ಇಸ್ರೇಲ್- ಹಮಾಸ್ ಸಂಘರ್ಷ ನಡೆಯುತ್ತಿರುವ ಜಾಗಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್- ಕನ್ನಡಪ್ರಭ ಪ್ರತಿನಿಧಿಯಾಗಿ ಅಜಿತ್ ಹನಮಕ್ಕನವರ್ ತೆರಳಿದ್ದಾರೆ. ಅಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರತ್ಯಕ್ಷ ವರದಿ ಮಾಡುತ್ತಿರುವ ಅವರು, ಇಸ್ರೇಲ್ ಸಮರ ಭೂಮಿಯಿಂದ ನೇರವಾಗಿ ವರದಿ ಮಾಡುತ್ತಿರುವ ದಕ್ಷಿಣ ಭಾರತದ ಏಕೈಕ ಪತ್ರಕರ್ತ.
- ಅಜಿತ್ ಹನಮಕ್ಕನವರ್
ಸಂಪಾದಕ, ಏಷ್ಯಾನೆಟ್ ಸುವರ್ಣನ್ಯೂಸ್
ಟೆಲ್ ಅವಿವ್: ನಾನು ಇಸ್ರೇಲ್‌ನಲ್ಲಿ ವಿಮಾನವಿಳಿದು ಹೊರಬಂದಾಗ ವಯಸ್ಸಾದ ಸಾಕಷ್ಟು ಮಂದಿ ತಮ್ಮ ಮಕ್ಕಳನ್ನು ಸ್ವಾಗತಿಸಲು ನಿಂತಿದ್ದರು. ಅರೆ! ರಣಭೀಕರ ಯುದ್ಧ ನಡೆಯುತ್ತಿರುವ ಈ ದೇಶಕ್ಕೆ ಅಂತಾರಾಷ್ಟ್ರೀಯ ವಿಮಾನದಲ್ಲಿ ಅವರ ಮಕ್ಕಳೇಕೆ ಬಂದಿಳಿಯುತ್ತಿದ್ದಾರೆ? ಅವರನ್ನು ಸ್ವಾಗತಿಸಲು ಹಿರಿಯರೇಕೆ ಬರುತ್ತಿದ್ದಾರೆ?
ಹಾಗೊಂದು ಪ್ರಶ್ನೆಗೆ ಉತ್ತರ ಕೆದಕಿದಾಗ ತಿಳಿದಿದ್ದೇನೆಂದರೆ, ವಿದೇಶಗಳಿಗೆ ಓದುವುದಕ್ಕೆ, ಪ್ರವಾಸಕ್ಕೆ ಅಥವಾ ಬೇರೆ ಬೇರೆ ಉದ್ದೇಶಗಳಿಗೆಂದು ಹೋದ ಇಸ್ರೇಲಿ ಯುವಕ-ಯುವತಿಯರು ಹಮಾಸ್ ವಿರುದ್ಧ ಹೋರಾಡುವುದಕ್ಕೆಂದೇ ಈಗ ಸ್ವದೇಶಕ್ಕೆ ಮರಳಿ ಬರುತ್ತಿದ್ದಾರೆ. ಅವರಲ್ಲಿ ರಣೋತ್ಸಾಹ ಎದ್ದು ಕಾಣಿಸುತ್ತಿದೆ.
ಹಮಾಸ್ ಉಗ್ರರಿಂದ ಜೀವ ಉಳಿಸಲು ಬಚ್ಚಿಕೊಂಡಿದ್ದ ತಾಯಿ ಮಗನ ರಕ್ಷಿಸಿದ ಇಸ್ರೇಲ್ ಸೇನೆ!
ಏಕೆಂದರೆ, ಹಮಾಸ್ ಉಗ್ರರ ದಾಳಿಯಿಂದ ಗಾಯಗೊಂಡಿರುವ ಇಡೀ ಇಸ್ರೇಲ್ ಆ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದೆ. ಸೈನಿಕರು ಮಾತ್ರವಲ್ಲ, ಈ ಯುದ್ಧದಲ್ಲಿ ಇಸ್ರೇಲಿನ ಪ್ರತಿಯೊಬ್ಬನೂ ಸ್ವತಃ ಯೋಧನಾಗಿ ಮುನ್ನುಗ್ಗಲು ಸಜ್ಜಾಗಿ ನಿಂತಿದ್ದಾನೆ.
ಇಸ್ರೇಲಿಗರ ಒಗ್ಗಟ್ಟೇ ಹಾಗಿದೆ. ಹಮಾಸ್ ಉಗ್ರರ ದಾಳಿಯಿಂದ ತಮ್ಮವರನ್ನು ಕಳೆದುಕೊಂಡಿರುವ ನೋವು ಅವರ ಮುಖದಲ್ಲಿ ಮಡುಗಟ್ಟಿದೆ. ದೇಶದ ಭದ್ರತೆಗೆ ಸದಾ ಸವಾಲಾಗಿ ಕಾಡುವ, ಈ ಬಾರಿ ಎಲ್ಲರ ಸಂಯಮ ಕೆಣಕುವಂತೆ ಅಮಾನವೀಯ ದಾಳಿ ನಡೆಸಿದ ಹಮಾಸ್ ಉಗ್ರರನ್ನು ನಿರ್ನಾಮ ಮಾಡಿಯೇ ತೀರುವುದಾಗಿ ಶಪಥ ಮಾಡಿರುವ ತಮ್ಮ ದೇಶದ ಸರ್ಕಾರಕ್ಕೆ ಎಲ್ಲಾ ಪ್ರಜೆಗಳೂ ಬೆಂಬಲವಾಗಿ ನಿಂತಿದ್ದಾರೆ. ಅವರಿಗೆಲ್ಲ ಮಿಲಿಟರಿ ತರಬೇತಿಯಾಗಿದೆ. ದೇಶಕ್ಕಾಗಿ ಹೋರಾಡಲು ಹೊರಟ ಮಕ್ಕಳ ಬೆನ್ನಿಗೆ ಹಿರಿಯರ ಆಶೀರ್ವಾದವಿದೆ.
ಸೈರನ್ ಶಬ್ದಕ್ಕೀಗ ಇವರು ಬೆಚ್ಚುವುದಿಲ್ಲ:
ನಾವು ಬೆಂಗಳೂರಿನಿಂದ ಅಬುಧಾಬಿಗೆ ಪ್ರಯಾಣಿಸಿ ಅಲ್ಲಿಂದ ಯುದ್ಧದಲ್ಲಿ ಮುಳುಗಿರುವ ಇಸ್ರೇಲ್ ರಾಜಧಾನಿ ಟೆಲ್ ಅವಿವ್‌ಗೆ ತಲುಪಿದೆವು. ಗಾಜಾಪಟ್ಟಿಯ ಗಡಿ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ಇದ್ದರೆ, ರಾಜಧಾನಿಯಲ್ಲಿ ಜನಜೀವನ ಸಾಮಾನ್ಯವಾಗಿತ್ತು. ಶನಿವಾರ ಟೆಲ್ ಅವಿವ್‌ನಲ್ಲಿ ಶಪಥ್ (ವಿಶ್ರಾಂತಿ ತೆಗೆದುಕೊಳ್ಳುವ ಧಾರ್ಮಿಕ ಪ್ರಕ್ರಿಯೆ) ಇದ್ದ ಕಾರಣ ಜನರ ಓಡಾಟ ಸಾಮಾನ್ಯವಾಗಿತ್ತು. ಸದಾ ಯುದ್ಧದ ಭೀತಿ ಆವರಿಸಿರುವ ಇಲ್ಲಿನ ಜನರಿಗೆ ಸೈರನ್ ಶಬ್ದ ಎಷ್ಟು ಸಾಮಾನ್ಯ ಎಂಬಂತಾಗಿದೆ ಎಂದರೆ, ಸೈರನ್ ಶಬ್ದ ಮೊಳಗಿದರೂ ಇಲ್ಲಿನ ಜನ ಹೆಚ್ಚು ಗಾಬರಿಯಾದಂತೆ ಕಾಣಲಿಲ್ಲ. ಹಮಾಸ್ ಉಗ್ರರು ಹಾರಿಸುವ ರಾಕೆಟ್‌ಗಳು ಅಷ್ಟೇನೂ ಬಲಶಾಲಿಯಲ್ಲದಿರುವುದು, ಅದರಿಂದ ಟೆಲ್ ಅವಿವ್‌ಗೆ ತೊಂದರೆಯಾಗದು ಎಂಬುದು ಇದಕ್ಕೆ ಕಾರಣವಿರಬಹುದು.
ಇಸ್ರೇಲ್ ಮೇಲೆ ದಾಳಿ ನಡೆಯುತ್ತದೆ ಎಂಬ ಸಮಯದಲ್ಲಿ ಎಲ್ಲೆಡೆ ಸೈರನ್ ಮೊಳಗಿಸಲಾಗುತ್ತದೆ. ಈ ವೇಳೆ ಇಲ್ಲಿನ ಜನ ಬಂಕರ್‌ಗಳಲ್ಲಿ ಅಡಗಿಕೊಂಡು ದಾಳಿಯಿಂದ ರಕ್ಷಿಸಿಕೊಳ್ಳುತ್ತಾರೆ. ನಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲೂ ಬಂಕರ್‌ಗಳಿವೆ. ಸೈರನ್ ಕೇಳಿದಾಗ ಅಲ್ಲಿ ರಕ್ಷಣೆ ಪಡೆದುಕೊಳ್ಳಬಹುದು ಎಂದು ನಮಗೆ ತಿಳಿಸಲಾಗಿತ್ತು. ಅದೇ ರೀತಿ ಶನಿವಾರ ರಾತ್ರಿ 9 ಗಂಟೆ 1 ನಿಮಿಷಕ್ಕೆ ಸೈರನ್ ಮೊಳಗಿತು. ಸೈರನ್ ಶಬ್ದ ಎಲ್ಲರಿಗೂ ಕೇಳುವಂತಹ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ನಾವು ಉಳಿದುಕೊಂಡಿದ್ದ ಹೊಟೆಲ್‌ನಲ್ಲಿನ ಎಲ್ಲಾ ಕೋಣೆಗಳಲ್ಲೂ ಸ್ಪೀಕರ್ ಅಳವಡಿಸಲಾಗಿದ್ದು, ಸೈರನ್ ಶಬ್ದ ಸ್ಪಷ್ಟವಾಗಿ ಕೇಳಿಸಿತು. ಕೆಲ ಕ್ಷಣಗಳ ಬಳಿಕ ಕ್ಷಿಪಣಿಯೊಂದು ಹಾರಿದ ದೃಶ್ಯ ಹೋಟೆಲ್‌ನ ಕಿಟಕಿಯಲ್ಲಿ ಕಾಣಿಸಿತು.
ಇಸ್ರೇಲಿನಲ್ಲಿ ಪ್ರತಿಯೊಬ್ಬರೂ ಯೋಧರು:
ಇಲ್ಲಿನ ಪ್ರತಿಯೊಬ್ಬರು ಸಹ ಸೈನಿಕರಂತೆಯೇ ಕಾಣುತ್ತಾರೆ. ಇಸ್ರೇಲ್‌ನ ಇತಿಹಾಸವನ್ನು ಕಥೆಗಳಲ್ಲಿ, ವೆಬ್‌ಸೀರೀಸ್‌ಗಳಲ್ಲಿ ನೋಡಿದ್ದ ನಮಗೆ ಆ ದೃಶ್ಯಗಳು ಇಲ್ಲಿ ಪ್ರತ್ಯಕ್ಷವಾಗಿ ಕಂಡವು. ಅಬುಧಾಬಿಯಿಂದ ಬರುವಾಗ ಒಂದಷ್ಟು ಇಸ್ರೇಲ್‌ನ ಯುವಕ-ಯುವತಿಯರು ವಿಮಾನದಲ್ಲಿ ಸಿಕ್ಕಿದ್ದರು. ಇವರು ವಿದ್ಯಾಭ್ಯಾಸ, ಕೆಲಸ, ಪ್ರವಾಸಕ್ಕಾಗಿ ವಿದೇಶಗಳಿಗೆ ಹೋದವರಾಗಿದ್ದರು. ದೇಶ ಯುದ್ಧದಲ್ಲಿ ತೊಡಗಿರುವ ಮಾಹಿತಿ ಸಿಕ್ಕ ಕೂಡಲೇ ಸೈನ್ಯಕ್ಕೆ ನೆರವಾಗಲು ದೇಶಕ್ಕೆ ಮರಳುತ್ತಿದ್ದರು. ಅಲ್ಲದೇ ವಿಮಾನ ನಿಲ್ದಾಣದಲ್ಲಿ ಹಿರಿಯರು ರಾಷ್ಟ್ರಧ್ವಜ ಹಿಡಿದು, ವಿದೇಶದಿಂದ ಸೈನ್ಯಕ್ಕೆ ಸೇರಲು ಬರುತ್ತಿರುವ ಮಕ್ಕಳಿಗಾಗಿ ಕಾಯುತ್ತಿರುವ ದೃಶ್ಯಗಳು ಕಾಣಿಸಿದವು.
ಹಮಾಸ್ ದಾಳಿ ನಡೆಸಿದ ಸ್ಥಳದ ಸಮೀಪ ನಾವು:
ಭಾನುವಾರ ನಾವು ಟೆಲ್ ಅವಿವ್‌ನಿಂದ 55 ಕಿ.ಮೀ. ಪ್ರಯಾಣ ಮಾಡಿ ಆಶ್ಕಲಿನ್ ಪಟ್ಟಣ ತಲುಪಿದೆವು. ಇಲ್ಲಿಂದ ಗಾಜಾಪಟ್ಟಿ ಗಡಿ ಸುಮಾರು 10ರಿಂದ 12 ಕಿ.ಮೀ. ದೂರವಿದೆ. ಹಮಾಸ್ ಉಗ್ರರು ಮೊದಲ ಬಾರಿ ದಾಳಿ ಮಾಡಿದ ಬೀರಿ ಪಟ್ಟಣ ಸುಮಾರು 8ರಿಂದ 10 ಕಿ.ಮೀ. ದೂರದಲ್ಲಿದೆ. ಇಸ್ರೇಲಿಗರು ಮೈ ಮರೆತ ಕಾರಣ ಹಮಾಸ್ ಉಗ್ರರು ಈ ಪಟ್ಟಣದೊಳಗೆ ನುಗ್ಗಿ ಮಾರಣಹೋಮ ನಡೆಸಿದ್ದರು. ನಾವು ಕಾರಿನಲ್ಲಿ ಹೋಗುತ್ತಿದ್ದಾಗ ಕ್ಷಿಪಣಿಯ ಶಬ್ದವೊಂದು ಕೇಳಿಸಿತು. ಕಾರು ನಿಲ್ಲಿಸಿದ ಕ್ಷಣವೇ ಮತ್ತೊಂದು ಕ್ಷಿಪಣಿ ಆಗಸದಲ್ಲಿ ಸ್ಫೋಟಗೊಂಡ ದೃಶ್ಯ ಕಾಣಿಸಿತು. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕ ವಾಹನಗಳು, ಟ್ಯಾಂಕರ್‌ಗಳು ಓಡಾಡುತ್ತಿದ್ದು, ಭಾರಿ ಭದ್ರತೆ ಒದಗಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲ್ ಯೋಧರನ್ನು ಇಲ್ಲಿ ಜಮಾವಣೆ ಮಾಡಲಾಗಿದೆ. ಹಮಾಸ್ ಉಗ್ರರು ನಡೆಸಿದ ಮಾರಣಹೋಮಕ್ಕೆ ಸೇಡು ತೀರಿಸಿಕೊಳ್ಳಲು ಇಸ್ರೇಲ್ ಕಾಯುತ್ತಿದೆ.
ಇಸ್ರೇಲ್ ಯುದ್ಧಭೂಮಿಯಿಂದ ವರದಿಗಾರಿಕೆ ನಡುವೆ ತೂರಿ ಬಂತು ಹಮಾಸ್ ಉಗ್ರರ ರಾಕೆಟ್!
ಬದುಕಲು ಕಷ್ಟವಿರುವ ಪ್ರದೇಶದಲ್ಲಿ ದೇಶವನ್ನು ಕಟ್ಟಿಕೊಂಡು ಮುನ್ನಡೆಸುತ್ತಿರುವ ಇಸ್ರೇಲಿಗರ ಶ್ರಮ ಮೆಚ್ಚುವಂತಹದ್ದು. ‘ಮರುಭೂಮಿಯಲ್ಲೂ ಸುಂದರ ದೇಶವನ್ನು ನಾವು ಕಟ್ಟಿಕೊಂಡಿದ್ದೇವೆ. ಇಲ್ಲೂ ನಮ್ಮನ್ನು ಬದುಕಲು ಬಿಡುತ್ತಿಲ್ಲ’ ಎಂಬ ಅಳಲು ಇಲ್ಲಿನವರದ್ದಾದರೆ, ‘ಇದು ನಮ್ಮ ದೇಶವಾಗಿತ್ತು. ಇಸ್ರೇಲಿನವರು ಬಂದು ಆಕ್ರಮಿಸಿಕೊಂಡಿದ್ದಾರೆ’ ಎಂಬುದು ಪ್ಯಾಲೆಸ್ತೀನಿಯನ್ನರ ಹಾಗೂ ಗಾಜಾಪಟ್ಟಿಯಲ್ಲಿರುವವರ ಅಳಲು.
ಆದರೆ ಇದು 2 ದೇಶಗಳ ನಡುವೆ ನಡೆಯುತ್ತಿರುವ ಯುದ್ಧವಲ್ಲ. ಏಕೆಂದರೆ ಗಾಜಾ ಭಾಗದಲ್ಲಿ ಭಯೋತ್ಪಾದಕರಿದ್ದಾರೆ. ಅವರ ಬಳಿ ಶಸ್ತ್ರಾಸ್ತ್ರವಿದೆ. ಅವರು ಇಸ್ರೇಲ್ ಮೇಲೆ ಭಯೋತ್ಪಾದಕ ದಾಳಿ ನಡೆಸಿ ಮಾರಣಹೋಮ ನಡೆಸಿದ್ದಾರೆ. ಹೀಗಾಗಿ, ತಮ್ಮವರನ್ನು ಕಳೆದುಕೊಂಡ ಇಸ್ರೇಲಿಗರು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ.