
ಟೆಹ್ರಾನ್: ಇರಾನ್ ಹಾಗೂ ಇಸ್ರೇಲ್ ನಡುವೆ ಯುದ್ಧ ತೀವ್ರಗೊಂಡ ಹಿನ್ನೆಲೆಯಲ್ಲಿ ಅಲ್ಲಿರುವ ಸುಮಾರು 10 ಸಾವಿರ ಭಾರತೀಯರು ಅತಂತ್ರರಾಗಿದ್ದಾರೆ. ಹೀಗಾಗಿ ಅವರನ್ನು ತೆರವುಗೊಳಿಸುವ ಇಂಗಿತವನ್ನು ಭಾರತ ಸರ್ಕಾರ ವ್ಯಕ್ತಪಡಿಸಿದೆ. ಇದಕ್ಕೆ ಇರಾನ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ತನ್ನ ಗಡಿಯನ್ನು ತೆರೆದು ಭಾರತೀಯರನ್ನು ಕಳಿಸಿಕೊಡಲಾಗುವುದು ಎಂದಿದೆ.
ಇದರ ಮೊದಲ ಭಾಗವಾಗಿ ಇರಾನ್ ರಾಜಧಾನಿ ಟೆಹ್ರಾನ್‌ನಿಂದ 140 ಕಿ.ಮೀ. ದೂರದಲ್ಲಿರುವ ಸುರಕ್ಷಿತ ಸ್ಥಳವೊಂದಕ್ಕೆ 1500 ವಿದ್ಯಾರ್ಥಿಗಳನ್ನು ಕಳಿಸಿಕೊಡಲಾಗಿದೆ. ಅಲ್ಲಿಂದ ಅಜರ್‌ಬೈಜಾನ್, ಅಫ್ಘಾನಿಸ್ತಾನ ಅಥವಾ ತುರ್ಕಮೇನಿಸ್ತಾನದ ಗಡಿಗಳ ಮೂಲಕ ಅವರನ್ನು ಭಾರತಕ್ಕೆ ಕರೆತರಲಾಗುತ್ತದೆ.
‘ಇರಾನ್ ನಗರಗಳಲ್ಲಿ ಸಿಲುಕಿರುವ ಭಾರತೀಯ ನೌಕರರು ಹಾಗೂ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕಿದೆ’ ಎಂದು ಭಾರತ ಸರ್ಕಾರ ಕೋರಿಕೆ ಸಲ್ಲಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇರಾನ್, ‘ಯುದ್ಧದ ಕಾರಣ ವಿಮಾನ ಸಂಚಾರ ಬಂದ್ ಆಗಿದೆ. ಹೀಗಾಗಿ ನಿಮ್ಮವರನ್ನು ಸ್ಥಳಾಂತರಿಸಲು ದೇಶದ ಎಲ್ಲ ಭೂಗಡಿಗಳು ಮುಕ್ತವಾಗಿವೆ’ ಎಂದು ಉತ್ತರಿಸಿದೆ.
ಅಲ್ಲದೆ, ಗಡಿ ದಾಟುವ ಜನರ ಹೆಸರು, ಪಾಸ್‌ಪೋರ್ಟ್ ಸಂಖ್ಯೆಗಳು ಮತ್ತು ಇತರ ಅಗತ್ಯ ವಿವರಗಳನ್ನು ತನ್ನ ಸಾಮಾನ್ಯ ಶಿಷ್ಟಾಚಾರ ಇಲಾಖೆಗೆ ನೀಡುವಂತೆ ಭಾರತಕ್ಕೆ ಇರಾನ್ ಸೂಚಿಸಿದೆ.
ಇರಾನ್‌ನಲ್ಲಿ ಸುಮಾರು 10 ಸಾವಿರ ಭಾರತೀಯರು ಇದ್ದು, ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ. ಜಮ್ಮು-ಕಾಶ್ಮೀರದ ವಿದ್ಯಾರ್ಥಿಗಳ ಸಂಖ್ಯೆಯೇ 1500 ಇದೆ. ಇವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕು ಎಂಬುದು ಕುಟುಂಬಸ್ಥರ ಆಗ್ರಹ.
ಇರಾನ್‌ನಲ್ಲಿ ಸಿಲುಕಿದ್ದಾರೆಗೌರಿಬಿದನೂರಿನ 7 ಜನ
ರಕ್ಷಣೆಗಾಗಿ ಪ್ರಧಾನಿ ಮೋದಿ, ಸಿಎಂ ಗೆ ಮೊರೆ
ಚಿಕ್ಕಬಳ್ಳಾಪುರ: ಯುದ್ಧಪೀಡಿತ ಇರಾನ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ 7 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಕೂಡಲೇ ರಕ್ಷಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಮದ ಏಳೂ ಮಂದಿ ವಿದ್ಯಾಭ್ಯಾಸಕ್ಕಾಗಿ ಇರಾನ್‌ಗೆ ತೆರಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ