ತನ್ನ ವಿರುದ್ಧವೇ ದಂಗೆಯೆದ್ದ ಖಾಸಗಿ ಸೇನೆಗೆ ಪುಟಿನ್‌ ಕ್ಷಮೆ: ‘ದೇಶದ್ರೋಹಿಗಳ’ ಎದುರು ಮಂಡಿಯೂರಿದ ರಷ್ಯಾ?

By Kannadaprabha News  |  First Published Jun 26, 2023, 8:52 AM IST

ಉಕ್ರೇನ್‌ ಮೇಲೆ ಸಾರಿರುವ ಯುದ್ಧವನ್ನು ಗೆಲ್ಲಲು ರಷ್ಯಾ ತಿಣುಕಾಡುತ್ತಿರುವಾಗಲೇ, ಪರಮಾಪ್ತನೇ ಬಂಡಾಯ ಘೋಷಣೆ ಮಾಡಿದ್ದರಿಂದ ಪುಟಿನ್‌ ವ್ಯಾಕುಲಗೊಂಡಿದ್ದರು. ಆದರೆ ಬೆಲರೂಸ್‌ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಾಶೆಂಕೋ ಅವರು ಮಧ್ಯಪ್ರವೇಶಿಸಿ ಪುಟಿನ್‌ ಹಾಗೂ ಯೆವ್‌ಗಿನಿ ನಡುವೆ ಸಂಧಾನ ಮಾಡಿದ್ದಾರೆ. 


ಮಾಸ್ಕೋ (ಜೂನ್ 26, 2023): ವಿಶ್ವದ ಅತ್ಯಂತ ಬಲಾಢ್ಯ ದೇಶಗಳಲ್ಲಿ ಒಂದಾಗಿರುವ ರಷ್ಯಾ ವಿರುದ್ಧ ಖಾಸಗಿ ಸೇನೆ ‘ವಾಗ್ನರ್‌’ ಸಾರಿದ್ದ ಬಂಡಾಯ ಅಧಿಕೃತವಾಗಿ ಶಮನವಾಗಿದೆ. ಆದರೆ, ಈ ಬಂಡಾಯವು ಯಾವುದೇ ದಮನಕಾರಿ ಕ್ರಮದ ಮೂಲಕ ಶಮನವಾಗದೆ, ‘ಕ್ಷಮಾದಾನ’ದಲ್ಲಿ ಅಂತ್ಯವಾಗಿದೆ. ಬಂಡುಕೋರ ವ್ಯಾಗ್ನರ್‌ ಪಡೆಗೆ ರಷ್ಯಾ ಸೇನೆಯಲ್ಲಿ ಸೇರುವ ಅವಕಾಶ ಹಾಗೂ ಬಂಡುಕೋರ ಪಡೆಯ ನಾಯಕ ಯೆವ್‌ಗೆನಿ ಪ್ರಿಗೋಝಿನ್‌ಗೆ ಬೆಲಾರುಸ್‌ಗೆ ಸುರಕ್ಷಿತ ಸ್ಥಳಾಂತರದ ಅವಕಾಶವನ್ನು ಪುಟಿನ್‌ ನೀಡಿದ್ದಾರೆ. ಇದರಿಂದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ತಮ್ಮ ಮಾಜಿ ಆಪ್ತ ಯೆವ್‌ಗಿನಿ ಬಂಡಾಯದಿಂದ ಥಂಡಾ ಹೊಡೆದಿರುವುದು ಸಾಬೀತಾಗಿದೆ.

ಉಕ್ರೇನ್‌ ಮೇಲೆ ಸಾರಿರುವ ಯುದ್ಧವನ್ನು ಗೆಲ್ಲಲು ರಷ್ಯಾ ತಿಣುಕಾಡುತ್ತಿರುವಾಗಲೇ, ಪರಮಾಪ್ತನೇ ಬಂಡಾಯ ಘೋಷಣೆ ಮಾಡಿದ್ದರಿಂದ ಪುಟಿನ್‌ ವ್ಯಾಕುಲಗೊಂಡಿದ್ದರು. ಅವರ ಎರಡು ದಶಕಗಳ ಆಳ್ವಿಕೆಗೆ ಎದುರಾದ ಬಹುದೊಡ್ಡ ಸವಾಲು ಇದಾಗಿತ್ತು. ಹೀಗಾಗಿ ರಷ್ಯಾದಲ್ಲಿ ಏನು ಬೇಕಾದರೂ ಆಗಬಹುದು ಎಂಬ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಬೆಲರೂಸ್‌ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಾಶೆಂಕೋ ಅವರು ಮಧ್ಯಪ್ರವೇಶಿಸಿ ಪುಟಿನ್‌ ಹಾಗೂ ಯೆವ್‌ಗಿನಿ ನಡುವೆ ಸಂಧಾನ ಮಾಡಿದ್ದಾರೆ. ಹೀಗಾಗಿ ಸಂಭಾವ್ಯ ಅನಾಹುತ ತಪ್ಪಿದೆ.

Tap to resize

Latest Videos

ಇದನ್ನು ಓದಿ: ರಷ್ಯಾದಲ್ಲಿ ಪುಟಿನ್‌ ಆಪ್ತನ ಖಾಸಗಿ ಸೇನೆ ದಿಢೀರ್‌ ಸೈಲೆಂಟ್‌: ಮಾಸ್ಕೋಗೆ ಲಗ್ಗೆ ನಿರ್ಧಾರದಿಂದ ಹಿಂದೆ ಸರಿದ ವ್ಯಾಗ್ನರ್‌!

ಸಂಧಾನ ಏನು?:
ಸಂಧಾನದ ಫಲವಾಗಿ, ಬಂಡಾಯ ಘೋಷಣೆ ಮಾಡಿ ರಷ್ಯಾದ ನಗರವೊಂದನ್ನು ವಶಕ್ಕೆ ತೆಗೆದುಕೊಂಡಿದ್ದ, ರಾಜಧಾನಿ ಮಾಸ್ಕೋವನ್ನು ತೆಕ್ಕೆಗೆ ತೆಗೆದುಕೊಂಡು ಪುಟಿನ್‌ ಸರ್ಕಾರದ ಪದಚ್ಯುತಿಗೆ ಹೊರಟಿದ್ದ ಪ್ರಿಗೋಝಿನ್‌ ಹಾಗೂ ಆತನ ನೇತೃತ್ವದ ವಾಗ್ನರ್‌ ಪಡೆಯ ಯಾರೊಬ್ಬರ ವಿರುದ್ಧವೂ ರಷ್ಯಾ ಕ್ರಮ ಕೈಗೊಳ್ಳದೇ ಇರಲು ಒಪ್ಪಿಗೆ ನೀಡಿದೆ. ಅಲ್ಲದೆ ಬಂಡಾಯದಲ್ಲಿ ಭಾಗಿಯಾಗದ ವಾಗ್ನರ್‌ ಸೇನೆಯ ಯೋಧರನ್ನು ರಷ್ಯಾ ಸೇನೆಗೆ ಸೇರಲು ಅನುಮತಿ ನೀಡಿದೆ. ಮತ್ತೊಂದೆಡೆ, ಪ್ರಿಗೋಝಿನ್‌ ರಷ್ಯಾ ತೊರೆದು ಬೆಲರೂಸ್‌ಗೆ ಸ್ಥಳಾಂತರಗೊಳ್ಳಲಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೋವ್‌, ‘ರಕ್ತಪಾತ, ಆಂತರಿಕ ಸಂಘರ್ಷ ಹಾಗೂ ಅನೂಹ್ಯ ತಿಕ್ಕಾಟವನ್ನು ತಪ್ಪಿಸುವುದು ನಮ್ಮ ಪರಮೋಚ್ಚ ಗುರಿಯಾಗಿತ್ತು. ಬೆಲರೂಸ್‌ ಅಧ್ಯಕ್ಷರ ಸಂಧಾನದ ಅನುಸಾರ ವಾಗ್ನರ್‌ ಪಡೆಯ ಯೋಧರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಆ ಪಡೆ ಮುಂಚೂಣಿಯಲ್ಲಿ ನಿಂತು ರಷ್ಯಾ ಪರವಾಗಿ ನಡೆಸಿರುವ ಹೋರಾಟವನ್ನು ಯಾವತ್ತಿಗೂ ಗೌರವಿಸುತ್ತೇವೆ. ಒಪ್ಪಂದದ ಅನುಸಾರವಾಗಿ ವಾಗ್ನರ್‌ ಪಡೆ ತನ್ನ ನೆಲೆಗಳಿಗೆ ಮರಳಲಿದೆ. ದಂಗೆಯಲ್ಲಿ ಭಾಗಿಯಾಗದ ಸೈನಿಕರು ರಷ್ಯಾ ಸೇನೆಯನ್ನು ಸೇರ್ಪಡೆಯಾಗಲು ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ರಷ್ಯಾದಿಂದ ರಫ್ತಾಗ್ತಿರೋ ಶೇ.80 ರಷ್ಟು ತೈಲ ಭಾರತ, ಚೀನಾದಿಂದ್ಲೇ ಖರೀದಿ!

ರಷ್ಯಾ ರಕ್ಷಣಾ ಸಚಿವ ಹಾಗೂ ಸೇನಾ ಮುಖ್ಯಸ್ಥರ ವಿರುದ್ಧ ಸಿಡಿದೆದ್ದಿದ್ದ ವ್ಯಾಗ್ನರ್‌ ಸೇನೆ ಅವರ ವಜಾಕ್ಕಾಗಿ ಪುಟಿನ್‌ ಸರ್ಕಾರವನ್ನೇ ಪದಚ್ಯುತಿಗೊಳಿಸುವ ಗುರಿಯೊಂದಿಗೆ ದಂಗೆ ಸಾರಿತ್ತು. ಆದರೆ ಒಪ್ಪಂದದಲ್ಲಿ ಆ ಇಬ್ಬರ ವಿಚಾರ ಕುರಿತು ಪ್ರಸ್ತಾಪವಾಗಿಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹಠಾತ್‌ ದಂಗೆ:
ಉಕ್ರೇನ್‌ ಸಮರ ಸೇರಿದಂತೆ ರಷ್ಯಾ ನಡೆಸಿದ ಯುದ್ಧಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ವ್ಯಾಗ್ನರ್‌ ಪಡೆಯ ಪ್ರಿಗೋಝಿನ್‌ ಶನಿವಾರ ರಷ್ಯಾದ ವಿರುದ್ಧವೇ ದಂಗೆ ಸಾರಿದ್ದರು. ತಮ್ಮ ಪಡೆಯ ಸಾಧನೆಯನ್ನು ಮರೆಮಾಚಿ, ತಮ್ಮನ್ನೇ ದಮನಗೊಳಿಸಲು ರಷ್ಯಾ ರಕ್ಷಣಾ ಸಚಿವ ಹಾಗೂ ಸೇನಾ ಮುಖ್ಯಸ್ಥರು ಮುಂದಾಗಿದ್ದಾರೆ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಸುಮಾರು 50 ಸಾವಿರ ಯೋಧರು ಮಾಸ್ಕೋದತ್ತ ಮುನ್ನುಗ್ಗಲು ಆರಂಭಿಸಿದರು. ಇದಕ್ಕೂ ಮುನ್ನ ರಷ್ಯಾ ಸೇನೆಯ 4 ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿ ವಿವಿಧೆಡೆ ರಷ್ಯಾ ಯೋಧರ ಜತೆ ಚಕಮಕಿ ನಡೆಸಿದ್ದರು. ಉಕ್ರೇನ್‌ ಸಮರಕ್ಕೆ ಸಂಬಂಧಿಸಿದಂತೆ ರಷ್ಯಾಕ್ಕೆ ಪ್ರಮುಖ ನೆಲೆಯಾಗಿರುವ ರೋಸ್ತೋವ್‌ ನಗರವನ್ನೇ ವ್ಯಾಗ್ನರ್‌ಗಳು ವಶಕ್ಕೆ ಪಡೆದಿದ್ದರು. ವ್ಯಾಗ್ನರ್‌ ಪಡೆ ಮಾಸ್ಕೋದತ್ತ ಬರುತ್ತಿದ್ದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಜನರಿಗೆ ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿತ್ತು. ತಡರಾತ್ರಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಬೆಲರೂಸ್‌ ಅಧ್ಯಕ್ಷರ ಸಂಧಾನದ ಬಳಿಕ ವಾಪಸ್‌ ಉಕ್ರೇನ್‌ಗೆ ಮರಳುವಂತೆ ಪ್ರಿಗೋಝಿನ್‌ ತನ್ನ ಸೈನಿಕರಿಗೆ ಆದೇಶಿಸಿದ್ದ.

ಇದನ್ನೂ ಓದಿ: ಉಕ್ರೇನ್‌ ವಿರುದ್ಧ ಯುದ್ಧದ ಪಾಪ: ಪುಟಿನ್‌ ದೃಷ್ಟಿಮಂದ, ನಾಲಿಗೆ ಸ್ತಬ್ಧ, ಸಂವೇದನೆಯೂ ಇಲ್ಲ; ವೈದ್ಯರ ಕಳವಳ

ಯೆವ್‌ಗೆನಿ ಜತೆ ಫೋಟೋ ತೆಗೆಸಿಕೊಂಡು ಜನರ ಹರ್ಷ
ಮಾಸ್ಕೋ: ವ್ಯಾಗ್ನರ್‌ ಪಡೆಯು ರಷ್ಯಾದಲ್ಲಿ ತಾನು ವಶಪಡಿಸಿಕೊಂಡಿದ್ದ ಸೊರೋಸ್‌ ಪಟ್ಟಣ ಹಾಗೂ ಸೇನಾ ನೆಲೆಯಿಂದ ನಿರ್ಗಮಿಸಿದೆ. ಈ ವೇಳೆ, ವ್ಯಾಗ್ನರ್‌ ಪಡೆ ವಾಪಸ್‌ ಹೋಗುವಾಗ ಜನರು ‘ವ್ಯಾಗ್ನರ್‌ ವ್ಯಾಗ್ನರ್‌’ ಎಂದು ಘೋಷಣೆ ಕೂಗಿ ಹರ್ಷೋದ್ಗಾರಗೈದರು. ಇದೇ ವೇಳೆ, ಅಲ್ಲೇ ಇದ್ದ ವ್ಯಾಗ್ನರ್‌ ಮುಖ್ಯಸ್ಥ ಯೆವ್‌ಗೆನಿ ಪ್ರಿಗೋಝಿನ್‌ ಜತೆ ಫೋಟೋ ತೆಗೆಸಿಕೊಂಡರು.

  • ಬೆಲರೂಸ್‌ ಅಧ್ಯಕ್ಷ ಅಲೆಕ್ಸಾಂಡರ್‌ ಸಂಧಾನ ಯಶಸ್ವಿ
  • ಬಂಡಾಯಕ್ಕೆ ಬೆದರಿ ಕ್ಷಮಾದಾನ ನೀಡಿದ ಪುಟಿನ್‌
  • ವಾಗ್ನರ್‌ ಪಡೆ ವಿರುದ್ಧ ಕ್ರಮ ಕೈಗೊಳ್ಳಲ್ಲ ಎಂದ ರಷ್ಯಾ
  • ದಂಗೆಯಲ್ಲಿ ಪಾಲ್ಗೊಳ್ಳದ ವಾಗ್ನರ್‌ ಯೋಧರಿಗೆ ನೌಕರಿ
  • ವಾಗ್ನರ್‌ ಬಾಸ್‌ ಪ್ರಿಗೋಝಿನ್‌ ಬೆಲರೂಸ್‌ಗೆ ಶಿಫ್ಟ್‌

400 ದಿನಗಳ ಉಕ್ರೇನ್-ರಷ್ಯಾ ಯುದ್ಧಕ್ಕೆ ವಿಶ್ವದ ದೊಡ್ಡಣ್ಣ ಎಂಟ್ರಿ: ಯುದ್ಧಭೂಮಿಗೆ ನುಗ್ಗುತ್ತಾ ಅಮೆರಿಕ ಸೈನ್ಯ..? 

click me!