ನನ್ನಮ್ಮ ಎಲ್ಲಿ: ಟರ್ಕಿ ಭೂಕಂಪದಲ್ಲಿ ಹೆತ್ತವರ ಕಳಕೊಂಡು ಪುಟ್ಟ ಮಗುವಿನ ಗೋಳು

By Kannadaprabha NewsFirst Published Feb 8, 2023, 1:41 AM IST
Highlights

ಟರ್ಕಿ ಹಾಗೂ ಸಿರಿಯಾದಲ್ಲಿ ನಡೆದ ಭೂಕಂಪನದಿಂದ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಎಲ್ಲರನ್ನು ಕಳೆದುಕೊಂಡು ಬದುಕಿ ಉಳಿದವರು ತನ್ನವರಿಗಾಗಿ ರೋದಿಸುವ ದೃಶ್ಯ ಮನ ಕಲುಕುವಂತಿದೆ. 

ಅಂಕಾರ: ಭೂಕಂಪಕ್ಕೆ ಮನೆ ಕುಸಿದು ಬದುಕುಳಿದಿದ್ದ 18 ತಿಂಗಳ ಮಗುವೊಂದು ನನ್ನ ಅಮ್ಮ ಎಲ್ಲಿ.? ಎಂದು ಕಂಗಾಲಾಗಿ ಅಳುತ್ತಿರುವಂತ ಮನಕಲುಕುವ ಘಟನೆ ಸಿರಿಯಾದ ಅಜಾಜ್‌ನಲ್ಲಿ ನಡೆದಿದೆ. ರಘಡ್‌ ಇಸ್ಮಾಯಿಲ್‌ ಎಂಬ ಹೆಣ್ಣು ಮಗು ತನ್ನ ಮನೆ ಕಟ್ಟಡ ಕುಸಿದು ಬಿದ್ದ ಬಳಿಕ ಅಚ್ಚರಿಯೆಂಬಂತೆ ಬದುಕುಳಿದಿದೆ. ಆದರೆ ಮಗುವಿನ ಗರ್ಭಿಣಿ ತಾಯಿ ಹಾಗೂ ಇಬ್ಬರು ಒಡಹುಟ್ಟಿದವರು ಮೃತಪಟ್ಟಿದ್ದಾರೆ ಎಂದು ಮಗುವಿನ ಚಿಕ್ಕಪ್ಪ ಹೇಳಿದ್ದಾರೆ. ಮಾರನೆ ದಿನ ಮಗು ಒಂದೆಡೆ ಕುಳಿತು ಬ್ರೆಡ್‌ ತುಂಡಗಳನ್ನು ತಿನ್ನುತ್ತಿದ್ದ ದೃಶ್ಯ ಕಂಡು ಬಂತು.

ಚಿಕಿತ್ಸಕರಿಲ್ಲದೇ ಆಸ್ಪತ್ರೆಗಳಲ್ಲಿ ಗಾಯಾಳುಗಳ ಸಾವು

ಭೀಕರ ಭೂಕಂಪಕ್ಕೆ ತುತ್ತಾದ ಟರ್ಕಿ ಮತ್ತು ಸಿರಿಯಾದ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು ಸೂಕ್ತ ಚಿಕಿತ್ಸೆ ಇಲ್ಲದೇ ಗಾಯಾಳುಗಳು ತೊಂದರೆ ಎದುರಿಸುತ್ತಿದ್ದಾರೆ. ಏಕಾಏಕಿ ಸಾವಿರಾರು ಪ್ರಮಾಣದಲ್ಲಿ ಗಾಯಾಳುಗಳು ದಾಖಲಾದ ಕಾರಣ ಅಗತ್ಯ ಉಪಕರಣ ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆಯನ್ನು ಆಸ್ಪತ್ರೆಗಳು (hospitals) ಎದುರಿಸುತ್ತಿವೆ. ಹೀಗಾಗಿ ಹಲವು ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಗಾಯಾಳುಗಳು ಸಾವನ್ನಪ್ಪುತ್ತಿದ್ದಾರೆ ಎನ್ನಲಾಗಿದೆ.

ತಿನ್ನಲು ಆಹಾರವಿಲ್ಲದೇ ಜನರಿಂದ ಅಂಗಡಿ ಲೂಟಿ

ಭೂಕಂಪದಿಂದ (earthquake) ಮನೆ ಕಳೆದುಕೊಂಡು ಬೀದಿಗೆ ಬಿದ್ದಿರುವ ಸಾವಿರಾರು ಜನರು ತಿನ್ನಲು ಆಹಾರ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದೆ. ಇದರ ಜೊತೆ ಶೀತಮಾರುತ ಪರಿಸ್ಥಿತಿಯನ್ನು ಇನ್ನಷ್ಟು ಹೈರಣಾಗಿಸಿದೆ. ಹೀಗಾಗಿ ಜನರು ಅಂಗಡಿ, ಸೂಪರ್‌ ಮಾರ್ಕೆಟ್‌ಗಳಿಗೆ (supermarkets)ನುಗ್ಗಿ ಸಿಕ್ಕ ಆಹಾರವನ್ನೆಲ್ಲಾ ದೋಚುತ್ತಿದ್ದಾರೆ. ಬಹುಶಃ ಜನರು ನಮ್ಮನ್ನು ಮರೆತಿರಬಹುದು ಹಾಗಾಗಿ ನಮಗೆ ಈವರೆಗೆ ಯಾವುದೇ ರೀತಿಯ ನೆರವು ದೊರೆತಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಮಹಾ ಭೂಕಂಪಕ್ಕೆ ಟರ್ಕಿ & ಸಿರಿಯಾ ತತ್ತರ: 4 ಸಾವಿರ ಜನರು ಬಲಿ

ಭೂಕಂಪದ ತೀವ್ರತೆಗೆ 3 ಮೀಟರ್‌ ಸರಿದ ಟರ್ಕಿ!

ಇಸ್ತಾಂಬುಲ್‌: ಫೆ.6 ರಂದು ಅಪ್ಪಳಿಸಿದ ಭೀಕರ ಭೂಕಂಪದ ತೀವ್ರತೆಗೆ ಟರ್ಕಿ ದೇಶ ಸುಮಾರು 3 ಮೀಟರ್‌ನಷ್ಟುಸರಿದಿದೆ ಎಂದು ಇಟಲಿಯ ರಾಷ್ಟ್ರೀಯ ಜಿಯೋಫಿಸಿಕ್ಸ್‌ ಮತ್ತು ವಾಲ್ಕೆನಾಲಜಿ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಕಾರ್ಲೋ ಡಾಗ್‌ಲಿಯೋನಿ (Carlo Daglioni) ಹೇಳಿದ್ದಾರೆ.

ಅರೇಬಿಯನ್‌ ಭೂಶಿಲಾಪದರವು (Arabian tectonic plate), ಭೂಕಂಪದ ತೀವ್ರತೆಗೆ ಸಿಲುಕಿ 3 ಮೀ.ನಷ್ಟು ಈಶಾನ್ಯದಿಂದ ನೈಋುತ್ಯದತ್ತ ಚಲಿಸಿದೆ. ಹಾಗಾಗಿ ಸುಮಾರು 100 ಮೈಲಿಗೂ ಹೆಚ್ಚು ದೂರ 3 ಮೀ.ಗೂ ಅಧಿಕ ಪ್ರಮಾಣದ ಸ್ಥಳಾಂತರ ಉಂಟಾಗಿದೆ. ಸಿರಿಯಾ ಹಾಗೂ ಟರ್ಕಿ ಗಡಿ ಪ್ರದೇಶ ಈ ಭೂಶಿಲಾಪದರ ಮೇಲೆ ಸ್ಥಾಪಿತವಾಗಿದೆ. ಆದರೆ ಬಹುಪಾಲು ಟರ್ಕಿ ಅನಾಟೊಲಿನ್‌ ಭೂಶಿಲಾಪದರದ ಮೇಲೆ ಇದ್ದು, ಈ 2 ಭೂಶಿಲಾಪದರಗಳು ಪರಸ್ಪರ ಸಂಪರ್ಕ ಹೊಂದಿದ್ದು, ಅನಾಟೊಲಿನ ಫಲಕ ಸಹ ತಳ್ಳಲ್ಪಟ್ಟಿದೆ ಎಂದು ಕಾರ್ಲೋ ಹೇಳಿದ್ದಾರೆ.

Turkey Earthquake ಪರಿಹಾರ ಸಾಮಾಗ್ರಿ ಹೊತ್ತ ಭಾರತದ ವಿಮಾನಕ್ಕೆ ವಾಯುಪ್ರದೇಶ ನಿರಾಕರಿಸಿದ ಪಾಕಿಸ್ತಾನ! 

ಟರ್ಕಿಗೆ ಭಾರತದ ರಕ್ಷಣಾ, ವೈದ್ಯಕೀಯ ನೆರವು

ಪ್ರಬಲ ಭೂಕಂಪಕ್ಕೆ ಸಿಲುಕಿರುವ ಟರ್ಕಿಗೆ ಭಾರತ ಮಂಗಳವಾರ ಕೂಡ ರಕ್ಷಣಾ, ವೈದ್ಯಕೀಯ ನೆರವಿನ ಭರ್ಜರಿ ನೆರವು ರವಾನಿಸಿವೆ. ಆಗ್ರಾದಲ್ಲಿರುವ ಸೇನಾ ಆಸ್ಪತ್ರೆಯಿಂದ 89 ಮಂದಿ ವೈದ್ಯಕೀಯ ಸಿಬ್ಬಂದಿಯನ್ನು ರವಾನಿಸಲಾಗಿದೆ. ವೈದ್ಯಕೀಯ ಸಿಬ್ಬಂದಿಗಳಲ್ಲಿ ಮೂಳೆರೋಗ ತಜ್ಞರ ತಂಡ, ಸಾಮಾನ್ಯ ಶಸ್ತ್ರಚಿಕಿತ್ಸೆ ತಜ್ಞರ ತಂಡ ಮತ್ತು ಆರೋಗ್ಯ ಸೇವಾ ತಜ್ಞರನ್ನು ಸೇರಿಸಲಾಗಿದೆ. ಈ ತಂಡಗಳು ತಮ್ಮೊಂದಿಗೆ ಎಕ್ಸ್‌ ರೇ ಉಪಕರಣಗಳು, ವೆಂಟಿಲೇಟರ್‌ಗಳು, ಆಕ್ಸಿಜನ್‌ ಉತ್ಪಾದಿಸುವ ಘಟಕಗಳು, ಹೃದಯ ಬಡಿತ ಪರಿವೀಕ್ಷಕಗಳು ಮತ್ತು 30 ಹಾಸಿಗೆಗಳಷ್ಟುವಿಸ್ತಾರವಾದ ವೈದ್ಯಕೀಯ ಸೌಲಭ್ಯ ಒದಗಿಸಲು ಬೇಕಾದ ಸಲಕರಣೆಗಳನ್ನು ಕೊಂಡೊಯ್ದಿವೆ. ಭೂಕಂಪದಿಂದ ತೀವ್ರ ಹಾನಿ ಉಂಟಾದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯೇ ಮೊದಲ ವಿಮಾನದಲ್ಲಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿತ್ತು. ಮಂಗಳವಾರವೂ ಹೆಚ್ಚುವರಿಯಾಗಿ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಗಿದೆ.

101 ಎನ್‌ಡಿಆರ್‌ಎಫ್‌ ಸಿಬ್ಬಂದಿ:

ಭೂಕಂಪದಿಂದಾಗಿ ಉಂಟಾಗಿರುವ ಅನಾಹುತದಲ್ಲಿ ನೆರವು ಒದಗಿಸುವ ಸಲುವಾಗಿ 101 ಸಿಬ್ಬಂದಿ ಇರುವ ರಾಷ್ಟ್ರೀಯ ತುರ್ತು ನಿರ್ವಹಣಾ ತಂಡವನ್ನು (ಎನ್‌ಡಿಆರ್‌ಎಫ್‌) ಟರ್ಕಿಗೆ ರವಾನಿಸಲಾಗಿದೆ. ಇದರದಲ್ಲಿ 2 ಸಚ್‌ರ್‍ ಡಾಗ್‌ಗಳು, 4 ಚಕ್ರದ ವಾಹನಗಳು, ಸುತ್ತಿಗೆಗಳು, ಕತ್ತರಿಸುವ ಸಲಕರಣೆಗಳು, ಪ್ರಾಥಮಿಕ ಔಷಧಗಳು ಮತ್ತು ಸಂವಹನ ಸಾಧನಗಳನ್ನು ಕಳುಹಿಸಲಾಗಿದೆ. ಇವುಗಳನ್ನು ಹೊತ್ತ ವಾಯುಪಡೆಯ ವಿಮಾನ ಸಿ-17 ಗಾಜಿಯಾಬಾದ್‌ನ ಹಿಂಡನ್‌ ವಾಯುನೆಲೆಯಿಂದ ಟರ್ಕಿಗೆ ಹಾರಿದೆ.

click me!