​ಭಾ​ರ​ತ​ವನ್ನು ಖಲೀಫಾ ದೇಶ ಮಾಡಲು ಐಸಿಸ್‌ ಸಂಚು!

By Suvarna NewsFirst Published Aug 28, 2021, 3:13 PM IST
Highlights

* ​ಈಗ ಭಾರತದ ಮೇಲೆ ಐಸಿಸ್‌ ಉಗ್ರರ ಕಣ್ಣು

* ​ಯುವಕರ ನೇಮ​ಕಕ್ಕೆ ಕಾರ್ಯತಂತ್ರ

* ​ಭಾ​ರ​ತ​ವನ್ನು ಖಲೀಫಾ ದೇಶ ಮಾಡಲು ಐಸಿಸ್‌ ಸಂಚು

ನವದೆಹಲಿ(ಆ.28): ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ಭೀಕರ ಬಾಂಬ್‌ ದಾಳಿ ನಡೆಸಿದ ಐಸಿಸ್‌ ಉಗ್ರರ ಮುಂದಿನ ಗುರಿ ಭಾರತವನ್ನು ಕ್ಯಾಲಿಫೇಟ್‌ ಆಳ್ವಿಕೆಗೆ (ಖ​ಲೀಫಾ ಸಾಮ್ರಾ​ಜ್ಯ​) ಒಳಪಡಿಸುವುದಾಗಿದೆ. ಆಫ್ಘಾನಿಸ್ತಾನದಲ್ಲಿ ಭದ್ರವಾಗಿ ನೆಲೆಯೂರಿರುವ ಐಸಿಸಿ- ಕೆ (ಇಸ್ಲಾಮಿಕ್‌ ಸ್ಟೇಟ್‌- ಖೊರಾಸಾನ್‌) ಮಧ್ಯ ಏಷ್ಯಾ ಮತ್ತು ಭಾರತಕ್ಕೆ ಜಿಹಾದ್‌ ಅನ್ನು ಪ್ರಚಾರ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಭಾರತೀಯ ಗುಪ್ತಚರ ಮೂಲಗಳು ತಿಳಿಸಿವೆ.

ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವುದು ಮತ್ತು ಯುವಕರನ್ನು ತನ್ನ ಸಂಘಟನೆಗೆ ನೇಮಿಸಿಕೊಳ್ಳುವುದು ಐಸಿಸ್‌ ಉಗ್ರರ ಕಾರ್ಯಸೂಚಿಯಾಗಿದೆ. ಸೈದ್ಧಾಂತಿಕವಾಗಿ ಕ್ಯಾಲಿಫೇಟ್‌ ಸಾಮ್ರಾಜ್ಯದಲ್ಲಿ ಭಾರತವನ್ನು ಸೇರ್ಪಡೆಗೊಳಿಸಬೇಕು ಎಂದು ಐಸಿಸ್‌ ಬಯಸಿದೆ. ಈ ನಿಟ್ಟಿನಲ್ಲಿ ಕಾರ್ಯತಂತ್ರವನ್ನೂ ಅದು ರೂಪಿಸಿಕೊಂಡಿದೆ ಎಂದು ಅವು ಹೇಳಿ​ವೆ.

ಐಸಿಸ್‌ ಸಿದ್ಧಾಂತದ ಬಗ್ಗೆ ಒಲವು ಹೊಂದಿರುವ ಯುವಕರನ್ನು ಬುಟ್ಟಿಗೆ ಹಾಕಿಕೊಳ್ಳುವುದಕ್ಕೆ ಐಸಿಸ್‌ ಯತ್ನಿಸುತ್ತಿದೆ. ಕೇರಳ ಹಾಗೂ ಮುಂಬೈನ ಯುವಕರು ಐಸಿಸ್‌ಗೆ ಸೇರ್ಪಡೆ ಆಗಿದ್ದಾರೆ. ಒಂದು ವೇಳೆ ತನ್ನ ಸಿದ್ಧಾಂತವನ್ನು ಯುವಕರಲ್ಲಿ ಬಿತ್ತುವಲ್ಲಿ ಐಸಿಸ್‌ ಯಶಸ್ವಿಯಾದರೆ, ಭಾರತದಲ್ಲಿ ಐಸಿಸ್‌ ಉಗ್ರರ ಘಟಕಗಳು ಸಕ್ರಿಯಗೊಳ್ಳಬಹುದು ಎಂದು ತಮ್ಮ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ಆಫ್ಘನ್‌ ಈಗ ಉಗ್ರರ ಸ್ವರ್ಗ:

ಅಫ್ಘಾನಿಸ್ತಾನ ತಾಲಿಬಾನ್‌ ವಶವಾದ ಬಳಿಕ, ಉಗ್ರ ಸಂಘಟನೆಗಳಿಗೆ ಆ ದೇಶ ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ. ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವುದಕ್ಕೆ ಕುಖ್ಯಾತಿ ಗಳಿಸಿರುವ ಜೈಷ್‌-ಎ- ಮೊಹಮ್ಮದ್‌ ಉಗ್ರ ಸಂಘಟನೆ ತನ್ನ ನಲೆಯನ್ನು ಕಂದಹಾರ್‌ ಗಡಿಯಲ್ಲಿರುವ ಅಫ್ಘಾನಿಸ್ತಾನದ ಹೆಲ್ಮಾದ್‌ ಪ್ರದೇಶಕ್ಕೆ ವರ್ಗಾವಣೆಗೊಂಡಿದೆ. ಅದೇ ರೀತಿ, 2008ರ ಮುಂಬೈ ದಾಳಿಯ ರೂವಾರಿ ಲಷ್ಕರ್‌ ಎ ತೊಯ್ಬಾ ಸಂಘಟನೆ ಕೂಡ ಪೂರ್ವ ಆಫ್ಘಾನಿಸ್ತಾನದ ಕುನಾರ್‌ ಪ್ರದೇಶಕ್ಕೆ ಸ್ಥಳಾಂತರಗೊಂಡಿದೆ. ಆದರೆ, ಐಸಿಸ್‌- ಕೆ ಸಂಘಟನೆ ತ್ವರಿತವಾಗಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಆರಂಭಿಸಿದ್ದು, ಭಾರತೀಯ ಗುಪ್ತಚರ ಇಲಾಖೆಯ ಗಮನಕ್ಕೆ ಬಂದಿದೆ. ಐಸಿಸ್‌-ಕೆ ಕೂಡ ತಾಲಿಬಾನ್‌ನಂತೆ ಆಫ್ಘಾನಿಸ್ತಾನದಲ್ಲಿ ಪ್ರಮುಖ ಅಧಿಕಾರ ದಲ್ಲಾಳಿ ಆಗಲು ಬಯಸುತ್ತಿದೆ ಎಂದು ಮೂಲಗಳು ತಿಳಿಸಿವೆ.

click me!