ಗಡಿ ವಿಚಾರದಲ್ಲಿ ಭಾರತ ಪರ ನಿಲ್ಲುವೆ: ಬೈಡನ್| ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಘೋಷಣೆ| ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಹೆಚ್ಚಿನ ಆದ್ಯತೆ
ವಾಷಿಂಗ್ಟನ್(ಆ.17): ಡೆಮಾಕ್ರೆಟಿಕ್ ಪಕ್ಷದ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್, ಭಾರತದ ಪರ ನಿಲುವು ತಳೆದಿದ್ದಾರೆ. ಒಂದು ವೇಳೆ ತಾವು ಅಧ್ಯಕ್ಷರಾಗಿ ಆಯ್ಕೆಯಾದರೆ ಗಡಿ ಹಾಗೂ ಭದ್ರತೆ ವಿಷಯದಲ್ಲಿ ಭಾರತದ ಪರವಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ. ಅಲ್ಲದೇ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಹೆಚ್ಚಿನ ಆದ್ಯತೆ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಹಿತ ಕಾಯುವುದಾಗಿಯೂ ಭರವಸೆ ನೀಡಿದ್ದಾರೆ. ಗಡಿ ವಿಚಾರವಾಗಿ ಚೀನಾ ಪದೇಪದೇ ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆಯಲ್ಲಿ ಬೈಡನ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಕಮಲಾ ಹ್ಯಾರಿಸ್‌ಗಿಂತ ಹೆಚ್ಚು ಭಾರತೀಯರ ಬೆಂಬಲ ನನಗಿದೆ: ಟ್ರಂಪ್
ಕೆಲ ದಿನಗಳ ಹಿಂದಷ್ಟೇ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಅಮೆರಿಕದ ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಬೈಡನ್ ಘೋಷಿಸಿದ್ದರು. ಭಾರತದ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಒಂದು ವೇಳೆ ನಾನು ಅಮೆರಿಕ ಅಧ್ಯಕ್ಷನಾಗಿ ಆಯ್ಕೆಯಾದರೆ ಗಡಿ ವಿಚಾರವಾಗಿ ಭಾರತದ ಪರವಾಗಿ ನಿಲ್ಲುತ್ತೇನೆ. ಉಭಯ ದೇಶಗಳ ವ್ಯಾಪಾರ ವಹಿವಾಟು ವೃದ್ಧಿ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಗೊಳಿಸುವ ನಿಟ್ಟಿನಿಂದ ಕಾರ್ಯನಿರ್ವಹಿಸುತ್ತೇನೆ’ ಎಂದು ಹೇಳಿದರು.
ಇದೇ ವೇಳೆ ಅಮೆರಿಕದಲ್ಲಿ ಭಾರತೀಯ ಸಮುದಾಯವನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿ ಹಾಗೂ ಎಚ್-1 ಬಿ ವೀಸಾದ ಮೇಲೆ ನಿರ್ಬಂಧ ಹೇರಿದ್ದಕ್ಕೆ ತಮಗೆ ಬೇಸರವಾಗಿದೆ ಎಂದು ತಿಳಿಸಿದರು.
ಜೋ ಬೈಡನ್ ಗೆದ್ರೆ ಕಮಲಾ ಅಮೆರಿಕ ಉಪಾಧ್ಯಕ್ಷೆ..?
ಇದೇ ವೇಳೆ ಭಾರತದ ಜೊತೆಗಿನ ತಮ್ಮ ಸಂಬಂಧವನ್ನು ಮೆಲುಕು ಹಾಕಿದ ಬೈಡನ್, ‘ನನ್ನ ವೃತ್ತಿಬದುಕಿನಲ್ಲಿ ಭಾರತೀಯ ಸಮುದಾಯ ಮಹತ್ವದ ಪಾತ್ರ ವಹಿಸಿದೆ. ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಸಮುದಾಯದವರನ್ನು ಆಡಳಿತದಲ್ಲಿ ನೇಮಿಸಿಕೊಳ್ಳಲಾಗಿತ್ತು. 15 ವರ್ಷಗಳ ಹಿಂದೆ ಭಾರತದ ಜೊತೆ ಅಮೆರಿಕ ಐತಿಹಾಸಿಕ ಅಣು ಒಪ್ಪಂದವನ್ನು ಮಾಡಿಕೊಳ್ಳುವಲ್ಲಿ ನಾನು ಮುಖ್ಯ ಭೂಮಿಕೆಯನ್ನು ನಿಭಾಯಿಸಿದ್ದೆ. ಭಾರತೀಯ ಸಮುದಾಯ ಎರಡು ದೇಶಗಳನ್ನು ಹತ್ತಿರ ಸೇರಿಸಿದೆ. ನಿಮ್ಮ ತ್ಯಾಗ ಮತ್ತು ಕುಟುಂಬದ ಧೈರ್ಯದಿಂದಾಗಿ ನೀವು ಇಂದು ನಮ್ಮ ದೇಶದ ಆಧಾರ ಸ್ತಂಭವಾಗಿದ್ದೀರಿ. ಒಂದು ವೇಳೆ ಡೆಮಾಕ್ರೆಟಿಕ್ ಪಕ್ಷ ಗೆಲವು ಸಾಧಿಸಿ ಕಮಲಾ ಹ್ಯಾರಿಸ್ ಭಾರತೀಯ ಮೂಲದ ಮೊದಲ ಉಪಾಧ್ಯಕ್ಷೆ ಎನಿಸಿಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ.