ಕರ್ನಾಟಕದ ಚಳ್ಳಕೆರೆಯ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್ಮೆಂಟ್‌ನ (ಎಡಿಇ) ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಸ್ವಿಫ್ಟ್ ತನ್ನ ಟೇಕಾಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯಗಳನ್ನು ನಿರೂಪಿಸಿತು. ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಘಾತಕ್ ಯುಸಿಎವಿ ವಿನ್ಯಾಸದ ಜವಾಬ್ದಾರಿ ಹೊಂದಿದೆ.

ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ನವದೆಹಲಿ (ಡಿಸೆಂಬರ್ 16, 2023): ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ನಲ್ಲಿ ಡಿಸೆಂಬರ್ 15ರಂದು ಒಂದು ಸ್ವಾಯತ್ತ ಫ್ಲೈಯಿಂಗ್ ವಿಂಗ್ ತಂತ್ರಜ್ಞಾನ ಪ್ರದರ್ಶಕದ (ಟೆಕ್ನಾಲಜಿ ಡೆಮಾನ್ಸ್ಟ್ರೇಟರ್) ಯಶಸ್ವಿ ಹಾರಾಟ ನಡೆಸಲಾಯಿತು. ಈ ತಂತ್ರಜ್ಞಾನ ಪ್ರದರ್ಶಕದ ಅಭಿವೃದ್ಧಿಯ ಜವಾಬ್ದಾರಿ ಹೊಂದಿದ್ದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅದರ ಪರೀಕ್ಷಾ ಹಾರಾಟವನ್ನು ಆಯೋಜಿಸಿತ್ತು. ಡಿಆರ್‌ಡಿಓ ಇನ್ನೂ ಪರೀಕ್ಷಾ ಹಾರಾಟದ ಗುರಿಗಳು, ಸಾಧನೆಗಳ ಕುರಿತು ಮಾಹಿತಿ ಹಂಚಿಕೊಂಡಿಲ್ಲ. ಆದರೆ ಪ್ರದರ್ಶಕದ ಹಾರಾಟ ಸಂಪೂರ್ಣವಾಗಿ ಟೈಲ್ ಲೆಸ್ ಸಂರಚನೆಯಲ್ಲಿ ನಡೆದಿದೆ.

ಈ ಮಾನವ ರಹಿತ ವೈಮಾನಿಕ ವಾಹನವನ್ನು (ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ - ಯುಎವಿ) ಪ್ರಸ್ತುತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ ಅಥವಾ ಅಟಾನಮಸ್ ಅನ್‌ಮ್ಯಾನ್ಡ್ ರಿಸರ್ಚ್ ಏರ್‌ಕ್ರಾಫ್ಟ್ (AURA - ಔರಾ) ಅಥವಾ ಸ್ಟೆಲ್ತ್ ವಿಂಗ್ ಫ್ಲೈಯಿಂಗ್ ಟೆಸ್ಟ್‌ಬೆಡ್ (ಸ್ವಿಫ್ಟ್) ಎಂಬ ಹೆಸರುಗಳಿಂದ ಗುರುತಿಸಲಾಗುತ್ತಿದೆ. ಈ ನಿರ್ದಿಷ್ಟ ವೈಮಾನಿಕ ವಾಹನ ಟೈಲ್ ಲೆಸ್, ಫ್ಲೈಯಿಂಗ್ ವಿಂಗ್ ಸಂರಚನೆಯನ್ನು ಹೊಂದಿದೆ. ಅಂದರೆ, ಇದರಲ್ಲಿ ಲಂಬ ಅಥವಾ ಸಮತಲ ಸ್ಥಿರಕಾರಕಗಳನ್ನು (ಸ್ಟೆಬಿಲೈಸರ್) ಹೊಂದಿಲ್ಲ. ಈ ಏರ್‌ಕ್ರಾಫ್ಟ್ ಅನ್ನು ಹೆಚ್ಚಿನ ಸಬ್‌ಸಾನಿಕ್ ವೇಗಗಳಲ್ಲಿ ಹಾರಾಟ ನಡೆಸುವಂತೆ ವಿನ್ಯಾಸಗೊಳಿಸಲಾಗಿದ್ದು, ಇದಕ್ಕೆ ಶಕ್ತಿ ನೀಡಲು ವಿಮಾನದೊಳಗೆ ಒಂದು ಸಣ್ಣ ಟರ್ಬೋಫ್ಯಾನ್ ಇಂಜಿನ್ ಅಳವಡಿಸಲಾಗಿದೆ.

ಇದನ್ನು ಓದಿ: ಗಗನಯಾತ್ರಿಗಳ ದೈಹಿಕ, ಮಾನಸಿಕ ಆರೋಗ್ಯದೊಡನೆ ಚೆಲ್ಲಾಟವಾಡುತ್ತವೆಯೇ ಬಾಹ್ಯಾಕಾಶ ವಿಕಿರಣಗಳು?

ಅಮೆರಿಕದ ಮಾರಣಾಂತಿಕ ಆಯುಧವಾದ ಬಿ-2 ಬಾಂಬರ್ ಜೆಟ್ ಮತ್ತು ಭಾರತದ ಸ್ವಿಫ್ಟ್ ನಡುವೆ ಸಾಕಷ್ಟು ಸನಿಹದ ಹೋಲಿಕೆಗಳಿವೆ. 2021ರಲ್ಲಿ ಡಿಆರ್‌ಡಿಓ ಸ್ವಿಫ್ಟ್ ಕುರಿತ ಪ್ರಯೋಗಗಳನ್ನು ನಡೆಸಲು ಆರಂಭಿಸಿತು. ಸ್ವಿಫ್ಟ್ ಒಂದು ಟನ್ ಆಲ್ ಅಪ್ ವೈಟ್ (ಎಯುಡಬ್ಲ್ಯು) ತೂಕವನ್ನು ಹೊಂದಿದೆ.

ಪ್ರಯೋಗಗಳ ಅವಧಿಯಲ್ಲಿ, ಮೊದಲ ಬಾರಿಗೆ ಜೋಡಿಸಿದ ಮೂಲ ಮಾದರಿಯನ್ನು ಕಡಿಮೆ, ಮಧ್ಯಮ ಮತ್ತು ಹೆಚ್ಚಿನ ವೇಗಗಳಲ್ಲಿ ಚಲಾಯಿಸಲಾಯಿತು. ಈ ಪರೀಕ್ಷೆಗಳನ್ನು ಏರ್‌ಕ್ರಾಫ್ಟ್ ಪ್ರದರ್ಶನ ಮತ್ತು ಭೂ ಕೇಂದ್ರದಲ್ಲಿ ಅಳವಡಿಸಿದ್ದ ಉಪಕರಣದ ಮೌಲ್ಯಮಾಪನ ನಡೆಸಲು ಕೈಗೊಳ್ಳಲಾಯಿತು. ಪರೀಕ್ಷೆಗಳ ಮೂಲಕ ಮಾನವರಹಿತ ವೈಮಾನಿಕ ವಾಹನ ತನ್ನ ಗರಿಷ್ಠ ವೇಗಗಳನ್ನು ತಲುಪಿದಾಗ ಸಮರ್ಥವಾಗಿ ಕಾರ್ಯಾಚರಿಸಲು ಸಾಧ್ಯವೇ ಎಂಬುದನ್ನು ತಿಳಿದುಕೊಳ್ಳಲಾಯಿತು. ಈ ಮಾದರಿಯಲ್ಲಿ ಟೇಲ್ ಲೆಸ್ ವಿನ್ಯಾಸವನ್ನು ಬಳಸಲಾಗಿತ್ತು.

ಇದನ್ನೂ ಓದಿ: ಹಮಾಸ್ ವಿರುದ್ಧ ‘ಹತ್ಯೆ ಯಂತ್ರ’ ಅಖಾಡಕ್ಕಿಳಿಸಿದ ಇಸ್ರೇಲ್: ಕಿಡಾನ್ ಪಡೆಗಿದೆ ವಿಶೇಷ ಬಲ

ಡಿಆರ್‌ಡಿಓದ ಸ್ವಿಫ್ಟ್ ಘಾತಕ್ ಅನ್‌ಮ್ಯಾನ್ಡ್ ಕಾಂಬ್ಯಾಟ್ ಏರ್ ವೆಹಿಕಲ್ (ಯುಸಿಎವಿ) ನಿರ್ಮಾಣಕ್ಕೆ ಸಂಬಂಧಿಸಿದ ತಂತ್ರಜ್ಞಾನ ಪ್ರದರ್ಶಕವಾಗಿದೆ. ಸ್ವಿಫ್ಟ್ ಮಾನವರಹಿತ ವೈಮಾನಿಕ ವಾಹನದ ಪ್ರಾಥಮಿಕ ಉದ್ದೇಶವೆಂದರೆ, ಸ್ವಾಯತ್ತವಾಗಿ ಕಾರ್ಯಾಚರಿಸುವ ಸಂದರ್ಭದಲ್ಲಿ ಸ್ಟೆಲ್ತ್ ಸಾಮರ್ಥ್ಯ ಪ್ರದರ್ಶಿಸುವುದು ಮತ್ತು ಅತ್ಯಂತ ವೇಗವಾಗಿ ಲ್ಯಾಂಡಿಂಗ್ ನಡೆಸುವುದು. ಇದರ ಮುಂದಿನ ಪರೀಕ್ಷಾ ಪ್ರಯೋಗಗಳನ್ನು 2022ರ ಜುಲೈ ತಿಂಗಳಲ್ಲಿ ನಡೆಸಲಾಯಿತು. ಕರ್ನಾಟಕದ ಚಳ್ಳಕೆರೆಯ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್ಮೆಂಟ್‌ನ (ಎಡಿಇ) ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಸ್ವಿಫ್ಟ್ ತನ್ನ ಟೇಕಾಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯಗಳನ್ನು ನಿರೂಪಿಸಿತು.

ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಘಾತಕ್ ಯುಸಿಎವಿ ವಿನ್ಯಾಸದ ಜವಾಬ್ದಾರಿ ಹೊಂದಿದೆ.

ಇದನ್ನೂ ಓದಿ: ನಿಸಾರ್ ಮಿಷನ್​ಗೂ ಇದೆ ಡಾ. ಅಕ್ಷತಾ ಕೃಷ್ಣಮೂರ್ತಿ ಕೊಡುಗೆ: ಯೋಜನೆಯ ಮಹತ್ವ, ವಿವರ ಹೀಗಿದೆ..

ಜುಲೈ 2022ರಲ್ಲಿ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ನಡೆದ ಪ್ರದರ್ಶಕದ ಮೊದಲ ಹಾರಾಟ ಯಶಸ್ವಿಯಾಗಿತ್ತು. ಆದರೆ ಈ ಮಾದರಿ ನಾಲ್ಕನೇ ತಲೆಮಾರಿನ ಯುದ್ಧ ವಿಮಾನಗಳ ರೀತಿಯಲ್ಲಿ ಒಂದು ಲಂಬ ಸ್ಥಿರಕಾರಕವನ್ನು (ಟೇಲ್) ಹೊಂದಿತ್ತು. ಟೇಕಾಫ್ ಆದ ನಂತರ, ಏರ್‌ಕ್ರಾಫ್ಟ್ ಪೂರ್ವನಿರ್ಧರಿತ ಸ್ಥಾನಕ್ಕೆ ಹಾರಾಟ ನಡೆಸಿ, ಯಾವುದೇ ತೊಂದರೆಗಳಿಲ್ಲದೆ ಲ್ಯಾಂಡಿಂಗ್ ನಡೆಸಿತು. ಹಾರಾಟದ ಅವಧಿಯಾದ್ಯಂತ, ಫ್ಲೈಯಿಂಗ್ ವಿಂಗ್ ವಿನ್ಯಾಸ ಮತ್ತು ಸ್ವಾಯತ್ತ ಹಾರಾಟ ನಿಯಂತ್ರಣ ವ್ಯವಸ್ಥೆಗಳು ಸಮರ್ಥವಾಗಿ ಕಾರ್ಯಾಚರಿಸಿದವು.

ಆದರೆ, ಆರಂಭಿಕ ಹಾರಾಟದ ಮಾದರಿ ಲಂಬ ಬಾಲದ ಸಂರಚನೆ ಹೊಂದಿದ್ದರಿಂದ, ವೀಕ್ಷಕರು ಅಸಮಾಧಾನ ಹೊಂದಿದ್ದರು. ಈ ವಿನ್ಯಾಸ ಏರ್‌ಕ್ರಾಫ್ಟ್ ಸ್ಟೆಲ್ತ್ ಸಾಮರ್ಥ್ಯ ಸಾಧಿಸಲು ಅಡ್ಡಿಯಾಗಬಹುದು ಎಂದು ಅವರು ಭಾವಿಸಿದ್ದರು.

ಇದನ್ನು ಓದಿ: ‘ಇಂಡಿಯಾ ಫಸ್ಟ್' ನಿಲುವಿನೊಂದಿಗೆ ಮಾಲ್ಡೀವ್ಸ್‌ನಿಂದ ಕಾಲ್ತೆಗೆದ ಭಾರತ!

ಡಿಆರ್‌ಡಿಓ ಸಂಪೂರ್ಣವಾಗಿ ಟೇಲ್ ಲೆಸ್ ವಿನ್ಯಾಸದ ಮಾದರಿಯ ಹಾರಾಟ ನಡೆಸುವ ಅಪಾಯವನ್ನು ಎದುರಿಸಲು ಸಿದ್ಧವಿರದ ಕಾರಣ, ಲಂಬ ಸ್ಟೆಬಿಲೈಸರ್ ಅನ್ನು ಕೇವಲ ಪರೀಕ್ಷಾ ಉದ್ದೇಶಗಳಿಗೆ ಮಾತ್ರವೇ ಬಳಸಲಾಯಿತು. ಅದನ್ನು ಭವಿಷ್ಯದ ವಾಸ್ತವ ಮಾದರಿಯಿಂದ ದೂರವಿಡಲು ಡಿಆರ್‌ಡಿಓ ನಿರ್ಧರಿಸಿತ್ತು. ಈ ಪ್ರಯೋಗಗಳ ಸಂದರ್ಭದಲ್ಲಿ, ಡಿಆರ್‌ಡಿಓ ಈ ಲಂಬ ಸ್ಥಿರಕಾರಕ ಯಾವುದಾದರೂ ಪಾತ್ರವನ್ನು ನಿರ್ವಹಿಸಿತ್ತೇ, ಅಥವಾ ಅದು ಬ್ಯಾಕಪ್ ಆಗಿ ಕಾರ್ಯಾಚರಿಸಿತ್ತೇ, ಅಥವಾ ಅದನ್ನು ಯುಎವಿಯ ಹಾರಾಟ ಗುಣಲಕ್ಷಣಗಳನ್ನು ಸೆರೆಹಿಡಿಯಲು ಬಳಸಲಾಗಿತ್ತೇ ಎಂಬ ಕುರಿತು ಡಿಆರ್‌ಡಿಓ ಮಾಹಿತಿ ನೀಡಿರಲಿಲ್ಲ.

ಸ್ವಿಫ್ಟ್‌ಗೆ ಎನ್‌ಪಿಒ ಸ್ಯಾಟರ್ನ್ 36ಎಂಟಿ ಟರ್ಬೋಫ್ಯಾನ್ ಎಂಜಿನ್ ಬಳಕೆಯಾಗುತ್ತಿದ್ದು, ಇದು ರಷ್ಯನ್ ನಿರ್ಮಾಣದ ಎನ್‌ಪಿಒ ಸ್ಯಾಟರ್ನ್ ಮಾದರಿಯಾಗಿದೆ. ಈ ಎಂಜಿನ್ ಆಧುನಿಕ ತರಬೇತಿ ವಿಮಾನಗಳು, ಹಗುರ ದಾಳಿ ವಿಮಾನಗಳು, ಮತ್ತು ಮಾನವರಹಿತ ವೈಮಾನಿಕ ವಾಹನಗಳಲ್ಲಿ (ಯುಎವಿ) ಬಳಕೆಯಾಗುತ್ತವೆ. ಈ ಇಂಜಿನ್ ಬದಲಿಗೆ, ಕ್ರಮೇಣ 450 ಕೆಜಿಎಫ್ (4,413 ನ್ಯೂಟನ್) ಸಾಮರ್ಥ್ಯದ ಸ್ಮಾಲ್ ಟರ್ಬೋ ಫ್ಯಾನ್ ಇಂಜಿನ್ (ಎಸ್‌ಟಿಎಫ್ಇ) ಬಳಕೆಯಾಗಲಿದೆ. ಎಸ್‌ಟಿಎಫ್ಇ ಇಂಜಿನ್ ಅನ್ನು ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್ (ಜಿಟಿಆರ್‌ಇ) ಅಭಿವೃದ್ಧಿ ಪಡಿಸುತ್ತಿದೆ. ಅದರೊಡನೆ, ಘಾತಕ್ ಅನ್‌ಮ್ಯಾನ್ಡ್ ಕಾಂಬ್ಯಾಟ್ ಏರ್ ವೆಹಿಕಲ್‌ನಲ್ಲಿ (ಯುಸಿಎವಿ) ಕಾವೇರಿ ಆಫ್ಟರ್ ಬರ್ನಿಂಗ್ ಇಂಜಿನ್ನಿನ ಡ್ರೈ ಆವೃತ್ತಿಯನ್ನು ಬಳಸುವ ಸಾಧ್ಯತೆಗಳಿವೆ. ಈ ಇಂಜಿನ್ 48 ಕಿಲೋ ನ್ಯೂಟನ್ ಥ್ರಸ್ಟ್ ಒದಗಿಸುವ ಸಾಮರ್ಥ್ಯ ಹೊಂದಿದೆ. ಎಸ್‌ಟಿಎಫ್ಇಗೆ ಹೋಲಿಸಿದರೆ, ಕಾವೇರಿ ಆಫ್ಟರ್ ಬರ್ನಿಂಗ್ ಟರ್ಬೋಫ್ಯಾನ್ ಇಂಜಿನ್ನಿನ ಡ್ರೈ ಆವೃತ್ತಿ ಹೆಚ್ಚಿನ ಶಕ್ತಿ ಮತ್ತು ಇಂಧನ ದಕ್ಷತೆ ಹೊಂದಿರಲಿದೆ.

ಇದನ್ನು ಓದಿ: ಗಗನಯಾನ ಯೋಜನೆಯ ಸ್ಪೇಸ್ ಕ್ಯಾಪ್ಸುಲ್‌ ಸಿಮ್ಯುಲೇಟರ್ ನಿರ್ಮಾಣಕ್ಕೆ ಬೋಯಿಂಗ್ - ಇಸ್ರೋ ಸಹಯೋಗ

ಡಿಆರ್‌ಡಿಓ ಮತ್ತು ಗಾಡ್ರೇಜ್ ಏರೋಸ್ಪೇಸ್ ಸೆಪ್ಟೆಂಬರ್ 2022ರಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಎಂಟು ಡ್ರೈ ಕಾವೇರಿ ಇಂಜಿನ್‌ಗಳನ್ನು ನಿರ್ಮಿಸಲು ನಿರ್ಧರಿಸಿವೆ. ಇದರಿಂದಾಗಿ ಹೆಚ್ಚುವರಿ ಪರೀಕ್ಷೆಗಳನ್ನು ಉದ್ದೇಶಿತ ಅವಧಿಯಾದ 2025ಕ್ಕೂ ಮೊದಲೇ ಪೂರೈಸಲು ಸಾಧ್ಯವಾಗಲಿದೆ.

ಡಿಆರ್‌ಡಿಓದ ಕಾಂಬ್ಯಾಟ್ ವೆಹಿಕಲ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಸಿವಿಆರ್‌ಡಿಇ) ಪ್ರಯೋಗಾಲಯ ಈ ಯುಎವಿಯ ಇನ್ನೊಂದು ಮಹತ್ವದ ಭಾಗವಾದ ಲ್ಯಾಂಡಿಂಗ್ ಗೇರ್ ನಿರ್ಮಿಸುವ ಜವಾಬ್ದಾರಿ ಹೊಂದಿದೆ. ಕೆಳಭಾಗದಲ್ಲಿರುವ ಅತ್ಯಂತ ಕಡಿಮೆ ಸ್ಥಳಾವಕಾಶ ಹಾಗೂ ಅತ್ಯಂತ ವೇಗದಲ್ಲಿ ಲ್ಯಾಂಡಿಂಗ್ ನಡೆಸುವಾಗ ಹೆಚ್ಚಿನ ಪ್ರಮಾಣದಲ್ಲಿ ಬ್ರೇಕ್ ಎನರ್ಜಿಯನ್ನು ಹೀರಿಕೊಳ್ಳುವ ಅವಶ್ಯಕತೆ ಇರುವುದರಿಂದ, ನಿಯೋಜನೆ ಮತ್ತು ಹಿಂತೆಗೆಯುವಿಕೆಗೆ ಒಂದು ವಿಶಿಷ್ಟ ರೀತಿಯ ಲ್ಯಾಂಡಿಂಗ್ ಗೇರ್ ವ್ಯವಸ್ಥೆಯ ಅವಶ್ಯಕತೆಯಿದೆ.

ಇದನ್ನೂ ಓದಿ: ನೆರಳಿನ ಯುದ್ಧ: ತಲ್ಲಣ ಸೃಷ್ಟಿಸಿದ ಭಾರತ ವಿರೋಧಿ ಉಗ್ರಗಾಮಿಗಳ ನಿರಂತರ ಹತ್ಯೆ

ಈ ಲ್ಯಾಂಡಿಂಗ್ ಗೇರ್‌ನ ಗಮನಾರ್ಹ ಅಂಶವೆಂದರೆ, ಇದು ಒಂದು ಹಿಂಪಡೆಯಬಹುದಾದ, ತ್ರಿಚಕ್ರ ಮಾದರಿಯ ನೋಸ್ ವೀಲ್ ವಿನ್ಯಾಸ, ಗರಿಷ್ಠ ಒಂದು ಟನ್ ಒಟ್ಟು ತೂಕದ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯವಿರುವ ಒಂದು ಹೈಡ್ರೋ ಗ್ಯಾಸ್ ಟೆಲಿಸ್ಕೋಪಿಕ್ ಸ್ಟ್ರಟ್, ಹಿಂಪಡೆಯುವ ಪ್ರಕ್ರಿಯೆಗೆ ಹೈಡ್ರಾಲಿಕ್ ವ್ಯವಸ್ಥೆಗಳು, ಆ್ಯಂಟಿ ಸ್ಕಿಡ್ ಬ್ರೇಕಿಂಗ್, ಹಾಗೂ ಲ್ಯಾಂಡಿಂಗ್ ಗೇರ್ ಕಾರ್ಯಾಚರಣಾ ನಿಯಂತ್ರಣಕ್ಕಾಗಿ ಮತ್ತು ಸಿಸ್ಟಮ್ ಆರೋಗ್ಯ ಗಮನಿಸುವುದಕ್ಕಾಗಿ ಒಂದು ಎಂಐಎಲ್ - ಎಸ್‌ಟಿಡಿ 1553ಬಿ ಬಸ್ ಆಧಾರಿತ ಕಂಟ್ರೋಲರ್ ವ್ಯವಸ್ಥೆಗಳನ್ನು ಒಳಗೊಂಡಿದೆ.

ಸ್ವಿಫ್ಟ್ ಏರ್ ಫ್ರೇಮ್ ಪೂರ್ಣಗೊಂಡಾಗ, ಲ್ಯಾಂಡಿಂಗ್ ಗೇರ್ ವ್ಯವಸ್ಥೆಗಳನ್ನು ಪೂರೈಸಿ, ಅಳವಡಿಸಲಾಯಿತು. ಇದರ ಸಾಮರ್ಥ್ಯವನ್ನು ತಿಳಿಯುವ ಸಲುವಾಗಿ ಡ್ರಾಪ್ ಮತ್ತು ಸ್ಟ್ರೆಂತ್ ಟೆಸ್ಟ್ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಯಿತು. ಹಲವು ಸರಣಿ ಟ್ಯಾಕ್ಸಿ ಪರೀಕ್ಷೆಗಳನ್ನು ನಡೆಸಿದ ಬಳಿಕ, ಸ್ವಿಫ್ಟ್ ಸಿವಿಆರ್‌ಡಿಇ ಅಭಿವೃದ್ಧಿ ಪಡಿಸಿದ ಲ್ಯಾಂಡಿಂಗ್ ಗೇರ್ ವ್ಯವಸ್ಥೆಯನ್ನು ಬಳಸಿಕೊಂಡು ತನ್ನ ಪ್ರಥಮ ಹಾರಾಟವನ್ನು ನಡೆಸಿತು.

ಇದನ್ನೂ ಓದಿ: Kargil Vijay Diwas: ವೀರ ಸೈನಿಕರ ಜತೆಗೆ ಮಿರೇಜ್ 2000 ಮತ್ತು ಬೋಫೋರ್ಸ್ ಗನ್ ಸಹ ಈ ಯುದ್ಧದ ಹೀರೋಗಳು!

2025ನೇ ಇಸವಿಯ ಕೊನೆಯ ವೇಳೆಗೆ, ಘಾತಕ್ ಯುಎವಿ ಮಾದರಿಯನ್ನು ಪರೀಕ್ಷೆಗೆ ಒಳಪಡಿಸುವ ನಿರೀಕ್ಷೆಗಳಿವೆ. ಈ ಯುಸಿಎವಿ ಭಾರತೀಯ ವಾಯುಪಡೆಯ ಬಳಕೆಗೆ ಲಭ್ಯವಾಗಲಿದೆ. ಭಾರತೀಯ ನೌಕಾಪಡೆ ಡೆಕ್ ಆಧಾರಿತ ಯುಸಿಎವಿಗಳು ಮತ್ತು ಲ್ಯಾಂಡಿಂಗ್ ಡಾಕ್‌ಗಳನ್ನು ಖರೀದಿಸಲು ಉತ್ಸಾಹ ತೋರುತ್ತಿದೆ.

ಇದನ್ನೂ ಓದಿ: ಎಲ್‌ಎಸಿ ಬಳಿ ಚೀನಾ ಕುತಂತ್ರಕ್ಕೆ ಟಕ್ಕರ್‌: ಅತಿ ಹಗುರ ಹೊವಿಟ್ಜರ್ ಕ್ಯಾನನ್ ನಿರ್ಮಿಸಲು ಭಾರತ, ಅಮೆರಿಕ ಪ್ಲ್ಯಾನ್‌