ಬೈಡೆನ್‌-ಮೋದಿ ಔತಣಕೂಟದ ಟಿಕೆಟ್‌ಗೆ ಭಾರಿ ಬೇಡಿಕೆ: ಶ್ವೇತಭವನ

By Kannadaprabha NewsFirst Published May 25, 2023, 8:58 AM IST
Highlights

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದಲ್ಲಿ ನೀಡಲಾಗುತ್ತಿರುವ ಔತಣಕೂಟದಲ್ಲಿ ಭಾಗಿಯಾಗಲು ಅವಕಾಶ ಕೋರಿ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಸಾಕಷ್ಟು ಕೋರಿಕೆಗಳು ಬರುತ್ತಿವೆ. ಇದು ಮೋದಿ ಅವರ ಭೇಟಿಯ ಕುರಿತಾಗಿ ಇರುವ ಕುತೂಹಲವನ್ನು ತೋರಿಸುತ್ತದೆ ಎಂದು ಶ್ವೇತಭವನ ಹೇಳಿದೆ.

ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದಲ್ಲಿ ನೀಡಲಾಗುತ್ತಿರುವ ಔತಣಕೂಟದಲ್ಲಿ ಭಾಗಿಯಾಗಲು ಅವಕಾಶ ಕೋರಿ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಸಾಕಷ್ಟು ಕೋರಿಕೆಗಳು ಬರುತ್ತಿವೆ. ಇದು ಮೋದಿ ಅವರ ಭೇಟಿಯ ಕುರಿತಾಗಿ ಇರುವ ಕುತೂಹಲವನ್ನು ತೋರಿಸುತ್ತದೆ ಎಂದು ಶ್ವೇತಭವನ ಹೇಳಿದೆ.

ಜೂ.22ರಂದು ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಗೌರವಾರ್ಥವಾಗಿ ಅಮೆರಿಕ ಔತಣಕೂಟವನ್ನು ಆಯೋಜಿಸಿದೆ. ಈ ಕುರಿತಾಗಿ ಮಾತನಾಡಿದ ಶ್ವೇತಭವನದ ವಕ್ತಾರೆ ಕರೈನ್‌ ಜೀನ್‌ ಪೀರ್‌, ಇಷ್ಟೊಂದು ಪ್ರಮಾಣದಲ್ಲಿ ಕೋರಿಕೆಗಳು ಬರುತ್ತಿರುವುದು ನಿಜಕ್ಕೂ ಉತ್ತಮ ಸನ್ನಿವೇಶವಾಗಿದೆ. ಭಾರತದೊಂದಿಗೆ ಸಂಬಂಧ ಹೊಂದುವುದು ಏಕೆ ಮುಖ್ಯ ಎಂಬುದು ಇದರಿಂದ ಅರ್ಥವಾಗುತ್ತದೆ. ಅಧ್ಯಕ್ಷ ದಂಪತಿ ಕೂಡ ಪ್ರಧಾನಿ ಮೋದಿ ಅವರ ಭೇಟಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಸ್ವತಂತ್ರ, ಮುಕ್ತ ಪೆಸಿಫಿಕ್‌ ದ್ವೀಪ ವಲಯಕ್ಕೆ ಕರೆ: ಪೆಸಿಫಿಕ್‌ ದೇಶಗಳಿಗೆ ಮೋದಿ ಭರ್ಜರಿ ಕೊಡುಗೆ

ಆಸ್ಪ್ರೇಲಿಯಾದಲ್ಲೂ ನಮೋ ಅಲೆ: ಸಿಡ್ನಿಯಲ್ಲಿ ‘ಮೋದಿ ಮೋದಿ’ ಜೈಘೋಷ

ಇತ್ತೀಚೆಗೆ ಆಸ್ಪ್ರೇಲಿಯಾಗೆ 3 ದಿನಗಳ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದರು. ಸಿಡ್ನಿಯಲ್ಲಿ ಮೇ.23 ರಂದು ನಡೆದ ಅವರ ಬಹಿರಂಗ ಶೋ ವೇಳೆ ಜನರು ದಾಂಗುಡಿ ಇಟ್ಟು, ‘ಮೋದಿ ಅಲೆ’ ಸೃಷ್ಟಿಸಿದ್ದರು. ಆಸ್ಪ್ರೇಲಿಯಾಕ್ಕೆ ಮೂರು ದಿನಗಳ ಪ್ರವಾಸಕ್ಕೆ ಆಗಮಿಸಿದ್ದ ಅವರಿಗೆ ಸಿಡ್ನಿಯಲ್ಲಿ ಸಮಾರಂಭ ನಡೆದ ಕುಡೋಸ್‌ ಬ್ಯಾಂಕ್‌ ಅರೇನಾದಲ್ಲಿ  ಭವ್ಯ ಸ್ವಾಗತ ದೊರಕಿತು. 21 ಸಾವಿರಕ್ಕೂ ಹೆಚ್ಚು ಭಾರತೀಯರು ಹಾಗೂ ಆಸ್ಪ್ರೇಲಿಯನ್ನರು ನೆರೆದಿದ್ದ ಬೃಹತ್‌ ಸ್ಟೇಡಿಯಂನಲ್ಲಿ ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರು ಮೋದಿಗೆ ಆತ್ಮೀಯ ಅಪ್ಪುಗೆಯ ಮೂಲಕ ಸ್ವಾಗತ ಕೋರಿದರು. ಬಳಿಕ ‘ಮೋದಿ ಮೋದಿ ಮೋದಿ’ ಘೋಷಣೆ ಮೊಳಗಿತು. ಈ ಘೋಷಣೆಗಳ ನಡುವೆಯೇ ಮೋದಿ ಭಾಷಣ ಮಾಡಿದರು.

ಇದೇ ವೇಳೆ, ಜನರು ತ್ರಿವರ್ಣಧ್ವಜ ಹಿಡಿದು ಭಾರತ್‌ ಮಾತಾ ಕೀ ಜೈ ಜಯಘೋಷ ಮೊಳಗಿಸಿದರು. ಕೆಲವರು ತ್ರಿವರ್ಣ ಧ್ವಜದ ಪೇಟ ಧರಿಸಿದ್ದರು. ಮೋದಿ ಹಾಗೂ ಅಲ್ಬನೀಸ್‌ಗೆ ಇದೇ ವೇಳೆ ಹಿಂದೂ ಪುರೋಹಿತರು ಸ್ವಾಗತ ಕೋರಿ ಆಶೀರ್ವದಿಸಿದರು. ಭಾರತೀಯ ಕಲಾ ತಂಡಗಳು ಭಾರತದ ಸಂಸ್ಕೃತಿ ಪ್ರದರ್ಶಿಸುವ ನೃತ್ಯ, ಹಾಡುಗಾರಿಕೆ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ಸೋಮವಾರ ರಾತ್ರಿ ಇದೇ ರೀತಿ ಸಿಡ್ನಿಯಲ್ಲಿ ಭಾರತೀಯರು ಅಪ್ಪಟ ದೇಶೀ ಉಡುಗೆಯಲ್ಲಿ ನೆರೆದು ಭರ್ಜರಿ ಸ್ವಾಗತ ಕೋರಿದ್ದರು.

ಅಸ್ಟ್ರೇಲಿಯಾದಲ್ಲಿ ಮೋದಿ ಮೇನಿಯಾ: ಜಗತ್ತಿನಾದ್ಯಂತ ಭಾರತದ ಟ್ಯಾಲೆಂಟ್‌ ಫ್ಯಾಕ್ಟರಿ ಇದೆ ಎಂದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ‘ದಿ ಬಾಸ್‌’ ಎಂದು ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಬಣ್ಣಿಸಿದ್ದಾರೆ. ಸಿಡ್ನಿಯಲ್ಲಿ ಏರ್ಪಡಿಸಿದ್ದ ಭವ್ಯ ಸಮಾರಂಭದಲ್ಲಿ ಮೋದಿಯವರನ್ನು ಸ್ವಾಗತಿಸಿದ ಅಲ್ಬನೀಸ್‌, ‘ಪ್ರಧಾನಿ ಮೋದಿ ಹೋದಲ್ಲೆಲ್ಲ ಅವರಿಗೆ ರಾಕ್‌ಸ್ಟಾರ್‌ ರೀತಿಯ ಸ್ವಾಗತ ಸಿಗುತ್ತದೆ. ಹೀಗಾಗಿ ಅವರು ದಿ ಬಾಸ್‌’ ಎಂದು ಹೇಳಿದರು. ಹಿಂದೆ ಇಲ್ಲಿಗೆ ಅಮೆರಿಕದ ಖ್ಯಾತ ಗಾಯಕ ಬ್ರೂಸ್‌ ಸ್ಟ್ರಿಂಗ್‌ಸ್ಟೀನ್‌ ಬಂದಿದ್ದರು. ಅವರಿಗೆ ‘ದಿ ಬಾಸ್‌’ ಎಂದು ಅಭಿಮಾನಿಗಳು ಕರೆಯುತ್ತಾರೆ. ಅವರು ಬಂದಾಗಲೂ ಇಲ್ಲಿ ಇಷ್ಟೊಂದು ಜನರು ಸೇರಿ ಈ ಪರಿಯ ಭವ್ಯ ಸ್ವಾಗತ ನೀಡಿರಲಿಲ್ಲ. ಹೀಗಾಗಿ ಮೋದಿ ಅವರು ಸ್ಟ್ರಿಂಗ್‌ಸ್ಟೀನ್‌ಗಿಂತ ಹೆಚ್ಚು ಪ್ರಸಿದ್ಧರು. ಇವರೇ ದಿ ಬಾಸ್‌’ ಎಂದು ಅಲ್ಬನೀಸ್‌ ಬಣ್ಣಿಸಿದರು. ಈ ಮಾತಿಗೆ ಕುಡೋಸ್‌ ಬ್ಯಾಂಕ್‌ ಅರೇನಾ ಸ್ಟೇಡಿಯಂನಲ್ಲಿ ನೆರೆದಿದ್ದ 21 ಸಾವಿರಕ್ಕೂ ಹೆಚ್ಚು ಜನರಿಂದ ಕಿವಗಡಚಿಕ್ಕುವ ಚಪ್ಪಾಳೆಯ ಮಳೆ ಸುರಿಯಿತು.

click me!