ಕೊಲಂಬೊ(ಜು.10): ಶ್ರೀಲಂಕಾದಲ್ಲಿ ಪರಿಸ್ಥಿತಿ ಕೈಮೀರಿದೆ. ಆರ್ಥಿಕ ಸಂಕಷ್ಟ, ರಾಜಕೀಯ ಬಿಕ್ಕಟ್ಟು, ಆಹಾರದ ಕೊರತೆ, ಇಂಧನ ಸೇರಿದಂತೆ ಎಲ್ಲಾ ಸವಾಲುಗಳನ್ನು ಎದುರಿಸಬೇಕಿದ್ದ ಶ್ರೀಲಂಕಾ ಸರ್ಕಾರ ಪಲಾಯನ ಮಾಡಿದೆ. ಪ್ರಧಾನಿ ರನಿಲ್ ವಿಕ್ರಮಸಂಘೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಇತ್ತ ಅಧ್ಯಕ್ಷ ಗೊಟಬಯ ರಾಜಪಕ್ಷ ನಾಪತ್ತೆಯಾಗಿದ್ದಾರೆ. ಇದೀಗ ಗೌಪ್ಯ ಸ್ಥಳದಿಂದ ಮಹತ್ವದ ಘೋಷಣೆ ಮಾಡಿದ್ದಾರೆ. ಲಂಕಾ ಜನರಿಗೆ ಗ್ಯಾಸ್ ಪೂರೈಕೆ ಮಾಡಲು ಆದೇಶ ಹೊರಡಿಸಿದ್ದಾರೆ.
ಇಂಧನ ಸಮಸ್ಯೆಯಿಂದ ಹೈರಾಣಾಗಿರುವ ಜನರಿಗೆ ಅಡುಗೆ ಅನಿಲ ಸರಿಯಾಗಿ ಪೂರೈಕೆ ಮಾಡಲು ಆದೇಶ ನೀಡಿದ್ದಾರೆ. ಶ್ರೀಲಂಕಾಗೆ 3,700 ಮೆಟ್ರಿಕ್ ಟನ್ ಗ್ಯಾಸ್ ಆಗಮಿಸಿದೆ. ಆಮದು ಮಾಡಿಕೊಂಡಿರುವ ಗ್ಯಾಸ್ ಸರಿಯಾಗಿ ವಿತರಣೆ ಮಾಡುವಂತೆ ಸೂಚಿಸಿದ್ದಾರೆ. ಈಗಾಗಲೇ ವಿದೇಶದಿಂದ ಆಮದು ಮಾಡಿರುವ ಇಂಧನವನ್ನು ವಿತರಣೆ ಮಾಡಲಾಗಿದೆ. ಜನರು ಪ್ರತಿಭಟನೆಯನ್ನು ಕೈಬಿಡಬೇಕು. ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರದ ಜೊತೆ ಕೈಜೋಡಿಸಬೇಕು ಎಂದು ರಾಜಪಕ್ಷ ಮನವಿ ಮಾಡಿದ್ದಾರೆ.
ಶ್ರೀಲಂಕಾ ಸ್ಥಿತಿ ಬಗ್ಗೆ IMF ಕಣ್ಣು, ರಾಜಕೀಯ ಸಂಕಷ್ಟ ನಿವಾರಣೆಯಾಗುತ್ತಿದ್ದಂತೆಯೇ ಬೇಲ್‌ಔಟ್ ಡೀಲ್ ಚರ್ಚೆ!
ಇತ್ತ ಭಾರತದ ಶ್ರೀಲಂಕಾ ಪರಿಸ್ಥಿತಿ ಕುರಿತು ಭಾರತ ಪ್ರತಿಕ್ರಿಯೆ ನೀಡಿದೆ. ಶ್ರೀಲಂಕಾ ಜನರ ಜೊತೆ ಭಾರತ ನಿಲ್ಲಲಿದೆ. ಈ ವರ್ಷ ಶ್ರೀಲಂಕಾ 3.8 ಬಿಲಿಯನ್ ಅಮೆರಿಕನ್ ಡಾಲರ್ ನೆರವು ಘೋಷಿಸಿದ್ದೇವೆ. ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾ ಜೊತೆ ಆತ್ಮೀಯ ಸಂಬಂಧವಿದೆ. ಶ್ರೀಲಂಕಾ ಪರಿಸ್ಥಿತಿ ಕುರಿತು ತೀವ್ರ ನಿಗಾ ಇಡಲಾಗಿದೆ. ಶೀಘ್ರದಲ್ಲೇ ಆರ್ಥಿಕ ಸಂಕಷ್ಟದಿಂದ ಲಂಕಾ ಹೊರಬರಲು ನಿರಂತರ ನರೆವು ನೀಡಲಾಗುತ್ತದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.
ಕೊಲಂಬೋದಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ನಿವಾಸಕ್ಕೆ ಶನಿವಾರ ರಾತ್ರಿ ಬೆಂಕಿ ಹಚ್ಚಲಾಗಿದ್ದು, ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಅಶ್ರುವಾಯ ಸಿಡಿಸಿದರೂ ಪ್ರತಿಭಟನಾಕಾರರು ಮಣಿಯಲಿಲ್ಲ. ನುಗ್ಗಿ ಗಲಾಟೆ ದಾಂಧಲೆ ಮಾಡಿ ಬೆಂಕಿ ಹಚ್ಚಿದ್ದಾರೆ.
ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆಗೆ ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಲಂಕಾ ಜನರು ಅಧ್ಯಕ್ಷರ ಮನೆಗೆ ಮುತ್ತಿಗೆ ಹಾಕಿ ನಡೆಸಿದ ಪ್ರತಿಭಟನೆಗೆ ಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿ ಹೋರಾಟಗಾರರಿಗೆ ಹುರಿದುಂಬಿಸಿದ್ದಾರೆ. ಮತ್ತೊಂದೆಡೆ ಮಾಜಿ ಕ್ರಿಕೆಟಿಗರಾದ ಕುಮಾರ ಸಂಗಕ್ಕರ ಹಾಗೂ ಮಹೇಲಾ ಜಯವರ್ಧನೆ ಅವರೂ ಪ್ರತಿಭಟನೆಗೆ ಬೆಂಬಲ ಘೋಷಿಸಿದ್ದಾರೆ.
ಶ್ರೀಲಂಕಾದಲ್ಲಿ ಜನತಾ ದಂಗೆ, ರಾತ್ರೋರಾತ್ರಿ ಅಧ್ಯಕ್ಷ ಎಸ್ಕೇಪ್!
ಇದೇ ವೇಳೆ, ಗೊಟಬಯ ರಾಜಪಕ್ಸ ಅವರಿಗೆ ಟಾಂಗ್ ನೀಡಿ ಟ್ವೀಟ್ ಮಾಡಿರುವ ಜಯಸೂರ್ಯ ಅವರು, ‘ವಿಫಲ ನಾಯಕನನ್ನು ಕಿತ್ತೊಗೆಯಬೇಕು ಎಂಬ ಏಕೈಕ ಗುರಿಗಾಗಿ ನಮ್ಮ ದೇಶ ಈ ಪರಿ ಒಗ್ಗೂಡಿರುವುದನ್ನು ನನ್ನ ಜೀವಮಾನದಲ್ಲೇ ಎಂದಿಗೂ ನೋಡಿಲ್ಲ. ನಿಮ್ಮ ಮನೆಯ ಗೋಡೆಯ ಮೇಲೆ ಸಂದೇಶ ಬರೆಯಲಾಗಿದೆ. ದಯಮಾಡಿ ಹೊರಟುಬಿಡಿ ಗೊಟಬಯ’ ಎಂದು ಅವರು ಆಗ್ರಹಿಸಿದ್ದಾರೆ.
‘ನಾನು ಯಾವತ್ತಿಗೂ ಶ್ರೀಲಂಕಾ ಜನರ ಜತೆಗೆ ನಿಲ್ಲುತ್ತೇನೆ. ಶೀಘ್ರವೇ ವಿಜಯೋತ್ಸವ ಮಾಡುತ್ತೇವೆ. ಯಾವುದೇ ಉಲ್ಲಂಘನೆಗಳನ್ನು ಮಾಡದೆ ಇದು ಮುಂದುವರಿಯಬೇಕು. ವಶಪಡಿಸಿಕೊಳ್ಳುವ ಕೆಲಸ ಮುಗಿದಿದೆ. ನಿಮ್ಮ (ಗೊಟಬಯ) ಕೋಟೆ ಬಿದ್ದುಹೋಗಿದೆ’ ಎಂದು ಹೇಳಿದ್ದಾರೆ.