ಉಕ್ರೇನ್‌ ಡ್ಯಾಮ್‌ ಸ್ಫೋಟಕ್ಕೆ ಐವರು ಬಲಿ : 4 ಸಾವಿರ ಮಂದಿ ಸ್ಥಳಾಂತ​ರ

By Kannadaprabha NewsFirst Published Jun 9, 2023, 9:01 AM IST
Highlights

ರಷ್ಯಾದ ವಶದಲ್ಲಿರುವ ಉಕ್ರೇನ್‌ನ ಬೃಹತ್‌ ಡ್ಯಾಮ್‌ ಸ್ಫೋಟದಿಂದ ಇದೇ ಮೊದಲ ಬಾರಿ ಸಾವಿನ ವರದಿಗಳು ಬಂದಿದ್ದು, ಐದು ಮಂದಿ ಪ್ರವಾಹದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಖೇರ್ಸನ್‌: ರಷ್ಯಾದ ವಶದಲ್ಲಿರುವ ಉಕ್ರೇನ್‌ನ ಬೃಹತ್‌ ಡ್ಯಾಮ್‌ ಸ್ಫೋಟದಿಂದ ಇದೇ ಮೊದಲ ಬಾರಿ ಸಾವಿನ ವರದಿಗಳು ಬಂದಿದ್ದು, ಐದು ಮಂದಿ ಪ್ರವಾಹದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರಷ್ಯಾದಿಂದ ನೇಮಕಗೊಂಡಿರುವ ಮೇಯರ್‌ ಇದನ್ನು ಖಚಿತಪಡಿಸಿದ್ದಾರೆ. ನಾಪತ್ತೆಯಾಗಿದ್ದ ಇನ್ನಿಬ್ಬರನ್ನು ರಕ್ಷಿಸಲಾಗಿದೆ.

ಇದೇ ವೇಳೆ, ಡಿನೀಪರ್‌ ನದಿಯ (Dnieper River) ಒಂದು ಪಕ್ಕದಲ್ಲಿ ಉಕ್ರೇನ್‌ ವಶದಲ್ಲಿರುವ ಪ್ರದೇಶಗಳಲ್ಲಿ ಉಕ್ರೇನ್‌ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ ಗುರುವಾರ ಪ್ರವಾಹ ಸಮೀಕ್ಷೆ ನಡೆಸಿದ್ದಾರೆ. ಈ ಪ್ರದೇಶಗಳಲ್ಲಿ ಜನರನ್ನು ತೆರವುಗೊಳಿಸುವ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ. ಅಧಿಕೃತವಾಗಿ ಈವರೆಗೆ 4000 ಜನರನ್ನು ಮಾತ್ರ ಸ್ಥಳಾಂತರ ಮಾಡಲಾಗಿದೆ. ಸುಮಾರು 60 ಸಾವಿರ ಜನರು ಅಪಾಯದಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಗುರುವಾರ ಸುಮಾರು 600 ಚದರ ಕಿ.ಮೀ. ಪ್ರದೇಶ 5.6 ಮೀಟರ್‌ನಷ್ಟು ನೀರಿನಲ್ಲಿ ಮುಳುಗಿದೆ. ನೋವಾ ಕಖೋವ್ಕಾ ಡ್ಯಾಂ (Nova Kakhovka dam) ಸ್ಫೋಟದಿಂದ ಉಂಟಾಗಿರುವ ಹಾನಿಯನ್ನು ಇನ್ನೂ ಅಂದಾಜು ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ಯಾಂ ಸ್ಫೋಟ: ದಕ್ಷಿಣ ಉಕ್ರೇನಲ್ಲಿ ಜನರ ಜೀವನ್ಮರಣ ಹೋರಾಟ

ಅಣೆಕಟ್ಟೆಯನ್ನು ಸ್ಫೋಟಿಸಿದ್ದು ರಷ್ಯನ್ನರೋ ಅಥವಾ ಉಕ್ರೇನಿಯನ್ನರೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರವಾಹಪೀಡಿತ ಉಕ್ರೇನ್‌ಗೆ ಫ್ರಾನ್ಸ್‌ ದೊಡ್ಡ ಪ್ರಮಾಣದಲ್ಲಿ ನೆರವು ಘೋಷಿಸಿದ್ದು, ಕೂಡಲೇ ವಾಟರ್‌ ಪ್ಯೂರಿಫೈರ್‌, 5 ಲಕ್ಷದಷ್ಟು ನೀರು ಶುದ್ಧೀಕರಣ ಮಾತ್ರೆಗಳು ಹಾಗೂ ಹೈಜೀನ್‌ ಕಿಟ್‌ಗಳನ್ನು ಕಳುಹಿಸುವುದಾಗಿ ಹೇಳಿದೆ.

ರಕ್ಷಣಾ ಕಾರ್ಯಾಚರಣೆ ನಡುವೆಯೂ ಬಾಂಬ್‌ ದಾಳಿ

ಖೇರ್ಸನ್‌: ಜಗತ್ತಿನ ಅತಿದೊಡ್ಡ ಅಣೆಕಟ್ಟೆಗಳಲ್ಲಿ ಒಂದಾದ ಉಕ್ರೇನ್‌ನ ಕಖೋವ್ಕಾ ಅಣೆಕಟ್ಟೆಸ್ಫೋಟಗೊಂಡ ಪರಿಣಾಮ ದೇಶದ ದಕ್ಷಿಣ ಭಾಗದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವ ಹೃದಯ ವಿದ್ರಾವಕ ದೃಶ್ಯಗಳು ಹೊರಬಿದ್ದಿವೆ. ಅಣೆಕಟ್ಟೆಸ್ಫೋಟದಿಂದ ಡಿನೀಪರ್‌ ನದಿಯ ಮಟ್ಟಭಾರೀ ಏರಿಕೆಯಾಗಿದ್ದು, ಖೇರ್ಸನ್‌ ಸುತ್ತಮುತ್ತಲಿನ 1800ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಕೆಲವರು ರಾತ್ರಿಯಿಡೀ ಮನೆಯ ಮೇಲೆ ಹತ್ತಿ ಕುಳಿತು ಜೀವ ಉಳಿಸಿಕೊಂಡಿದ್ದರೆ, ಸಾವಿರಾರು ಜನರು ಬುಧವಾರ ಕಂಡ ಕಂಡ ವಾಹನ ಹತ್ತಿ ಊರು ತೊರೆದಿದ್ದಾರೆ.

ರಷ್ಯಾದ ನಿಯಂತ್ರಣದಲ್ಲಿರುವ ಉಕ್ರೇನ್‌ನ ಈ ಭಾಗದಲ್ಲಿ ಕಳೆದ 16 ತಿಂಗಳ ಯುದ್ಧದ ಅವಧಿಯಲ್ಲೇ ಇದು ಅತ್ಯಂತ ಭೀಕರ ಪರಿಸ್ಥಿತಿ ಎಂದು ಹೇಳಲಾಗುತ್ತಿದೆ. ಒಂದೆಡೆ ಸೇನೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದರೆ, ಅದರ ನಡುವೆಯೇ ಭಾರಿ ಪ್ರಮಾಣದ ಗುಂಡು ಹಾಗೂ ಬಾಂಬ್‌ ದಾಳಿ ಕೂಡ ನಡೆಯುತ್ತಿದೆ. ಇದು ಜನರನ್ನು ಇನ್ನಷ್ಟುಆತಂಕಕ್ಕೆ ತಳ್ಳಿದೆ. ಸದ್ಯ ಸಾವಿನ ವರದಿಗಳು ಹೊರಬಂದಿಲ್ಲ.

ಉಕ್ರೇನಲ್ಲಿ ರಷ್ಯಾ ವಶದಲ್ಲಿದ್ದ ಬೃಹತ್‌ ಡ್ಯಾಂ ಸ್ಫೋಟ: ಸಾವಿರಾರು ಜನ ಜಾನುವಾರುಗಳು ಕಂಗಾಲು

ಡಿನೀಪರ್‌ ನದಿಯಲ್ಲಿ ಪ್ರವಾಹದ ಮಟ್ಟಇನ್ನಷ್ಟುಏರುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಜನರನ್ನು ಬಸ್‌, ರೈಲು ಹಾಗೂ ಮಿಲಿಟರಿ ಟ್ರಕ್‌ಗಳ ಮೂಲಕ ತೆರವುಗೊಳಿಸಲಾಗುತ್ತಿದೆ. ಈವರೆಗೆ 1500 ಜನರನ್ನು ಮಾತ್ರ ತೆರವುಗೊಳಿಸಲಾಗಿದೆ. ಡ್ಯಾಮ್‌ನ ನೀರು ಇನ್ನೂ ಒಂದು ದಿನ ಇದೇ ರಭಸದಲ್ಲಿ ಕೆಳಮಟ್ಟಕ್ಕೆ ಹರಿಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ರಷ್ಯಾದ ನಿಯಂತ್ರಣದಲ್ಲಿರುವ ಖೇರ್ಸನ್‌ ಪ್ರದೇಶದಲ್ಲಿ 900 ಜನರನ್ನು ರಕ್ಷಣೆ ಮಾಡಲಾಗಿದೆ. ತನ್ನ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಉಕ್ರೇನ್‌ ಕೂಡ ತೆರವು ಕಾರ್ಯಾಚರಣೆ ನಡೆಸುತ್ತಿದೆ. ರಷ್ಯಾದವರೇ ಡ್ಯಾಮ್‌ ಸ್ಫೋಟಿಸಿದ್ದಾರೆ ಎಂದು ಉಕ್ರೇನ್‌ನ ಆರೋಪ ಹಾಗೂ ಉಕ್ರೇನಿಯನ್ನರೇ ಡ್ಯಾಮ್‌ ಸ್ಫೋಟಿಸಿದ್ದಾರೆ ಎಂದು ರಷ್ಯಾದ ಪ್ರತ್ಯಾರೋಪ ಮುಂದುವರೆದಿದೆ. ಭಾಗಶಃ ಸ್ಫೋಟಗೊಂಡ ಕಖೋವ್ಕಾ ಅಣೆಕಟ್ಟೆಯನ್ನು ದುರಸ್ತಿ ಮಾಡಲು ಸಾಧ್ಯವಿಲ್ಲ, ಅಣೆಕಟ್ಟೆ ಸಂಪೂರ್ಣ ಕುಸಿಯಲಿದೆ ಎಂದು ತಜ್ಞರು ಹೇಳಿದ್ದಾರೆ. ಆಗ ಇನ್ನಷ್ಟು ಪ್ರವಾಹ ಉಂಟಾಗುವ ಸಾಧ್ಯತೆಯಿದೆ.
 

click me!