Turkey Earthquake: ಮೂತ್ರ ಕುಡಿದು ಬದುಕಿ ಬಂದ 17 ವರ್ಷದ ಯುವಕ!

By Santosh Naik  |  First Published Feb 11, 2023, 3:33 PM IST

ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಈವರೆಗೂ ಸಾವಿಗೀಡಾದವರ ಸಂಖ್ಯೆ 24 ಸಾವಿರಕ್ಕೇರಿದೆ. ಈ ನಡುವೆ ದಿನಕ್ಕೊಂದರಂತೆ ಬದುಕುಳಿದವರ ಕಥೆ ಹೊರಬರುತ್ತಿದೆ. ಗುರುವಾರ ಟರ್ಕಿಯಲ್ಲಿ 17 ವರ್ಷದ ಯುವಕನನ್ನು ಭೂಕಂಪ ಸಂಭವಿಸಿದ 94 ಗಂಟೆಗಳ ನಂತರ ಜೀವಂತವಾಗಿ ಹೊರತೆಗೆಯಲಾಗಿದೆ.
 


ನವದೆಹಲಿ (ಫೆ.11): ಭೂಕಂಪದಿಂದ ಅಕ್ಷರಶಃ ನರಕದಂತಾಗಿರುವ ಟರ್ಕಿಯಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಗುರುವಾರ ರಾತ್ರಿ ಟರ್ಕಿಯ ರಕ್ಷಣಾ ಸಿಬ್ಬಂದಿಗಳು ಭೂಕಂಪದ ಕೇಂದ್ರಬಿಂದುವಾದ ದಕ್ಷಿಣ ಗಾಜಿಯಾಟೆಂಪ್‌ ಪ್ರಾಂತ್ಯದಲ್ಲಿ ಕುಸಿದ ಅಪಾರ್ಟ್‌ಮೆಂಟ್‌ನ ಕಟ್ಟಡದ ಕೆಳಗಿನಿಂದ 17 ವರ್ಷದ ಯುವಕನನ್ನು ಜೀವಂತವಾಗಿ ಹೊರತೆಗೆಯಲು ಯಶಸ್ವಿಯಾಗಿದ್ದಾರೆ. ಭೂಕಂಪ ಸಂಭವಿಸಿದ 94 ಗಂಟೆಗಳ ಬಳಿಕ ಯುವಕನ್ನು ಹೊರತೆಗೆಯಲಾಗಿದೆ. ಇಷ್ಟು ಸಮಯದ ಕಾಲ ಆಹಾರವಿಲ್ಲದೆ, ಆತ ಬದುಕಿದ್ದ ಬಗ್ಗೆಯೇ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಆತ, ತನ್ನದೇ ಮೂತ್ರ ಕುಡಿದು ಇಷ್ಟು ದಿನಗಳ ಕಾಲ ಜೀವಂತವಾಗಿದ್ದೆ ಎಂದು ಹೇಳಿದ್ದಾನೆ. ಅದ್ನಾನ್ ಮುಹಮ್ಮತ್ ಕೊರ್ಕುಟ್ ಹೆಸರಿನ ಯುವಕನನ್ನು ಗುರುವಾರ ತಡರಾತ್ರಿ ಗಾಜಿಯಾಂಟೆಪ್‌ನ ಸೆಹಿತ್‌ಕಾಮಿಲ್ ಜಿಲ್ಲೆಯ ಅಪಾರ್ಟ್‌ಮೆಂಟ್‌ನ ಅವಶೇಷಗಳಿಂದ ರಕ್ಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ವೈರಲ್‌ ಆಗಿರುವ ಸೋಶಿಯಲ್‌ ಮೀಡಿಯಾ ವಿಡಿಯೋದಲ್ಲಿ ಕೊರ್ಕುಟ್‌, 'ನನ್ನ ಮೂತ್ರವನ್ನೇ ಕುಡಿದು ಇಲ್ಲಿಯವರೆಗೂ ಬದುಕಿದ್ದೆ. ನೀವು ಬರುವವರೆಗೂ ನಾನು ಕಾಯುತ್ತಿದ್ದೆ' ಎಂದು ಹೇಳಿದ್ದಾನೆ. 



🙏🙏 Gaziantep'te Gölgeler Apartmanında 17 yaşındaki Adnan Muhammet Korkut, 94. saatte enkazdan sağ olarak kurtarıldı.

📽️ Kurtarılma anları ve sevdiklerinin mutluluğu pic.twitter.com/ERM6TMTEi8

— Ajansspor (@ajansspor)


;ನಾನು ನನ್ನದೇ ಮೂತ್ರವನ್ನು ಕುಡಿದು ಬದುಕಲು ಯಶಸ್ವಿಯಾದೆ. ಓಹ್‌ ದೇವರೆ ತುಂಬಾ ಥ್ಯಾಂಕ್ಸ್‌ ನಾನು ಬದುಕಿದ್ದೇನೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾನೆ. ನೀವು ಬರಲಿ ಎಂದು ನಾನು ಆಶಿಸುತ್ತಿದ್ದೆ. ನೀವು ಬಂದಿದ್ದೀರಿ. ದೇವರಿಗೆ ಥ್ಯಾಂಕ್ಸ್‌. ನಿಮಗೆಲ್ಲರಿಗ ಥ್ಯಾಂಕ್ಸ್‌' ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಮತ್ತೆ ಯಾವುದಾದರೂ ಶಬ್ದ ನಿಮಗೆ ಕೇಳಿಸುತ್ತಿತ್ತೇ ಎಂದು ಸಿಬ್ಬಂದಿಗಳು ಕೇಳಿದ ಪ್ರಶ್ನೆಗೆ, ನಾಯಿ ಬೊಗಳುತ್ತಿದ್ದ ಶಬ್ದ ಕೇಳಿದ್ದೇನೆ ಎಂದರು. ಅದಕ್ಕೆ ಸಿಬ್ಬಂದಿಗಖು, ನಾಯಿಯನ್ನು ನಾವು ರಕ್ಷಣೆ ಮಾಡುತ್ತೇವೆ ಎಂದಿರುವ ವಿಡಿಯೋ ಇದಾಗಿದೆ.

ಸೋಮವಾರ ಮುಂಜಾನೆ ಆಗ್ನೇಯ ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಪ್ರಬಲವಾದ ಭೂಕಂಪವು ಸಂಭವಿಸಿದೆ. ಇದು ಸಂಪೂರ್ಣ ನಗರವನ್ನು ವಿಧ್ವಂಸ ಮಾಡಿದ್ದರೆ,  ಸಾವಿರಾರು ಜನರು ಸಾವನ್ನಪ್ಪಿದ್ದು ಲಕ್ಷಗಟ್ಟಲೆ ಜನರು ಗಾಯಗೊಂಡಿದ್ದಾರೆ. ಈವರೆಗೂ 24 ಸಾವಿರಕ್ಕೂ ಅಧಿಕ ಜನ ಸಾವು ಕಂಡಿದ್ದಾರೆ ಎಂದು ಹೇಳಲಾಗಿದೆ. ಶೀತ ವಾತಾವರಣದ ನಡುವೆಯೂ ರಕ್ಷಣಾ ಕಾರ್ಯಾಚರಣೆ ಸತತ ನಾಲ್ಕನೇ ದಿನವೂ ವ್ಯಾಪಕವಾಗಿ ಮುಂದುವರಿದಿದೆ. ಸಾಕಷ್ಟು ಜನರು ಇನ್ನೂ ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Tap to resize

Latest Videos

ಟರ್ಕಿ ಭೂಕಂಪ: ಭಾರತದಿಂದ ಸಹಾಯಹಸ್ತ; ದೋಸ್ತ್‌ ಎಂದು ಧನ್ಯವಾದ ಹೇಳಿದ ಟರ್ಕಿ ಸರ್ಕಾರ

ಚಳಿಗಾಲದ ಚಂಡಮಾರುತದ ಕಾರಣ ಪ್ರಾರಂಭಿಕ ರಕ್ಷಣಾ ಪ್ರಯತ್ನಗಳು ಅಡ್ಡಿಪಡಿಸಿದವು. ಇದರಿಂದಾಗಿ ಭೂಕಂಪ ಪೀಡಿತ ಪ್ರದೇಶಕ್ಕೆ ತೆರಳುವ ಪ್ರಮುಖ ರಸ್ತೆಗಳಲ್ಲಿ ಹಿಮಪಾತಕ್ಕೆ ಕಾರಣವಾಗಿತ್ತು. ರಸ್ತೆಗಳು ಕೂಡ ಬ್ಲಾಕ್‌ ಆಗಿದ್ದವು.  ಈ ಪ್ರದೇಶದ ಮೂರು ಪ್ರಮುಖ ವಿಮಾನ ನಿಲ್ದಾಣಗಳು ಕೂಡ ಬಂದ್‌ ಆಗಿದ್ದರಿಂದ ಟರ್ಕಿಗೆ ವಿಶ್ವದಿಂದ ಬಂದ ಸಹಾಯ ಕೂಡ ಸರಿಯಾಗಿ ತಲುಪಿರಲಿಲ್ಲ. ಕಹ್ರಮನ್ಮಾರಾಸ್ ಮತ್ತು ಗಾಜಿಯಾಂಟೆಪ್ ನಡುವಿನ ಭೂಕಂಪದ ಕೇಂದ್ರಬಿಂದು ಬಳಿ ಭಾರಿ ವಿನಾಶ ಸಂಭವಿಸಿದೆ, ಅಲ್ಲಿ ಇಡೀ ನಗರದ ಬ್ಲಾಕ್‌ಗಳು ಅವಶೇಷಗಳಲ್ಲಿ ಬಿದ್ದಿವೆ.

ನನ್ನಮ್ಮ ಎಲ್ಲಿ: ಟರ್ಕಿ ಭೂಕಂಪದಲ್ಲಿ ಹೆತ್ತವರ ಕಳಕೊಂಡು ಪುಟ್ಟ ಮಗುವಿನ ಗೋಳು

ಹೃದಯವಿದ್ರಾವಕ ದೃಶ್ಯಗಳು: ಇನ್ನು ಅವಶೇಷಗಳ ಅಡಿಯಿಂದ ಜನರನ್ನು ಹೊರತೆಗೆಯುವ ಕೆಲಸ ಭರದಿಂದ ಸಾಗುತ್ತಿದೆ. ಆದರೆ, ತಜ್ಞರ ಪ್ರಕಾರ, ಘಟನೆ ನಡೆದ 72 ಗಂಟೆಗಳ ಬಳಿಕ ಅವಶೇಷಗಳ ಅಡಿಯಲ್ಲಿ ಬದುಕಿರುವ ವ್ಯಕ್ತಿಗಳ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಿದ್ದಾರೆ. ನವಜಾತ ಶಿಶುವನ್ನು ಅವಶೇಷಗಳ ಅಡಿಯಿಂದ ರಕ್ಷಣೆ ಮಾಡಿದ್ದು, ತಂದೆಯೊಬ್ಬ ತನ್ನ ಮಗಳು ಸತ್ತಿದ್ದರೂ ಆಕೆಯ ಕೈಯನ್ನು ಬಿಡಲು ನಿರಾಕರಿಸಿದಂಥ ಹೃದಯವಿದ್ರಾವಕ ದೃಶ್ಯಗಳು ಟರ್ಕಿ (Turkey)  ಹಾಗೂ ಸಿರಿಯಾದಲ್ಲಿ( Syria ) ಕಂಡಿವೆ.

click me!