
ವಾಷಿಂಗ್ಟನ್: ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಸ್ಥಾಪಿಸುತ್ತಿರು ದಕ್ಷಿಣ ಏಷ್ಯಾ ರಾಷ್ಟ್ರಗಳ ಮೇಲೆ ಟ್ರಂಪ್ ಸಮರ ಮುಂದುವರಿದಿದ್ದು, ಈಗ ಮತ್ತೆ ಚೀನಾದ ಮೇಲೆ ಶೇಕಡಾ 100 ರಷ್ಟು ತೆರಿಗೆ ಹೇರಿದ್ದಾರೆ. ಇದರ ಜೊತೆಗೆ ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಜೊತೆಗಿನ ಶೃಂಗಸಭೆಯನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅಪರೂಪದ ಭೂಮಿಯಲ್ಲಿ ಸಿಗುವ ಖನಿಜಗಳ ಮೇಲಿನ ರಫ್ತಿಗೆ ಚೀನಾ ನಿರ್ಬಂಧ ಹೇರಿದ ಹಿನ್ನೆಲೆ ಈಗ ಟ್ರಂಪ್ ಚೀನಾದ ಮೇಲೆ ತಮ್ಮ ವ್ಯಾಪಾರಿ ಯುದ್ಧವನ್ನು ಮತ್ತೆ ಆರಂಭಿಸಿದ್ದಾರೆ.
ಬೀಜಿಂಗ್‌ನ ಅಸಾಧಾರಣವಾದ ಆಕ್ರಮಣಕಾರಿ ಕ್ರಮಗಳಿಗೆ ಪ್ರತೀಕಾರವಾಗಿ ನವಂಬರ್ 1ರಿಂದಲೇ ಜಾರಿಗೆ ಬರುವಂತೆ ಎಲ್ಲಾ ನಿರ್ಣಾಯಕ ಸಾಫ್ಟ್‌ವೇರ್‌ಗಳಿಗೆ ಶೇಕಡಾ 100 ತೆರಿಗೆ ಹಾಗೂ ಯುಎಸ್ ರಫ್ತು ನಿಯಂತ್ರಣಗಳು ಜಾರಿಗೆ ಬರಲಿವೆ ಎಂದು ಟ್ರಂಪ್ ಹೇಳಿದ್ದಾರೆ. ಚೀನಾ ಅಂತಹ ಕ್ರಮ ಕೈಗೊಂಡಿದೆ ಎಂದು ನಂಬಲು ಅಸಾಧ್ಯವಾಗಿದೆ. ಆದರೆ ಅವರು ಮಾಡಿದ್ದಾರೆ, ಮತ್ತು ಉಳಿದದ್ದು ಇತಿಹಾಸ ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಹೇಳಿದ್ದಾರೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ಮತ್ತೆ ಭುಗಿಲೆದ್ದಂತೆ ಷೇರು ಮಾರುಕಟ್ಟೆಗಳು ಕುಸಿದವು, ಅಮೆರಿಕಾದ ಷೇರು ಇಂಡೆಕ್ಸ್ ನಾಸ್ಡಾಕ್ ಶೇ.3.6 ರಷ್ಟು ಮತ್ತು ಎಸ್ & ಪಿ 500 ಶೇ.2.7 ರಷ್ಟು ಕುಸಿತ ಕಂಡಿವೆ.
ಫೆಂಟನಿಲ್ ಟ್ರೆಡ್‌ಗೆ ಬೀಜಿಂಗ್ ಸಹಾಯ ಮಾಡುತ್ತಿದೆ ಎಂದು ಆರೋಪಿಸಿ ಟ್ರಂಪ್ ತಂದ ಸುಂಕಗಳ ಅಡಿಯಲ್ಲಿ ಈಗಾಗಲೇ ಚೀನಾದ ಸರಕುಗಳಿಗೆ ಪ್ರಸ್ತುತ ಯುಎಸ್ ಶೇಕಡಾ 30 ರಷ್ಟು ಸುಂಕ ಹೇರಿದೆ. ಹಾಗೆಯೇ ಚೀನಾದ ಪ್ರತೀಕಾರದ ಸುಂಕಗಳು ಪ್ರಸ್ತುತ ಶೇಕಡಾ 10 ರಷ್ಟಿವೆ. ಅಪರೂಪದ ಭೂಮಿಯ ಖನಿಜಗಳ ಮೇಲಿನ ರಫ್ತು ತಡೆಹಿಡಿದಿರುವ ಬಗ್ಗೆ ವಿವರಿಸುವ ಪತ್ರಗಳನ್ನು ಚೀನಾ ಪ್ರಪಂಚದಾದ್ಯಂತದ ದೇಶಗಳಿಗೆ ಕಳುಹಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.
ಚೀನಾ ಅಪರೂಪದ ಭೂಮಿಯ ಖನಿಜಗಳ ರಫ್ತು ನಿಷೇಧಿಸಿದ್ದಕ್ಕೆ ಅಸಮಾಧಾನ
ಈ ಅಪರೂಪದ ಭೂಮಿಯ ಖನಿಜಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಂದ ಹಿಡಿದು ಮಿಲಿಟರಿ ಹಾರ್ಡ್‌ವೇರ್ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನದವರೆಗೆ ಎಲ್ಲದರ ತಯಾರಿಕೆಯಲ್ಲಿ ನಿರ್ಣಾಯಕವಾಗಿವೆ. ಈ ವಸ್ತುಗಳ ಜಾಗತಿಕ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಚೀನಾ ಪ್ರಾಬಲ್ಯ ಹೊಂದಿದೆ.
ಹೀಗಾಗಿ ಜಗತ್ತನ್ನು ಸೆರೆಹಿಡಿದಿಡಲು ಚೀನಾವನ್ನು ಯಾವುದೇ ರೀತಿಯಲ್ಲಿ ಬಿಡಬಾರದು ಎಂದು ಟ್ರಂಪ್ ಆಗ್ರಹಿಸಿದ್ದು, ಚೀನಾದ ನಿಲುವನ್ನು ತುಂಬಾ ಪ್ರತಿಕೂಲ ಎಂದು ಬಣ್ಣಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC)ಶೃಂಗಸಭೆಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಅವರನ್ನು ಭೇಟಿ ಮಾಡುವ ತಮ್ಮ ಯೋಜನೆಯನ್ನು ಟ್ರಂಪ್ ನಿಲ್ಲಿಸುವ ಸಾಧ್ಯತೆ ಇದೆ.
ಜನವರಿಯಲ್ಲಿ ಟ್ರಂಪ್ ಅಧಿಕಾರಕ್ಕೆ ಮರಳಿದ ನಂತರ ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ದೇಶದ ನಾಯಕರ ನಡುವಿನ ಮೊದಲ ಮುಖಾಮುಖಿ ಇದಾಗಿತ್ತು. ನಾನು ಎರಡು ವಾರಗಳಲ್ಲಿ ದಕ್ಷಿಣ ಕೊರಿಯಾದ APECನಲ್ಲಿ ಅಧ್ಯಕ್ಷ ಕ್ಸಿ ಅವರನ್ನು ಭೇಟಿಯಾಗಬೇಕಿತ್ತು ಆದರೆ ಈಗ ಹಾಗೆ ಮಾಡಲು ಯಾವುದೇ ಕಾರಣವಿಲ್ಲ ಎಂದು ತೋರುತ್ತದೆ ಎಂದು ಅವರು ಬರೆದಿದ್ದಾರೆ. ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬೀಜಿಂಗ್ ನಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ: ಟಿಕೆಟ್ ಇಲ್ದೇ ಪಯಣ ಪ್ರಶ್ನಿಸಿದ TTE ವಿರುದ್ಧ ಕಿರುಕುಳ ಆರೋಪ: ಸರ್ಕಾರಿ ಶಿಕ್ಷಕಿ ವಿರುದ್ಧ FIR
ಇದನ್ನೂ ಓದಿ: ಕನ್ನಡಿಗ ಐಎಎಸ್ ಅಧಿಕಾರಿ ನಾಗಾರ್ಜುನ್ ಗೌಡ ವಿರುದ್ಧವೇ ಭ್ರಷ್ಟಾಚಾರದ ಆರೋಪ
ಇದನ್ನೂ ಓದಿ: ಅಪರಿಚಿತ ಯುವತಿಯ ಪ್ಲೈಯಿಂಗ್ ಕಿಸ್‌ಗೆ ಪುರುಷರ ರಿಯಾಕ್ಷನ್ ಹೇಗಿತ್ತು: ವೀಡಿಯೋ ಭಾರಿ ವೈರಲ್
ಇದನ್ನೂ ಓದಿ: ಮಳೆಯಿಂದ ರಕ್ಷಿಸಿಕೊಳ್ಳಲು ಮರ್ಲಿನ್ ಮನ್ರೋ ಸ್ಕರ್ಟ್ ಕೆಳಗೆ ಆಶ್ರಯ ಪಡೆದ ಜನ: ಫೋಟೋ ಭಾರಿ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ