
ದುಬೈ/ ಟೆಹ್ರಾನ್: 16 ದಿನ ಪೂರೈಸಿರುವ ಮಧ್ಯಪ್ರಾಚ್ಯ ಯುದ್ಧ ಸೋಮವಾರ ಕೂಡಾ ತೀವ್ರ ಸ್ವರೂಪದಲ್ಲೇ ಮುಂದುವರೆದಿದ್ದು, ಉಭಯ ಬಣಗಳು ಪರಸ್ಪರರ ಮೇಲೆ ಭೀಕರ ಕ್ಷಿಪಣಿ, ಬಾಂಬ್ ದಾಳಿ ಮುಂದುವರೆಸಿವೆ.
ವಿಶ್ವದ ಅತ್ಯಂತ ಸಂಚಾರ ದಟ್ಟಣೆಯ ವಿಮಾನ ನಿಲ್ದಾಣ ಎಂಬ ಹಿರಿಮೆ ಹೊಂದಿರುವ ದುಬೈ ವಿಮಾನ ನಿಲ್ದಾಣದ ಮೇಲೆ ಸೋಮವಾರ ಇರಾನ್ ಡ್ರೋನ್ ದಾಳಿ ನಡೆಸಿದೆ. ಈ ವೇಳೆ ಸಮೀಪದ ಇಂಧನ ಟ್ಯಾಂಕ್‌ಗೆ ಬೆಂಕಿ ಬಿದ್ದ ಪರಿಣಾಮ ಭಾರೀ ಬೆಂಕಿ ಹೊತ್ತಿಕೊಂಡಿದ್ದು, ಹಲವು ಗಂಟೆಗಳ ಕಾಲ ವಿಮಾನ ಸಂಚಾರ ಪೂರ್ಣ ಸ್ಥಗಿತಗೊಂಡಿತ್ತು. ಹೀಗಾಗಿ ಸಾವಿರಾರು ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇದು ಏರ್ಪೋರ್ಟ್ ಮೇಲೆ ನಡೆದ 3ನೇ ದಾಳಿ.
ಅಡ್ಡಿ: ಅರ್ಮೇನಿಯಾದಿಂದ ದುಬೈಗೆ ಆಗಮಿಸಿದ್ದ 80 ವಿದ್ಯಾರ್ಥಿಗಳಿದ್ದ ವಿಮಾನವು ಸೋಮವಾರ ರಾತ್ರಿ ನವದೆಹಲಿಗೆ ಆಗಮಿಸಬೇಕಿತ್ತು. ಆದರೆ, ಇದೀಗ ಅವರು ದುಬೈನಲ್ಲೇ ಸಿಕ್ಕಿಹಾಕಿಕೊಂಡಿದ್ದಾರೆ.
ಯುಎಇನ ಫುಜೈರಾಹ್ ಬಂದರು ಮತ್ತು ಫುಜೈರಾಹ್ ಕೈಗಾರಿಕಾ ವಲಯದ ಮೇಲೂ ಇರಾನ್ ದಾಳಿ ನಡೆಸಿದ್ದು, ಈ ಪ್ರದೇಶದಲ್ಲಿ ಭಾರೀ ಹೊಗೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಫುಜೈರಾಹ್ ಬಂದರಿನಲ್ಲಿ ಹಡಗುಗಳಿಗೆ ಕಚ್ಚಾತೈಲ ತುಂಬುವ ಕೆಲಸ ಸ್ಥಗಿತಗೊಳಿಸಲಾಗಿದೆ. ಈ ನಡುವೆ ಸೌದಿ ಅರೇಬಿಯಾ ಇರಾನ್‌ನ ಕಡೆಯಿಂದ ಹಾರಿಬಂದ 60ಕ್ಕೂ ಹೆಚ್ಚು ಡ್ರೋನ್‌ಗಳನ್ನು ಸೋಮವಾರ ಹೊಡೆದುರುಳಿಸಿದ್ದಾಗಿ ಸೌದಿ ಅರೇಬಿಯಾ ಹೇಳಿದೆ.
ಕೆಂಪು ಸಮುದ್ರದಲ್ಲಿ ಬೀಡುಬಿಟ್ಟಿರುವ ಅಮೆರಿಕದ ಅತಿದೊಡ್ಡ ಯುದ್ಧನೌಕೆಗಳಲ್ಲಿ ಒಂದಾದ ಯುಎಸ್ ಗೆರಾಲ್ಡ್ ಫೋರ್ಡ್ ಮತ್ತು ಇತರೆ ಅಮೆರಿಕದ ಯಾವುದೇ ಯುದ್ಧನೌಕೆಗಳಿಗೆ ಸರಕು ಅಥವಾ ಇತರೆ ಯಾವುದೇ ರೀತಿಯಲ್ಲಿ ನೆರವು ನೀಡುತ್ತಿರುವ ಮೂಲಸೌಕರ್ಯ ಗುರಿಯಾಗಿಸಿ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದೆ.
ಜಂಟಿ ದಾಳಿ:
ಇತ್ತೀಚೆಗೆ ಬಲಿಯಾದ ಇರಾನ್ ಸರ್ವೋಚ್ಚ ಧಾರ್ಮಿಕ ನಾಯಕ ಅಯತೊಲ್ಲ ಖಮೇನಿಗೆ ಸೇರಿದ ವಿಮಾನವನ್ನು ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಧ್ವಂಸಗೊಳಿಸಿದ್ದಾಗಿ ಇಸ್ರೇಲ್ ಹೇಳಿದೆ. ಮತ್ತೊಂದೆಡೆ ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಇರಾನ್‌ನ ಚಬಹಾರ್ ಮುಕ್ತ ವ್ಯಾಪಾರ ವಲಯದಲ್ಲಿನ ಸೇನಾ ನೆಲೆಗಳ ಮೇಲೆ ಅಮೆರಿಕದ ಯುದ್ಧ ವಿಮಾನಗಳು ದಾಳಿ ನಡೆಸಿವೆ. ದಾಳಿ ಬಳಿಕ ಸ್ಥಳದಲ್ಲಿ ಭಾರೀ ಸದ್ದು ಕೇಳಿಬಂದಿದ್ದು, ಎಲ್ಲೆಡೆ ಹೊಗೆ ಆವರಿಸಿದೆ.
ಇದೇ ವೇಳೆ ವೇಳೆ ಅಮೆರಿಕ- ಇಸ್ರೇಲ್ ಪಡೆಗಳು ಟೆಹ್ರಾನ್‌ನ ಶಹೀದ್ ಖಮೇನಿ ಬಾಲಕರ ಶಾಲೆ ಮೇಲೆ ದಾಳಿ ನಡೆಸಿವೆ ಎಂದು ಇರಾನ್ ಆರೋಪಿಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಕೆಲ ದಿನಗಳ ಹಿಂದೆ ಇದೇ ರೀತಿ ನಡೆದ ದಾಳಿಯಲ್ಲಿ 200ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ