
ನ್ಯೂಯಾರ್ಕ್/ವಾಷಿಂಗ್ಟನ್: ಇತ್ತೀಚೆಗಷ್ಟೇ ಭಾರತದ ವಸ್ತುಗಳ ಮೇಲೆ ಶೇ.25ರಷ್ಟು ತೆರಿಗೆ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಭಾರತದ ಮೇಲಿನ ತೆರಿಗೆಯನ್ನು ಶೀಘ್ರವೇ ಇನ್ನಷ್ಟು ಹೆಚ್ಚಳ ಮಾಡುವ ಬೆದರಿಕೆ ಹಾಕಿದ್ದಾರೆ. ರಷ್ಯಾದಿಂದ ಭಾರತ ತೈಲ ಖರೀದಿಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಟ್ರಂಪ್, ‘ಎಚ್ಚರಿಕೆಗಳ ಹೊರತಾಗಿಯೂ ರಷ್ಯಾದಿಂದ ಭಾರತ ತೈಲ ಖರೀದಿಯನ್ನು ಮುಂದುವರೆಸಿದೆ. ಆದ್ದರಿಂದ ಅವರ ಆಮದುಗಳ ಮೇಲಿನ ಸುಂಕವನ್ನು ಗಣನೀಯ ಪ್ರಮಾಣದಲ್ಲಿ ಏರಿಸುತ್ತೇನೆ’ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಒಡೆತನದ ಜಾಲತಾಣ ಟ್ರುಥ್‌ನಲ್ಲಿ ಹೇಳಿಕೆ ನೀಡಿರುವ ಟ್ರಂಪ್, ‘ಭಾರತವು ಅತ್ಯಧಿಕ ಪ್ರಮಾಣದಲ್ಲಿ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಸಾಲದ್ದಕ್ಕೆ ತಾನು ಖರೀದಿಸಿದ ಹೆಚ್ಚಿನ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ದೊಡ್ಡ ಮೊತ್ತದ ಲಾಭ ಮಾಡಿಕೊಳ್ಳುತ್ತಿದೆ. ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಎಷ್ಟು ಮಂದಿ ಸಾಯುತ್ತಿದ್ದಾರೆ ಎಂಬ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಅವರು ನಮಗೆ ಪಾವತಿಸುವ ತೆರಿಗೆಯನ್ನು ಇನ್ನಷ್ಟು ಏರಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದ ಮಾತುಕತೆಗಳು ನಡೆಯುತ್ತಿವೆ. ಹೀಗಿರುವಾಗಲೇ ಟ್ರಂಪ್, ಆ.7ರಿಂದ ಜಾರಿಗೆ ಬರುವಂತೆ ಭಾರತದ ವಸ್ತುಗಳ ಮೇಲೆ ಶೇ.25ರಷ್ಟು ಸುಂಕ ಹೇರಿದ್ದರು. ಜತೆಗೆ, ರಷ್ಯಾದಿಂದ ತೈಲ ಮತ್ತು ಶಸ್ತ್ರಾಸ್ತ್ರ ಆಮದನ್ನು ಮುಂದುವರೆಸಿದ್ದಕ್ಕಾಗಿ ಹೆಚ್ಚುವರಿ ದಂಡ ವಿಧಿಸುವುದಾಗಿ ಎಚ್ಚರಿಸಿದ್ದರು. ಸಾಲದ್ದಕ್ಕೆ, ಎರಡೂ ದೇಶಗಳ ಆರ್ಥಿಕತೆಯನ್ನು ‘ಮುಳುಗಿದ ಆರ್ಥಿಕತೆ’ ಎಂದು ಕರೆದಿದ್ದರು. ಈಗ ಹೆಚ್ಚುವರಿ ತೆರಿಗೆ ಹೇರುವ ಬೆದರಿಕೆ ಒಡ್ಡುತ್ತಿದ್ದಾರೆ.
ಉಕ್ರೇನಿ ಸಾವು ಬಗ್ಗೆ ಭಾರತಕ್ಕೆ ಚಿಂತೆ ಇಲ್ಲ
ಎಚ್ಚರಿಕೆಗಳ ಹೊರತಾಗಿಯೂ ರಷ್ಯಾದಿಂದ ಭಾರತ ತೈಲ ಖರೀದಿಯನ್ನು ಮುಂದುವರೆಸಿದೆ. ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಎಷ್ಟು ಮಂದಿ ಸಾಯುತ್ತಿದ್ದಾರೆ ಎಂಬ ಬಗ್ಗೆ ಭಾರತ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಅವರ ಆಮದುಗಳ ಮೇಲಿನ ಸುಂಕವನ್ನು ಗಣನೀಯ ಪ್ರಮಾಣದಲ್ಲಿ ಏರಿಸುತ್ತೇನೆ.
- ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ--
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ