15 ವರ್ಷ ಲಂಕಾ ಆಳಿದ ರಾಜಪಕ್ಸೆ ಕುಟುಂಬದ ಯುಗಾಂತ್ಯ

By Kannadaprabha News  |  First Published Jul 11, 2022, 9:56 AM IST
  • 15 ವರ್ಷ ಲಂಕಾ ಆಳಿದ ರಾಜಪಕ್ಸೆ ಕುಟುಂಬದ ಯುಗಾಂತ್ಯ
  • 3 ಅಣ್ಣ ತಮ್ಮಂದಿರು, ಒಬ್ಬ ಮಗ ಇನ್ನು ಅಧಿಕಾರಕ್ಕೇರುವುದು ಅಸಾಧ್ಯ
  • ಲಂಕಾ ಅಧ್ಯಕ್ಷನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ

ಕೊಲಂಬೊ (ಜು.11): ಒಂದೂವರೆ ದಶಕಗಳ ಕಾಲ ಶ್ರೀಲಂಕಾವನ್ನು ಹಾಗೂ ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷವನ್ನು ತಮ್ಮ ಕುಟುಂಬದ ಸ್ವತ್ತಿನಂತೆ ಮಾಡಿಕೊಂಡು ಆಳಿದ ರಾಜಪಕ್ಸೆ ಕುಟುಂಬವೀಗ ಅಕ್ಷರಶಃ ನೆಲಕಚ್ಚಿದೆ. ಈಗಿನ ಜನತಾ ಕ್ರಾಂತಿ ಹಾಗೂ ರಾಜಪಕ್ಸೆ ಕುಟುಂಬದ ವಿರುದ್ಧ ಇಡೀ ದೇಶ ದಂಗೆಯೆದ್ದಿರುವುದನ್ನು ನೋಡಿದರೆ ಅವರ ಯುಗಾಂತ್ಯವಾಗಿದೆ ಎಂದು ಶ್ರೀಲಂಕಾದ ರಾಜಕೀಯ ಪಂಡಿತರು ಹೇಳಿದ್ದಾರೆ.

ರಾಜಪಕ್ಸೆ ಕುಟುಂಬದ ಮೂವರು ಸಹೋದರರು ಲಂಕಾದಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದರು. ಸುಮಾರು 12 ವರ್ಷ ಅಧ್ಯಕ್ಷ ಅಥವಾ ಪ್ರಧಾನಿ ಹುದ್ದೆಯಲ್ಲಿದ್ದ ಹಿರಿಯ ಅಣ್ಣ ಮಹಿಂದಾ ರಾಜಪಕ್ಸೆಗೆ ಈಗ 76 ವರ್ಷ. ಜೊತೆಗೆ ಅನಾರೋಗ್ಯ. ಹೀಗಾಗಿ ಅವರ ರಾಜಕೀಯ ಜೀವನ ಮುಕ್ತಾಯವಾಗಿದೆ. 30 ತಿಂಗಳಿನಿಂದ ಅಧ್ಯಕ್ಷರಾಗಿದ್ದ 2ನೇ ಸಹೋದರ ಗೊಟಬಯ ರಾಜಪಕ್ಸೆಯನ್ನು ಜನರೇ ಓಡಿಸಿದ್ದಾರೆ. ಅವರಿಗೀಗ 73 ವರ್ಷ. ಅವರಂತೂ ಮತ್ತೆ ಅಧಿಕಾರಕ್ಕೆ ಬರಲು ಜನರು ಬಿಡುವುದಿಲ್ಲ. ಇನ್ನು, ವಿತ್ತ ಸಚಿವರಾಗಿ ಆರ್ಥಿಕತೆಯನ್ನು ಹದಗೆಡಿಸಿದ ಆರೋಪದ ಮೇಲೆ ರಾಜೀನಾಮೆ ನೀಡಿದ್ದ 3ನೇ ಸಹೋದರ ಬಸಿಲ್‌ ರಾಜಪಕ್ಸೆ (71) ಎಸ್‌ಎಲ್‌ಪಿಪಿ ಪಕ್ಷದಲ್ಲೂ ಸಾಕಷ್ಟುಹಿಡಿತ ಹೊಂದಿದ್ದ ರಾಜಕೀಯ ರಣತಂತ್ರಗಾರನಾಗಿದ್ದರು. ಆದರೆ ಅವರೀಗ ಎಲ್ಲರಿಗೂ ಶತ್ರುವಾಗಿದ್ದಾರೆ.

Tap to resize

Latest Videos

ನಾಪತ್ತೆಯಾಗಿರುವ ಶ್ರೀಲಂಕಾ ಅಧ್ಯಕ್ಷ ರಾಜಪಕ್ಷ ಗೌಪ್ಯ ಸ್ಥಳದಿಂದ ಮಹತ್ವದ ಘೋಷಣೆ!

ಹಾಗೆಯೇ, ಮಹಿಂದಾ ರಾಜಪಕ್ಸೆಯ ಪುತ್ರ ನಮಲ್‌ ರಾಜಪಕ್ಸೆ (36) ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದರು. ಆದರೆ ತಂದೆ ಹಾಗೂ ಚಿಕ್ಕಪ್ಪಂದಿರ ಅವಸಾನವು ಅವರ ಭವಿಷ್ಯವನ್ನೂ ಮಣ್ಣುಪಾಲು ಮಾಡಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ. ರಾಜಪಕ್ಸೆ ಕುಟುಂಬದಲ್ಲಿ ಇನ್ನೂ ಕೆಲ ರಾಜಕೀಯ ಆಕಾಂಕ್ಷೆಗಳಿರುವ ಸದಸ್ಯರಿದ್ದಾರೆ. ಆದರೆ ಇಡೀ ದೇಶವು ಕುಟುಂಬದ ವಿರುದ್ಧ ಬಂಡೆದ್ದಿರುವುದರಿಂದ ಅವರಾರ‍ಯರೂ ರಾಜಕೀಯಕ್ಕೆ ಬರುವ ದುಸ್ಸಾಹಸ ಮಾಡಲಾರರು ಎಂದು ಹೇಳಲಾಗಿದೆ.

ಲಂಕಾ ಅಧ್ಯಕ್ಷನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!
ಜನತಾ ಕ್ರಾಂತಿಗೆ ಬೆಚ್ಚಿ ಪಲಾಯನಗೈದಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮನೆಯಲ್ಲಿ ಆಕ್ರಮಣಕಾರರಿಗೆ ಕೋಟಿ ಕೋಟಿ ರು.ಗಳ ಹಣದ ಕಂತೆಗಳು ದೊರೆತಿವೆ. ಸುಮಾರು 4 ಲಕ್ಷ ಕೋಟಿ ರು. ಸಾಲದಲ್ಲಿರುವ ದೇಶದ ಅಧ್ಯಕ್ಷ ತನ್ನ ಅಧಿಕೃತ ನಿವಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಶೇಖರಿಸಿಟ್ಟಿರುವುದು ಎಲ್ಲ ಹುಬ್ಬೇರಿಸಿದೆ.

ರಾಜಪಕ್ಸೆ ಕುಟುಂಬದ ಭ್ರಷ್ಟಾಚಾರದಿಂದಲೇ ಶ್ರೀಲಂಕಾದ ಆರ್ಥಿಕತೆ ನೆಲಕಚ್ಚಿದೆ ಎಂದು ಜನರು ಆರೋಪಿಸುತ್ತಿದ್ದರು. ಅದಕ್ಕೆ ಪುಷ್ಟಿನೀಡುವಂತೆ ಗೊಟಬಯ ಮನೆಯಲ್ಲಿ ಭಾರಿ ಪ್ರಮಾಣದ ಹಣವನ್ನು ಬಚ್ಚಿಟ್ಟಿದ್ದು ಪತ್ತೆಯಾಗಿದೆ. ಮನೆಗೆ ನುಗ್ಗಿದ ಜನರು ಅವುಗಳನ್ನು ಲೆಕ್ಕಹಾಕುತ್ತಿರುವ ವಿಡಿಯೋ ವೈರಲ್‌ ಆಗಿದೆ. ಲೆಕ್ಕ ಮಾಡಿದ ನಂತರ ಹಣವನ್ನು ಜನರು ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ.

ರಿಸರ್ವ್ ಬ್ಯಾಂಕ್‌ ಸಾಥ್‌, 42000 ಕೋಟಿ ಲಂಕಾ ಹಣ ರಾಜಪಕ್ಸ ಕುಟುಂಬ ಗುಳುಂ!

ಗೊಟಬಯ ಅರಮನೆ ಈಗ ಪ್ರವಾಸಿ ತಾಣ!
ಅಜ್ಞಾತ ಸ್ಥಳಕ್ಕೆ ಪಲಾಯನಗೈದಿರುವ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆಯ ಅಧ್ಯಕ್ಷೀಯ ಅರಮನೆಯೀಗ ಪ್ರವಾಸಿ ತಾಣವಾಗಿದೆ. ದೇಶದ ಮೂಲೆ ಮೂಲೆಗಳಿಂದ ಬಂದಿರುವ ಜನರು ಅರಮನೆಯೊಳಗೆ ಹಾಗೂ ಸುತ್ತಮುತ್ತ ಓಡಾಡಿ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅವರಿಗೆ ಭದ್ರತಾ ಪಡೆಗಳು ನೀರು ಮತ್ತು ಆಹಾರದ ವ್ಯವಸ್ಥೆ ಮಾಡಿವೆ.

ಶನಿವಾರದ ಜನತಾ ದಂಗೆಯಲ್ಲಿ ಆಕ್ರಮಣಕಾರರು ಅರಮನೆಯೊಳಗೆ ನುಗ್ಗಿ, ಈಜುಕೊಳದಲ್ಲಿ ಈಜಾಡಿ, ಗೊಟಬಯ ಅವರ ವೈಭವದ ಜೀವನವನ್ನು ಸ್ವತಃ ಅನುಭವಿಸಿದ ವಿಡಿಯೋಗಳು ವೈರಲ್‌ ಆಗಿದ್ದವು. ಆ ವಿಡಿಯೋಗಳನ್ನು ನೋಡಿದ ನಂತರ ಅಲ್ಲಿಗೆ ನೂರಾರು ಜನರು ಎಲ್ಲೆಡೆಯಿಂದ ಆಗಮಿಸುತ್ತಿದ್ದಾರೆ. ಅನೇಕರು ಇನ್ನೂ ‘ಗೋಟ ಗೋಬ್ಯಾಕ್‌’ ಎಂಬ ಫಲಕ ಹಿಡಿದು ಅಲ್ಲೇ ನಿಂತಿದ್ದಾರೆ. ಅಧ್ಯಕ್ಷ ರಾಜೀನಾಮೆ ನೀಡುವವರೆಗೂ ತಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ನಾವು ಕಷ್ಟಪಡುತ್ತಿದ್ದರೆ ಇವರು ಮಜಾ ಮಾಡುತ್ತಿದ್ದರು
ಗೊಟಬಯ ರಾಜಪಕ್ಸೆಯ ಅಧ್ಯಕ್ಷೀಯ ಅರಮನೆಯೊಳಗೆ ನುಗ್ಗಿ ಅಲ್ಲಿನ ವೈಭವವನ್ನು ಕಣ್ಣಾರೆ ನೋಡಿದ ಲಂಕನ್ನರು ಇದೀಗ ರಾಷ್ಟ್ರೀಯ ನಾಯಕರ ವಿಲಾಸಿ ಜೀವನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದ್ದಾರೆ.‘ ದೇಶಕ್ಕೆ ಆರ್ಥಿಕ ಸಂಕಷ್ಟಎದುರಾಗಿದೆ ಎಂದು ಜನರೆಲ್ಲ ಪರದಾಡುವಂತೆ ಮಾಡಿದರು. ಆದರೆ ಇವರು ಮಾತ್ರ ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದು ಆಕ್ರಮಣಕಾರರು ಕಿಡಿಕಾರಿದ್ದಾರೆ.

‘ನಾನು ನನ್ನ ಜೀವನದಲ್ಲೇ ಇಂತಹ ಜಾಗ ನೋಡಿರಲಿಲ್ಲ. ನಾವು ಕಷ್ಟದಲ್ಲಿದ್ದಾಗ ಅಧಿಕಾರಸ್ಥರು ಐಷಾರಾಮದಲ್ಲಿ ಮುಳುಗಿದ್ದರು. ನಾವು ಮೋಸಹೋದೆವು’ ಎಂದು ಚಂದ್ರಾವತಿ ಎಂಬ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಆಕೆ ತನ್ನಿಬ್ಬರು ಮೊಮ್ಮಕ್ಕಳನ್ನು ಅಧ್ಯಕ್ಷರ ಅರಮನೆಗೆ ಕರೆತಂದು ಸೋಫಾದಲ್ಲಿ ಕೂರಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ.

ಶನಿವಾರದಂತೆ ಭಾನುವಾರವೂ ಜನರು ಗೊಟಬಯ ಅವರ ಅರಮನೆಯೊಳಗೆ ಓಡಾಡಿ, ಮೆತ್ತಗಿನ ಹಾಸಿಗೆಯಲ್ಲಿ ಮಲಗಿ, ಟ್ರೆಡ್‌ಮಿಲ್‌ ಬಳಸಿ, ಎಲ್ಲೆಡೆ ಸುತ್ತಾಡಿ ಮೋಜು ಮಾಡಿದ್ದಾರೆ.

click me!