
ಅಫ್ಘಾನಿಸ್ತಾನದಲ್ಲಿ ಅನೈತಿಕತೆ ತಡೆಯಲು ವೈ-ಫೈ ಸೇವೆಯನ್ನೇ ಬಂದ್ ಮಾಡಿದ ತಾಲಿಬಾನ್
ಜಲಾಲಬಾದ್: 2021ರಲ್ಲಿ ಅಫ್ಘಾನಿಸ್ತಾನದ ಆಡಳಿತ ವಹಿಸಿಕೊಂಡಾಗಿನಿಂದ ಒಂದಲ್ಲ ಒಂದು ರೀತಿಯ ನಿರ್ಬಂಧ ನೀತಿಯನ್ನು ಅನುಸರಿಸುತ್ತಿರುವ ತಾಲಿಬಾನ್ ಸರ್ಕಾರ ಇದೀಗ ದೇಶಾದ್ಯಂತ ವೈಫೈ ಇಂಟರ್ನೆಟ್ ನಿಷೇಧಿಸಿದೆ. ಇಲ್ಲಿನ ಬಾಲ್ಖ್ ಪ್ರಾಂತ್ಯದಲ್ಲಿ ಅನೈತಿಕತೆಯನ್ನು ತಡೆಯುವ ನಿಟ್ಟಿನಲ್ಲಿ ವೈಫೈ ನಿಷೇಧಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಘೋಷಿಸಿದ್ದಾರೆ. ವೈಫೈಗೆ ಪರ್ಯಾಯವಾಗಿ ಬೇರೆ ವ್ಯವಸ್ಥೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದರಿಂದಾಗಿ ಸರ್ಕಾರಿ ಕಚೇರಿಗಳು, ಖಾಸಗಿ ನೆಲೆಗಳಲ್ಲಿ ವೈಫೈ ರದ್ದಾಗಿದೆ. ವೈಫೈ ನಿಷೇಧದ ಹೊರತು ಮೊಬೈಲ್ ಇಂಟರ್ನೆಟ್ ಸೇವೆ ಎಂದಿನಂತೆ ಕಾರ್ಯನಿರ್ವಹಿಸಲಿದೆ.
ಟ್ರಂಪ್ ತೆರಿಗೆ ಕಿರಿಕ್ ಬಳಿಕ ಮತ್ತೆ ವ್ಯಾಪಾರ ಒಪ್ಪಂದ ಚರ್ಚೆ ಸುಗಮ
ನವದೆಹಲಿ: ಭಾರತ-ಅಮೆರಿಕ ನಡುವಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಮಂಗಳವಾರ 6ನೇ ಸುತ್ತಿನ ಮಾತುಕತೆ ನಡೆದಿದ್ದು, ಆದಷ್ಟು ಬೇಗ ಅಂತಿಮ ನಿರ್ಧಾರ ಕೈಗೊಳ್ಳುವ ಭರವಸೆ ಎರಡೂ ಕಡೆಯಿಂದ ವ್ಯಕ್ತವಾಗಿದೆ. ಭಾರತದ ಆಮದುಗಳ ಮೇಲೆ ಅಧ್ಯಕ್ಷ ಟ್ರಂಪ್ ಶೇ.50ರಷ್ಟು ತೆರಿಗೆ ಹೇರಿರುವ ನಡುವೆಯೂ, ಆ ಬಗ್ಗೆ ಚರ್ಚೆ ನಡೆಸಲು ಅಮೆರಿಕಾದ ಸಂಧಾನಕಾರ ಬ್ರೆಂಡನ್ ಲಿಂಚ್ ಅವರ ತಂಡ ಭಾರತಕ್ಕೆ ಆಗಮಿಸಿದ್ದು, ರಾಜೇಶ್ ಅಗರ್ವಾಲ್ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಯಾವೆಲ್ಲಾ ತೀರ್ಮಾನ ಕೈಗೊಳ್ಳಲಾಯಿತು ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲ. ಆದರೆ ಮಾತುಕತೆ ಸಕಾರಾತ್ಮಕವಾಗಿತ್ತು ಎಂದು ಉಭಯ ದೇಶಗಳು ಹೇಳಿವೆ.
ಬಂಗಾಳದಲ್ಲೂ ಮತಪಟ್ಟಿ ಪರಿಷ್ಕರಣೆಗೆ ಆಯೋಗ ಸಿದ್ಧತೆ: ತರಬೇತಿ ಶುರು
ಕೋಲ್ಕತಾ: ಬಿಹಾರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಚುನಾವಣಾ ಆಯೋಗದ ವಿಶೇಷ ಮತಪಟ್ಟಿ ಪರಿಷ್ಕರಣೆಯನ್ನು ನೆರೆಯ ಪಶ್ಚಿಮ ಬಂಗಾಳದಲ್ಲಿಯೂ ನಡೆಸಲು ಆಯೋಗ ತಯಾರಿ ಆರಂಭಿಸಿದೆ. ಇದರ ಭಾಗವಾಗಿ ಮಂಗಳವಾರದಿಂದ ರಾಜ್ಯದಲ್ಲಿರುವ ಪ್ರತಿ ಜಿಲ್ಲೆಯ ಜಿಲ್ಲಾ ಉಪ ವಿಭಾಗಾಧಿಕಾರಿ ಮತ್ತು ಚುನಾವಣಾ ನೋಂದಣಾಧಿಕಾರಿಗಳಿಗೆ ತರಬೇತಿ ಆರಂಭಿಸಲಿದೆ. ಒಮ್ಮೆ ಎಡಿಎಂ ಮತ್ತು ಇಆರ್‌ಒಗಳಿಗೆ ತರಬೇತಿ ಪೂರ್ಣಗೊಂಡ ಬಳಿಕ ಅವರು ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಿದ್ದಾರೆ. ಬೂತ್ ಅಧಿಕಾರಿಗಳು ಜನರಿಗೆ ಕಾರ್ಯದ ಕುರಿತು ವಿವರಿಸಲಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದೆ.
ಇದನ್ನೂ ಓದಿ: ಬೆಟ್ಟಿಂಗ್ ಆ್ಯಪ್ ಪ್ರಚಾರ: ಉತ್ತಪ್ಪ, ಯುವಿ, ಸೋನು ಸೂದ್‌ಗೆ ಇಡಿ ಸಮನ್ಸ್: ಭೂವಂಚನೆ ಕೇಸಲ್ಲಿ ಯೂಸುಫ್ ಪಠಾಣ್
ಇದನ್ನೂ ಓದಿ: ದೇಗುಲದ ಹುಂಡಿ ಹಣ ಸತ್ಕಾರ್ಯಕ್ಕೆ ಬಳಸಿ ಮದುವೆ ಹಾಲ್‌ಗೆ ಅಲ್ಲ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಚಾಟಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ