
ಇಸ್ರೇಲ್ ಜೊತೆ ಸೇರಿ ಮತ್ತೆ ಇರಾನ್ ಮೇಲೆ ಮುಗಿಬಿದ್ದ ಅಮೆರಿಕಾ ಈಗ ಇರಾನ್ ಹಿಡಿತದಲ್ಲಿರುವ ಹರ್ಮುಜ್ ಜಲಸಂಧಿಯನ್ನು ತೆರೆಯುವುದಕ್ಕೆ ನ್ಯಾಟೋ ರಾಷ್ಟ್ರಗಳು ಹಾಗೂ ಚೀನಾ ಸಹಾಯ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇರಾನ್ ಪರಿಣಾಮಕಾರಿಯಾಗಿ ಮುಚ್ಚಿದ ಕಚ್ಚಾ ತೈಲದ ಪ್ರಮುಖ ಮಾರ್ಗವಾದ ಹರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಸಹಾಯ ಮಾಡುವಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯಾಟೋ ದೇಶಗಳು ಹಾಗೂ ಚೀನಾವನ್ನು ಒತ್ತಾಯಿಸಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಅಮೆರಿಕ ಇಸ್ರೇಲಿ ಯುದ್ಧಕ್ಕೆ ಪ್ರತೀಕಾರವಾಗಿ ಇರಾನ್ ಈ ಹರ್ಮುಜ್ ಜಲಮಾರ್ಗವನ್ನು ಮುಚ್ಚಿದ ನಂತರ ಜಾಗತಿಕ ತೈಲ ಬೆಲೆಗಳು 40 ರಿಂದ 50 ಪ್ರತಿಶತದಷ್ಟು ಏರಿಕೆಯಾಗಿವೆ. ಇತ್ತ ಈ ಯುದ್ಧವೂ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಈ ಸಮಯದಲ್ಲಿ ಕಚ್ಚಾ ತೈಲದ ಬೆಲೆಗಳು ಬ್ಯಾರೆಲ್‌ಗೆ 100 ಅಮೆರಿಕನ್ ಡಾಲರರ್ ಆಸುಪಾಸಿನಲ್ಲಿದೆ.
ಇದನ್ನೂ ಓದಿ: ಎಲ್ಲರನ್ನೂ ಕ್ಷಮಿಸಿಬಿಡು ಇದು ಹೊರಡುವ ಸಮಯ: ಭಾರವಾದ ಹೃದಯದಿಂದ ಹರೀಶ್ ರಾಣಾ ಕಳಿಸಿಕೊಟ್ಟ ಕುಟುಂಬ
ಮತ್ತೊಂದೆಡೆ ಇಸ್ರೇಲ್ ಇರಾನ್‌ನಲ್ಲಿ ತಾನು ದಾಳಿ ನಡೆಸಲು ನಿರ್ಧರಿಸಿರುವ ಸಾವಿರಾರು ಗುರಿಗಳಿವೆ ಎಂದಿದೆ. ಇತ್ತ ಅಮೆರಿಕ ಇರಾನ್ ಜೊತೆ ಮಾತುಕತೆ ನಡೆಸಲು ಮುಂದಾಗಿದೆ ಆದರೆ ಯುದ್ಧವನ್ನು ಕೊನೆಗೊಳಿಸಲು ಟೆಹ್ರಾನ್ ಒಪ್ಪಂದಕ್ಕೆ ಸಿದ್ಧವಾಗಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ನ ವಿದೇಶಾಂಗ ಸಚಿವರು ಈ ಹಿಂದೆಯೇ ಅಮೆರಿಕಾ ಜೊತೆ ಯಾವುದೇ ಮಾತುಕತೆಗಳನ್ನು ನಡೆಸುವುದಕ್ಕೆ ನಿರಾಕರಿಸಿದ್ದಾರೆ.
ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧ ಎಫೆಕ್ಟ್: ಕಣ್ ಮುಚ್ಚಿ ತೆರೆಯೋಷ್ಟರಲ್ಲಿ ಕಣ್ ಮುಂದೆ ಇದ್ದ ಗ್ಯಾಸ್ ಸಿಲಿಂಡರ್ ನಾಪತ್ತೆ
ಅಮೆರಿಕ ಅಧ್ಯಕ್ಷರು ಕಳೆದ ವಾರಾಂತ್ಯದಲ್ಲಿ ಚೀನಾ, ಫ್ರಾನ್ಸ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಬ್ರಿಟನ್ ಸೇರಿದಂತೆ ಹರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಿಸುವ ದೇಶಗಳಿಗೆ ತಮ್ಮ ತೈಲ ಹಡಗುಗಳಿಗೆ ಬೆಂಗಾವಲು ಹಡಗುಗಳನ್ನು ಕಳುಹಿಸುವಂತೆ ಕರೆ ನೀಡಿದ್ದರು. ಈ ಹರ್ಮುಜ್ ಜಲಸಂಧಿಯ ಫಲಾನುಭವಿಗಳು ಅಲ್ಲಿ ಯಾವುದೇ ಕೆಟ್ಟ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸಹಾಯ ಮಾಡುವುದು ಸೂಕ್ತ ಎಂದು ಟ್ರಂಪ್ ಭಾನುವಾರ ಫೈನಾನ್ಷಿಯಲ್ ಟೈಮ್ಸ್‌ಗೆ ತಿಳಿಸಿದ್ದರು. ಅಮೆರಿಕ ಸಂಯುಕ್ತ ಸಂಸ್ಥಾನಕ್ಕಿಂತ ಹೆಚ್ಚು, ಯುರೋಪ್ ಮತ್ತು ಚೀನಾಗಳು ತೈಲ ಆಮದಿಗಾಗಿ ಗಲ್ಫ್ ರಾಷ್ಟ್ರಗಳನ್ನು ಹೆಚ್ಚು ಅವಲಂಬಿಸಿವೆ.
ಸದಾ ಬೇರೆ ಬೇರೆ ದೇಶಗಳಿಗೆ ಬ್ಲಾಕ್‌ಮೇಲ್ ಮಾಡುತ್ತಲೇ ಬಂದಿರುವ ಟ್ರಂಪ್ ಈ ಬಾರಿ ಚೀನಾಗೆ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಚೀನಾವೂ ಹರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಸಹಾಯ ಮಾಡದಿದ್ದರೆ, ಈ ತಿಂಗಳ ಕೊನೆಯಲ್ಲಿ ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಯೋಜಿತ ಶೃಂಗಸಭೆಯನ್ನು ವಿಳಂಬಗೊಳಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದರು. ತನ್ನ ವಿನಂತಿಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅಥವಾ ನಕರಾತ್ಮಕವಾಗಿ ಸ್ಪಂದಿಸುವುದರಿಂದ ನ್ಯಾಟೋದ ಭವಿಷ್ಯಕ್ಕೆ ತುಂಬಾ ಕೆಟ್ಟದಾಗಲಿದೆ ಎಂದು ಅವರು ಹೇಳಿದ್ದಾರೆ. ಆದರೆ ಆಸ್ಟ್ರೇಲಿಯಾವಾಗಲಿ ಜಪಾನ್ ಆಗಲಿ ಟ್ರಂಪ್ ಬೆದರಿಕೆಗೆ ತಲೆಕೆಡಿಸಿಕೊಂಡಿಲ್ಲ.
ಈ ಯುದ್ಧದಲ್ಲಿ ತಲೆ ಹಾಕದಂತೆ ಬೇರೆ ದೇಶಗಳಿಗೆ ಇರಾನ್ ಎಚ್ಚರಿಕೆ:
ಮಧ್ಯಪ್ರಾಚ್ಯದಾದ್ಯಂತ ಹರಡಿರುವ ಈ ಯುದ್ಧದಲ್ಲಿ ಭಾಗಿಯಾಗದಂತೆ ಇರಾನ್ ಇತರ ದೇಶಗಳಿಗೆ ಎಚ್ಚರಿಕೆ ನೀಡಿದ ನಂತರ ಟ್ರಂಪ್ ಅವರ ಈ ಹೇಳಿಕೆಗಳು ಬಂದಿವೆ. ಫ್ರೆಂಚ್ ರಾಜತಾಂತ್ರಿಕ ಜೀನ್-ನೋಯೆಲ್ ಬ್ಯಾರಟ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಮಾತನಾಡಿದ ಇರಾನ್ ಉನ್ನತ ರಾಜತಾಂತ್ರಿಕ ಅಧಿಕಾರಿ ಅಬ್ಬಾಸ್ ಅರಘ್ಚಿ ಇತರ ದೇಶಗಳಿಗೆ ಈ ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯಪ್ರಾಚ್ಯದ ಸಂಘರ್ಷದ ಉಲ್ಬಣ ಮತ್ತು ವಿಸ್ತರಣೆಗೆ ಕಾರಣವಾಗುವ ಯಾವುದೇ ಕ್ರಮದಿಂದ ದೂರವಿರಿ ಎಂದು ಅವರು ಕರೆ ನೀಡಿದ್ದಾರೆ.
ಅಮೆರಿಕದ ಭದ್ರತಾ ಛತ್ರಿ ತೊಂದರೆ ತಡೆಯುವ ಬದಲು ಆಹ್ವಾನಿಸುತ್ತಿದೆ:
ಈ ಪ್ರದೇಶದಲ್ಲಿ ಅಮೆರಿಕದ ಭದ್ರತಾ ಛತ್ರಿ ತೊಂದರೆಯನ್ನು ತಡೆಯುವ ಬದಲು ಆಹ್ವಾನಿಸುತ್ತಿದೆ ಎಂದು ವಾದಿಸಿದ ಅರಘ್ಚಿ ಇಂತಹ ವಿದೇಶಿಆಕ್ರಮಣಕಾರರನ್ನು ಹೊರಹಾಕುವಂತೆ ಒತ್ತಾಯಿಸಿದ್ದಾರೆ. ಇರಾನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪಡೆಗಳಿಗೆ ಆತಿಥ್ಯ ವಹಿಸಿರುವ ಯುಎಇಯ ಹಲವು ದೇಶಗಳ ಮೇಲೆ ದಾಳಿ ಮಾಡಿದ್ದು, ಅಲ್ಲಿನ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಕುವೈತ್‌ನ ಅಲಿ ಅಲ್ ಸಲೇಂ ವಾಯುನೆಲೆಯ ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿಯು ಇಟಲಿಗೆ ಸೇರಿದ ಮಾನವರಹಿತ ವಿಮಾನವನ್ನು ನಾಶಪಡಿಸಿದೆ ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಇಟಲಿಯ ಸೇನೆಯು ಹೇಳಿದೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ಇಲ್ಲಿಯವರೆಗೆ ಅಮೆರಿಕ ಮತ್ತು ಇಸ್ರೇಲಿ ಗುರಿಗಳ ಮೇಲೆ ಸುಮಾರು 700 ಕ್ಷಿಪಣಿಗಳು ಮತ್ತು 3,600 ಡ್ರೋನ್‌ಗಳನ್ನು ಹಾರಿಸಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ