
ನ್ಯೂಯಾರ್ಕ್: ಅಮೆರಿಕಾದಲ್ಲಿ ವಲಸೆ ಬಂದವರ ವಿರುದ್ಧ ಮೂಲ ನಿವಾಸಿಗಳ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದಲೂ ಅಕ್ರಮ ವಲಸಿಗರನ್ನು ಅವರವರ ದೇಶಕ್ಕೆ ಗಡೀಪಾರು ಮಾಡುವ ಮೂಲಕ ಸುದ್ದಿಯಾಗಿದ್ದರು. ಈ ನಡುವೆ ಟ್ರಂಪ್ ಅವರ ಎಲ್ಲಾ ನೀತಿಗಳನ್ನು ಬಲವಾಗಿ ಸಮರ್ಥಿಸಿಕೊಂಡು ಬಂದಿದ್ದ ಬಲಪಂಥೀಯ ನಾಯಕ ರಾಷ್ಟ್ರೀಯವಾದಿ ಚಾರ್ಲಿ ಕಿರ್ಕ್ ಅವರ ದಾರುಣ ಹತ್ಯೆಯ ಬಳಿಕ ಅಮೆರಿಕಾದಲ್ಲಿ ವಲಸೆ ಬಂದವರ ವಿರುದ್ಧ ಆಕ್ರೋಶ ಇನ್ನಷ್ಟು ಹೆಚ್ಚಾಗ್ತಿದೆ. ಇದರ ಮಧ್ಯೆ ಭಾರತ ಹಾಗೂ ಅಮೆರಿಕಾ ದೇಶಗಳ ನಡುವಿನ ಹಳಸಿದ ಸಂಬಂಧ ಕೂಡ ಅಮೆರಿಕಾದಲ್ಲಿ ಭಾರತೀಯರನ್ನು ಅಲ್ಲಿನ ಜನ ಕೆಂಗಣ್ಣಿನಿಂದ ನೋಡುವಂತೆ ಮಾಡಿದೆ. ಇದರೆ ಮಧ್ಯೆ ಕೆಲ ದಿನಗಳ ಹಿಂದಷ್ಟೇ ಭಾರತೀಯ ವ್ಯಕ್ತಿಯೊಬ್ಬರನ್ನು ಅಲ್ಲಿನ ಕೆಲಸದವನೋರ್ವ ತಲೆ ಕಡಿದು ಕೊಂದ ಘಟನೆಯೂ ನಡೆದಿತ್ತು. ಇದೆಲ್ಲದರ ನಡುವೆ ಈಗ ಅಮೆರಿಕಾದ ವಲಸೆ ಅಧಿಕಾರಿಗಳು ಕಳೆದ 30 ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ ಸಿಖ್ ಮಹಿಳೆಯನ್ನು ಬಂಧಿಸಿದ್ದಾರೆ. ಇದು ಆ ಮಹಿಳೆಯ ಕುಟುಂಬದವರು ಹಾಗೂ ಸಿಖ್ ಸಮುದಾಯದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
30 ವರ್ಷಗಳಿಂದ ಅಮೆರಿಕಾದಲ್ಲಿ ನೆಲೆಸಿದ್ದ ಸಿಖ್ ಮಹಿಳೆಯ ಬಂಧನ
ಅಮೆರಿಕಾದ ಉತ್ತರ ಕ್ಯಾಲಿಫೋರ್ನಿಯಾದ ಪೂರ್ವ ಕೊಲ್ಲಿಯಲ್ಲಿ ಕಳೆದ 30 ವರ್ಷಗಳಿಂದ ನೆಲೆಸಿದ್ದ 73 ವರ್ಷದ ಸಿಖ್ ಮಹಿಳೆ ಹರ್ಜಿತ್ ಕೌರ್ ಎಂಬುವವರನ್ನು ಅಲ್ಲಿನ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಅಮೆರಿಕಾದ ಏಜೆನ್ಸಿಯೊಂದಿಗೆ ಎಂದಿನಂತೆ ನಿಯಮಿತ ತಪಾಸಣೆಗೆ ಬಂದಿದ್ದ ವೇಳೆ ಹರ್ಜಿತ್ ಕೌರ್ ಅವರನ್ನು ಅಲ್ಲಿನ ವಲಸೆ ಹಾಗೂ ಕಸ್ಟಮ್ಸ್ ಜಾರಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಬರ್ಕಿಸೈಡ್ ಎಂಬ ನ್ಯೂಸ್ ಪೋರ್ಟಲ್ ವರದಿ ಮಾಡಿದೆ.
ವಲಸೆ ಅಧಿಕಾರಿಗಳಿಂದ ಸಿಖ್ ಮಹಿಳೆಯ ಬಂಧನಕ್ಕೆ ಸಿಖ್ ಸಮುದಾಯದ ಆಕ್ರೋಶ
ಈ ಘಟನೆಯನ್ನು ಖಂಡಿಸಿ ಆಕೆಯ ಕುಟುಂಬದವರು ಸೇರಿದಂತೆ ಅವರ ಸಮುದಾಯದ ನೂರಕ್ಕೂ ಹೆಚ್ಚು ಜನ ಪ್ರತಿಭಟನೆ ನಡೆಸಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಐಸಿಇ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಗೆ ಬರುವಂತೆ ಕೇಳಿದ ನಂತರ ಹರ್ಜಿತ್ ಕೌರ್ ಅವರನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧನದ ನಂತರ ಆಕೆಯನ್ನು ಬೇಕರ್ಸ್‌ಫೀಲ್ಡ್‌ನಲ್ಲಿರುವ ಬಂಧನ ಕೇಂದ್ರಕ್ಕೆ ಕರೆದೊಯ್ಯಲಾಯಿತು ಎಂದು ನ್ಯೂಸ್ ಪೋರ್ಟಲ್ ವರದಿ ಮಾಡಿದೆ.
2012ರಲ್ಲಿಯೇ ಆಶ್ರಯ ಕೋರಿ ಹರ್ಜಿತ್ ಕೌರ್ ಸಲ್ಲಿಸಿದ್ದ ಅರ್ಜಿ ನಿರಾಕರಣೆ
ಆದರೆ ಅಮೆರಿಕಾದ ABC7 Newsನ ವರದಿಯ ಪ್ರಕಾರ, ಹರ್ಜಿತ್ ಕೌರ್ ಬಳಿ ಯಾವುದೇ ದಾಖಲೆಗಳಿಲ್ಲ. ಅವರು 1992 ರಲ್ಲಿ ಭಾರತದಿಂದ ಇಬ್ಬರು ಗಂಡು ಮಕ್ಕಳೊಂದಿಗೆ ಒಂಟಿ ತಾಯಿಯಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದರು. 2012 ರಲ್ಲಿಯೇ ಅಲ್ಲಿನ ಆಡಳಿತ ಆಶ್ರಯ ಕೋರಿ ಹರ್ಜಿತ್ ಕೌರ್ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿದೆ. ಆದರೂ ಅವರು ಅಲ್ಲೇ ನೆಲೆಸಿದ್ದು, ಕಳೆದ 13 ವರ್ಷಗಳಿಗೂ ಹೆಚ್ಚು ಕಾಲದಿಂದ ಪ್ರತಿ ಆರು ತಿಂಗಳಿಗೊಮ್ಮೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಐಸಿಇಗೆ ತಮ್ಮ ಇರುವಿಕೆಯ ಬಗ್ಗೆ ನಿಷ್ಠೆಯಿಂದ ವರದಿ ಮಾಡಿದ್ದಾರೆ ಎಂದು ಅವರ ಸೊಸೆ ಮಾಂಜಿ ಕೌರ್ ಹೇಳಿದ್ದಾರೆ.
ಆಡಳಿತವೂ ಅವಳ ಪ್ರಯಾಣ ದಾಖಲೆಗಳನ್ನು ಪಡೆಯುವವರೆಗೆ ಕೆಲಸದ ಪರವಾನಗಿಯೊಂದಿಗೆ ಆಡಳಿತದ ಮೇಲ್ವಿಚಾರಣೆಯಲ್ಲಿ ಆಕೆ ಅಮೆರಿಕದಲ್ಲಿಯೇ ಉಳಿಯಬಹುದು ಎಂದು ಐಸಿಇ ಅವರಿಗೆ ಭರವಸೆ ನೀಡಿತು. ಆದರೆ ಈಗ ಹರ್ಜಿತ್ ಕೌರ್ ಬಂಧನವಾಗಿದ್ದು, ಕೌರ್ ಅವರ ಕುಟುಂಬ, ಇನ್ಡಿವಿಸಿಬಲ್ ವೆಸ್ಟ್ ಕಾಂಟ್ರಾ ಕೋಸ್ಟಾ ಕೌಂಟಿ ಮತ್ತು ಸಿಖ್ ಸೆಂಟರ್ ಹರ್ಜಿತ್ ಕೌರ್ ಬಂಧನ ಖಂಡಿಸಿ ಪ್ರತಿಭಟನೆಯನ್ನು ಆಯೋಜಿಸಿದ್ದವು. ಈ ಪ್ರತಿಭಟನೆಯಲ್ಲಿ ಯುಎಸ್ ಪ್ರತಿನಿಧಿ ಜಾನ್ ಗರಮೆಂಡಿ ಅವರ ಸಿಬ್ಬಂದಿ ಸದಸ್ಯರು, ಸ್ಥಳೀಯ ಚುನಾಯಿತ ಅಧಿಕಾರಿಗಳು ಮತ್ತು ಇತರ ರಾಜಕೀಯ ಮುಖಂಡರು ಸಹ ಭಾಗವಹಿಸಿದ್ದರು ಎಂದು ಬರ್ಕ್ಲಿಸೈಡ್ ವರದಿ ಮಾಡಿದೆ.
ಕೌರ್ ಅವರನ್ನು ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಸುವಂತೆ ವಿನಂತಿಸಿ ತಮ್ಮ ಕಚೇರಿಯು ಐಸಿಇಗೆ ವಿಚಾರಣೆಯನ್ನು ಕಳುಹಿಸಿದೆ ಎಂದು ಅಮೆರಿಕಾ ಕಾಂಗ್ರೆಸ್‌ನ ಸದಸ್ಯ ಗರಮೇಂಡಿ ಹೇಳಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ತಮ್ಮ ವಲಸೆ ನೀತಿಯಲ್ಲಿ ಅತ್ಯಂತ ಕೆಟ್ಟದ್ದರಲ್ಲಿ ಕೆಟ್ಟದ್ದನ್ನು ಅನುಸರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈ ಆಡಳಿತವು 73 ವರ್ಷದ ಮಹಿಳೆಯನ್ನು ಬಂಧಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಯಾವುದೇ ಕ್ರಿಮಿನಲ್ ದಾಖಲೆಯಿಲ್ಲದ ಸಮುದಾಯದ ಗೌರವಾನ್ವಿತ ಸದಸ್ಯೆಯಾದ ಹರ್ಜಿತ್ ಕೌರ್, 13 ವರ್ಷಗಳಿಗೂ ಹೆಚ್ಚು ಕಾಲ ಪ್ರತಿ ಆರು ತಿಂಗಳಿಗೊಮ್ಮೆ ಐಸಿಇಗೆ ನಿಷ್ಠೆಯಿಂದ ವರದಿ ಮಾಡಿದ್ದಾರೆ. ನಮ್ಮ ಕಚೇರಿ ಅವರ ಪ್ರಕರಣ ಮತ್ತು ಅವರ ಕುಟುಂಬವನ್ನು ಬೆಂಬಲಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಕೌರ್ ಅವರನ್ನು ಬಿಡುಗಡೆ ಮಾಡಲು ತಮ್ಮ ನಗರವು ಫೆಡರಲ್ ಸರ್ಕಾರದ ಮೇಲೆ ಹೇಗೆ ಒತ್ತಡ ಹೇರಬಹುದು ಎಂಬುದನ್ನು ಅವರು ಪರಿಶೀಲಿಸುತ್ತಿದ್ದಾರೆ ಎಂದು ಸ್ಥಳೀಯ ಕೌನ್ಸಿಲ್ ಸದಸ್ಯ ಡಿಲ್ಲಿ ಭಟ್ಟಾರೈ ಹೇಳಿದ್ದಾರೆ.
ಕೌರ್, ಸ್ಥಳೀಯ ಭಾರತೀಯ ಬಟ್ಟೆ ಅಂಗಡಿಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕೌರ್ ಅವರ ಬಂಧನದಿಂದ ಅವರ ಆರೋಗ್ಯದ ಬಗ್ಗೆ ಅವರ ಕುಟುಂಬ ಕಳವಳ ವ್ಯಕ್ತಪಡಿಸಿದೆ. ಕೌರ್ ಅವರಿಗೆ ಥೈರಾಯ್ಡ್ ಕಾಯಿಲೆ, ಮೈಗ್ರೇನ್, ಮೊಣಕಾಲು ನೋವಿನಂತಹ ಹಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದು, ಬಂಧನದಿಂದ ಅವರ ಜೀವಕ್ಕೆ ಅಪಾಯವಿದೆ ಎಂದು ಕುಟುಂಬವದವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಂ, ಏಷ್ಯನ್ನರ ವಲಸೆ ವಿರೋಧಿಸಿ ಲಂಡನ್‌ನಲ್ಲಿ ಭಾರಿ ಪ್ರತಿಭಟನೆ ಎಲಾನ್ ಮಸ್ಕ್ ಹೇಳಿದ್ದೇನು?
ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ಭಯಾನಕ ಘಟನೆ : ನಿದ್ರಿಸುತ್ತಿದ್ದ ಮಕ್ಕಳ ಕಣ್ಣಿಗೆ ಪೆವಿಕ್ವಿಕ್ ಹಾಕಿದ ಸಹಪಾಠಿ : 8 ಮಕ್ಕಳ ಕಣ್ಣಿಗೆ ಹಾನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ