* 170 ಮಂದಿಯ ಬಲಿ ಪಡೆದಿದ್ದ ಉಗ್ರರ ಮೇಲೆ ಸೇಡು ತೀರಿಸಿದ ಅಮೆರಿಕ
* ಸ್ಫೋಟ ನಡೆದ 36 ಗಂಟೆಯಲ್ಲೇ ಪ್ರತೀಕಾರ
* ಐಸಿಸ್ ಕೆ ಮೇಲೆ ಏರ್‌ಸ್ಟ್ರೈಕ್
ಕಾಬೂಲ್(ಆ.28): ಕಾಬೂಲ್ ವಿಮಾನ ನಿಲ್ದಾಣ ಬಳಿ ನಡೆದ ಬಾಂಬ್ ದಾಳಿಯಲ್ಲಿ ತನ್ನ 13 ಸೈನಿಕರನ್ನು ಕಳೆದುಕೊಂಡಿದ್ದ ಅಮೆರಿಕ, ಇದರ ಪ್ರತೀಕಾರವಾಗಿ ಸ್ಪೋಟ ನಡೆದ 36 ಗಂಟೆಗಳಲ್ಲಿ ಅಫ್ಘಾನಿಸ್ತಾನದ ನಂಗಾಹರ್ ಪ್ರಾಂತ್ಯದ ಮೇಲೆ ಏರ್ ಸ್ಟ್ರೈಕ್ ನಡೆಸಿದೆ. ಇನ್ನು 170 ಮಂದಿಯನ್ನು ಸ್ಫೋಟ ನಡೆಸಿ ಬಲಿ ಪಡೆದಿದ್ದ ಐಸಿಸ್ ಖೊರಾಸಾನ್ (ಐಸಿಸ್-ಕೆ) ಉಗ್ರರ ವಿರುದ್ಧ ಗುಡುಗಿದ್ದ ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ‘ನಿಮ್ಮನ್ನು ಬೇಟೆಯಾಡಿ, ಬೆಲೆ ತೆರುವಂತೆ ಮಾಡದೇ ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದರೆಂಬುವುದು ಉಲ್ಲೇಖನೀಯ.
undefined
ಅಮೆರಿಕ ಸೇನೆ ಐಸಿಸ್-ಕೆ ಉಗ್ರರ ತಾಣಗಳ ಮೇಲೆ ಅಮೆರಿಕ ಡ್ರೋನ್ ಮೂಲಕ ಏರ್‌ಸ್ಟ್ರೈಕ್ ನಡೆಸಿದೆ ಎಂದು ವರದಿಗಳು ಉಲ್ಲೇಖಿಸಿವೆ. ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿರುವ ಐಸಿಸ್-ಕೆ ತಾಣದ ಮೇಲೆ ಯುಎಸ್ ಸೇನೆಯು ವಾಯುದಾಳಿ ನಡೆಸಿದೆ ಎಂದು ಅಮೆರಿಕ ಸೇನೆಯ ವಕ್ತಾರ ನೇವಿ ಕ್ಯಾಪ್ಟನ್ ಬಿಲ್ ಅರ್ಬನ್ ಹೇಳಿದ್ದಾರೆ. ನಾವು ಗುರಿ ಸಾಧಿಸಿದ್ದೇವೆ, ಈ ದಾಳಿಯಲ್ಲಿ ಯಾವುದೇ ನಾಗರಿಕ ಸಾವನ್ನಪ್ಪಿಲ್ ಎಂದಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದ ಭದ್ರತೆ ಹೆಚ್ಚಳ
ಅಮೆರಿಕದ ರಾಷ್ಟ್ರೀಯ ಭದ್ರತಾ ತಂಡವು ಅಧ್ಯಕ್ಷ ಬೈಡೆನ್ ಅವರನ್ನು ಭೇಟಿ ಮಾಡಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಮನವಿ ಮಾಡಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಬಾಂಬ್ ಹಾಕಿದವರನ್ನು ಬೇಟೆ ಆಡ್ತೀವಿ: ಪ್ರತೀಕಾರದ ಶಪಥ ಮಾಡಿದ ಅಮೆರಿಕ!
ಅಮೆರಿಕ ಕೊಟ್ಟ ಎಚ್ಚರಿಕೆ ಏನು?
ದಾಳಿಯ ಘಟನೆ ಹಿನ್ನೆಲೆಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಬೈಡೆನ್, ‘ಈ ದಾಳಿ ನಡೆಸಿದವರು ಮತ್ತು ಅಮೆರಿಕಕ್ಕೆ ಹಾನಿಯ ಎಚ್ಚರಿಕೆ ನೀಡುವವರನ್ನು ನಾವು ಮರೆಯುವುದಿಲ್ಲ. ನಾವು ನಿಮ್ಮನ್ನು ಹುಡುಕಿ ಬೇಟೆಯಾಡುತ್ತೇವೆ ಮತ್ತು ಅದಕ್ಕೆ ನೀವು ಬೆಲೆ ತೆರುವಂತೆ ಮಾಡುತ್ತೇವೆ. ನಮ್ಮ ಸೇನೆ ಎಲ್ಲಾ ಶಕ್ತಿಗಳನ್ನು ಬಳಸಿ ನಮ್ಮ ಹಿತಾಸಕ್ತಿ ಮತ್ತು ನಮ್ಮ ಪ್ರಜೆಗಳನ್ನು ರಕ್ಷಿಸಲು ನಾನು ಬದ್ಧ’ ಎಂದು ಹೇಳಿದ್ದಾರೆ.
‘ನಿಮಗೆಲ್ಲಾ ಗೊತ್ತಿರುವಂತೆ ನಾವು ಯಾವ ಉಗ್ರ ದಾಳಿ ಬಗ್ಗೆ ಮಾತನಾಡುತ್ತಿದ್ದೆವೋ ಮತ್ತು ಗುಪ್ತಚರ ಸಮುದಾಯದಲ್ಲಿ ಆತಂಕಕ್ಕೆ ಒಳಗಾಗಿದ್ದೆವೋ ಆ ದಾಳಿಯನ್ನು ಐಎಸ್‌ಐಎಸ್-ಕೆ ಎಂಬ ಸಂಘಟನೆ ಮಾಡಿದೆ. ಅವರು, ವಿಮಾನ ನಿಲ್ದಾಣಕ್ಕೆ ಭದ್ರತೆ ಒದಗಿಸಿದ್ದ ನಮ್ಮ ಹಲವು ಯೋಧರನ್ನು ಬಲಿ ಪಡೆದು, ಹಲವು ಯೋಧರನ್ನು ಗಾಯಾಳುಗಳನ್ನಾಗಿ ಮಾಡಿದ್ದಾರೆ. ಅಷ್ಟುಮಾತ್ರವಲ್ಲ ಅವರು ಇತರೆ ಹಲವು ನಾಗರಿಕರನ್ನೂ ಬಲಿಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಐಸಿಸ್ ಖೊರಾಸಾನ್ ಉಗ್ರರು, ಅವರ ಆಸ್ತಿಗಳನ್ನು ಗುರುತಿಸಿ ಅವುಗಳ ಮೇಲೆ ದಾಳಿಗೆ ಸೂಕ್ತ ಯೋಜನೆ ಸಿದ್ಧಪಡಿಸುವಂತೆ ನಮ್ಮ ಕಮಾಂಡರ್‌ಗಳಿಗೆ ಆದೇಶ ನೀಡಿದ್ದೇನೆ. ಅವರ ಮೇಲೆ ನಾವು ಸೂಕ್ತ ಸಮಯ ನೋಡಿ ದಾಳಿ ನಡೆಸಲಿದ್ದೇವೆ. ಐಸಿಸ್ ಉಗ್ರರು ಜಯಗಳಿಸಲು ಬಿಡುವುದಿಲ್ಲ’ ಎಂದು ಬೈಡೆನ್ ಅಬ್ಬರಿಸಿದ್ದಾರೆ.
ತೆರವು ಕಾರ್ಯಾಚರಣೆ:
ಇದೇ ವೇಳೆ, ಆ.31ರೊಳಗೆ ಅಮೆರಿಕ ಸೇನೆಯನ್ನು ಅಷ್ಘಾನಿಸ್ತಾನದಿಂದ ಹಿಂಪಡೆಯುತ್ತೇವೆ. ಇದರಲ್ಲಿ ಬದಲಾವಣೆ ಇಲ್ಲ. ದಾಳಿಯ ಹೊರತಾಗಿಯೂ ಕಾಬೂಲ್‌ನಿಂದ ನಾವು ತೆರವು ಕಾರ್ಯಾಚರಣೆ ಮುಂದುವರೆಸಲಿದ್ದೇವೆ ಮತ್ತು ಆ.31ರೊಳಗೆ ಅದನ್ನು ಪೂರ್ಣಗೊಳಿಸಲಿದ್ದೇವೆ ಎಂದು ಬೈಡೆನ್ ಹೇಳಿದ್ದಾರೆ.
‘ತೆರವು ಕಾರ್ಯಾಚರಣೆಯನ್ನು ನಾವು ಪೂರ್ಣಗೊಳಿಸಲೇಬೇಕಿದೆ ಮತ್ತು ನಾವು ಅದನ್ನು ಪೂರ್ಣಗೊಳಿಸಲಿದ್ದೇವೆ. ಅದನ್ನು ಮಾಡಲು ನಾನು ಸೂಚನೆ ನೀಡಿದ್ದೇನೆ. ಉಗ್ರರ ಇಂಥ ಬೆದರಿಕೆ ನಾವು ಬಗ್ಗುವುದಿಲ್ಲ. ನಮ್ಮ ಯೋಜನೆಯನ್ನು ಸ್ಥಗಿತಗೊಳಿಸಲು ಅವರಿಗೆ ಅವಕಾಶ ನೀಡುವುದಿಲ್ಲ. ತೆರವು ಕಾರ್ಯಾಚರಣೆಯನ್ನು ನಾವು ಮುಂದುವರೆಸಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.