ಸೈಪ್ರಸ್‌ ಭೇಟಿಯಿಂದ ಟರ್ಕಿಗೆ ಸಂದೇಶ - ಇದು ಯುದ್ಧದ ಯುಗವಲ್ಲ : ಮೋದಿ

Published : Jun 17, 2025, 05:36 AM IST
Modi in cyprus

ಸಾರಾಂಶ

ಜಗತ್ತು ಹಲವು ಸಂಘರ್ಷಗಳು ಮತ್ತು ಉದ್ವಿಗ್ನತೆಗಳಿಗೆ ಸಾಕ್ಷಿಯಾಗಿರುವ ಹೊತ್ತಿನಲ್ಲಿ, ಇದು ಯುದ್ಧದ ಯುಗವಲ್ಲ ಎಂಬ ಭಾರತದ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೈಪ್ರಸ್‌ನಲ್ಲಿ ಪುನರುಚ್ಚರಿಸಿದ್ದಾರೆ.

ನಿಕೋಸಿಯಾ : ಜಗತ್ತು ಹಲವು ಸಂಘರ್ಷಗಳು ಮತ್ತು ಉದ್ವಿಗ್ನತೆಗಳಿಗೆ ಸಾಕ್ಷಿಯಾಗಿರುವ ಹೊತ್ತಿನಲ್ಲಿ, ಇದು ಯುದ್ಧದ ಯುಗವಲ್ಲ ಎಂಬ ಭಾರತದ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೈಪ್ರಸ್‌ನಲ್ಲಿ ಪುನರುಚ್ಚರಿಸಿದ್ದಾರೆ.

ಸೈಪ್ರಸ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಅಲ್ಲಿನ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ‘ಪಶ್ಚಿಮ ಏಷ್ಯಾ ಮತ್ತು ಯುರೋಪಿನಲ್ಲಿ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ನಾವಿಬ್ಬರೂ (ಮೋದಿ ಮತ್ತು ನಿಕೋಸ್) ಕಳವಳ ವ್ಯಕ್ತಪಡಿಸಿದ್ದೇವೆ. ಸಂಘರ್ಷದ ನಕಾರಾತ್ಮಕ ಪರಿಣಾಮ ಕೇವಲ ಆ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಯುದ್ಧದ ಯುಗವಲ್ಲ ಎಂಬುದು ನಮ್ಮಿಬ್ಬರ ಅಭಿಪ್ರಾಯ. ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಮತ್ತು ಪುನಃ ಸ್ಥಿರತೆಯನ್ನು ಸ್ಥಾಪಿಸುವಂತೆ ಮಾನವೀಯತೆಗೆ ಕರೆ ನೀಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಅಂತೆಯೇ, ತಮ್ಮ ಈ ಭೇಟಿಯು, ಭಾರತ-ಸೈಪ್ರಸ್‌ ಸಂಬಂಧದಲ್ಲಿ ಹೊಸ ಅಧ್ಯಾಯ ಬರೆಯಲು ಸುವರ್ಣಾವಕಾಶ ಎಂದರು. ಸೈಪ್ರಸ್‌ ಬಳಿಕ ಪ್ರಧಾನಿ ಮೋದಿ ಕೆನಡಾಗೆ ಭೇಟಿ ನೀಡಿ, ಜಿ7 ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಮೋದಿಗೆ ಸೈಪ್ರಸ್‌ನ ಅತ್ಯುಚ್ಚ ಗೌರವ ಪ್ರದಾನ

ನಿಕೋಸಿಯಾ : ಸೈಪ್ರಸ್‌ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರವು ದೇಶದ ಅತ್ಯುನ್ನತ ಗೌರವವಾದ ‘ಗ್ರಾಂಡ್‌ ಕ್ರಾಸ್‌ ಆಫ್‌ ಆರ್ಡರ್‌ ಆಫ್‌ ಮಕಾರಿಯೋಸ್ III ಆಫ್‌ ಸೈಪ್ರಸ್‌’ ನೀಡಿ ಸೋಮವಾರ ಸನ್ಮಾನಿಸಿದೆ. ಇದು, ಮೋದಿಗೆ ವಿದೇಶಗಳಲ್ಲಿ ದೊರೆತ 23ನೇ ಅತ್ಯುಚ್ಚ ಗೌರವವಾಗಿದೆ.

ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಗೌರವ ಸ್ವೀಕರಿಸಿ ಮಾತನಾಡಿದ ಮೋದಿ, ‘ಈ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ವಿನಮ್ರನಾಗಿದ್ದೇನೆ. ಇದನ್ನು ನಾನು ಉಭಯ ದೇಶಗಳ ನಡುವಿನ ನಂಬಿಕಸ್ಥ ಸ್ನೇಹಕ್ಕೆ ಸಮರ್ಪಿಸುತ್ತೇನೆ. ಮುಂಬರುವ ಸಮಯದಲ್ಲಿ ನಮ್ಮ ಸಂಬಂಧಗಳು ಇನ್ನೂ ಎತ್ತರಕ್ಕೇರುತ್ತದೆ ಎಂಬ ನಂಬಿಕೆಯಿದೆ. ನಾವು ಒಟ್ಟಾಗಿ ಎರಡೂ ರಾಷ್ಟ್ರಗಳ ಪ್ರಗತಿಯನ್ನು ಬಲಪಡಿಸುವುದಷ್ಟೇ ಅಲ್ಲದೆ, ಶಾಂತಿಯುತ ಮತ್ತು ಸುರಕ್ಷಿತ ಜಗತ್ತನ್ನು ನಿರ್ಮಿಸುವತ್ತ ಕೊಡುಗೆ ನೀಡುತ್ತೇವೆ’ ಎಂದರು.

ಆರ್ಡರ್‌ ಆಫ್‌ ಮಕಾರಿಯೋಸ್ III ಆಫ್‌ ಸೈಪ್ರಸ್‌ ಗೌರವವು ಸೈಪ್ರಸ್‌ನ ಮೊದಲ ಅಧ್ಯಕ್ಷ ಆರ್ಚ್‌ಬಿಷಪ್ ಮಕರಿಯೋಸ್ III ಅವರ ಹೆಸರಿನಲ್ಲಿ ನೀಡಲಾಗುವ ದೇಶದ ಅತ್ಯುನ್ನತ ಗೌರವವಾಗಿದೆ.

ಮೋದಿ ಸೈಪ್ರಸ್‌ ಭೇಟಿಯಿಂದ ಟರ್ಕಿಗೆ ಸಂದೇಶ

ನವದೆಹಲಿ: 23 ವರ್ಷಗಳಲ್ಲಿ ಮೊದಲ ಬಾರಿ ಭಾರತೀಯ ಪ್ರಧಾನಿಯೊಬ್ಬರು ಸೈಪ್ರಸ್‌ಗೆ ಭೇಟಿ ನೀಡುವ ಮೂಲಕ ವಿಸ್ತರಣಾವಾದಿ ಟರ್ಕಿ ದೇಶಕ್ಕೆ ರಾಜತಾಂತ್ರಿಕ ಸಂದೇಶವೊಂದನ್ನು ನೀಡಿದ್ದಾರೆ. ಎಂದೇ ಹೇಳಲಾಗುತ್ತಿದೆ.

ಟರ್ಕಿಯು ಸೈಪ್ರಸ್‌ನ ಮೂರನೇ ಒಂದು ಭಾಗವನ್ನು 1974ರಲ್ಲಿ ವಶಕ್ಕೆ ಪಡೆದಿದ್ದಲ್ಲದೆ, ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ ಬೆಂಬಲವನ್ನೂ ನೀಡಿತ್ತು. ಇದೀಗ ಪಾಕಿಸ್ತಾನದ ಜತೆಗಿನ ಸಂಘರ್ಷದ ಬಳಿಕ ಮೋದಿ ತಾವು ಕೈಗೊಂಡ ಮೊದಲ ವಿದೇಶಿ ಪ್ರವಾಸದಲ್ಲಿ ಸೈಪ್ರಸ್‌ಗೆ ಭೇಟಿ ನೀಡಿದ್ದಾರೆ. ಈ ಮೂಲಕ ಸೈಪ್ರಸ್‌ ನೆಲವನ್ನು ಆಕ್ರಮಿಸಿಕೊಂಡಿರುವ ಹಾಗೂ ಪಾಕ್‌ಗೆ ಬೆಂಬಲ ನೀಡಿದ್ದ ಟರ್ಕಿಗೆ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ.++++

ಪಾಕಿಸ್ತಾನ ಮತ್ತು ಟರ್ಕಿ ನಡುವೆ ಗಟ್ಟಿಗೊಳ್ಳುತ್ತಿರುವ ಮೈತ್ರಿಗೆ ತಿರುಗೇಟು ನೀಡುವ ಸಲುವಾಗಿಯೇ ಲೆಕ್ಕಾಚಾರ ಹಾಕಿ ಈ ಭೇಟಿ ನೀಡಲಾಗಿದೆ. ಟರ್ಕಿ ಮತ್ತು ಸೈಪ್ರಸ್‌ ನಡುವೆ ಹಿಂದಿನಿಂದಲೂ ಹಾವು-ಮುಂಗುಸಿ ಸಂಬಂಧವಿದೆ. 1974ರಲ್ಲಿ ಟರ್ಕಿಯು ಸೈಪ್ರಸ್‌ ಮೇಲೆ ಆಕ್ರಮಣ ನಡೆಸಿ ದ್ವೀಪರಾಷ್ಟ್ರವನ್ನು ಎರಡು ಭಾಗಗಳಾಗಿ ವಿಭಜನೆ ಮಾಡಿತ್ತು. ಆ ಬಳಿಕ ಟರ್ಕಿ ವಿರುದ್ಧ ಹಗೆ ಸಾಧಿಸುತ್ತಲೇ ಬಂದಿದೆ. ಇದೀಗ ಮೋದಿ ಅವರು ಸೈಪ್ರಸ್‌ಗೆ ಭೇಟಿ ನೀಡುವ ಮೂಲಕ ಮತ್ತು ವಿಶ್ವಸಂಸ್ಥೆ ಸ್ಥಾಪಿಸಿದ ಬಫರ್‌ ಝೋನ್‌ನಲ್ಲಿ ಓಡಾಡುವ ಮೂಲಕ ಪ್ರಧಾನಿ ಮೋದಿ ಅವರು ಟರ್ಕಿಯ ವಿಸ್ತರಣಾವಾದಕ್ಕೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆಂದೇ ವಿಶ್ಲೇಷಿಸಲಾಗುತ್ತದೆ.

* ಸೈಪ್ರಸ್‌ ಸಂಸದೆಯಿಂದ ಮೋದಿ ಪಾದಸ್ಪರ್ಶ!

ನಿಕೋಸಿಯಾ: ಸೈಪ್ರಸ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶೇಷವಾಗಿ ಸ್ವಾಗತಿಸಲಾಗಿದೆ. ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರೊಂದಿಗೆ ಆಗಮಿಸಿದ ಮೋದಿ ಅವರನ್ನು ಸಂಸದರೊಬ್ಬರು, ಭಾರತೀಯ ಶೈಲಿಯಲ್ಲಿ ಪಾದ ಸ್ಪರ್ಶಿಸಿ ಬರಮಾಡಿಕೊಂಡರು.ಮೋದಿ ಬರುತ್ತಿದ್ದಾಗ ಸಂಸದೆ ಮೈಕೆಲಾ ಕೈಥ್ರಿಯೋಟಿ ಮ್ಲಾಪಾ ಅವರು ಕೈಕುಲುಕಿ, ಬಳಿಕ ಬಗ್ಗಿ ಅವರ ಕಾಲನ್ನು ಮುಟ್ಟಿ ನಮಸ್ಕರಿಸಿದರು. ಅದಕ್ಕೆ ಪ್ರತಿಯಾಗಿ ಮೋದಿ ಕೂಡ ನಗುಮೊಗದೊಂದಿಗೆ ಅವರ ತಲೆ ನೇವರಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!