತು. ಆಗ 13 ವರ್ಷದವರಾಗಿದ್ದ ವೈಭವ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಖರೀದಿಸಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಇನ್ನು ಏಪ್ರಿಲ್ 20ರಂದು ಲಖನೌ ಸೂಪರ್ ಜೈಂಟ್ಸ್ ವಿರುದ್ದ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ವೈಭವ್, ಈ ಸಾಧನೆ ಮಾಡಿದ ಅತಿಕಿರಿಯ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. ತಾವಾಡಿದ ಮೊದಲ ಎಸೆತದಲ್ಲೇ ವೈಭವ್ ಸೂರ್ಯವಂಶಿ ತಾವೊಬ್ಬ ಅಪಾಯಕಾರಿ ಆರಂಭಿಕ ಆಟಗಾರ ಆಗಬಲ್ಲೆ ಎನ್ನುವ ಸುಳಿವನ್ನು ನೀಡಿದ್ದರು.
ಇದೀಗ ಒಂದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮೂರು ಅಪರೂಪದ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
1. ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಬ್ಯಾಟರ್:
14 ವರ್ಷ 32 ದಿನದ ವೈಭವ್ ಸೂರ್ಯವಂಶಿ ಇದೀಗ ಗುಜರಾತ್ ಟೈಟಾನ್ಸ್ ಎದುರು ಶತಕ ಸಿಡಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಶತಕ ಸಿಡಿಸಿದ ಅತಿಕಿರಿಯ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 18 ವರ್ಷ 118 ದಿನದ ವಿಜಯ್ ಝೋಲ್ ಮಹಾರಾಷ್ಟ್ರ ಪರ ಮುಂಬೈ ಎದುರು ಶತಕ ಸಿಡಿಸಿದ ಸಾಧನೆ ಮಾಡಿದ್ದರು.
2. ಐಪಿಎಲ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಭಾರತೀಯ ವೈಭವ್:
ವೈಭವ್ ಸೂರ್ಯವಂಶಿ ಇದೀಗ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ, ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನ್ನುವ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಇದಕ್ಕೂ ಮೊದಲು 2010ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಯೂಸುಫ್ ಪಠಾಣ್ ಮುಂಬೈ ಇಂಡಿಯನ್ಸ್ ಎದುರು 37 ಎಸೆತಗಳನ್ನು ಎದುರಿಸಿ ಶತಕ ಸಿಡಿಸಿದ್ದರು.
3. ಈ ಆವೃತ್ತಿಯ ಅತಿವೇಗದ ಅರ್ಧಶತಕ :
ವೈಭವ್ ಸೂರ್ಯವಂಶಿ ಇದೀಗ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅತಿವೇಗದ ಅರ್ಧಶತಕ ಸಿಡಿಸಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ವೈಭವ್ ಕೇವಲ 17 ಎಸೆತಗಳನ್ನು ಎದುರಿಸಿ ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾದರು.
ಇನ್ನು ಐಪಿಎಲ್ ವಿಚಾರಕ್ಕೆ ಬಂದರೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜಾರ್ ಟೈಟಾನ್ಸ್ ತಂಡವು ನಾಯಕ ಶುಭ್‌ಮನ್ ಗಿಲ್(84) ಹಾಗೂ ಜೋಸ್ ಬಟ್ಲರ್(50) ಅಜೇಯ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 209 ರನ್ ಕಲೆಹಾಕಿತ್ತು. ಮೇಲ್ನೋಟಕ್ಕೆ ಇದು ಗುಜರಾತ್ ಗೆಲುವಿನ ಸ್ಕೋರ್ ಎನಿಸಿಕೊಂಡಿತ್ತು.
ಆದರೆ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಅತ್ಯದ್ಭುತ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 11.5 ಓವರ್‌ನಲ್ಲಿ 166 ರನ್‌ಗಳ ಜತೆಯಾಟವಾಡುವ ಮೂಲಕ ರಾಜಸ್ಥಾನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೂರ್ಯವಂಶಿ 38 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 11 ಸಿಕ್ಸರ್ ಸಹಿತ 101 ರನ್ ಸಿಡಿಸಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಯಶಸ್ವಿ ಜೈಸ್ವಾಲ್ ಅಜೇಯ 70 ರನ್ ಸಿಡಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.