ರಷ್ಯಾ ನಾಯಕ ಮಾತುಕತೆಗಳ ಬಗ್ಗೆ ಗಂಭೀರತೆಯನ್ನು ತೋರಿಸಿದರೆ ಮತ್ತು ಉಕ್ರೇನ್ ಹಾಗೂ ಅಮೆರಿಕ ಮಿತ್ರರಾಷ್ಟ್ರಗಳೊಂದಿಗೆ ಸಮಾಲೋಚಿಸಿದ ನಂತರವೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ - ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆಗೆ ಮುಕ್ತರಾಗಿದ್ದಾರೆ ಎಂದು ಜಾನ್ ಕಿರ್ಬಿ ಪುನರುಚ್ಚರಿಸಿದ್ದಾರೆ.
ಮಾಸ್ಕೋ: ಹೆಚ್ಚು ಕಮ್ಮಿ ಒಂದು ವರ್ಷದಿಂದ ನಡೆಯುತ್ತಿರುವ ಉಕ್ರೇನ್-ರಷ್ಯಾ ಯುದ್ಧವನ್ನು (Ukraine - Russia War) ಕೊನೆಗೊಳಿಸುವ ಬಗ್ಗೆ ಇದೇ ಮೊದಲ ಬಾರಿ ರಷ್ಯಾ ಅಧ್ಯಕ್ಷ (Russia President) ವ್ಲಾಡಿಮಿರ್ ಪುಟಿನ್ (Vladimir Putin) ಮಾತನಾಡಿದ್ದಾರೆ. ‘ನಮ್ಮ ಗುರಿ ಈ ಯುದ್ಧವನ್ನು ಮುಗಿಸುವುದು. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ಎಷ್ಟು ಬೇಗ ಯುದ್ಧ (War) ಮುಗಿಯುತ್ತದೆಯೋ ಅಷ್ಟು ಒಳ್ಳೆಯದು’ ಎಂದು ಪುಟಿನ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಪುಟಿನ್, ‘ಎಲ್ಲಾ ಬಿಕ್ಕಟ್ಟುಗಳೂ ಒಂದಲ್ಲಾ ಒಂದು ರೀತಿಯಲ್ಲಿ ಅಂತ್ಯಗೊಳ್ಳುತ್ತವೆ. ಕೆಲವು ಬಿಕ್ಕಟ್ಟುಗಳು ಮಾತುಕತೆ ಮೂಲಕ ಬಗೆಹರಿಯುತ್ತವೆ. ನಮ್ಮ ಶತ್ರುಗಳು (ಉಕ್ರೇನ್) (Ukraine) ಇದನ್ನು ಬೇಗ ಅರ್ಥಮಾಡಿಕೊಂಡರೆ ಒಳ್ಳೆಯದು’ ಎಂದು ಹೇಳಿದರು.
ಇದು ಪುಟಿನ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ (Volodymyr Zelenskyy) ಅವರನ್ನು ಮಾತುಕತೆಗೆ ಆಹ್ವಾನಿಸುತ್ತಿರುವುದರ ಸುಳಿವು ಎಂದು ವ್ಯಾಖ್ಯಾನಿಸಲಾಗಿದೆ. ಆದರೆ, ಪುಟಿನ್ ಅಧಿಕಾರದಲ್ಲಿ ಇರುವವರೆಗೂ ರಷ್ಯಾ ಜೊತೆ ಮಾತುಕತೆ ನಡೆಸುವುದಿಲ್ಲ ಎಂದು ವೊಲೊಡಿಮಿರ್ ಜೆಲೆನ್‌ಸ್ಕಿ ಈಗಾಗಲೇ ಸ್ಪಷ್ಟಪಡಿಸಿದ್ದು, ಯುದ್ಧ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನು ಓದಿ: ಜಾಗತಿಕ ದುರಂತವನ್ನು ಮೋದಿ ತಪ್ಪಿಸಿದರು: ಅಮೆರಿಕ ಪ್ರಶಂಸೆ
ಇತ್ತೀಚೆಗಷ್ಟೇ ವೊಲೊಡಿಮಿರ್ ಜೆಲೆನ್‌ಸ್ಕಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರಿಗೆ ಭವ್ಯ ಸ್ವಾಗತ ದೊರೆತಿತ್ತು. ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಉಕ್ರೇನ್‌ಗೆ ಸುಮಾರು 15,000 ಕೋಟಿ ರು. ಮೌಲ್ಯದ ಯುದ್ಧ ಸಾಮಗ್ರಿ ಪೂರೈಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೆರಿಕದ ಬಗ್ಗೆಯೂ ಕಿಡಿಕಾರಿದ ಪುಟಿನ್, ‘ನಮ್ಮ ವಿರುದ್ಧ ಸಂಚು ರೂಪಿಸುತ್ತಿರುವವರು ವ್ಯರ್ಥವಾಗಿ ಅದನ್ನು ಮಾಡುತ್ತಿದ್ದಾರೆ. ಅದು ಬಿಕ್ಕಟ್ಟನ್ನು ಇನ್ನಷ್ಟು ದೀರ್ಘವಾಗಿಸಲಿದೆ’ ಎಂದು ಹೇಳಿದರು.
ಇದೇ ವೇಳೆ ರಷ್ಯಾದ ಉನ್ನತ ಅಧಿಕಾರಿಗಳು, ‘ಉಕ್ರೇನ್ ಮತ್ತು ಅಮೆರಿಕ ದೇಶಗಳು ನಮ್ಮ ಕಳಕಳಿಯನ್ನು ಕೇಳಿಸಿಕೊಳ್ಳುತ್ತಿಲ್ಲ. ರಷ್ಯಾವನ್ನು ದುರ್ಬಲಗೊಳಿಸಲು ಉಕ್ರೇನನ್ನು ಅಮೆರಿಕ ಯುದ್ಧಭೂಮಿಯಾಗಿ ಬಳಸಿಕೊಳ್ಳುತ್ತಿದೆ’ ಎಂದು ಹೇಳಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ನಂತರ ಈವರೆಗೆ ಉಕ್ರೇನ್‌ನ 1 ಲಕ್ಷ ಹಾಗೂ ರಷ್ಯಾದ 1 ಲಕ್ಷ ಸೈನಿಕರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ. 40 ಸಾವಿರ ನಾಗರಿಕರು ಬಲಿಯಾಗಿದ್ದಾರೆ ಎಂದು ಅಮೆರಿಕ ಹೇಳಿದೆ.
ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ!
ಆದರೆ, ಪುಟಿನ್ ಹೇಳಿಕೆ ಬಗ್ಗೆ ಕಿಡಿ ಕಾರಿದ ಶ್ವೇತಭವನದ ವಕ್ತಾರ ಜಾನ್ ಕಿರ್ಬಿ, ಫೆಬ್ರವರಿ 24 ರಂದು ಉಕ್ರೇನ್‌ಗೆ ಪಡೆಗಳನ್ನು ಕಳುಹಿಸಿದಾಗ ಪ್ರಾರಂಭವಾದ ಯುದ್ಧದ ಅಂತ್ಯಕ್ಕೆ ವ್ಲಾಡಿಮಿರ್ ಪುಟಿನ್ ಅವರು "ಸಂಧಾನಕ್ಕೆ ಸಿದ್ಧರಿದ್ದಾರೆ ಎಂಬ ಸಂಪೂರ್ಣ ಶೂನ್ಯ ಸೂಚನೆಯನ್ನು ತೋರಿಸಿದ್ದಾರೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಾಗೂ, "ಇದಕ್ಕೆ ವಿರುದ್ಧವಾಗಿ ಅವರು (ಪುಟಿನ್) ನೆಲದ ಮೇಲೆ ಮತ್ತು ಗಾಳಿಯಲ್ಲಿ ಮಾಡುತ್ತಿರುವ ಎಲ್ಲವೂ ಉಕ್ರೇನ್ ಜನರ ಮೇಲೆ ಹಿಂಸಾಚಾರವನ್ನು ಮುಂದುವರಿಸಲು ಬಯಸುವ ವ್ಯಕ್ತಿಯನ್ನು ಸೂಚಿಸುತ್ತದೆ" ಮತ್ತು "ಯುದ್ಧವನ್ನು ಉಲ್ಬಣಗೊಳಿಸುವುದು" ಎಂದು ಸುದ್ದಿಗಾರರಿಗೆ ಅಮೆರಿಕದ ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.
ಹಾಗೂ, ರಷ್ಯಾದ ನಾಯಕ ಮಾತುಕತೆಗಳ ಬಗ್ಗೆ ಗಂಭೀರತೆಯನ್ನು ತೋರಿಸಿದರೆ ಮತ್ತು ಉಕ್ರೇನ್ ಹಾಗೂ ಅಮೆರಿಕ ಮಿತ್ರರಾಷ್ಟ್ರಗಳೊಂದಿಗೆ ಸಮಾಲೋಚಿಸಿದ ನಂತರವೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ - ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆಗೆ ಮುಕ್ತರಾಗಿದ್ದಾರೆ ಎಂದು ಜಾನ್ ಕಿರ್ಬಿ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ಮನುಷ್ಯರನ್ನೇ ಕರಗಿಸುವ 'ಪೂರ್ ಮ್ಯಾನ್ ನ್ಯೂಕ್' ಬಾಂಬ್ ಅನ್ನು ಉಕ್ರೇನ್‌ನತ್ತ ಉಡಾಯಿಸಿದ ರಷ್ಯಾ?