ISIS Chief Killed by US: ಐಸಿಸ್‌ ಬಾಸ್ ಖುರೇಶಿ ಕೊಲ್ಲಲು 2 ತಿಂಗಳಿಂದ ಅಮೆರಿಕ ಪ್ಲ್ಯಾನ್‌!

By Kannadaprabha NewsFirst Published Feb 5, 2022, 10:08 AM IST
Highlights

*ಸಿರಿಯಾದಲ್ಲಿ ಖುರೇಶಿ ಅಡಗಿದ್ದಾನೆ ಎಂದು ಡಿಸೆಂಬರ್‌ನಲ್ಲೇ ಗೊತ್ತಾಗಿತ್ತು
*ಅಮಾಯಕರ ಸಾವು ಸಂಭವಿಸದಂತೆ ಖುರೇಶಿ ಮಾತ್ರ ಕೊಲ್ಲಲು ಅಮೆರಿಕ ಯೋಜನೆ
*ಮನೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ ಖುರೇಶಿ: ಇದರಿಂದ ಕಾರ್ಯಾಚರಣೆಗೆ ಅಡ್ಡಿ
 

ವಾಷಿಂಗ್ಟನ್‌ (ಫೆ. 05): ಜಗತ್ತಿನ ಕುಖ್ಯಾತ ಉಗ್ರಗಾಮಿ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುವ ಐಸಿಸ್‌ ಮುಖ್ಯಸ್ಥ  (ISIS Cheif) ಅಬು ಇಹ್ರಾಹಿಂ ಅಲ್‌ ಹಶೇಮಿ ಅಲ್‌- ಖುರೇಶಿ (Abu Ibrahim al Qurashi )  ಹತ್ಯೆಗೆ ಬರೋಬ್ಬರಿ 2 ತಿಂಗಳಿನಿಂದ ಅಮೆರಿಕ ಪ್ಲ್ಯಾನ್‌ ಮಾಡಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ. ಶರಣಾಗುವ ಬದಲು ಆತ್ಮಾಹುತಿ ಸ್ಫೋಟ ಮಾಡಿಕೊಂಡ ಖುರೇಶಿ ಕೊಲ್ಲಲು ಅಮೆರಿಕ ನಡೆಸಿದ ಕಾರ್ಯಾಚರಣೆಯ ಕುತೂಹಲಕಾರಿ ಮಾಹಿತಿಗಳು ಈಗ ಬಯಲಾಗಿವೆ.

ಟರ್ಕಿ ಗಡಿಯಲ್ಲಿರುವ ಸಿರಿಯಾದ ಅಟ್ಮೆ ಪಟ್ಟಣದ ಕಟ್ಟಡವೊಂದರಲ್ಲಿ ಕುಟುಂಬ ಸಮೇತ ಖುರೇಶಿ ಅಡಗಿದ್ದಾನೆ ಎಂಬ ಮಾಹಿತಿ ಅಮೆರಿಕಕ್ಕೆ ಡಿಸೆಂಬರ್‌ ಮೊದಲ ವಾರ ಗೊತ್ತಾಗಿತ್ತು. ಹೀಗಾಗಿ ಆತನನ್ನು ಕೊಲ್ಲಲು ಆಗಿನಿಂದಲೇ ಅಮೆರಿಕ ಯೋಜನೆ ರೂಪಿಸಲು ಆರಂಭಿಸಿತು. ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಖುರೇಶಿ ಅದರಿಂದ ಹೊರಗೆ ಬರುತ್ತಿರಲಿಲ್ಲ. 

ತನ್ನ ಬಂಟರ ಮೂಲಕ ಹೊರಗಿನ ಪ್ರಪಂಚದ ಜತೆ ಸಂಪರ್ಕ ಸಾಧಿಸುತ್ತಿದ್ದ. ದೂರದಿಂದಲೇ ಕ್ಷಿಪಣಿ ಉಡಾಯಿಸಿ ಖುರೇಶಿ ಹತ್ಯೆ ಮಾಡುವ ಆಯ್ಕೆ ಅಮೆರಿಕಕ್ಕೆ ಇತ್ತು. ಆದರೆ ಆ ಕಟ್ಟಡದ ಮೊದಲ ಮಹಡಿಯಲ್ಲಿ ಹಲವಾರು ಮಕ್ಕಳು ಹಾಗೂ ಕುಟುಂಬಗಳು ವಾಸಿಸುತ್ತಿದ್ದವು. ನಾಗರಿಕರಿಗೆ ಹಾನಿಯಾಗದಂತೆ ಕಾರ್ಯಾಚರಣೆ ನಡೆಸುವ ಸವಾಲು ಅಮೆರಿಕಕ್ಕೆ ಎದುರಾಯಿತು.

ಇದನ್ನೂ ಓದಿ: ಲಾಡೆನ್‌ ಹತ್ಯೆ ರೀತಿ ಕಾರ್ಯಾಚರಣೆ: ISIS ಬಾಸ್‌ ಆತ್ಮಾಹುತಿ

ಹೀಗೆ ನಡೆಯಿತು ಕಾರ್ಯಾಚರಣೆ: ಹೆಲಿಕಾಪ್ಟರ್‌ ಮೂಲಕ ಕಾರ್ಯಾಚರಣೆಗೆ ನಿರ್ಧರಿಸಲಾಯಿತು. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಮಂಗಳವಾರ ಅನುಮತಿ ನೀಡಿದರು. ಬಳಿಕ ಕಾರ್ಯಾಚರಣೆ ಆರಂಭವಾಯಿತು. ಕಟ್ಟಡದ ಎರಡನೇ ಮಹಡಿಗೆ ಯೋಧರು ಪ್ರವೇಶಿಸಿದಾಗ ಖುರೇಶಿ ಪತ್ನಿ ಹಾಗೂ ಆತನ ಬಂಟರು ಅಮೆರಿಕ ಯೋಧರ ಮೇಲೆ ಗುಂಡು ಹಾರಿಸಿದರು.

 ಈ ಸಂದರ್ಭದಲ್ಲಿ ಒಂದು ಮಗು ಸಾವಿಗೀಡಾಯಿತು. ಮೂವರು ಮಕ್ಕಳು ಹಾಗೂ ಒಂದು ಹಸುಳೆಯನ್ನು ರಕ್ಷಿಸಲಾಯಿತು. ಈ ವೇಳೆಗೆ ತನಗೆ ಶರಣಾಗದೆ ಬೇರೆ ದಾರಿ ಇಲ್ಲ ಎಂದು ಗ್ರಹಿಸಿದ ಖುರೇಶಿ ಆತ್ಮಾಹುತಿ ಬಾಂಬ್‌ ಸ್ಫೋಟ ಮಾಡಿಕೊಂಡ. ಇದರ ತೀವ್ರತೆಗೆ ಮೂರನೇ ಮಹಡಿಯಲ್ಲಿದ್ದವರೆಲ್ಲಾ ಸಾವಿಗೀಡಾದರು. ಖುರೇಶಿ ಸೇರಿದಂತೆ ಹಲವರ ದೇಹ ಚೂರುಚೂರಾಗಿ ರಸ್ತೆಗೆ ಸಿಡಿಯಿತು. ಸೊಂಟಕ್ಕೆ ಕಟ್ಟಿಕೊಂಡು ಸ್ಫೋಟಿಸುವ ಬಾಂಬ್‌ಗಿಂತ ಖುರೇಶಿ ಸ್ಫೋಟಿಸಿದ ಬಾಂಬ್‌ ತೀವ್ರತೆ ಹೆಚ್ಚಿತ್ತು ಎಂದು ಕಾರ್ಯಾಚರಣೆಯ ಮೇಲುಸ್ತುವಾರಿ ಹೊತ್ತಿದ್ದ ಮರೀನ್‌ ಜನರಲ್‌ ಫ್ರಾಂಕ್‌ ಮೆಕಿಂಜಿ ತಿಳಿಸಿದ್ದಾರೆ.

ಇದನ್ನೂ ಓದಿ: NIA Raid Mangaluru: ಐಸಿಸ್ ನಂಟು? ಮಾಜಿ ಶಾಸಕ ಇದಿನಬ್ಬ ಪುತ್ರನ ಸೊಸೆ ಬಂಧನ

ಕಾರ್ಯಾಚರಣೆಯ ಕ್ಷಣಕ್ಷಣದ ಮಾಹಿತಿಯನ್ನು ಜೋ ಬೈಡೆನ್‌, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರಿಗೆ ಮೆಕಿಂಜಿ ತಲುಪಿಸುತ್ತಿದ್ದರು. ಕಾರ್ಯಾಚರಣೆಗೆ ಭಾಗಿಯಾಗಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಅದನ್ನು ಅಲ್ಲೇ ಬಿಟ್ಟು ಬರುವ ಬದಲು ಯೋಧರು ಅದನ್ನು ನಾಶಗೊಳಿಸಿದರು ಎಂದು ಪೆಂಟಗನ್‌ ತಿಳಿಸಿದೆ.

*ಸಿರಿಯಾದಲ್ಲಿ ಖುರೇಶಿ ಅಡಗಿದ್ದಾನೆ ಎಂದು ಡಿಸೆಂಬರ್‌ನಲ್ಲೇ ಗೊತ್ತಾಗಿತ್ತು

*ಅಮಾಯಕರ ಸಾವು ಸಂಭವಿಸದಂತೆ ಖುರೇಶಿ ಮಾತ್ರ ಕೊಲ್ಲಲು ಅಮೆರಿಕ ಯೋಜನೆ

*ಮನೆಯಿಂದ ಹೊರಗೆ ಬರುತ್ತಲೇ ಇರಲಿಲ್ಲ ಖುರೇಶಿ: ಇದರಿಂದ ಕಾರ್ಯಾಚರಣೆಗೆ ಅಡ್ಡಿ

*ಅಮೆರಿಕ ಯೋಧರು ಲಗ್ಗೆ ಇಟ್ಟಾಗ ಗುಂಡು ಹಾರಿಸಿದ ಪತ್ನಿ: ಸ್ಫೋಟಿಸಿಕೊಂಡ ಇಬ್ರಾಹಿಂ

*ಸ್ಫೋಟದ ತೀವ್ರತೆಗೆ ರಸ್ತೆಗೆ ಬಿದ್ದವು ಐಸಿಸ್‌ ಮುಖ್ಯಸ್ಥ ಇಬ್ರಾಹಿಂ ಖುರೇಶಿ ದೇಹ ಚೂರು

*ಕಾರ್ಯಾಚರಣೆ ವೇಳೆ ಕೆಟ್ಟು ನಿಂತ ಹೆಲಿಕಾಪ್ಟರ್‌ ಅನ್ನು ನಾಶಗೊಳಿಸಿದ ಯೋಧರು

click me!