ಅಮೆರಿಕಾದೊಂದಿಗೆ ಕೆನಡಾ ವಿಲೀನಕ್ಕೆ ಡೊನಾಲ್ಡ್ ಟ್ರಂಪ್ ಒಲವು

By Anusha Kb  |  First Published Jan 8, 2025, 12:11 PM IST

ಡೊನಾಲ್ಡ್ ಟ್ರಂಪ್ ಕೆನಡಾವನ್ನು ಅಮೆರಿಕದ 51ನೇ ರಾಜ್ಯವಾಗಿ ವಿಲೀನಗೊಳಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಆರ್ಥಿಕ ಒತ್ತಡದ ಮೂಲಕ ಈ ಗುರಿಯನ್ನು ಸಾಧಿಸುವುದಾಗಿ ಸೂಚಿಸಿದ್ದಾರೆ. ಕೆನಡಾ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.


ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಇನ್ನು ಕೆಲವೇ  ಕೆಲವು ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಡೊನಾಲ್ಡ್ ಟ್ರಂಪ್ ದೊಡ್ಡದೊಂಡು ಕಿರಿಕ್ ಮಾಡಿದ್ದು, ಆ ವಿಚಾರವೀಗ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಸ್ವತಂತ್ರ ದೇಶವಾದ ಕೆನಡಾವನ್ನು ಅಮೆರಿಕಾದ ಜೊತೆ ವಿಲೀನಗೊಳಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ಈಗ ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವಾಗಿ ಮಾಡಲು ಅವರು ಆ ದೇಶದ ಆರ್ಥಿಕ ಶಕ್ತಿಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕಾದ ಪಕ್ಕದಲೇ ಇರುವ ಕೆನಡಾವನ್ನು ಅಮೆರಿಕಾ ರಕ್ಷಿಸುತ್ತದೆ. ಅಲ್ಲಿನ ವ್ಯಾಪಾರ ಕೊರತೆಗಳನ್ನು ಎದುರಿಸುತ್ತದೆ ಅದಕ್ಕೆ ಪ್ರತಿಯಾಗಿ ಅಮೆರಿಕಾ ಏನು ತೆಗೆದುಕೊಳ್ಳುವುದಿಲ್ಲ ಮತ್ತು ಕೆನಡಾ ನಮ್ಮ ಕಾರುಗಳು ಅಥವಾ ಕೃಷಿ ಉತ್ಪನ್ನಗಳನ್ನು ಸ್ವೀಕರಿಸುವುದಿಲ್ಲ, ಎಂದು ಡೊನಾಲ್ಡ್ ಟ್ರಂಪ್  ಹೇಳಿದ್ದಾರೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿದೆ. ಕೆನಡಾವನ್ನು ಅಮೆರಿಕಾದ  51 ನೇ ರಾಜ್ಯವಾಗುವಂತೆ ಒತ್ತಡ ಹೇರಲು ಅವರು ಆರ್ಥಿಕ ಬಲವನ್ನು ಬಳಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಮೆರಿಕಾದ ಮಿಲಿಟರಿ ನೆರವು ಮತ್ತು ವ್ಯಾಪಾರ ಅಸಮತೋಲನದ ಬಗ್ಗೆ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ. ಕೆನಡಾ ಮತ್ತು ಮೆಕ್ಸಿಕೊದಿಂದ ಬರುವ ಸರಕುಗಳ ಮೇಲೆ ಭಾರೀ ಸುಂಕಗಳನ್ನು ಹಾಕಲು ಅವರು ಉದ್ದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

Tap to resize

Latest Videos

ಕೆನಡಾವನ್ನು ಜೊತೆ ಸೇರಿಸಿಕೊಂಡರೆ ಅಮೆರಿಕಾ ನಿಜವಾಗಿಯೂ ಏನಾದರೂ ಆಗಿರುತ್ತದೆ ಎಂದು ಹೇಳಿರುವ ಟ್ರಂಪ್ ಅಮೆರಿಕಾದ ಮಿಲಿಟರಿ ಸಹಾಯ ಹಾಗೂ ನೆರೆಯ ದೇಶದೊಂದಿಗೆ ವ್ಯವಹಾರದ ಕೊರತೆಯ ಬಗ್ಗೆ ಮಾತನಾಡಿದ್ದಾರೆ. ನಾವು ಒಳ್ಳೆಯ ನೆರೆಹೊರೆಯವರಾಗಿದ್ದೆವು. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಅಲ್ಲಿನ ಗ್ರೀನ್‌ಲ್ಯಾಂಡ್ ಅಥವಾ ಪನಾಮ ಕಾಲುವೆಯ ಮೇಲೆ ಅಮೆರಿಕಾದ ನಿಯಂತ್ರಣವನ್ನು ಪಡೆಯಲು ಮಿಲಿಟರಿ ಮುಖಾಮುಖಿ ನಡೆಯಬಹುದೇ ಎಂದು ಕೇಳಿದಾಗ, ಡೊನಾಲ್ಡ್ ಟ್ರಂಪ್ ಅವರು ತಾನು ಅದಕ್ಕೆ ಬದ್ಧರಾಗಲು ಹೋಗುವುದಿಲ್ಲ ಎಂದು ಹೇಳಿದ್ದಾರೆ. 

'ಈ ಎರಡರಲ್ಲಿ ನಾನು ನಿಮಗೆ ಭರವಸೆ ನೀಡಲು ಸಾಧ್ಯವಿಲ್ಲ, ಆದರೆ ನಾನು ಇದನ್ನು ಹೇಳಬಲ್ಲೆ, ಆರ್ಥಿಕ ಭದ್ರತೆಗಾಗಿ ನಮಗೆ ಅವರ ಅಗತ್ಯವಿದೆ ಎಂದು ಟ್ರಂಪ್ ಫ್ಲೋರಿಡಾದ ಮಾರ್-ಎ-ಲಾಗೊ ರೆಸಾರ್ಟ್‌ನಲ್ಲಿ ಹೇಳಿದ್ದಾರೆ.  ಟ್ರಂಪ್ ಅವರ ಮಾತಿಗೆ ಕೆನಡಾದ ನಿರ್ಗಮಿತ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರತಿಕ್ರಿಯಿಸಿದ್ದು, ಕೆನಡಾವು ಯುನೈಟೆಡ್ ಸ್ಟೇಟ್ಸ್‌ನ ಭಾಗವಾಗಲು ನರಕದಲ್ಲೂ ಅವಕಾಶವಿಲ್ಲ ಎಂದು ಹೇಳಿದ್ದಾರೆ. 

ಅಮೆರಿಕಾವೂ ಕೆನಡಾಗೆ ಸಬ್ಸಿಡಿ ನೀಡುತ್ತದೆ ಮತ್ತು ಅದರ ಉತ್ಪನ್ನಗಳಾದ ಕಾರುಗಳು ಮತ್ತು ಹಾಲನ್ನು ತೆಗೆದುಕೊಳ್ಳದೆಯೇ ಇರಬಹುದು. ಏಕೆಂದರೆ ಕೆನಡಾ, ನಮ್ಮ ಕಾರುಗಳು, ನಮ್ಮ ಕೃಷಿ ಉತ್ಪನ್ನಗಳು, ಯಾವುದನ್ನೂ ತೆಗೆದುಕೊಳ್ಳುವುದಿಲ್ಲ, ಆದ್ದರಿಂದ ನಾವು ಅವರ ಉತ್ಪನ್ನಗಳನ್ನು ತೆಗೆದುಕೊಳ್ಳುವುದಿಲ್ಲ. ನಾವು ಮೂಲತಃ ಕೆನಡಾವನ್ನು ರಕ್ಷಿಸುತ್ತೇವೆ. ಕೆನಡಾವನ್ನು ನೋಡಿಕೊಳ್ಳಲು ನಾವು ವರ್ಷಕ್ಕೆ ನೂರಾರು ಶತಕೋಟಿಗಳನ್ನು ಖರ್ಚು ಮಾಡುತ್ತಿದ್ದೇವೆ. ಆದರೆ ಅದಕ್ಕೆ ಪ್ರತಿಯಾಗಿ ನಮಗೆ ಏನು ಸಿಗುವುದಿಲ್ಲ, ನಾವು ವ್ಯಾಪಾರ ಕೊರತೆಯಿಂದ ನಷ್ಟ ಅನುಭವಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ. ಟ್ರಂಪ್ ಜನವರಿ 20ರಂದು ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರಕ್ಕೇರಲಿದ್ದಾರೆ. 

ಆದರೆ ಮೂಲತಃ ಅಮೆರಿಕಾ ಹಾಗೂ ಕೆನಡಾ ನಡುವೆ ಮೊದಲಿನಿಂದಲೂ ಒಳ್ಳೆಯ ಸಂಬಂಧವಿದೆ. ಆದರೆ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗಲೆಲ್ಲಾ ಎರಡು ದೇಶಗಳ ನಡುವೆ ಏನಾದರೊಂದು ಕಿರಿಕ್ ನಡೆಯುತ್ತದೆ. ಈ ಹಿಂದೆ ಡೊನಾಲ್ಡ್ ಟ್ರಂಪ್ 2016ರಲ್ಲಿ ಅಧಿಕಾರಕ್ಕೆ ಬಂದಾಗಲೂ ಇದೇ ರೀತಿಯ ಸಂಬಂಧ ಹಳಸುವ ಹೇಳಿಕೆ ನೀಡಿದ್ದರು. ಈ ಮಧ್ಯೆ ಇತ್ತೀಚೆಗೆ ಡೋನಾಳ್ಡ್ ಟ್ರಂಪ್ ಅಮೆರಿಕಾ ಹಾಗೂ ಕೆನಡಾ ವಿಲೀನವಾಗಿರುವಂತಹ ಮ್ಯಾಪೊಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.  ಇದು ಈಗ ಸಂಚಲನ ಸೃಷ್ಟಿಸಿದೆ. 

click me!