ಫ್ಯೂಲ್ ಡಂಪ್ ಎಂದರೇನು? ರಷ್ಯಾ ಇಂಧನ ಬೀಳಿಸಿದ್ದರಿಂದಲೇ ಅಮೆರಿಕಾ ಡ್ರೋನ್ ಪತನವಾಯಿತೆ?

By Kannadaprabha NewsFirst Published Mar 15, 2023, 3:58 PM IST
Highlights

ಅಮೆರಿಕಾದ ಮಿಲಿಟರಿ ಮೂಲಗಳ ಪ್ರಕಾರ, ಮಂಗಳವಾರ ರಷ್ಯಾದ ಯುದ್ಧ ವಿಮಾನ ಅಮೆರಿಕಾದ ಡ್ರೋನ್ ಒಂದರ ಮೇಲೆ ದಾಳಿ ನಡೆಸಿ, ಅದು ಕಪ್ಪು ಸಮುದ್ರದಲ್ಲಿ ಬಿದ್ದು ಹೋಗುವಂತೆ ಮಾಡಿದೆ. ಅಂತಾರಾಷ್ಟ್ರೀಯ ಸಮುದ್ರದ ಮೇಲೆ ಎರಡು ರಷ್ಯನ್ ಸು-27 ಯುದ್ಧ ವಿಮಾನಗಳು ಅಮೆರಿಕಾದ ಮಾನವ ರಹಿತ ಎಂಕ್ಯು-9 ರೀಪರ್ ಅನ್ನು ಅಡ್ಡಗಟ್ಟಿದ ಬಳಿಕ ಈ ಘಟನೆ ಸಂಭವಿಸಿತು.

ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಅಮೆರಿಕಾದ ಮಿಲಿಟರಿ ಮೂಲಗಳ ಪ್ರಕಾರ, ಮಂಗಳವಾರ ರಷ್ಯಾದ ಯುದ್ಧ ವಿಮಾನ ಅಮೆರಿಕಾದ ಡ್ರೋನ್ ಒಂದರ ಮೇಲೆ ದಾಳಿ ನಡೆಸಿ, ಅದು ಕಪ್ಪು ಸಮುದ್ರದಲ್ಲಿ ಬಿದ್ದು ಹೋಗುವಂತೆ ಮಾಡಿದೆ. ಅಂತಾರಾಷ್ಟ್ರೀಯ ಸಮುದ್ರದ ಮೇಲೆ ಎರಡು ರಷ್ಯನ್ ಸು-27 ಯುದ್ಧ ವಿಮಾನಗಳು ಅಮೆರಿಕಾದ ಮಾನವ ರಹಿತ ಎಂಕ್ಯು-9 ರೀಪರ್ ಅನ್ನು ಅಡ್ಡಗಟ್ಟಿದ ಬಳಿಕ ಈ ಘಟನೆ ಸಂಭವಿಸಿತು.

ಅಮೆರಿಕಾದ ಸೇನೆ ರಷ್ಯಾದ ಕಾರ್ಯವನ್ನು ಅಜಾಗರೂಕ ನಡೆ ಎಂದು ಟೀಕಿಸಿ, ಎಂಕ್ಯು-9 ಪತನಗೊಳ್ಳುವ ಮೊದಲು ಸು-27 ಹಲವು ಬಾರಿ ಅದರ ಮೇಲೆ ಇಂಧನ ಸುರಿದಿದ್ದವು, ಇದು ಪರಿಸರಕ್ಕೂ ಹಾನಿಕರ ಮತ್ತು ವೃತ್ತಿಪರವಲ್ಲದ ನಡವಳಿಕೆ ಎಂದಿದೆ. ಪೆಂಟಗನ್ ತನ್ನ ಹೇಳಿಕೆಯಲ್ಲಿ ಈ ಡ್ರೋನ್ ಪತನ ಸಾಮಾನ್ಯ ಗುಪ್ತಚರ, ವಿಚಕ್ಷಣೆ ಕಾರ್ಯಾಚರಣೆ ನಡೆಸುತ್ತಿತ್ತು ಎಂದಿದೆ. ಆದರೆ ಮಾಸ್ಕೋ ಈ ಘಟನೆಯಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದಿದೆ.

ರಷ್ಯಾ ಎಷ್ಟು ವೇಗವಾಗಿ ಟ್ಯಾಂಕ್ ಪಡೆಗಳನ್ನು ಸಜ್ಜುಗೊಳಿಸಬಲ್ಲದು?

ರಷ್ಯಾದ ರಕ್ಷಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಎಂಕ್ಯು-9 ಮಾನವ ರಹಿತ ಏರಿಯಲ್ ವೆಹಿಕಲ್ ಇದ್ದಕ್ಕಿದ್ದಂತೆ ಬಾಗಿ ಚಲಿಸಿದ ಪರಿಣಾಮವಾಗಿ ನಿಯಂತ್ರಣ ಕಳೆದುಕೊಂಡು ಕೆಳಗೆ ಇಳಿಯತೊಡಗಿತು. ಅಂತಿಮವಾಗಿ ಅದು ಸಮುದ್ರಕ್ಕೆ ಬಿದ್ದು ಹೋಯಿತು. ರಷ್ಯಾ ತನ್ನ ಹೇಳಿಕೆಯನ್ನು ವಿಸ್ತರಿಸಿ, ಈ ಅವಘಡ ನಡೆದಾಗ ರಷ್ಯನ್ ಯುದ್ಧ ವಿಮಾನಗಳು ಅಮೆರಿಕಾದ ಏರ್‌ಕ್ರಾಫ್ಟ್ ಸನಿಹ ಹೋಗಿರಲಿಲ್ಲ ಮತ್ತು ಅದರ ಮೇಲೆ ಯಾವುದೇ ಆಯುಧ ಪ್ರಯೋಗಿಸಿರಲಿಲ್ಲ ಎಂದಿತು.

ಅಮೆರಿಕಾ ಸರ್ಕಾರದ (US Govt) ಸ್ಟೇಟ್ ಡಿಪಾರ್ಟ್‌ಮೆಂಟ್ ತಾನು ಈಗಾಗಲೇ ತನ್ನ ಅಸಮ್ಮತಿ ಸೂಚಿಸಲು ರಷ್ಯನ್ ರಾಯಭಾರಿಯನ್ನು (Russian Ambassador) ಸಂಪರ್ಕಿಸಿರುವುದಾಗಿ ತಿಳಿಸಿದೆ. ಬಳಿಕ ಶ್ವೇತಭವನದ ರಾಷ್ಟ್ರೀಯ ಸುರಕ್ಷತಾ ವಿಭಾಗದ ಪ್ರಮುಖ ವ್ಯಕ್ತಿಯಾಗಿರುವ ಜಾನ್ ಕಿರ್ಬಿ ಅವರು ಗೌರವಾನ್ವಿತ ರೀತಿಯಲ್ಲೇ ರಷ್ಯಾದ ಹೇಳಿಕೆಯನ್ನು ಅಮೆರಿಕಾ ತಿರಸ್ಕರಿಸುತ್ತದೆ ಎಂದಿದ್ದಾರೆ. ಕಿರ್ಬಿ ಅವರು ಅಮೆರಿಕಾದ ಮುಖ್ಯ ಉದ್ದೇಶವೆಂದರೆ, ಸಮುದ್ರದಲ್ಲಿ ಪತನವಾಗಿರುವ ಡ್ರೋನ್ ಅಸಮಂಜಸವಾದ, ಅಪಾಯಕಾರಿ ಕೈಗಳಿಗೆ ಸಿಗಬಾರದು ಎನ್ನುವುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಫ್ಯುಯಲ್ ಡಂಪ್ ಎಂದರೇನು? ರಷ್ಯಾ ಇಂಧನ ಬೀಳಿಸಿದ್ದರಿಂದ ಡ್ರೋನ್ ಪತನವಾಯಿತೆ?

ಫ್ಯುಯಲ್ ಡಂಪ್ (Fuel dump) ಎಂದರೆ, ವಿಮಾನ ಆಕಾಶದಲ್ಲಿ ಹಾರಾಡುತ್ತಿರುವ ಸಂದರ್ಭದಲ್ಲಿ ಇಂಧನವನ್ನು ಬಿಡುಗಡೆಗೊಳಿಸುವ ಪ್ರಕ್ರಿಯೆ. ಇದನ್ನು ಭೂಸ್ಪರ್ಶ ಮಾಡುವ ಮುನ್ನ ವಿಮಾನದ ತೂಕ ಕಡಿಮೆಗೊಳಿಸಲು, ಅಥವಾ ಏನಾದರೂ ತುರ್ತು ಪರಿಸ್ಥಿತಿಯ ಕಾರಣದಿಂದಲೋ ನಡೆಸಲಾಗುತ್ತದೆ. ಆದರೆ, ಈ ರೀತಿ ಇಂಧನ ಚೆಲ್ಲುವುದು ವಾತಾವರಣಕ್ಕೆ ಮತ್ತು ನೆಲದಲ್ಲಿರುವ ಮಾನವರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಇತ್ತೀಚೆಗೆ ರಷ್ಯಾ ಫ್ಯುಯಲ್ ಡಂಪ್ ಮಾಡಿದ ಪರಿಣಾಮವಾಗಿ ರಾಪ್ಟರ್ ಡ್ರೋನ್ ಪತನವಾಗಿರುವುದು ಫ್ಯುಯಲ್ ಡಂಪಿಂಗ್ ಪ್ರಕ್ರಿಯೆಯ ಸುರಕ್ಷತೆಯ ಕುರಿತು ಕಳವಳ ಹೆಚ್ಚುವಂತೆ ಮಾಡಿದೆ.

ವರ್ಷ ಪೂರೈಸಿದ ಹತ್ಯಾಕಾಂಡ: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಯುದ್ಧದ ಪರಿಣಾಮವೇನು?

ಫ್ಯುಯಲ್ ಡಂಪಿಂಗ್ ಪ್ರಕ್ರಿಯೆ

ಫ್ಯುಯಲ್ ಡಂಪ್ ಪ್ರಕ್ರಿಯೆಯನ್ನು ವಾಣಿಜ್ಯಿಕ ವಿಮಾನಗಳು ಮತ್ತು ಮಿಲಿಟರಿ ವಿಮಾನಗಳು ಕೈಗೊಳ್ಳುತ್ತವೆ. ಈ ಪ್ರಕ್ರಿಯೆಯಲ್ಲಿ ಆಕಾಶದಲ್ಲಿ ಹಾರಾಡುವ ಸಂದರ್ಭದಲ್ಲೇ ವಿಮಾನದ ಇಂಧನ ಟ್ಯಾಂಕ್‌ನಿಂದ ಇಂಧನವನ್ನು ಹೊರಹಾಕಲಾಗುತ್ತದೆ. ವಿಮಾನದ ರೆಕ್ಕೆಗಳು ಅಥವಾ ಫ್ಯುಯಲ್‌ಸೇಜ್‌ನಲ್ಲಿ ಅಳವಡಿಸಲಾದ ವಾಲ್ವ್‌ಗಳು ಮತ್ತು ಪೈಪ್‌ಗಳ ವ್ಯವಸ್ಥೆಯ ಮೂಲಕ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ವಿಮಾನದ ರೆಕ್ಕೆಯ ಅಂಚುಗಳಲ್ಲಿರುವ ಅಥವಾ ಫ್ಯುಯಲ್‌ಸೇಜ್ ಹಿಂಭಾಗದಲ್ಲಿ ಅಳವಡಿಸಲಾದ ನಳಿಕೆಗಳ ಮೂಲಕ ಇಂಧನವನ್ನು ಬಿಡುಗಡೆಗೊಳಿಸಲಾಗುತ್ತದೆ.

ಫ್ಯುಯಲ್ ಡಂಪಿಂಗ್ ಕೈಗೊಳ್ಳಲು ಕಾರಣಗಳು

ಫ್ಯುಯಲ್ ಡಂಪಿಂಗ್ ಪ್ರಕ್ರಿಯೆಯನ್ನು ಹಲವು ಕಾರಣಗಳಿಗಾಗಿ ನಡೆಸಲಾಗುತ್ತದೆ. ಅದರಲ್ಲಿನ ಒಂದು ಪ್ರಾಥಮಿಕ ಕಾರಣವೆಂದರೆ, ಭೂಸ್ಪರ್ಶ ನಡೆಸುವ‌ ಮುನ್ನ ವಿಮಾನದ ಭಾರವನ್ನು ಕಡಿಮೆಗೊಳಿಸುವುದು. ಈ ರೀತಿ ಮಾಡುವುದರಿಂದ, ವಿಮಾನ ತನ್ನ ಲ್ಯಾಂಡಿಂಗ್ ಗೇರ್ ಹಾಗೂ ಇತರ ಯಾವುದೇ ಉಪಕರಣಗಳಿಗೆ ಹಾನಿಯಾಗದಂತೆ ಭೂಸ್ಪರ್ಶ ನಡೆಸಲು ಸಾಧ್ಯವಾಗುತ್ತದೆ. ಇಂಜಿನ್ ವೈಫಲ್ಯ ಅಥವಾ ಯಾವುದೇ ತಾಂತ್ರಿಕ ತೊಂದರೆಯಂತಹ ತುರ್ತು ಪರಿಸ್ಥಿತಿ ಎದುರಾಗಿ, ವಿಮಾನವನ್ನು ತುರ್ತು ಭೂಸ್ಪರ್ಶ (Emrgency Landing) ನಡೆಸುವ ಪರಿಸ್ಥಿತಿ ಎದುರಾದಾಗಲೂ ಫ್ಯುಯಲ್ ಡಂಪಿಂಗ್ ನಡೆಸಲಾಗುತ್ತದೆ.

ಫ್ಯುಯಲ್ ಡಂಪಿಂಗ್ ಪ್ರಕ್ರಿಯೆಯ ಅಪಾಯಗಳು

ಫ್ಯುಯಲ್ ಡಂಪಿಂಗ್ ವಾತಾವರಣಕ್ಕೆ ಮತ್ತು ಭೂಮಿಯಲ್ಲಿರುವ ಮಾನವರಿಗೆ ಅಪಾರ ತೊಂದರೆ ಉಂಟುಮಾಡುವ ಸಾಧ್ಯತೆಗಳಿವೆ. ಈ ರೀತಿ ಬಿಡುಗಡೆಯಾದ ಇಂಧನ ನೀರಿನ ಮೂಲಗಳು, ಮಣ್ಣು, ಸಸ್ಯವರ್ಗಗಳನ್ನು ಮಲಿನಗೊಳಿಸಿ, ಆ ಮೂಲಕ ಪರಿಸರ ವ್ಯವಸ್ಥೆಯ ಮೇಲೆ ದೀರ್ಘಕಾಲದ ದುಷ್ಪರಿಣಾಮ ಉಂಟುಮಾಡಬಹುದು. ಈ ರೀತಿ ಬಿದ್ದ ಇಂಧನ ಅಗ್ನಿ ಆಕಸ್ಮಿಕಗಳಿಗೂ ಕಾರಣವಾಗಬಹುದು. ಅದರಲ್ಲೂ ಈ ಇಂಧನ ಏನಾದರೂ ಬೆಂಕಿಯ ಮೂಲಗಳ ಬಳಿ ಬಿದ್ದರೆ ಈ ಅಪಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಅದರೊಡನೆ, ಫ್ಯುಯಲ್ ಡಂಪಿಂಗ್ ನಡೆದ ಪ್ರದೇಶದ ಬಳಿ ವಾಸವಾಗಿರುವ ಜನರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳೂ ಕಾಣಿಸಿಕೊಳ್ಳಬಲ್ಲವು.

ಫ್ಯುಯಲ್ ಡಂಪಿಂಗ್‌ನ ಭವಿಷ್ಯ

ವಾಣಿಜ್ಯಿಕ ಮತ್ತು ಮಿಲಿಟರಿ ವಿಮಾನಗಳಿಗೆ (Army Flight) ಒಂದು ಅಗತ್ಯ ಪ್ರಕ್ರಿಯೆಯ ರೂಪದಲ್ಲಿ ಫ್ಯುಯಲ್ ಡಂಪಿಂಗ್ ಮುಂದುವರಿಯಲಿದೆ. ಆದರೆ ಫ್ಯುಯಲ್ ಡಂಪಿಂಗ್ ಪರಿಣಾಮವಾಗಿ ಪರಿಸರ ಮತ್ತು ನೆಲದ ಮೇಲಿರುವ ಜನರಿಗೆ ತೊಂದರೆಗಳಾಗದಂತೆ ನೋಡಿಕೊಳ್ಳಲು ಇನ್ನಷ್ಟು ಹೆಚ್ಚಿನ ಸುರಕ್ಷತಾ ಕ್ರಮಗಳು ಮತ್ತು ತಂತ್ರಜ್ಞಾನಗಳನ್ನು (Technology) ಅಳವಡಿಸಿಕೊಳ್ಳುವ ಅನಿವಾರ್ಯತೆ ಇದೆ. ಅದಕ್ಕಾಗಿ ಫ್ಯುಯಲ್ ಡಂಪಿಂಗ್ ಪ್ರಕ್ರಿಯೆಯನ್ನು ನಿಯಂತ್ರಿಸಲು ಮತ್ತು ಗಮನಿಸಲು ಉತ್ತಮ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಅದರೊಡನೆ, ವಿವಿಧ ಮಿಲಿಟರಿ ಪಡೆಗಳೊಡನೆ ಸಂವಹನ ಸ್ಥಾಪಿಸುವ ಅಗತ್ಯವೂ ಇದೆ.

ಅಂತಾರಾಷ್ಟ್ರೀಯ ಸಂಸ್ಥೆಗಳ ಪಾತ್ರ

ಇಂಟರ್‌ನ್ಯಾಷನಲ್ ಸಿವಿಲ್ ಏವಿಯೇಷನ್‌ ಆರ್ಗನೈಸೇಶನ್ (ICAO) ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಫ್ಯುಯಲ್ ಡಂಪಿಂಗ್ ಕಾರ್ಯಾಚರಣೆಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಐಸಿಎಒ ಈಗಾಗಲೇ ಫ್ಯುಯಲ್ ಡಂಪಿಂಗ್ ಕಾರ್ಯಾಚರಣೆಗಳಿಗೆ ಸೂಕ್ತ ಮಾನದಂಡಗಳು ಮತ್ತು ನಿಯಮಾವಳಿಗಳನ್ನು ರೂಪಿಸಿದ್ದು, ಜಗತ್ತಿನಾದ್ಯಂತ ಬಹುತೇಕ ರಾಷ್ಟ್ರಗಳು ಅವುಗಳನ್ನು ಅನುಸರಿಸುತ್ತಿವೆ. ಆದರೆ ಈ ನಿಯಮಗಳು ಮತ್ತು ಮಾನದಂಡಗಳನ್ನು ಪರಿಣಾಮಕಾರಿಯಾಗಿ ಅನುಸರಿಸುವಂತಾಗಲು ಅವುಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ.

click me!