ಪಹಲ್ಗಾಂ ದಾಳಿ ಬಳಿಕ ಲಷ್ಕರ್‌ ಎ ತೈಬಾ ಮುಖ್ಯಸ್ಥ ಹಫೀಝ್ ಸೈಯದ್ ಭದ್ರತೆ 4 ಪಟ್ಟು ಹೆಚ್ಚಿಸಿದ ಪಾಕ್

Published : May 01, 2025, 10:47 AM ISTUpdated : May 01, 2025, 10:51 AM IST
ಪಹಲ್ಗಾಂ ದಾಳಿ ಬಳಿಕ ಲಷ್ಕರ್‌ ಎ ತೈಬಾ ಮುಖ್ಯಸ್ಥ ಹಫೀಝ್ ಸೈಯದ್ ಭದ್ರತೆ 4 ಪಟ್ಟು ಹೆಚ್ಚಿಸಿದ ಪಾಕ್

ಸಾರಾಂಶ

ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿರುವ ಹಫೀಜ್ ಸಯೀದ್‌ಗೆ ಪಾಕಿಸ್ತಾನವು ಭದ್ರತೆಯನ್ನು ನಾಲ್ಕು ಪಟ್ಟು ಹೆಚ್ಚಿಸಿದೆ. ಸಯೀದ್ ನಿವಾಸದ ಸುತ್ತ ಸಶಸ್ತ್ರ ಸಿಬ್ಬಂದಿ, ಡ್ರೋನ್ ಕಣ್ಗಾವಲು ಸೇರಿದಂತೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ನವದೆಹಲಿ: ಇತ್ತೀಚೆಗೆ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ನಂಬಲಾದ ಲಷ್ಕರ್-ಎ-ತೈಬಾದ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಪಾಕಿಸ್ತಾನವು ಭದ್ರತೆಯನ್ನು ಸುಮಾರು ನಾಲ್ಕು ಪಟ್ಟು ಹೆಚ್ಚು ಮಾಡಿದೆ. ಎಂದು ಮೂಲಗಳಿಂದ ತಿಳಿದು ಬಂದಿದೆ. 

ಹೆಚ್ಚಿದ ಭದ್ರತಾ ಕ್ರಮಗಳಲ್ಲಿ ಪಾಕಿಸ್ತಾನ ಸಶಸ್ತ್ರ ಪಡೆಗಳ ಸಶಸ್ತ್ರ ಸಿಬ್ಬಂದಿಯ 24*7 ನಿಯೋಜನೆಯೂ ಸೇರಿದ್ದು, ಲಾಹೋರ್‌ನಲ್ಲಿರುವ ಸಯೀದ್‌ನ  ನಿವಾಸದ ಸುತ್ತಲೂ ಡ್ರೋನ್‌ ಸೇರಿದಂತೆ ವ್ಯಾಪಕ ಕಣ್ಗಾವಲು ಕ್ರಮಗಳನ್ನು ವಹಿಸಲಾಗಿದೆ ಎಂದು ವರದಿಯಾಗಿದೆ. ಏಪ್ರಿಲ್ 22 ರ ಪಹಲ್ಗಾಮ್ ದಾಳಿಯ ನಂತರ ಲಾಹೋರ್‌ನ ಜನನಿಬಿಡ ವಸತಿ ಪ್ರದೇಶವಾದ ಮೊಹಲ್ಲಾ ಜೋಹರ್ ಪಟ್ಟಣದಲ್ಲಿರುವ ಹಫೀಜ್ ಸಯೀದ್‌ನ ಮನೆಗೆ ಭಾರಿ ಬಿಗಿ ಭದ್ರತೆ ಒದಗಿಸಲಾಗಿದೆ. ಪಾಕಿಸ್ತಾನ ಸೇನೆ, ಐಎಸ್‌ಐ ಮತ್ತು ಲಷ್ಕರ್ ಕಾರ್ಯಕರ್ತರು ಜಂಟಿಯಾಗಿ ಅವರ ರಕ್ಷಣೆಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಮನೆಯ ಕಾಂಪೌಂಡ್‌ನಿಂದ ಸುತ್ತಲೂ ಮೇಲ್ವಿಚಾರಣೆ ಮಾಡಲು ಡ್ರೋನ್ ಹಾರಾಟ ನಿಯೋಜಿಸಲಾಗಿದೆ ಮತ್ತು 4 ಕಿಲೋಮೀಟರ್ ವ್ಯಾಪ್ತಿಯೊಳಗಿನ ರಸ್ತೆಗಳಲ್ಲಿ ಹೆಚ್ಚಿನ ರೆಸಲ್ಯೂಶನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆತನ ಮನೆಯ ಬಳಿ ಯಾವುದೇ ನಾಗರಿಕರ ಸಂಚಾರಕ್ಕೆ ಅವಕಾಶವಿಲ್ಲ ಮತ್ತು ಈ ಪ್ರದೇಶದಲ್ಲಿ ಇತರ ಡ್ರೋನ್‌ಗಳನ್ನು ಸಹ ನಿಷೇಧಿಸಲಾಗಿದೆ.
ಪಹಲ್ಗಾಮ್ ದಾಳಿಯ ಸ್ವಲ್ಪ ಸಮಯದ ನಂತರ ಈ ಉನ್ನತ ಭದ್ರತಾ ಪ್ರೋಟೋಕಾಲ್ ಅನ್ನು ಜಾರಿಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.  ಲಷ್ಕರ್-ಎ-ತೈಬಾದ ಒಂದು ಅಂಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಂಡಿದೆ. ದಿ ರೆಸಿಸ್ಟೆನ್ಸ್ ಫ್ರಂಟ್ ಸಾರ್ವಜನಿಕವಾಗಿ ಈ ದಾಳಿ ತಾನೇ ಮಾಡಿದ್ದು ಎಂದು ಹೇಳಿಕೊಂಡರೂ, ಹಫೀಜ್ ಸಯೀದ್ ದಾಳಿಯನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಭಾರತೀಯ ತನಿಖಾ ಸಂಸ್ಥೆಗಳ ನಂಬಿಕೆ ಆಗಿದೆ. ಪಹಲ್ಗಾಮ್ ಘಟನೆಯು ಭಾರತ ಮತ್ತು ಪಾಕಿಸ್ತಾನದ ನಡುವೆ ಹೊಸ ರಾಜತಾಂತ್ರಿಕ ಉದ್ವಿಗ್ನತೆ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದಿದೆ.

ಅಂದಹಾಗೆ ಪಾಕಿಸ್ತಾನ ಇಷ್ಟೊಂದು ಕಾಳಜಿಯಿಂದ ಕಾಯುತ್ತಿರುವ ಹಫೀಜ್ ಸಯೀದ್‌ನನ್ನು ವಿಶ್ವಸಂಸ್ಥೆ ಮತ್ತು ಅಮೆರಿಕವು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. ಈತನ ತಲೆಗೆ ಮತ್ತು 10 ಮಿಲಿಯನ್ ಯುಎಸ್ ಡಾಲರ್ ಬಹುಮಾನವನ್ನು ಘೋಷಿಸಿದೆ. ಹೀಗಿದ್ದರೂ ಈ ಸಯೀದ್ ಪಾಕಿಸ್ತಾನದಲ್ಲಿ ಬಹಿರಂಗವಾಗಿ ರಾಜಾರೋಷವಾಗಿ ತಿರುಗಾಡುತ್ತಾ ವಾಸಿಸುತ್ತಿದ್ದಾನೆ. ಅವನ ನಿವಾಸವು ಯಾವುದೇ ಅಡುಗುತಾಣದಲ್ಲಿ ಇಲ್ಲದೇ ಲಾಹೋರ್‌ನ ಹೃದಯಭಾಗದಲ್ಲಿ ನಾಗರಿಕರ ಮನೆಗಳಿಂದ ಸುತ್ತುವರೆದಿದೆ. ಅಲ್ಲದೇ ಇದು ಭಯೋತ್ಪಾದನೆಗೆ ಅನ್ನ ನೀರು ಹಾಕುತ್ತಾ ಪೋಷಿಸುತ್ತಿರುವ ಪಾಕಿಸ್ತಾನದ ನಿಜಬಣ್ಣ ಬಯಲು ಮಾಡಿದೆ. 

ಅಂಗ್ಲ ಮಾಧ್ಯಮವೊಂದು ವರದಿ ಮಾಡಿದಂತೆ ಉಪಗ್ರಹ ಚಿತ್ರಗಳು ಮತ್ತು ವೀಡಿಯೊಗಳಲ್ಲಿ ಈ ಮನೆಯೂ ಮೂರು ಪ್ರಮುಖ ರಚನೆಗಳನ್ನು ಒಳಗೊಂಡಿದೆ ಎಂಬುದನ್ನು ತೋರಿಸುತ್ತದೆ. ಸಯೀದ್‌ನ ತೀವ್ರ ಭದ್ರತೆ ಹೊಂದಿರುವ  ಈ ನಿವಾಸವೂ ಅವನ ಕಾರ್ಯಾಚರಣೆಯ ನೆಲೆಯಾಗಿ ಕಾರ್ಯನಿರ್ವಹಿಸುವ ದೊಡ್ಡ ಮಸೀದಿ ಮತ್ತು ಮದರಸಾ ಮತ್ತು ಹೊಸದಾಗಿ ನಿರ್ಮಿಸಲಾದ ಖಾಸಗಿ ಉದ್ಯಾನವನವನ್ನು ಹೊಂದಿದೆ. 

ಪಾಕಿಸ್ತಾನದ ಭದ್ರತಾ ಸಿಬ್ಬಂದಿಯ ಕಣ್ಗಾವಲಿನಲ್ಲಿ ಸಯೀದ್ ಆರಾಮವಾಗಿ ವಾಸಿಸುತ್ತಿರುವುದನ್ನು ಈ ದೃಶ್ಯಗಳು ತೋರಿಸುತ್ತವೆ, ಇದು ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಆರೋಪದ ಮೇಲೆ ಅವನು ಜೈಲಿನಲ್ಲಿದ್ದಾನೆ ಎಂಬ ಪಾಕಿಸ್ತಾನದ ಹೇಳಿಕೆಗಳಿಗೆ ತದ್ವಿರುರುದ್ಧವಾಗಿದೆ. ದೇಶದ ಗುಪ್ತಚರ ಸಂಸ್ಥೆ ಐಎಸ್‌ಐ ಕೂಡ ಸಯೀದ್‌ನ ಭದ್ರತೆಯನ್ನು ಪರಿಶೀಲಿಸಿದೆ ಮತ್ತು ಅವನ ನಿವಾಸವನ್ನು ಸಬ್ ಜೈಲು ಆಗಿ ಪರಿವರ್ತಿಸಲಾಗಿದೆ. ಈ ಮೂಲಕ ತಾಂತ್ರಿಕವಾಗಿ ಬಂಧನದಲ್ಲಿದ್ದಾಗ ಕನಿಷ್ಠ ನಿರ್ಬಂಧಗಳೊಂದಿಗೆ ಕಾರ್ಯನಿರ್ವಹಿಸಲು ಅವನಿಗೆ ಅವಕಾಶ ನೀಡಲಾಗುತ್ತಿದೆ.

2021 ರಲ್ಲಿ ಸಯೀದ್ ಮನೆಯ ಬಳಿ ಕಾರ್ ಬಾಂಬ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ ನಂತರ ಆತನ ಮನೆ ಸುತ್ತಲಿನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿತ್ತು. ಕಳೆದ ತಿಂಗಳು, ಆತನ ಆಪ್ತ ಸಹಾಯಕ ಅಬು ಕತಾಲ್ ಹತ್ಯೆಯ ನಂತರ ಆತನ ರಕ್ಷಣೆಯನ್ನು ಮತ್ತೆ ಬಿಗಿಗೊಳಿಸಲಾಗಿತ್ತು ಮತ್ತು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು ಆತನ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿವೆ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ