
ನವದೆಹಲಿ (ಏ.20): ಜೈಲು ಶಿಕ್ಷೆಯಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನದ ಸರ್ಕಾರದ ವಿರುದ್ಧವೇ ಶುಕ್ರವಾರ ದೊಡ್ಡ ಆರೋಪ ಮಾಡಿದ್ದಾರೆ. ಅವರ ಪತ್ನಿ ಬುಶ್ರಾ ಬೇಬಿಗೆ ಪ್ರತಿದಿನವೂ ಟಾಯ್ಲೆಟ್ ಕ್ಲೀನರ್ ಮಿಶ್ರಿತ ಆಹಾರವನ್ನು ನೀಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ವಿಷಪೂರಿತವಾಗಿರುವ ಈ ಆಹಾರವನ್ನು ಸೇವಿಸುತ್ತಿರುವ ಕಾರಣ, ಆಕೆ ಪ್ರತಿದಿನವೂ ಹೊಟ್ಟೆ ಸೋಂಕಿನ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆಕೆಯ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ. 49 ವರ್ಷದ ಬುಶ್ರಾ ಬೀಬಿ ಇತ್ತೀಚೆಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಮತ್ತು 71 ವರ್ಷದ ಇಮ್ರಾನ್ ಖಾನ್ ಜೊತೆಗಿನ ಅಕ್ರಮ ವಿವಾಹದ ಪ್ರಕರಣದಲ್ಲಿ ಶಿಕ್ಷೆಗೊಳಗಾದರು ಮತ್ತು ಪ್ರಸ್ತುತ ಇಸ್ಲಾಮಾಬಾದ್‌ನ ಉಪನಗರದಲ್ಲಿರುವ ಅವರ ಬನಿ ಗಾಲಾ ನಿವಾಸದಲ್ಲಿ ಬಂಧನದಲ್ಲಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥರೂ ಆಗಿರುವ ಇಮ್ರಾನ್ ಖಾನ್ ಅವರು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಈ ಆರೋಪ ಮಾಡಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಇಸ್ಲಾಮಾಬಾದ್‌ನ ಶಿಫಾ ಇಂಟರ್‌ನ್ಯಾಶನಲ್ ಆಸ್ಪತ್ರೆಯಲ್ಲಿ ಬುಶ್ರಾ ಬೀಬಿಯ ಆರೊಗ್ಯಪರೀಕ್ಷೆಗಳನ್ನು ನಡೆಸುವಂತೆ ಶೌಕತ್ ಖಾನಮ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಸಿಮ್ ಯೂಸುಫ್ ಶಿಫಾರಸು ಮಾಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಪಿಮ್ಸ್) ಆಸ್ಪತ್ರೆಯಲ್ಲಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಜೈಲು ಅಧಿಕಾರಿಗಳು ನಿರಾಸಕ್ತಿ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಇಮ್ರಾನ್ ಖಾನ್ ಅವರಿಗೆ ಕಸ್ಟಡಿಯಲ್ಲಿದ್ದಾಗ ಪತ್ರಿಕಾಗೋಷ್ಠಿ ನಡೆಸದಂತೆ ತಿಳಿಸಿದ್ದಾರೆ. ಪ್ರತಿಕ್ರಿಯೆಯಾಗಿ, ಮಾಜಿ ಪ್ರಧಾನಿ ಅವರು ತಮ್ಮ ಹೇಳಿಕೆಗಳನ್ನು ತಪ್ಪಾಗಿ ಉಲ್ಲೇಖಿಸಿರುವುದರಿಂದ ಅವರು ನಿಯಮಿತವಾಗಿ ಪತ್ರಕರ್ತರೊಂದಿಗೆ ತೊಡಗಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಹಲವಾರು ಪ್ರಕರಣಗಳಲ್ಲಿ ದೋಷಿಯಾಗಿರುವ ಇಮ್ರಾನ್ ಖಾನ್, ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ 10 ನಿಮಿಷಗಳ ಸಂವಾದಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
ಏಪ್ರಿಲ್ 17 ರಂದು ಇಮ್ರಾನ್ ಖಾನ್ ಅವರು ಬುಶ್ರಾ ಬೀಬಿ ಜೈಲಿಗೆ ಹೋಗೋದಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ನೇರ ಹೊಣೆ ಎಂದು ಆರೋಪ ಮಾಡಿದ್ದರು. ತನ್ನ ಹೆಂಡತಿಗೆ ಏನಾದರೂ ಸಂಭವಿಸಿದರೆ ಜನರಲ್ ಮುನೀರ್‌ರನ್ನು ಸುಮ್ಮನೆ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಅಕ್ರಮ ಮದುವೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್, ಬುಶ್ರಾ ದಂಪತಿಗೆ ಮತ್ತೆ 7 ವರ್ಷ ಜೈಲು
"ಜನರಲ್ ಅಸಿಮ್ ಮುನೀರ್ ಅವರು ನನ್ನ ಪತ್ನಿಗೆ ನೀಡಲಾದ ಶಿಕ್ಷೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ" ಎಂದು ಹೇಳಿದ್ದಲ್ಲದೆ, ಬುಶ್ರಾ ಬೇಬಿಗೆ ಇಂಥದ್ದೇ ಶಿಕ್ಷೆ ನೀಡಬೇಕು ಎಂದು ನ್ಯಾಯಾಧೀಶರಿಗೆ ಒತ್ತಾಯ ಮಾಡಿದ್ದರು ಎಂದಿದ್ದಾರೆ. "ನನ್ನ ಹೆಂಡತಿಗೆ ಏನಾದರೂ ಸಂಭವಿಸಿದರೆ, ನಾನು ಅಸೀಮ್ ಮುನೀರ್‌ನನ್ನು ಬಿಡುವುದಿಲ್ಲ, ನಾನು ಜೀವಂತವಾಗಿರುವವರೆಗೆ ನಾನು ಅಸೀಮ್ ಮುನೀರ್‌ನನ್ನು ಬಿಡುವುದಿಲ್ಲ. ಅವನ ಸಂವಿಧಾನ ವಿರೋಧಿ ಮತ್ತು ಕಾನೂನುಬಾಹಿರ ಕ್ರಮಗಳನ್ನು ನಾನು ಬಹಿರಂಗಪಡಿಸುತ್ತೇನೆ" ಎಂದು ಅವರು ಹೇಳಿದ್ದರು.
ತೋಶಾಖಾನಾ ಕೇಸು: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ಪತ್ನಿಗೂ 14 ವರ್ಷ ಜೈಲು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ