ರಿಸರ್ವ್ ಬ್ಯಾಂಕ್‌ ಸಾಥ್‌, 42000 ಕೋಟಿ ಲಂಕಾ ಹಣ ರಾಜಪಕ್ಸ ಕುಟುಂಬ ಗುಳುಂ!

By Kannadaprabha News  |  First Published Jul 11, 2022, 6:10 AM IST
  • ರಾಜಪಕ್ಸ ಕುಟುಂಬದ  ಹಣ ವಿದೇಶಕ್ಕೆ ಸಾಗಿಸಲು ಆರ್‌ಬಿಐ ನೆರವು
  • ಶ್ರೀಲಂಕಾ ಸರ್ಕಾರದಲ್ಲಿ ರಾಜಪಕ್ಸ ಕುಟುಂಬದ ಐವರಿದ್ದರು
  • ಗೊಟಬಯ ರಕ್ಷಣಾ ಸಚಿವರಾಗಿದ್ದಾಗಲೂ ಭಾರಿ ಭ್ರಷ್ಟಾಚಾರ, ಲಂಕಾ ಬಜೆಟ್‌ನ 70% ಹಣ  ಸಂಬಂಧಿಕರ ಖಾತೆಗೆ
  • ಮೂಲಸೌಕರ‍್ಯ ಅಭಿವೃದ್ಧಿ ಹೆಸರಿನಲ್ಲಿ ಚೀನಾದಿಂದಲೂ ಸಾಲ
  • ಬಹುತೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರದೆ ಹಣ ಕಬಳಿಕೆ
  •  ಅವರ ಸೋದರ ಬಸಿಲ್‌ ‘ಮಿಸ್ಟರ್‌ 10%’ ಎಂದೇ ಕುಖ್ಯಾತಿ

ಕೊಲಂಬೋ: (ಜು.11): ಒಂದೂವರೆ ದಶಕದಿಂದ ಶ್ರೀಲಂಕಾವನ್ನು ಆಳುತ್ತಿರುವ ರಾಜಪಕ್ಸ ಕುಟುಂಬ ಅನಾಮತ್ತು 42 ಸಾವಿರ ಕೋಟಿ ರು. (5.3 ಬಿಲಿಯನ್‌ ಡಾಲರ್‌)ಗೂ ಹೆಚ್ಚಿನ ಹಣವನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಿಸಿದೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಶ್ರೀಲಂಕಾ ಹಿಂದೆಂದೂ ಕೇಳರಿಯದ ತೀವ್ರ ಆರ್ಥಿಕ ದುಸ್ಥಿತಿಗೆ ತಲುಪಲು ಹಾಗೂ ಜನರು ಉಪವಾಸ ಬೀಳುವಂತಾಗಲು ಇದು ಕೂಡ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಇನ್ನೊಂದು ಆಘಾತಕಾರಿ ಸಂಗತಿಯೆಂದರೆ ರಾಜಪಕ್ಸ ಕುಟುಂಬದ ಇಂಥದ್ದೊಂದು ದುಷ್ಕೃತ್ಯಕ್ಕೆ ಆ ಕುಟುಂಬಕ್ಕೆ ಆಪ್ತರಾಗಿದ್ದ, ರಿಸರ್ವ್ ಬ್ಯಾಂಕ್‌ ಆಫ್‌ ಶ್ರೀಲಂಕಾದ ಗವರ್ನರ್‌ ಅಜಿತ್‌ ನಿರ್ವದ್‌ ಕಬ್ರಾಲ್‌ ನೇರವಾಗಿ ಸಹಾಯ ಮಾಡಿದ್ದರು ಎನ್ನಲಾಗಿದೆ.

Tap to resize

Latest Videos

ಭರ್ಜರಿ ಲೂಟಿ: ಒಂದು ಹಂತದಲ್ಲಿ ಶ್ರೀಲಂಕಾ ಸರ್ಕಾರದಲ್ಲಿ ರಾಜಪಕ್ಸ ಕುಟುಂಬದ 5 ಜನರು (ಗೊಟಬಯ, ಮಹಿಂದಾ, ಬಸಿಲ್‌, ಚಮಲ್‌ ಮತ್ತು ನಮಲ್‌) ವಿವಿಧ ಹುದ್ದೆ ಅಲಂಕರಿಸಿದ್ದರು. ಆಗ ಇವರು ಹೊಂದಿದ್ದ ಸಚಿವ ಖಾತೆಗಳು, ಲಂಕಾ ಬಜೆಟ್‌ನಲ್ಲಿ ಶೇ.70ರಷ್ಟುಪಾಲು ಹೊಂದಿದ್ದವು. ಈ ಹಂತದಲ್ಲಿ ರಾಜಪಕ್ಸ ಕುಟುಂಬ, ಗವರ್ನರ್‌ ಕಬ್ರಾಲ್‌ ನೆರವಿನೊಂದಿಗೆ ಅಕ್ರಮವಾಗಿ ವಿದೇಶಕ್ಕೆ 5.31 ಶತಕೋಟಿ ಡಾಲರ್‌ (42000 ಕೋಟಿ ರುಪಾಯಿ) ಹಣವನ್ನು ಸಾಗಿಸಿತ್ತು ಎಂಬ ಗಂಭೀರ ಆರೋಪವಿದೆ.

ನಾಪತ್ತೆಯಾಗಿರುವ ಶ್ರೀಲಂಕಾ ಅಧ್ಯಕ್ಷ ರಾಜಪಕ್ಷ ಗೌಪ್ಯ ಸ್ಥಳದಿಂದ ಮಹತ್ವದ ಘೋಷಣೆ!

ಮಹಿಂದ ರಾಜಪಕ್ಸ ಲಂಕಾ ಅಧ್ಯಕ್ಷರಾಗಿದ್ದ ವೇಳೆ ಚೀನಾದಿಂದ ಮೂಲಸೌಕರ್ಯ ಯೋಜನೆಗೆ ಭಾರೀ ಸಾಲ ಪಡೆಯಲಾಗಿತ್ತು. ಆದರೆ ಈ ಪೈಕಿ ಬಹುತೇಕ ಯೋಜನೆಗಳು ಹುಸಿಯಾಗಿದ್ದವು. ಈ ಯೋಜನೆಗಳ ಮೂಲಕ ಭಾರೀ ಹಣ ಲೂಟಿ ಮಾಡಲಾಗಿದೆ ಎಂಬ ಆರೋಪವಿದೆ. ಇನ್ನು ಗೊಟಬಯ ಅವರು ರಕ್ಷಣಾ ಸಚಿವಾಗಿದ್ದ ವೇಳೆ ಭಾರೀ ಭ್ರಷ್ಟಾಚಾರ ಎಸಗಿದ ಆರೋಪವಿದೆ. ಬಸಿಲ್‌ ಅವರನ್ನು ಮಿಸ್ಟರ್‌ 10 ಪರ್ಸೆಂಟ್‌ ಎಂದೇ ಕರೆಯಲಾಗುತ್ತಿತ್ತು. ಎಲ್ಲಾ ಸರ್ಕಾರಿ ಯೋಜನೆಗಳಿಗೂ ಶೇ.10ರಷ್ಟುಕಮೀಷನ್‌ ಪಡೆಯುತ್ತಿದ್ದ ಆರೋಪ ಇವರ ಮೇಲಿದೆ. ಇನ್ನು ಚಮಲ್‌ ಮತ್ತು ನಮಲ್‌ ಕೂಡಾ ಅಕ್ರಮ ಹಣ ವರ್ಗಾವಣೆಯ ಗಂಭೀರ ಆರೋಪಕ್ಕೆ ತುತ್ತಾಗಿದ್ದರು. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತಾದರೂ, ಇವರದೇ ಸರ್ಕಾರ ಬಂದ ಬಳಿಕ ಎಲ್ಲಾ ಪ್ರಕರಣಗಳನ್ನು ಕೈಬಿಡಲಾಗಿತ್ತು.

ಹೀಗಾಗಿ ರಾಜಪಕ್ಸ ಕುಟುಂಬದ ಭ್ರಷ್ಟಾಚಾರ ಮಿತಿ ಮೀರುತ್ತಿದ್ದಂತೆ ದೇಶದ ಜನರು ದಂಗೆಯೆದ್ದಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತಾ ಸಾಗಿದ ನಂತರ ಜನರಿಗೆ ಜೀವನ ನಡೆಸುವುದೂ ದುಸ್ತರವಾಗಿದೆ. ಶ್ರೀಲಂಕಾ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಲು ರಾಜಪಕ್ಸ ಕುಟುಂಬವು ದೇಶದ ಬೊಕ್ಕಸವನ್ನು ಸ್ವಂತಕ್ಕೆ ಬಳಸಿಕೊಂಡಿದ್ದೇ ನೇರ ಕಾರಣ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ದ್ವೀಪದೇಶ ಶ್ರೀಲಂಕಾ ಅಯೋಮಯ: ನೆರೆಮನೆ ಅರಾಜಕತೆ!

ಲಂಕಾ ಅಧ್ಯಕ್ಷನ ಮನೆಯಲ್ಲಿ ಸಿಕ್ತು ಕೋಟಿ ಕೋಟಿ ಹಣ!: ಜನತಾ ಕ್ರಾಂತಿಗೆ ಬೆಚ್ಚಿ ಪಲಾಯನಗೈದಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಮನೆಯಲ್ಲಿ ಆಕ್ರಮಣಕಾರರಿಗೆ ಕೋಟಿ ಕೋಟಿ ರು.ಗಳ ಹಣದ ಕಂತೆಗಳು ದೊರೆತಿವೆ. ಸುಮಾರು 4 ಲಕ್ಷ ಕೋಟಿ ರು. ಸಾಲದಲ್ಲಿರುವ ದೇಶದ ಅಧ್ಯಕ್ಷ ತನ್ನ ಅಧಿಕೃತ ನಿವಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಶೇಖರಿಸಿಟ್ಟಿರುವುದು ಎಲ್ಲ ಹುಬ್ಬೇರಿಸಿದೆ.

ರಾಜಪಕ್ಸೆ ಕುಟುಂಬದ ಭ್ರಷ್ಟಾಚಾರದಿಂದಲೇ ಶ್ರೀಲಂಕಾದ ಆರ್ಥಿಕತೆ ನೆಲಕಚ್ಚಿದೆ ಎಂದು ಜನರು ಆರೋಪಿಸುತ್ತಿದ್ದರು. ಅದಕ್ಕೆ ಪುಷ್ಟಿನೀಡುವಂತೆ ಗೊಟಬಯ ಮನೆಯಲ್ಲಿ ಭಾರಿ ಪ್ರಮಾಣದ ಹಣವನ್ನು ಬಚ್ಚಿಟ್ಟಿದ್ದು ಪತ್ತೆಯಾಗಿದೆ. ಮನೆಗೆ ನುಗ್ಗಿದ ಜನರು ಅವುಗಳನ್ನು ಲೆಕ್ಕಹಾಕುತ್ತಿರುವ ವಿಡಿಯೋ ವೈರಲ್‌ ಆಗಿದೆ. ಲೆಕ್ಕ ಮಾಡಿದ ನಂತರ ಹಣವನ್ನು ಜನರು ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ.

click me!