ಕಾಬೂಲ್‌ನಲ್ಲೀಗ ವಿಮಾನಗಳದ್ದೇ ಭಾರೀ ಸದ್ದು: ತೆರವು ಕಾರ್ಯಾಚರಣೆಗೆ ಹೈಸ್ಪೀಡ್‌!

By Suvarna NewsFirst Published Aug 28, 2021, 3:43 PM IST
Highlights

* ಉಗ್ರರ ದಾಳಿ ಕಾರಣ ನಿಂತಿದ್ದ ತೆರ​ವಿಗೆ ಮರು​ಚಾ​ಲ​ನೆ

* ತೆರವು ಕಾರ್ಯಾಚರಣೆಗೆ ಹೈಸ್ಪೀಡ್‌

* ಕಾಬೂಲ್‌ನಲ್ಲೀಗ ವಿಮಾನಗಳದ್ದೇ ಭಾರೀ ಸದ್ದು

* ದೇಶ ತೊರೆಯಲು ಕೇವಲ 4 ದಿನ ಮಾತ್ರ ಬಾಕಿ

ಕಾಬೂಲ್‌(ಆ.28): ಗುರುವಾರದ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಗಿತಗೊಂಡಿದ್ದ ನಾಗರಿಕರ ತೆರವು ಕಾರ್ಯಾಚರಣೆ ಶುಕ್ರವಾರ ಮತ್ತಷ್ಟುವೇಗದಿಂದ ಪುನಾರಂಭಗೊಂಡಿದೆ. ದೇಶ ತೊರೆಯಲು ತಾಲಿಬಾನ್‌ ನೀಡಿರುವ ಆ.31ರ ಗಡುವು ಸಮೀಪಿಸಲು ಕೇವಲ 4 ದಿನ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಅಮೆರಿಕ ಸೇರಿದಂತೆ ಹಲವು ದೇಶಗಳು ಸಾಕಷ್ಟುಸಂಖ್ಯೆಯಲ್ಲಿ ವಿಮಾನಗಳ ಹಾರಾಟ ನಡೆಸುವ ಮೂಲಕ ಎಲ್ಲಾ ಅರ್ಹರ ತೆರವಿಗೆ ಹರಸಾಹಸ ನಡೆಸುತ್ತಿವೆ.

ಇದುವರೆಗೆ ಕಾಬೂಲ್‌ ನಿಲ್ದಾಣದಿಂದ ವಿವಿಧ ದೇಶಗಳಿಗೆ ಸೇರಿದ 1 ಲಕ್ಷಕ್ಕೂ ಹೆಚ್ಚು ನಾಗರಿಕರು ಮತ್ತು ಯೋಧರನ್ನು ತೆರವುಗೊಳಿಸಲಾಗಿದೆ. ಆದರೆ ಕಳೆದ 2 ದಶಕಗಳ ಅವಧಿಯಲ್ಲಿ ತಮಗೆ ನಾನಾ ರೀತಿಯಲ್ಲಿ ನೆರವು ನೀಡಿದ ಆಫ್ಘನ್‌ ಪ್ರಜೆಗಳನ್ನು ತೆರುವ ಮಾಡುವ ಭರವಸೆಯನ್ನು ಅಮೆರಿಕ ಸೇರಿ ಹಲವು ದೇಶಗಳು ನೀಡಿವೆ. ಹೀಗಾಗಿ ಅವರ ತೆರವಿಗೆ ಕಡೆಯ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮುಂದಿನ 4 ದಿನಗಳಲ್ಲಿ ಕನಿಷ್ಠ 4000 ಆಫ್ಘನ್‌ ಪ್ರಜೆಗಳನ್ನು ಅಮೆರಿಕ ತೆರವು ಮಾಡಲಿದ್ದು, ಕಡೆಯದಾಗಿ ತನ್ನ 5000 ಯೋಧರನ್ನು ತೆರವುಗೊಳಿಸುವ ಮೂಲಕ ತಾನು ನಡೆಸಿದ ಸುದೀರ್ಘ ಅವಧಿಯ (21 ವರ್ಷ) ಯುದ್ಧಕ್ಕೆ ತೆರೆ ಎಳೆಯುವ ಯತ್ನ ಮಾಡಲಿದೆ.

ಬ್ರಿಟನ್‌ ಶುಕ್ರವಾರ ತನ್ನ ತೆರವು ಕಾರ್ಯಾಚರಣೆ ಸ್ಥಗಿತ ಮಾಡುವುದಾಗಿ ಘೋಷಿಸಿದೆ. ಇನ್ನು ಫ್ರಾನ್ಸ್‌, ಬೆಲ್ಜಿಯಂ ಸೇರಿದಂತೆ ನ್ಯಾಟೋ ಪಡೆಗಳ ಭಾಗವಾಗಿದ್ದ ಬಹುತೇಕ ದೇಶಗಳು ತಮ್ಮ ತೆರವು ಕಾರ್ಯಾಚರಣೆ ಪೂರ್ಣಗೊಳಿಸಿರುವ ಕಾರಣ, ದೇಶ ತೊರೆಯಲು ವಿಮಾನ ನಿಲ್ದಾಣ ಒಳಗೆ ಮತ್ತು ಹೊರಗೆ ಕಾಯುತ್ತಿರುವ ಅಂದಾಜು ಲಕ್ಷ ಜನರು ಆ.31ರ ಬಳಿಕ ತಾಲಿಬಾನಿಗಳ ಅವಕೃಪೆಗೆ ಒಳಗಾಗಿ ಪ್ರಾಣಭೀತಿ ಎದುರಿಸುವ ಅನಿವಾರ್ಯ ಸ್ಥಿತಿ ತಲುಪುವುದು ಖಚಿತವಾಗಿದೆ.

click me!