ಉಕ್ರೇನ್(ಮಾ.01): ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯನ್ನು ಅಂತ್ಯಗೊಳಿಸಲು ವಿಶ್ವಮಟ್ಟದಲ್ಲೇ ಒತ್ತಾಯಗಳು ಕೇಳಿಬರುತ್ತಿದೆ. ಇದರ ನಡುವೆ ರಷ್ಯಾ ಹಾಗೂ ಉಕ್ರೇನ್ ಮೊದಲ ಸುತ್ತಿನ ಮಾತುಕತೆ ನಡಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಎರಡನೇ ಸುತ್ತಿನ ಮಾತುಕತೆಗೆ ಒಪ್ಪಿಗೆ ಸೂಚಿವೆ. ನಾಳೆ(ಮಾ.02) ರಂದು ಉಭಯ ದೇಶಗಳು ಸಂಧಾನ ಸಭೆ ನಡೆಸಲಿದೆ ಎಂದು ರಷ್ಯಾದ TASS ನ್ಯೂಸ್ ಏಜನ್ಸಿ ವರದಿ ಮಾಡಿದೆ.
ಉಕ್ರೇನ್‌ನಲ್ಲಿ ಅಮಾಯಕ ನಾಗರೀಕರು, ಮಕ್ಕಳ ಹತ್ಯೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ವರದಿಗಳ ಪ್ರಕಾರ 5,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇದರಲ್ಲಿ 14 ಪುಟ್ಟ ಮಕ್ಕಳು ಸೇರಿದ್ದಾರೆ. ಹೀಗಾಗಿ ಯುದ್ಧ ಅಂತ್ಯಗೊಳಿಸಲು ಒತ್ತಡ ಕೇಳಿಬರುತ್ತಿದೆ. ಭಾರತ ಸೇರಿದಂತೆ ಬಹುತೇಕ ದೇಶಗಳು ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಸೂಚಿಸಿದೆ. ಯುದ್ಧ ಪರಿಹಾರವಲ್ಲ ಎಂದಿದೆ. ಇದರ ನಡುವೆ ಇದೀಗ ಎರಡನೇ ಸುತ್ತಿನ ಮಾತುಕತೆ ಫಲಪ್ರದವಾಗಲಿದೆಯಾ ಅನ್ನೋ ಚರ್ಚೆಗಳು ಶುರುವಾಗಿದೆ.
Ukraine Crisis ನಮ್ಮ ಮೇಲೆ ರಷ್ಯಾ ದಾಳಿ ಮೊಘಲರು ರಜಪೂತರ ಮೇಲೆ ನಡೆಸಿದ ಹತ್ಯಾಕಾಂಡಕ್ಕೆ ಸಮ, ಉಕ್ರೇನ್ ರಾಯಭಾರಿ!
ಉಕ್ರೇನ್ ಷರತ್ತು ವಿಧಿಸಿ ಸಂಧಾನ ಸಭೆಯಲ್ಲಿ ಪಾಲ್ಗೊಂಡಿತ್ತು. ಯುದ್ಧ ನಿಲ್ಲಿಸಿ ರಷ್ಯಾ ಸೇನೆ ಸಂಪೂರ್ಣವಾಗಿ ಉಕ್ರೇನ್‌ನಿಂದ ಹಿಂದೆ ಸರಿಯಬೇಕು ಎಂದು ಷರತ್ತು ವಿಧಿಸಿತ್ತು. ಇದೀಗ ಪೊಲೆಂಡ್ ಹಾಗೂ ರಷ್ಯಾ ಗಡಿಯಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ.
ಮೊದಲ ಸಂಧಾನ ಅಪೂರ್ಣ!
6 ದಿನಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಸೋಮವಾರ ನೆರೆಯ ಬೆಲಾರಸ್‌ನಲ್ಲಿ ಸಂಧಾನ ಮಾತುಕತೆ ನಡೆಸಿವೆ. ಸುಮಾರು ಮೂರೂವರೆ ಗಂಟೆಗಳ ಕಾಲ ಮಾತುಕತೆ ನಡೆದಿದೆಯಾದರೂ, ಎರಡೂ ನಿಯೋಗಗಳು ಪರಸ್ಪರ ಕೆಲವು ಷರತ್ತು ವಿಧಿಸಿಕೊಂಡ ಕಾರಣ ಚರ್ಚೆ ಅಪೂರ್ಣವಾಗಿದೆ. ಹೀಗಾಗಿ ಬೆಲಾರಸ್-ಪೋಲೆಂಡ್ ಗಡಿಯಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ.
Ukraine crisis: ನವೀನ್ ಸಾವು, ಪರಿಸ್ಥಿತಿ ಕುರಿತು ಮೋದಿ ಉನ್ನತ ಮಟ್ಟದ ಸಭೆ!
ಏತನ್ಮಧ್ಯೆ, ಅತ್ತ ಸಂಧಾನ ನಡೆದಿದ್ದರೆ, ಇತ್ತ ಸಂಘರ್ಷಮಯ ಪರಿಸ್ಥಿತಿ ಮುಂದುವರಿದಿದೆ. ರಷ್ಯಾ ವಿರೋಧದ ನಡುವೆಯೇ ಐರೋಪ್ಯ ಒಕ್ಕೂಟದ ಸದಸ್ಯತ್ವ ಪಡೆಯಲು ಉಕ್ರೇನ್ ಅರ್ಜಿ ಸಲ್ಲಿಸಿದೆ. ಇದೇ ವೇಳೆ, ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಉಕ್ರೇನ್ ಪ್ರತಿನಿಧಿ, ಬೇಷರತ್ತಾಗಿ ಯುದ್ಧ ನಿಲ್ಲಿಸುವಂತೆ ರಷ್ಯಾಗೆ ತಾಕೀತು ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಪಾಶ್ಚಿಮಾತ್ಯ ದೇಶಗಳ ಮೇಲೆ ಸಿಡಿದ ರಷ್ಯಾ ಪ್ರತಿನಿಧಿ, ‘ಉಕ್ರೇನ್‌ನ ನ್ಯಾಟೋ ಸೇರ್ಪಡೆ ಯತ್ನವೇ ವಿವಾದದ ಮೂಲವಾಗಿದೆ. ಉಕ್ರೇನ್ ಈ ನಿಲುವು ಸಡಿಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ಪಾಶ್ಚಾತ್ಯ ದೇಶಗಳಿಗೆ ಸಡ್ಡು ಹೊಡೆದ ರಷ್ಯಾ ತನ್ನ 36 ದೇಶಗಳ ವಿಮಾನಗಳಿಗೆ ನಿಷೇಧ ಹೇರಿದೆ ಹಾಗೂ ಅಣ್ವಸ್ತ್ರ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.
ಮಾತುಕತೆ ಅಪೂರ್ಣ:
ಸಂಜೆ ಆರಂಭವಾದ ಸಭೆ 3 ಸುತ್ತಿನ ಮಾತುಕತೆ ನಡೆಸಿತು. ಯುದ್ಧವಿರಾಮ ಘೋಷಣೆ ಮಾಡಬೇಕು ಎಂದು ಉಕ್ರೇನ್ ಆಗ್ರಹಿಸಿತು. ಇದೇ ವೇಳೆ ಉಕ್ರೇನ್ ನ್ಯಾಟೋ ಸಂಘಟನೆ ಸೇರುವುದನ್ನು ರಷ್ಯಾ ವಿರೋಧಿಸಿತು. ಈ ವೇಳೆ ಉಭಯ ದೇಶಗಳ ನಿಯೋಗದ ಪ್ರತಿನಿಧಿಗಳು ಪರಸ್ಪರ ಕೆಲವು ಷರತ್ತು ವಿಧಿಸಿದರು. ಹೀಗಾಗಿ ಷರತ್ತುಗಳ ವಿವರವನ್ನು ತಮ್ಮ ದೇಶಗಳ ಮುಖ್ಯಸ್ಥರ ಮುಂದಿಡಲು ಉಭಯ ದೇಶಗಳ ನಿಯೋಗಗಳು ತೀರ್ಮಾನಿಸಿದವು. ಈ ಸಭೆಯಲ್ಲಿ ಹೊರಬೀಳುವ ನಿಲುವುಗಳನ್ನು ಮುಂದಿನ ಸುತ್ತಿನ ಸಂಧಾನ ಮಾತುಕತೆಯಲ್ಲಿ ಚರ್ಚಿಸುವ ತೀರ್ಮಾನ ಮಾಡಲಾಯಿತು ಎಂದು ಮೂಲಗಳು ಹೇಳಿವೆ.