ಉಕ್ರೇನ್ ಮೇಲೆ ರಷ್ಯಾ ದಾಳಿಯಿಂದ ಉಕ್ರೇನ್ ಜನರ ಬದುಕೇ ನರಕ ಸದೃಶವಾಗಿದೆ. ಈ ಮಧ್ಯೆ ಯುದ್ಧ ಆರಂಭವಾದ ಮಾರನೇ ದಿನ ಮದುವೆಯಾದ ಜೋಡಿಯೊಂದು ಮದುವೆಯ ಮರುದಿನವೇ ರಷ್ಯಾ ವಿರುದ್ಧ ಹೋರಾಡಲು ಹೊರಟಿದೆ. ಹೌದು ಕೈವ್ ಸಿಟಿ ಕೌನ್ಸಿಲ್‌ನ ಸದಸ್ಯೆಯೂ ಆಗಿರುವ 21 ವರ್ಷದ ಅರಿವಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ 24 ವರ್ಷದ ಸ್ವಾಟೋಪ್ಲಾವ್ ಫರ್ಸಿನ್ ಅವರನ್ನು ಮದುವೆಯಾಗಿದ್ದು, ಈಗ ದೇಶಕ್ಕಾಗಿ ಹೋರಾಡಲು ಗನ್ ಹಿಡಿದು ನಿಂತಿದ್ದಾರೆ. ಹಾಗಂತ ಅವರು ಆ ದಿನವೇ ಮದುವೆಯಾಗಲು ನಿರ್ಧರಿಸಿರಲಿಲ್ಲ.
ಈ ಜೋಡಿ ಮೇ ತಿಂಗಳ 6 ರಂದು ಡ್ನೀಪರ್ ನದಿಯ ಮೇಲಿರುವ ಅತ್ಯಂತ ಸುಂದರವಾದ ಹೊಟೇಲ್‌ನಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಮುಂಜಾನೆ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದಾಗ ಎಲ್ಲವೂ ಬದಲಾಯಿತು. ಹೀಗಾಗಿ ತಮ್ಮ ನಿರ್ಧಾರವನ್ನು ಬದಲಿಸಿದ ಅವರು ಶುಕ್ರವಾರ ಮದುವೆಯಾದರು. ಮತ್ತು ಮಾರನೇ ದಿವಸವೇ ರಷ್ಯಾ ವಿರುದ್ಧ ಹೋರಾಡಲು ಗನ್ ಹಿಡಿದು ನಿಂತರು. ಇವರಿಬ್ಬರು ಮದುವೆಯಾಗುವ ವೇಳೆ ಮಂಗಳವಾದ್ಯದ ಬದಲು ಕಿವಿಗೆ ಗುಂಡಿನ ಮೊರೆತ ಕೇಳಿ ಬರುತ್ತಿತ್ತು. ಅದು ತುಂಬಾ ಭಯಾನಕವಾಗಿತ್ತು ಎಂದು ಕೈವ್‌ನ ಸೇಂಟ್ ಮೈಕೆಲ್ ಚರ್ಚ್‌ನಲ್ಲಿ ಮದುವೆಯಾದ ಅರಿವಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಉಕ್ಕಿದ ದೇಶ ಭಕ್ತಿ... ಸೇನೆ ಸೇರಲು ಮುಂದಾದ 80ರ ಉಕ್ರೇನ್ ವೃದ್ಧ
2019 ರ ಅಕ್ಟೋಬರ್‌ನಲ್ಲಿ ಕೈವ್‌ನ ಮಧ್ಯಭಾಗದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಈ ಜೋಡಿ ಮೊದಲ ಬಾರಿಗೆ ಪರಸ್ಪರ ಭೇಟಿಯಾಗಿದ್ದರು. ಪ್ರೀತಿಯಾಗಿ ಮದುವೆಯಾಗಲು ನಿರ್ಧರಿಸಿದ್ದರು. ನಮ್ಮ ದೇಶದ ಪರಿಸ್ಥಿತಿ ಕಠಿಣವಾಗಿದೆ, ನಾವು ನಮ್ಮ ಭೂಮಿಗಾಗಿ ಹೋರಾಡಲಿದ್ದೇವೆ. ನಾವು ಬಹುಶಃ ಸಾಯಬಹುದು ಮತ್ತು ನಾವು ಎಲ್ಲಕ್ಕಿಂತ ಮೊದಲು ಒಟ್ಟಿಗೆ ಇರಲು ಬಯಸಿದ್ದೇವೆ ಎಂದು ಎಂದು ಅರಿವಾ ಹೇಳಿದರು. ವಿವಾಹದ ನಂತರ ಈ ಜೋಡಿ ದೇಶವನ್ನು ರಕ್ಷಿಸಲು ಸಹಾಯ ಮಾಡುವ ಪ್ರಯತ್ನಗಳಲ್ಲಿ ಸೇರಲು ಸ್ಥಳೀಯ ಪ್ರಾದೇಶಿಕ ರಕ್ಷಣಾ ಕೇಂದ್ರಕ್ಕೆ ಹೋಗಲು ಸಿದ್ಧರಾದರು. ನಾವು ಪ್ರೀತಿಸುವ ಜನರು ಮತ್ತು ನಾವು ವಾಸಿಸುವ ಭೂಮಿಯನ್ನು ನಾವು ರಕ್ಷಿಸಬೇಕು ಎಂದು ಅರಿವಾ ಹೇಳಿದರು.
ಗುರುವಾರ ಬೆಳಗ್ಗೆ ಉಕ್ರೇನ್ ಮೇಲೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧ ಘೋಷಿಸಿದ ಬಳಿಕ ಉಕ್ರೇನ್ ಮೇಲೆ ಸರಣಿ ದಾಳಿಗಳು ನಡೆದವು. ಇದರಿಂದ ಉಕ್ರೇನ್‌ನ ಸಾಮಾನ್ಯ ಜನರ ಸ್ಥಿತಿ ನಮ್ಮ ಶತ್ರುಗಳಿಗೂ ಬರುವುದು ಬೇಡ ಎನಿಸುವಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಲ್ಲಿ ನೀರು ತರಿಸುವಂತಹ ಅನೇಕ ದೃಶ್ಯಾವಳಿಗಳು ಹರಿದಾಡುತ್ತಿವೆ. ತಾವಿರುವ ಮನೆಗಳನ್ನು ಸಾಕುಪ್ರಾಣಿಗಳನ್ನು ಬಿಟ್ಟು ಹೋಗಲಾಗದೆ, ಅಲ್ಲೇ ಇರಲಾಗದೆ ಅಲ್ಲಿನ ಜನ ಸಂಕಟಪಡುತ್ತಿರುವ ದೃಶ್ಯಗಳು, ಜೊತೆಗೆ ತಮ್ಮ ಮಕ್ಕಳು ಮಡದಿಯರ ರಕ್ಷಣೆಗೆ ಸುರಕ್ಷಿತ ಸ್ಥಳಗಳನ್ನು ಹುಡುಕುತ್ತಿರುವ ಗಂಡಸರು. ತಮ್ಮ ಅಮೂಲ್ಯ ವಸ್ತುಗಳ ಜೊತೆಗೆ ತಮ್ಮ ಸಾಕುಪ್ರಾಣಿಗಳನ್ನು ಕೂಡ ಹೊತ್ತುಕೊಂಡು ಸಾಗುತ್ತಿರುವ ಜನರು ಮುಂತಾದ ದೃಶ್ಯಗಳು ಎಲ್ಲರ ಹೃದಯವನ್ನು ಕರಗಿಸುತ್ತಿವೆ.
ರಷ್ಯಾ ವಿರುದ್ಧ ಹ್ಯಾಕರ್‌ಗಳ ಸೈಬರ್ ದಾಳಿ: ಸರ್ಕಾರಿ ವೆಬ್‌ಸೈಟ್‌ಗಳ ಹ್ಯಾಕ್
ಇತ್ತ ಉಕ್ರೇನ್ ರಾಜಧಾನಿಯತ್ತ ರಷ್ಯಾ ಸೇನೆ ಲಗ್ಗೆ ಇಟ್ಟಿದೆ. ಕೀವ್‌ನಲ್ಲಿರುವ ಅಧ್ಯಕ್ಷನನ್ನು ಸೆರೆ ಹಿಡಿಯುವ ಸಾಧ್ಯತೆ ಇದೆ. ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕೀ ರಕ್ಷಣೆಗೆ ಅಮೆರಿಕಾ ಮುಂದಾಗಿದೆ. ಅವರ ಸ್ಥಳಾಂತರಕ್ಕೆ ಮುಂದಾಗಿದ್ದು, ದೇಶ ಬಿಡಲು ಝೆಲೆನ್‌ಸ್ಕೀ ಹಿಂದೇಟು ಹಾಕಿದ್ದಾರೆ. 'ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ನಾವೆಲ್ಲರೂ ಇಲ್ಲಿದ್ದೇವೆ. ನಾವು ರಷ್ಯಾವನ್ನು ಎದುರಿಸುತ್ತಿದ್ದೇವೆ, ರಷ್ಯಾದ ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ ಎಂದು ಝೆಲೆನ್‌ಸ್ಕೀ, ಜನತೆಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.