ಹಿಮಾಲಯದ ತಪ್ಪಲಲ್ಲಿರುವ ಟಿಬೆಟ್‌ನ ಡಿಂಗ್ರಿ ಕೌಂಟಿ ಅಥವಾ ಶಿಂಗಸ್ಟೆಯ ಕ್ಸಿಗಾಝೆಯಲ್ಲಿ ಬೆಳಗ್ಗೆ 9.5ಕ್ಕೆ ಸಂಭವಿಸಿದ ಈ ಭೂಕಂಪದ ತೀವ್ರತೆ 6.8 ತೀವ್ರತೆ ಇತ್ತು ಎಂದು ಚೀನಾ ಹೇಳಿಕೊಂಡರೆ, 7.1 ಆಗಿತ್ತು ಎಂದು ಅಮೆರಿಕದ ಭೂವಿಜ್ಞಾನ ಸೇವೆಗಳು ತಿಳಿಸಿವೆ. ಭೂಕಂಪ ಸಂಭವಿಸಿದ ಕೆಲ ಗಂಟೆಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಕಂಪನಗಳ ಅನುಭವ ಆಗಿದೆ.
ಬೀಜಿಂಗ್/ಕಾಠ್ಮಂಡು/ನವದೆಹಲಿ(ಜ.08): ಟಿಬೆಟ್-ನೇಪಾಳ ಗಡಿಯಲ್ಲಿರುವ ಜಗತ್ತಿನ ಅತಿ ಎತ್ತರದ ಶಿಖರ ಹಿಮಾಲಯದ ಮೌಂಟ್ ಎವರೆಸ್ಟ್ ತಪ್ಪಲಿನಸ ಕ್ಸಿಗಾಝೆ ಪಟ್ಟಣದಲ್ಲಿ ಮಂಗಳವಾರ ಸಂಭವಿಸಿದ ಭೂಕಂಪದಲ್ಲಿ 126 ಕ್ಕೂ ಹೆಚ್ಚು ಮಂದಿ ಬಲಿಯಾದ್ದು, 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಗೆ ನೆರೆಯ ನೇಪಾಳ, ಭಾರತದ ಬಿಹಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲೂ ಕಂಪನದ ಅನುಭವ ಆಗಿದ್ದು, ಜನ ಆತಂಕದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಟಿಬೆಟ್ ಗಡಗಡ:
ಹಿಮಾಲಯದ ತಪ್ಪಲಲ್ಲಿರುವ ಟಿಬೆಟ್‌ನ ಡಿಂಗ್ರಿ ಕೌಂಟಿ ಅಥವಾ ಶಿಂಗಸ್ಟೆಯ ಕ್ಸಿಗಾಝೆಯಲ್ಲಿ ಬೆಳಗ್ಗೆ 9.5ಕ್ಕೆ ಸಂಭವಿಸಿದ ಈ ಭೂಕಂಪದ ತೀವ್ರತೆ 6.8 ತೀವ್ರತೆ ಇತ್ತು ಎಂದು ಚೀನಾ ಹೇಳಿಕೊಂಡರೆ, 7.1 ಆಗಿತ್ತು ಎಂದು ಅಮೆರಿಕದ ಭೂವಿಜ್ಞಾನ ಸೇವೆಗಳು ತಿಳಿಸಿವೆ. ಭೂಕಂಪ ಸಂಭವಿಸಿದ ಕೆಲ ಗಂಟೆಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಕಂಪನಗಳ ಅನುಭವ ಆಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಭಾರತದ ಮಗ್ಗುಲಲ್ಲೇ ಸಿದ್ಧವಾಗುತ್ತಿದೆ ಚೀನಾದ 11.37 ಲಕ್ಷ ಕೋಟಿಯ ಜಲಾಸ್ತ್ರ!
ಪರಿಹಾರ ಕಾರ್ಯ ಚುರುಕು: ಡಿಂಗ್ರಿಕೌಂಟಿಯ ತಾಪಮಾನ ಸದ್ಯ -8 ಡಿಗ್ರಿ ಸೆಲ್ಸಿಯಸ್ ಇದ್ದು, ಸಂಜೆ ವೇಳೆಗೆ -18ಡಿಗ್ರಿ ಸೆಲ್ಸಿಯಸ್ ವರೆಗೆ ಕುಸಿಯುತ್ತದೆ ಎಂದು ಚೀನಾದ ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪನದಿಂದಾಗಿ ಈ ಗಡಿ ಪ್ರದೇಶದಲ್ಲಿ ಹಲವು ಮನೆಗಳು ಧರಾಶಾಹಿಯಾಗಿದ್ದು, ಅವಶೇಷಗಳಡಿ ಜನರನ್ನು ಮೇಲೆತ್ತುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ, ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಘಟನೆ ಬೆನ್ನಲ್ಲೇ ತುರ್ತು ಪರಿಹಾರ ಕಾರ್ಯಕ್ಕೆ ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್ ಆದೇಶಿಸಿದ್ದಾರೆ. ಜನ ಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದು, ಕಾಟನ್ ಟೆಂಟ್‌ಗಳು, ಕೋಟ್‌ಗಳು, ಬೆಡ್‌ಗಳು ಸೇರಿ ಸುಮಾರು 22 ಸಾವಿರ ವಿಪತ್ತು ಪರಿಹಾರ ವಸ್ತುಗಳನ್ನು ಸಂತ್ರಸ್ತರಿಗಾಗಿ ಸಾಗಿಸಲಾಗಿದೆ. 1500ಕ್ಕೂ ಹೆಚ್ಚು ಸ್ಥಳೀಯ ಅಗ್ನಿಶಾಮಕದಳದವರು ಮತ್ತು ಪರಿಹಾರ ಕಾರ್ಯಕರ್ತರನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ಭೂ ಕಂಪನದ ಕೇಂದ್ರ ಬಿಂದು ಡಿಂಗ್ರಿ ಕೌಂಟಿಯ ಟಿಸೋಗೋ ಪಟ್ಟಣದಲ್ಲಿದ್ದು, ಅಲ್ಲಿ 27 ಗ್ರಾಮಗಳಿವೆ. ಈ ಭಾಗದ ಜನಸಂಖ್ಯೆ 8 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.
ನೇಪಾಳದಲ್ಲೂ ಕಂಪನ:
ಟಿಬೆಟ್‌ನಲ್ಲಿ ಸಂಭವಿಸಿದ ಈ ಭೂಕಂಪನದ ಅನುಭವ ನೇಪಾಳದ ಗಡಿ ಜಿಲ್ಲೆಗಳಾದ ಕಾವ್ರೆಪಲಂಚುವೊಕ್, ಸಿಂಧು ಪಲಂಚೊಕ್ ಧಾಡಿಂಗ್ ಮತ್ತು ಸೋಲುಖುಂಬು ಜಿಲ್ಲೆಗಳಲ್ಲೂ ಕಾಣಿಸಿಕೊಂಡಿದ್ದು, ಜನ ಆತಂಕದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ. ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲೂ ಕಂಪನದ ಅನುಭವ ಆಗಿದ್ದು, ಜನ ಭಯಭೀತರಾಗಿ ಮನೆಯಿಂದ ಹೊರ ಬಂದಿದ್ದಾರೆ. ಕಟ್ಟಡಗಳು, ವಿದ್ಯುತ್ ತಂತಿಗಳು, ಮರಗಳು ಅಲುಗಾಡಿವೆ. ಆದರೆ, ನೇಪಾಳದಲ್ಲಿ ಈವರೆಗೆ ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ. ಶಂಕುವಾಸಭಾ ಜಿಲ್ಲೆಯಲ್ಲಿ ಎರಡಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಟಿಬೆಟನ್ನರ ಪವಿತ್ರ ನಗರ
ಡಿಂಗ್ರಿ ಅಥವಾ ಶಿಂಗಸ್ಚೆ ಕೌಂಟಿಯು ಟಿಬೆಟ್‌ನ ಪವಿತ್ರ ನಗರಗಳಲ್ಲಿ ಒಂದಾಗಿದೆ. ಭಾರತದ ಗಡಿಗೂ ಹೊಂದಿಕೊಂಡಂತಿರುವ ಈ ಕೌಂಟಿಯಲ್ಲಿ ದಲೈಲಾಮಾ ಬಳಿಕದ ಟಿಬೆಟ್‌ನ ಎರಡನೇ ಪ್ರಮುಖ ಬೌದ್ಧ ಧರ್ಮಗುರುವಾದ ಪಂಚೆನ್ ಲಾಮಾ ಅವರ ಸಾಂಪ್ರದಾಯಿಕ ಪೀಠ ಇದೆ. ಟಿಬೆಟ್‌ನ ಬೌದ್ಧ ಧರ್ಮಾನುಯಾಯಿಗಳ ಪಾಲಿಗೆ ಈ ಪೀಠ ಮಹತ್ವದ್ದಾಗಿದೆ.
ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂನಲ್ಲೂ ಕಂಪಿಸಿದ ಭೂಮಿ
ಟಿಟೆಬ್‌ನಲ್ಲಿ ಸಂಭವಿಸಿದ ಭೂಕಂಪನದ ಅನುಭವ ಭಾರತದಲ್ಲೂ ಆಗಿದೆ. ಮುಖ್ಯವಾಗಿ ಬಿಹಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಪಟ್ನಾ, ಗುವಾಹಟಿ ಮತ್ತಿತರ ಕಡೆ ಮುಂಜಾನೆ ಕಂಪನದ ಅನುಭವ ಆಗುತ್ತಿದ್ದಂತೆ ಜನ ಭಯಭೀತರಾಗಿ ಮನೆಯಿಂದ ಹೊರಗೋಡಿ ಬಂದಿದ್ದಾರೆ.
ವಿಶ್ವದಲ್ಲಿಯೇ ಸುಂದರ ಪ್ರದೇಶವಾಗಿರೋ ಟಿಬೆಟ್ ಮೇಲೆ ಎಂದಿಗೂ ವಿಮಾನ ಹಾರಾಟ ನಡೆಸಲ್ಲ ಯಾಕೆ?
ಮೌಂಟ್ ಎವರೆಸ್ಟ್‌ಗೆ ಪ್ರವೇಶ ನಿರ್ಬಂಧ
ಭೂಕಂಪನದ ಬೆನ್ನಲ್ಲೇ ಚೀನಾವು ಟಿಬೆಟ್ ಮೂಲಕ ಮೌಂಟ್ ಎವರೆಸ್ಟ್‌ನ ಪ್ರವೇಶವನ್ನು ಸಾರ್ವಜನಿಕರಿಗೆ ಸ್ಥಗಿತಗೊಳಿಸಿದೆ. ಮೌಂಟ್ ಕ್ವೋಮೊಲಂಗ್ಮಾ ಎಂದು ಕರೆಯಲ್ಪಡುವ ಈ ಶಿಖರದ ಮೂಲಕ ಟಿಬೆಟ್ ಮೂಲಕ ಮೌಂಟ್ ಎವರೆಸ್ಟ್‌ನ ಸೌಂದರ್ಯ ಕಣ್ತುಂಬಿಕೊಳ್ಳಬಹುದಾಗಿದೆ. ಇದಕ್ಕೆಂದೇ ವಿದೇಶಗಳಿಂದ ನೂರಾರು ಪ್ರವಾಸಿಗರು ಭೇಟಿ ಕೊಡುತ್ತಿದ್ದು, ಅದರ ಬೇಸ್ ಕ್ಯಾಂಪ್ ಡಿಂಗ್ರಿಕೌಂಟಿಯಲ್ಲೇ ಇದೆ. ಸ್ಥಳೀಯ ಅಧಿಕಾರಿಗಳ ಪ್ರಕಾರ, ಬೇಸ್ ಕ್ಯಾಂಪ್‌ನ ಸಿಬ್ಬಂದಿ ಮತ್ತು ಪ್ರವಾಸಿಗರು ಸುರಕ್ಷಿತವಾಗಿದ್ದಾರೆ.
ತೀವ್ರ ನೋವಾಗಿದೆ: ದಲೈ ಲಾಮ
ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪಕ್ಕೆ ಧರ್ಮಗುರು ದಲೈಲಾಮ ಕಂಬನಿ ಮಿಡಿದಿದ್ದಾರೆ. ಭೂಕಂಪದಿಂದ 95 ಮಂದಿ ಬಲಿಯಾದ ಸುದ್ದಿ ಕೇಳಿ ತುಂಬಾ ನೋವಾಗಿದೆ. ಈ ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ. ಭಾರೀ ಭೂಕಂಪದಿಂದ ಹಲವರು ಮೃಪಟ್ಟ, ಗಾಯಗೊಂಡ ಮತ್ತು ಆಸ್ತಿ-ಪಾಸ್ತಿಗೆ ಆದ ಹಾನಿಯ ಸುದ್ದಿ ಕೇಳಿ ತೀವ್ರ ನೋವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.