ರಕ್ತ ಬೇಕಿದ್ರೆ ಕೊಟ್ಟೆವು ಆದ್ರೆ ಮತ್ತೆ ದೇಶ ಬಿಡೆವು: ತಾಯ್ನೆಲದಲ್ಲಿ ಉಳಿವಿಗೆ ಬಾಂಗ್ಲಾ ಹಿಂದೂಗಳ ಹೋರಾಟ

Published : Aug 10, 2024, 05:45 PM ISTUpdated : Aug 10, 2024, 05:46 PM IST
ರಕ್ತ ಬೇಕಿದ್ರೆ ಕೊಟ್ಟೆವು ಆದ್ರೆ ಮತ್ತೆ ದೇಶ ಬಿಡೆವು: ತಾಯ್ನೆಲದಲ್ಲಿ ಉಳಿವಿಗೆ ಬಾಂಗ್ಲಾ ಹಿಂದೂಗಳ ಹೋರಾಟ

ಸಾರಾಂಶ

ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳು, ಹಿಂದೂ ಶ್ರದ್ಧಾಕೇಂದ್ರಗಳು ಹಾಗೂ ಹಿಂದೂ ಮಹಿಳೆಯರ ಮೇಲೆ ಮತೀಯವಾದಿಗಳ ದಾಳಿ  ಹೆಚ್ಚಾಗಿದ್ದು, ಇದನ್ನು ಖಂಡಿಸಿ ಬಾಂಗ್ಲದೇಶದ ಹಿಂದೂಗಳು ಢಾಕಾದಲ್ಲಿ ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದರು.

ಢಾಕಾ: ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳು, ಹಿಂದೂ ಶ್ರದ್ಧಾಕೇಂದ್ರಗಳು ಹಾಗೂ ಹಿಂದೂ ಮಹಿಳೆಯರ ಮೇಲೆ ಮತೀಯವಾದಿಗಳ ದಾಳಿ  ಹೆಚ್ಚಾಗಿದ್ದು, ಇದನ್ನು ಖಂಡಿಸಿ ಬಾಂಗ್ಲದೇಶದ ಹಿಂದೂಗಳು ಢಾಕಾದಲ್ಲಿ ನಿನ್ನೆ ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ಈ ನೆಲದಲ್ಲಿ ತಮ್ಮ ಉಳಿವಿಗಾಗಿ ಪ್ರತಿಭಟನೆ ನಡೆಸುತ್ತಿರುವ ಬಾಂಗ್ಲಾದೇಶದ ಹಿಂದೂಗಳು ಈ ಬಾರಿ ರಕ್ತ ನೀಡುವೆವು ಆದರೆ ಮತ್ತೆ ದೇಶ ತೊರೆಯಲಾರೆವು ಎಂಬ ಸಂದೇಶ ಸಾರಿದ್ದಾರೆ. 

ದೇಶದ ವಿವಿಧೆಡೆಯಿಂದ ಬಾಂಗ್ಲಾದೇಶ ರಾಜಧಾನಿ ಢಾಕಾಗೆ ಬಂದು ಸೇರಿದ ಹಿಂದೂ ಸಮುದಾಯದ ಜನ ತಮ್ಮ ವಿರುದ್ಧದ ದಾಳಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಈ ದೇಶ ಎಲ್ಲರಿಗೂ ಸೇರಿದ್ದು,  ಈ ದೇಶದಲ್ಲಿ ಹಿಂದೂ ಸಮುದಾಯದ ಸುರಕ್ಷತೆ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ದೇಶ ಯಾರ ಅಪ್ಪನಿಗೂ ಸೇರಿದ್ದಲ್ಲ,  ನಾವು ಈಗಾಗಲೇ ಬೇಕಾದಷ್ಟು ರಕ್ತ ನೀಡಿದ್ದೇವೆ. ಅಗತ್ಯ ಬಂದರೆ ಮತ್ತೆ ರಕ್ತ ನೀಡುತ್ತೇವೆ. ಆದರೆ ನಾವು ದೇಶವನ್ನು ಮಾತ್ರ ತೊರೆಯುವುದಿಲ್ಲ ಎಂದು ಪ್ರತಿಭಟನಾ ನಿರತ ಹಿಂದೂಗಳು ಘೋಷಣೆ ಕೂಗಿದರು. 

ಹಸೀನಾ ರಾಜೀನಾಮೆ ಬಳಿಕ ಈಗ ಬಾಂಗ್ಲಾದೇಶ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಂದಲೂ ಪದತ್ಯಾಗ

ದೇಶದಲ್ಲಿ ಹಿಂದೂ ಸಮುದಾಯ ಇಷ್ಟೆಲ್ಲಾ ಹಿಂಸೆ ಅನುಭವಿಸುತ್ತಿದ್ದರೂ, ದೇಶದ ಹಿಂದೂ ಸಮುದಾಯದ ಮೇಲೆ ತುಂಬಾ ಅಮಾನವೀಯವಾಗಿ ದೌರ್ಜನ್ಯ ನಡೆಯುತ್ತಿದ್ದರೂ ಕೂಡ ದೇಶದ ನಾಗರಿಕ ಸಮಾಜದ ಸದಸ್ಯರು ತಮ್ಮ ಬಾಯಿಗೆ ಬೀಗ ಹಾಕಿದಂತೆ ಮೌನವಾಗಿ ಕುಳಿತಿರುವುದಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಬೃಹತ್ ಹಿಂದೂ ಪ್ರತಿಭಟನೆಯಲ್ಲಿ ಮಾತನಾಡಿದ ಕಾನು ಕುಮಾರ್ ಮಾತನಾಡಿ, ಹಿಂದೂ ಸಮುದಾಯದವರಿಗೆ ಅವರ ಮನೆಯಲ್ಲಿ ಅವರ ನೆಲದಲ್ಲಿ ಸುರಕ್ಷತೆ ಬೇಕು. ಅವರ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಸುರಕ್ಷತೆ ಬೇಕು ಎಂದು ಆಗ್ರಹಿಸಿದರು. 

ಬಾಂಗ್ಲಾದಲ್ಲಿ ಹಿಂದೂ ಗಾಯಕನ ಮನೆಗೆ ಬೆಂಕಿ: ಸುಟ್ಟು ಬೂದಿಯಾಯ್ತು 3,000 ಸಂಗೀತ ಪರಿಕರಗಳು

ದೇಶದ ಅಲ್ಪಸಂಖ್ಯಾತ ಸಚಿವಾಲಯ ಹಾಗೂ ಅಲ್ಪಸಂಖ್ಯಾತರ ರಕ್ಷಣಾ ಆಯೋಗವೂ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಅಲ್ಲದೇ ಬಾಂಗ್ಲಾದೇಶದ ಪಾರ್ಲಿಮೆಂಟ್‌ನಲ್ಲಿ ಅಲ್ಪಸಂಖ್ಯಾತರಿಗಾಗಿ(ಹಿಂದೂಗಳು) ಶೇಕಡಾ 10 ಮೀಸಲು ನೀಡುವಂತೆ ಆಗ್ರಹಿಸಿದರು. 

ಬಾಂಗ್ಲಾದೇಶ್ ಹಿಂದೂ ಬುದ್ದಿಸ್ಟ್ ಕ್ರಿಶ್ಚಿಯನ್ ಒಕಿಯಾ ಪರಿಷದ್‌ ವರದಿಯ ಪ್ರಕಾರ ದೇಶದಲ್ಲಿ  ಶೇಕ್ ಹಸೀನಾ ದೇಶ ತೊರೆದ ನಂತರ 64 ಜಿಲ್ಲೆಯಲ್ಲಿ 52ರಲ್ಲಿ ಅಲ್ಪಂಖ್ಯಾತ ಸಮುದಾಯದ ಸದಸ್ಯರ ಮೇಲೆ  ದಾಳಿ ನಡೆದಂತಹ 205 ಘಟನೆಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಈ ಓಕಿಯಾ ಸಮುದಾಯವೂ ಬಾಂಗ್ಲಾದೇಶದ ಹಂಗಾಮಿ ಪ್ರಧಾನಿ ನೊಬೆಲ್ ಪುರಸ್ಕೃತ ಮೊಹಮ್ಮದ್ ಯೂನಸ್ ಅವರಿಗೆ ಬಹಿರಂಗ ಪತ್ರ ಬರೆದಿದ್ದು ಬಾಂಗ್ಲಾ ಅಲ್ಪಸಂಖ್ಯಾತ ಸಮುದಾಯ ತೀವ್ರ ಆತಂಕ, ಅನಿಶ್ಚಿತತೆ, ಭಯದಿಂದ ಕಂಗಾಲಾಗಿದ್ದಾರೆ ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಮತೀಯವಾದಿಗಳ ಅಟ್ಟಹಾಸ: ಹಿಂದೂಗಳ ದೇಗುಲ ಮನೆ ಉದ್ದಿಮೆ ಧ್ವಂಸ

ಭಾರತದಿಂದ ಬಾಂಗ್ಲಾ ಪ್ರತ್ಯೇಕಗೊಂಡ ಸಮಯದಲ್ಲಿಯೂ ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ ನಡೆದಿತ್ತು. ಮತೀಯವಾದಿಗಳ ಹಾವಳಿ ತಾಳಲಾರದೇ ಉಟ್ಟ ಬಟ್ಟೆಯಲ್ಲಿ ಬಾಂಗ್ಲಾ  ಹಿಂದೂಗಳು ತಾವು ಹುಟ್ಟಿ ಬೆಳೆದ ನೆಲ, ಜಮೀನು ಮನೆ ಭೂಮಿಯನ್ನು ಬಿಟ್ಟು ಬಂದು ಅನಾಥರಾಗಿದ್ದರು.  ಹೀಗೆ ನಿರಾಶ್ರಿತರಾಗಿ ಬಂದ ಬಾಂಗ್ಲಾ ಹಿಂದೂಗಳಿಗೆ ನಂತರ ಭಾರತದ ಕೆಲ ಪ್ರದೇಶಗಳಲ್ಲಿ ಭೂಮಿ ನೀಡಿ ಆಶ್ರಯ ನೀಡಲಾಯಿತು. ಕರ್ನಾಟಕದ ಸಿಂಧನೂರು ಕ್ಯಾಂಪ್‌ ಇದಕ್ಕೊಂದು ನಿದರ್ಶನ. ಇಲ್ಲಿನ ಹಳೆ ತಲೆಮಾರಿನ ಬಾಂಗ್ಲಾ ಜನರು ಕೂಡ ಅಂದು ನಡೆದ ಆ ಹಿಂಸಾಚಾರಕ್ಕೆ ನಲುಗಿ ತಮ್ಮದೆಲ್ಲವನ್ನು ಬಿಟ್ಟು ದೇಶ ತೊರೆದು ಬಂದವರಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್
ಜಪಾನ್‌ನಲ್ಲಿ 7.5 ತೀವ್ರತೆಯ ಭೂಕಂಪ: ಧರಣಿ ಗರ ಗರನೇ ತಿರುಗಿದ ಕ್ಷಣದ ವೀಡಿಯೋಗಳು ವೈರಲ್