ಜಗತ್ತು ದ್ವಿಮುಖ ನೀತಿಗಳಿಂದ ತುಂಬಿದೆ: ಜೈಶಂಕರ್‌ ಕಿಡಿ

By Anusha KbFirst Published Sep 25, 2023, 7:54 AM IST
Highlights

ಜಗತ್ತು ಇಂದಿಗೂ ಸಾಕಷ್ಟು ದ್ವಿಮುಖ ನೀತಿಗಳಿಂದ ತುಂಬಿದೆ. ಪ್ರಭಾವಿ ಸ್ಥಾನಗಳನ್ನು ಅಲಂಕರಿಸಿರುವ ದೇಶಗಳು ಬದಲಾವಣೆಯ ಒತ್ತಡಕ್ಕೆ ಬಗ್ಗದೆ ಪಟ್ಟು ಹಿಡಿದು ಕುಳಿತಿವೆ. ತಮ್ಮ ಸಾಮರ್ಥ್ಯವನ್ನೇ ಅವು ಅಸ್ತ್ರವನ್ನಾಗಿ ಮಾಡಿಕೊಂಡಿವೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ (S. Jaishankar) ಕಿಡಿಕಾರಿದ್ದಾರೆ.

ನ್ಯೂಯಾರ್ಕ್‌: ಜಗತ್ತು ಇಂದಿಗೂ ಸಾಕಷ್ಟು ದ್ವಿಮುಖ ನೀತಿಗಳಿಂದ ತುಂಬಿದೆ. ಪ್ರಭಾವಿ ಸ್ಥಾನಗಳನ್ನು ಅಲಂಕರಿಸಿರುವ ದೇಶಗಳು ಬದಲಾವಣೆಯ ಒತ್ತಡಕ್ಕೆ ಬಗ್ಗದೆ ಪಟ್ಟು ಹಿಡಿದು ಕುಳಿತಿವೆ. ತಮ್ಮ ಸಾಮರ್ಥ್ಯವನ್ನೇ ಅವು ಅಸ್ತ್ರವನ್ನಾಗಿ ಮಾಡಿಕೊಂಡಿವೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ (S. Jaishankar) ಕಿಡಿಕಾರಿದ್ದಾರೆ.

ದಕ್ಷಿಣದ ಜಗತ್ತು (global south) ಬದಲಾವಣೆಗಾಗಿ ಒತ್ತಡ ಹೇರುತ್ತಿದೆ. ರಾಜಕೀಯ ಇಚ್ಛಾಶಕ್ತಿಗಿಂತ ಇಂದು ರಾಜಕೀಯ ಒತ್ತಡ ಹೆಚ್ಚಿದೆ. ಆದರೂ ಪ್ರಭಾವಿ ದೇಶಗಳು ಬದಲಾವಣೆಗೆ ತೆರೆದುಕೊಳ್ಳುತ್ತಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UN Security Council) ಬದಲಾಗಬೇಕು ಎಂಬ ಒತ್ತಡವಿದ್ದರೂ ಅವು ಅದನ್ನು ವಿರೋಧಿಸುತ್ತಿರುವುದೇ ಇದಕ್ಕೆ ಒಳ್ಳೆಯ ಉದಾಹರಣೆ. ಆರ್ಥಿಕವಾಗಿ ಶ್ರೀಮಂತವಾಗಿರುವ ದೇಶಗಳು ತಮ್ಮ ಈ ಶಕ್ತಿಯನ್ನೇ ಜಾಗತಿಕ ಸಂಸ್ಥೆಗಳ (global organizations) ಮೇಲೆ ಪ್ರಭಾವ ಬೀರುವುದಕ್ಕೂ ಅಸ್ತ್ರಗಳಂತೆ ಬಳಸುತ್ತಿವೆ ಎಂದು ಹೇಳಿದ್ದಾರೆ.

ನಿಜ್ಜರ್‌ ಹತ್ಯೆ ಬಗ್ಗೆ ಭಾರತದ ವಿರುದ್ಧ ಕೆನಡಾಕ್ಕೆ ಮಾಹಿತಿ ನೀಡಿದ್ದು ಅಮೆರಿಕ!

ದಕ್ಷಿಣ ಜಗತ್ತು ವರ್ಸಸ್‌ ಉತ್ತರ ಜಗತ್ತು:

ವಿಶ್ವಸಂಸ್ಥೆಯಲ್ಲಿನ (United Nation) ಭಾರತದ ಮಿಷನ್‌ ಹಾಗೂ ರಿಲಯನ್ಸ್‌ ಪ್ರತಿಷ್ಠಾನ (Reliance Foundation) ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಜೈಶಂಕರ್‌, ‘ಜಗತ್ತು ಬದಲಾವಣೆಯನ್ನು ಬಯಸುತ್ತಿದೆ. ಆದರೆ ಶ್ರೀಮಂತ ದೇಶಗಳು ಅದನ್ನು ವಿರೋಧಿಸುತ್ತಿವೆ. ಜಗತ್ತು ಇಂದಿಗೂ ಸಾಕಷ್ಟು ದ್ವಿಮುಖ ನೀತಿಗಳಿಂದ ಕೂಡಿದೆ. ಕೋವಿಡ್‌ ಕೂಡ ಇದಕ್ಕೆ ಉದಾಹರಣೆ. ದಕ್ಷಿಣ ಜಗತ್ತು ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಬಯಸುತ್ತಿದೆ. ಆದರೆ ಉತ್ತರ ಜಗತ್ತು ಅದಕ್ಕೆ ವಿರುದ್ಧವಾಗಿದೆ. ಇಂದು ಜಗತ್ತಿನ ಸಾಂಸ್ಕೃತಿಕ ವೈವಿಧ್ಯವನ್ನು ಗುರುತಿಸುವ ಅಗತ್ಯವಿದೆ. ಎಲ್ಲಾ ಸಂಸ್ಕೃತಿ ಹಾಗೂ ಸಂಪ್ರದಾಯಗಳಿಗೂ ಅವುಗಳಿಗೆ ಸಲ್ಲಬೇಕಾದ ನಿಜವಾದ ಗೌರವ ಸಲ್ಲಿಸಬೇಕಿದೆ’ ಎಂದು ಹೇಳಿದರು.

ದಕ್ಷಿಣ ಜಗತ್ತು ಸಿರಿಧಾನ್ಯಗಳನ್ನು ಸೇವಿಸುತ್ತದೆ. ಉತ್ತರದ ಜಗತ್ತು ಗೋಧಿ ಸೇವಿಸುತ್ತದೆ. ಆದರೆ ಗೋಧಿಯ ವಿಷಯದಲ್ಲಿರುವ ರಾಜಕೀಯ ಹಾಗೂ ಒತ್ತಡವನ್ನು ಎಲ್ಲರೂ ನೋಡುತ್ತಿದ್ದಾರೆ. ದಕ್ಷಿಣ ಜಗತ್ತಿನ ಸಂಸ್ಕೃತಿ, ಪರಂಪರೆ, ಸಂಗೀತ, ಸಾಹಿತ್ಯ, ಜನಜೀವನ ಹೀಗೆ ಸಾಕಷ್ಟು ಸಂಗತಿಗಳನ್ನು ಶ್ರೀಮಂತ ದೇಶಗಳು ಗೌರವಿಸಲು ನಿರಾಕರಿಸುತ್ತಿವೆ ಎಂದು ಜೈಶಂಕರ್‌ ಉದಾಹರಣೆ ನೀಡಿದರು.

click me!