ಟೆಕ್ ದೈತ್ಯ ಆಪಲ್, ಭಾರತೀಯ ಮೂಲದ ಸಬಿಹ್ ಖಾನ್ ಅವರನ್ನು ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ (COO) ನೇಮಿಸಿದೆ.
ಟೆಕ್ ವಲಯದ ದೈತ್ಯ ಕಂಪನಿಯಾಗಿರುವ ಆಪಲ್, ಭಾರತೀಯ ಮೂಲದ ವ್ಯವಹಾರ ಕಾರ್ಯನಿರ್ವಾಹಕ ಸಬಿಹ್ ಖಾನ್ ಅವರನ್ನು ಮುಂದಿನ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಆಗಿ ನೇಮಿಸಲು ನಿರ್ಧರಿಸಿದೆ. ಭಾರತೀಯ ಮೂಲದ ಸಬಿಹ್ ಖಾನ್ ದೈತ್ಯ ಕಂಪನಿಯ ಉನ್ನತ ಹುದ್ದೆಗೆ ಏರಲಿದ್ದಾರೆ. ಆಪಲ್ ಕಂಪನಿ ಈ ಸಂಬಂಧ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿದೆ. ಸದ್ಯ ಈ ಸ್ಥಾನದಲ್ಲಿರುವ 62 ವರ್ಷದ ಜೆಫ್ ವಿಲಿಯಮ್ಸ್ ಈ ತಿಂಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. 2015ರಿಂದಲೂ ಜೆಫ್ ವಿಲಿಯಮ್ಸ್ ಅವರು ಆಪಲ್ ಕಂಪನಿಯ ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿದ್ದರು. ದೀರ್ಘಾವಧಿಯವರೆಗೆ ಸಬಿಹ್ ಖಾನ್ ಅವರನ್ನು ಸಿಒಒ ಆಗಿ ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ.
ಯಾರು ಈ ಸಬಿಹ್ ಖಾನ್?
ಆಪಲ್ ಕಂಪನಿಯಲ್ಲಿ ಕಾರ್ಯ ನಿರ್ವಹಕರಾಗಿ ಹಲವು ವರ್ಷಗಳಿಂದ ಸಬಿಹ್ ಖಾನ್ ಕೆಲಸ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ಕಳೆದ 30 ವರ್ಷಗಳಿಂದ ಈ ಕಂಪನಿಯೊಂದಿಗೆ ಉತ್ತಮ ಸಂಬಂಧವನ್ನು ಸಬಿಹ್ ಖಾನ್ ಹೊಂದಿದ್ದಾರೆ. ಸದ್ಯ ವಿವಿಧ ಆಪರೇಷನ್‌ಗಳಲ್ಲಿ ಹಿರಿಯ ವೈಸ್ ಪ್ರೆಸಿಡೆಂಟ್ ಆಗಿ ಸಬಿಹ್ ಖಾನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಪನಿಯ ಇಂಟರ್‌ನ್ಯಾಷನಲ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್‌ನಲ್ಲಿಯೂ ಸಬಿಹ್ ಖಾನ್ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಪ್ರಪಂಚದಾದ್ಯಂತ ಆಪಲ್‌ನ ಉತ್ತಮ ಉತ್ಪಾದನೆ ಮತ್ತು ವಿತರಣಾ ಸೇವೆಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಇದಕ್ಕೂ ಮೊದಲು GE ಪ್ಲಾಸ್ಟಿಕ್ಸ್‌ನಲ್ಲಿ ಅಪ್ಲಿಕೇಶನ್ ಡೆವಲ್ಪಮೆಂಟ್ ಎಂಜಿನಿಯರ್ ಆಗಿ ಮತ್ತು ಪ್ರಮುಖ ಟೆಕ್ನಿಷಿಯನ್ ಲೀಡರ್ ಆಗಿ ಸಬಿಹ್ ಖಾನ್ ಕೆಲಸ ಮಾಡಿದ್ದರು. 1995ರಿಂದ ಆಪಲ್ ಕಂಪನಿಯೊಂದಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್ ಮೂಲದವರು
ಸಬಿಹ್ ಖಾನ್ ಉತ್ತರ ಪ್ರದೇಶದ ಮೊರಾದಾಬಾದ್‌ನವರಾಗಿದ್ದಾರೆ. 1966ರಲ್ಲಿ ಅಲ್ಲಿ ಜನಿಸಿದ ಸಬಿಹ್ ಖಾನ್ ಅವರು ಮೊರಾದಾಬಾದ್‌ನ ಹಿತ್ತಾಳೆ ರಫ್ತುದಾರ, ಉದ್ಯಮಿ ಯಾರ್ ಮೊಹಮ್ಮದ್ ಖಾನ್ ಅವರ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೊರಾದಾಬಾದ್‌ನ ಸೇಂಟ್ ಮೇರಿ ಶಾಲೆಯಲ್ಲಿ ಐದನೇ ತರಗತಿಯವರೆಗೆ ಸಬಿಹ್ ಖಾನ್ ಓದಿದ್ದಾರೆ. ಸಬಿಹ್ ಖಾನ್ ತಂದೆ ಸಯೀದ್ ಉ ಖಾನ್ ಮೂಲತಃ ರಾಂಪುರದ ನಿವಾಸಿಗಳು ಎಂದು ವರದಯಾಗಿದೆ.
ಸಯೀದ್ ಉ ಖಾನ್ ಅವರು 1963 ರಲ್ಲಿ ಯಾರ್ ಮೊಹಮ್ಮದ್ ಖಾನ್ ಅವರ ಮೊಮ್ಮಗಳನ್ನು ಮದುವೆಯಾದರು. ಮದುವೆಯ ನಂತರ ಮೊರಾದಾಬಾದ್‌ನಿಂದಲೇ ಹಿತ್ತಾಳೆ ರಫ್ತು ವ್ಯವಹಾರವನ್ನು ಪ್ರಾರಂಭಿಸಿದರು. ಇದರ ನಂತರ ಸಬಿಹ್ ಅವರ ತಂದೆ ಸಿಂಗಾಪುರಕ್ಕೆ ಹೋಗಿ ಅಲ್ಲಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು. ಸಬಿಹ್ ಶಿಕ್ಷಣವನ್ನು ಸಿಂಗಾಪುರನಲ್ಲಿಯೇ ಪೂರೈಸಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಭಾರತದಲ್ಲಿ ಪಡೆದುಕೊಂಡಿದ್ದಾರೆ.