
ಆತ ಬಹು ಕೋಟಿ ಮೌಲ್ಯದ ಸಂಸ್ಥೆಯೊಂದರ ಮಾಲೀಕ ಆದರೆ ಆನೆಗೆ ಆತ ಹುಲು ಮಾನವನಷ್ಟೇ ತುಳಿದು ಸಾಯಿಸಿಯೇ ಬಿಟ್ಟಿದೆ. ಹೌದು ದಕ್ಷಿಣ ಆಫ್ರಿಕಾದ ಪ್ರಮುಖ ಗೇಮ್ ರಿಸರ್ವ್‌ಗಳಲ್ಲಿ ಒಂದಾದ ಗೋಂಡ್ವಾನ ಖಾಸಗಿ ಗೇಮ್ ರಿಸರ್ವ್‌ನ ಮಾಲೀಕನನ್ನು ಆನೆಯೊಂದು ತುಳಿದು ಸಾಯಿಸಿ ಬಿಟ್ಟಿದೆ. 39 ವರ್ಷದ ಬಹುಕೋಟ್ಯಾಧಿಪತಿ ಫ್ರಾಂಕೋಯಿಸ್ ಕ್ರಿಶ್ಟಿಯಾನ್ ಕಾರ್ನಾಡಿ ಎಂಬುವವರು ತಮ್ಮದೇ ಗೇಮ್ ರಿಸರ್ವ್‌ನಲ್ಲಿ ಆನೆ ದಾಳಿಗೆ ಬಲಿಯಾಗಿದ್ದಾರೆ. ಪ್ರವಾಸಿಗರಿದ್ದ ಲಾಡ್ಜ್‌ಗಳ ಬಳಿಯಿಂದ ಆನೆಗಳನ್ನು ಬೇರೆಡೆ ಸಾಗುವುದಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾಗ ಆನೆಯೊಂದು ಕೋಪಗೊಂಡು ಈತನನ್ನು ತುಳಿದು ಸಾಯಿಸಿದೆ.
ವರದಿಗಳ ಪ್ರಕಾರ ಫ್ರಾಂಕೋಯಿಸ್ ಅವರನ್ನು ನೆಲಕ್ಕೆ ಕೆಡವಿದ ಆನೆ ಬಳಿಕ ಹಲವು ಬರೀ ತುಳಿದು ಸಾಯಿಸಿ ಬಿಟ್ಟಿದೆ. ಫ್ರಾಂಕೋಯಿಸ್ ಅವರನ್ನು ಬದುಕಿಸಲು ಅಲ್ಲೇ ಇದ್ದ ರೇಂಜರ್ಸ್‌ಗಳ ಪ್ರಯತ್ನಪಟ್ಟರು, ಉಗ್ರರೂಪಿ ಆನೆಯ ಮುಂದೆ ಅವರ ಪ್ರಯತ್ನವೆಲ್ಲಾ ಧೂಳೀಪಟವಾಗಿದೆ. ಫ್ರಾಂಕೋಯಿಸ್ ಅವರನ್ನು ಆನೆಗಳು ತಿವಿದು, ಪೊದೆಯೊಳಗೆ ಎಳೆದುಕೊಂಡು ಹೋಗಿ, ದೇಹದ ಅಂಗಾಂಗಗಳನ್ನು ತುಂಡು ಮಾಡಿವೆ. ಈ ದಾಳಿ ವೇಲೆ ಬೋನಿ ಎಂಬ ಮಾಜಿ ಸರ್ಕಸ್ ಆನೆಯೂ ಇತ್ತು ಎಂದು ವರದಿಯಾಗಿದೆ.
ಫ್ರಾಂಕೋಯಿಸ್ ಅವರು ಸೈಲಿಕ್ಸ್ ಗ್ರೂಪ್ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಲೀಕರು ಕೂಡ ಆಗಿದ್ದರು. ಅವರಿಗೆ ಆನೆಗಳು ಹಾಗೂ ಪರಿಸರ ಬಗ್ಗೆ ಅತೀವವಾದ ಆಸಕ್ತಿ ಇತ್ತು. ಅವುಗಳ ಫೋಟೊಗಳನ್ನು ತೆಗೆಯುವುದಕ್ಕಾಗಿ ಅವರು ಆಗಾಗ ಅವುಗಳ ಬಳಿ ಹೋಗುತ್ತಿದ್ದರು. ಜೀವಶಾಸ್ತ್ರದಲ್ಲಿ ಅವರು ಡಿಗ್ರಿ ಪಡೆದಿದ್ದು, ಪ್ರಾಣಿಗಳ ಅಧ್ಯಯನ, ಕಾಮರ್ಸ್ ಹಾಗೂ ಮಾರ್ಕೆಟಿಂಗ್‌ನಲ್ಲಿಯೂ ಅವರು ತರಬೇತಿ ಪರಿಣಿತರಾಗಿದ್ದರು. ಮಹತ್ವಾಕಾಂಕ್ಷಿ ಉದ್ಯಮಿಯಾಗಿದ್ದ ಅವರು ಪರಿಸರ ಬಗ್ಗೆ ಅತೀವವಾದ ಆಸಕ್ತಿಯನ್ನು ಹೊಂದಿದ್ದರು ಎಂದು ಅವರ ಸಂಸ್ಥೆಯ ಸಿಬ್ಬಂದಿ ಹೇಳಿಕೊಂಡಿದ್ದಾರೆ.
ಫ್ರಾಂಕೋಯಿಸ್ ಅವರ ಹಠಾತ್ ಸಾವಿನಿಂದ ಅವರ ಸಂಸ್ಥೆಯ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಆಘಾತಗೊಂಡಿದ್ದಾರೆ. ಫ್ರಾಂಕೋಯಿಸ್ ಅವರು ಓರ್ವ ನಾಯಕನಿಗಿಂತ ಹೆಚ್ಚಾಗಿ ಅವರೊಬ್ಬ ಮೆಂಟರ್ ಆಗಿದ್ದರು. ಅವರ ಈ ಹಠಾತ್ ಸಾವು ಆಘಾತ ನೀಡಿದೆ ಮೂವರು ಮಕ್ಕಳ ತಂದೆ ಹಾಗೂ ಪತ್ನಿಗೆ ಒಳ್ಳೆಯ ಗಂಡನಾಗಿದ್ದ ಅವರು ಒಬ್ಬ ಅತ್ಯುತ್ತಮ ವ್ಯಕ್ತಿಯಾಗಿದ್ದರು ಎಂದು ಅವರ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದಕ್ಷಿಣ ಆಫ್ರಿಕಾದ ಪ್ರಸಿದ್ಧ ಗಾರ್ಡನ್ ರೂಟ್‌ನಲ್ಲಿರುವ ಮಾಸೆಲ್ ಕೊಲ್ಲಿಯ ಬಳಿಯಿರುವ ಐಷಾರಾಮಿ ಪಂಚತಾರಾ ಸಫಾರಿ ಲಾಡ್ಜ್ ಆದ ಗೊಂಡ್ವಾನಾ ಪ್ರೈವೇಟ್ ಗೇಮ್ ರಿಸರ್ವ್, ಬಿಗ್ ಫೈವ್ ಅನುಭವಗಳನ್ನು ಬಯಸುವ ಸೆಲೆಬ್ರಿಟಿಗಳು ಮತ್ತು ಪ್ರವಾಸಿಗರಿಗೆ ಜನಪ್ರಿಯ ತಾಣವಾಗಿದೆ. ಇಲ್ಲಿ ಪ್ರತಿ ಜೋಡಿಯಿಂದ ಪ್ರತಿ ರಾತ್ರಿಗೆ ಸುಮಾರು 900 ಪೌಂಡ್ ದರ ಪಡೆಯಲಾಗುತ್ತದೆ. ಈ ಘಟನೆ ನಡೆದ ಸಂದರ್ಭದಲ್ಲಿ ಈ ಗೊಂಡ್ವಾನಾ ರಿಸರ್ವ್ ಸಂಪೂರ್ಣವಾಗಿ ಬುಕ್ ಆಗಿತ್ತು ಎಂದು ತಿಳಿದು ಬಂದಿದೆ.
ಅಂದಹಾಗೆ ಈ ಘಟನೆಯೂ ಇದೇ ಮೊದಲಲ್ಲ, ಇದು ಕೇವಲ ಒಂದು ವರ್ಷದಲ್ಲಿ ಇಲ್ಲಿ ನಡೆದ ಎರಡನೇ ಮಾರಕ ಆನೆ ದಾಳಿಯಾಗಿದೆ. ಮಾರ್ಚ್ ಇದಕ್ಕೂ ಮೊದಲು 36 ವರ್ಷದ ಸಿಬ್ಬಂದಿ ಸದಸ್ಯ ಡೇವಿಡ್ ಕಾಂಡೇಲಾ ಎಂಬುವವರು ಇಕೋ ಟೆಂಟ್ ಲಾಡ್ಜ್ ಪ್ರದೇಶದ ಮೂಲಕ ಆನೆ ಹಿಂಡನ್ನು ಮುನ್ನಡೆಸುತ್ತಿದ್ದಾಗ ಆನೆ ದಾಳಿಗೆ ಬಲಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ