
ಕೀವ್ (ಮಾ.29): ಅನಿರೀಕ್ಷಿತ ಪ್ರಮಾಣದ ಪ್ರತಿರೋಧದಿಂದಾಗಿ ಯುದ್ಧ ಗೆದ್ದು ಬೀಗುವ ರಷ್ಯಾ (Russia) ಉತ್ಸಾಹಕ್ಕೆ ತಣ್ಣೀರು ಬಿದ್ದ ಬೆನ್ನಲ್ಲೇ, ನೆರೆಯ ಉಕ್ರೇನ್ (Ukraine) ದೇಶವನ್ನು ವಿಭಜಿಸುವ ಮೂಲಕ ಪರೋಕ್ಷವಾಗಿ ಯುದ್ಧ ಗೆಲ್ಲುವ ತಂತ್ರಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಶರಣಾಗಿದ್ದಾರೆ. ಕಳೆದ ಶುಕ್ರವಾರ ರಷ್ಯಾ ಸೇನೆ, ಉಕ್ರೇನ್‌ನಲ್ಲಿ ನಮ್ಮ ಮೊದಲ ಹಂತದ ಕಾರ್ಯಾಚರಣೆ ಬಹುತೇಕ ಮುಕ್ತಾಯವಾಗಿದೆ ಎಂದು ಹೇಳಿದ್ದು ಇದೇ ಕಾರಣಕ್ಕಾಗಿ ಎಂದು ಹೇಳಲಾಗಿದೆ.
ಒಂದು ವಾರ ಅಥವಾ 15 ದಿನದಲ್ಲಿ ಉಕ್ರೇನ್ ಅನ್ನು ಸೋಲಿಸಬಹುದು ಎನ್ನುವುದು ರಷ್ಯಾ ಲೆಕ್ಕಾಚಾರವಾಗಿತ್ತು. ಆದರೆ ವಿದೇಶಗಳ ನೆರವಿನಿಂದಾಗಿ ರಷ್ಯಾ ದಾಳಿಯನ್ನು ತಡೆಯುವಲ್ಲಿ ಉಕ್ರೇನ್ ಯಶಸ್ವಿಯಾಗಿದೆ. ಭಾರೀ ಹಾನಿಯಾದ ಹೊರತಾಗಿಯೂ ದೇಶದ ಯಾವುದೇ ಪ್ರಮುಖ ನಗರವೂ ಕೈತಪ್ಪದಂತೆ ಉಕ್ರೇನ್ ಸೇನೆ ನೋಡಿಕೊಂಡಿದೆ. ಹೀಗಾಗಿ ಉಕ್ರೇನ್ ಸದ್ಯಕ್ಕೆ ಕೈವಶವಾಗುವ ಸಾಧ್ಯತೆ ಇಲ್ಲ. ಜೊತೆಗೆ ಇಡೀ ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿದರೆ, ತನಗೇ ಮತ್ತಷ್ಟು ನಷ್ಟ ಎಂಬುದನ್ನು ಕಂಡುಕೊಂಡಿರುವ ರಷ್ಯಾ, ಇದೀಗ ಬಂಡುಕೋರರ ವಶದಲ್ಲಿರುವ ಉಕ್ರೇನ್‌ನ ಪ್ರಾಂತ್ಯವಾದ ಡೋನ್‌ಬಾಸ್ ಮೇಲೆ ತನ್ನ ಗುರಿಯನ್ನು ಹಾಕಿಕೊಂಡಿದೆ.
ರಷ್ಯಾ-ಉಕ್ರೇನ್ ಯುದ್ಧ ಹಿನ್ನೆಲೆ, 2022ನೇ ಸಾಲಿನ ಭಾರತದ GDP ಬೆಳವಣಿಗೆ ಶೇ.4.6ಕ್ಕೆ ಇಳಿಸಿದ ವಿಶ್ವಸಂಸ್ಥೆ
ಈ ಪ್ರಾಂತ್ಯವನ್ನು ಮರಳಿ ಬಿಡಿಸಿಕೊಳ್ಳಲು ಉಕ್ರೇನ್ 8 ವರ್ಷದಿಂದ ಹೋರಾಡುತ್ತಿದೆ. ಆದರೆ ಇದು ಫಲ ಕೊಟ್ಟಿಲ್ಲ. ಹೀಗಾಗಿ ಬಂಡುಕೋರರಿಗೆ ಇನ್ನಷ್ಟುನೆರವು ನೀಡುವ ಮೂಲಕ ಡೋನ್‌ಬಾಸ್ ಪ್ರಾಂತ್ಯವನ್ನು ಉಕ್ರೇನ್‌ನಿಂದ ಬೇರ್ಪಡಿಸುವುದು. ಈ ಮೂಲಕ ದೇಶವನ್ನು ವಿಭಜಿಸುವುದು ರಷ್ಯಾದ ಹೊಸ ಕಾರ್ಯತಂತ್ರವಾಗಿ ಹೊರಹೊಮ್ಮಿದೆ ಎಂದು ಹೇಳಲಾಗಿದೆ. ಹೀಗಾಗಿಯೇ ಕಳೆದ ಕೆಲ ದಿನಗಳಿಂದ ರಾಜಧಾನಿ ಕೀವ್, ಖಾರ್ಕೀವ್, ಖೋರ್ಸನ್ ಸೇರಿದಂತೆ ಕೆಲ ಪ್ರಮುಖ ನಗರಗಳ ಮೇಲೆ ರಷ್ಯಾ ದಾಳಿ ಕ್ಷಿಣವಾಗಿದೆ ಎಂದು ಅಮೆರಿಕ, ಬ್ರಿಟನ್‌ನ ಗುಪ್ತಚರ ಮೂಲಗಳು ಅಂದಾಜಿಸಿವೆ.
ವಿಕಿರಣ ಸೋರಿಕೆ ಇಲ್ಲ: ಚರ್ನೋಬಿಲ್ ಮತ್ತು ಝಪೊರಿಝಾಝಿಯಾ ಪರಮಾಣು ಘಟಕಗಳ ಮೇಲೆ ಇತ್ತೀಚೆಗೆ ರಷ್ಯಾ ನಡೆಸಿದ ದಾಳಿಯ ಬಳಿಕ ಅಲ್ಲಿ ಯಾವುದೇ ವಿಕಿರಣ ಪದಾರ್ಥ ಸೋರಿಕೆಯಾಗಿಲ್ಲ. ಆದರೆ ಅಂಥದ್ದೊಂದು ಸೋರಿಕೆಯ ಭೀತಿ ನಮ್ಮನ್ನು ಸದಾ ಆತಂಕದ ಮಡುವಿನಲ್ಲೇ ಇಟ್ಟಿದೆ ಎಂದು ಉಕ್ರೇನ್‌ನ ಇಂಧನ ಖಾತೆ ಸಚಿವ ಜರ್ಮನ್ ಗಲುಶ್ಚೆನ್ಕೋ ತಿಳಿಸಿದ್ದಾರೆ.
ದಾಳಿಯ ಮೊದಲ ಹಂತ ಪೂರ್ಣ: ಉಕ್ರೇನ್ (Ukraine) ಮೇಲೆ 30 ದಿನಗಳಿಂದ ಸತತವಾಗಿ ದಾಳಿ ನಡೆಸುತ್ತಿದ್ದ ರಷ್ಯಾ (Russia), ಉಕ್ರೇನ್ ಮೇಲಿನ ಮೊದಲ ಹಂತದ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ ಎಂದು ಶುಕ್ರವಾರ ಪ್ರಕಟಿಸಿದೆ. ಜೊತೆಗೆ ತನ್ನ ಮುಂದಿನ ಗುರಿ ಈಗಾಗಲೇ ಉಕ್ರೇನ್‌ನ ಬಂಡುಕೋರರ ವಶದಲ್ಲಿರುವ ಡೋನ್‌ಬಾಸ್ (Donbass) ಪ್ರಾಂತ್ಯಕ್ಕೆ ಪೂರ್ಣ ಸ್ವಾತಂತ್ರ್ಯ ಕೊಡಿಸುವುದಾಗಿದೆ ಎಂದು ಹೇಳಿಕೊಂಡಿದೆ. ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ರಷ್ಯಾದ ರಕ್ಷಣಾ ಸಚಿವಾಲಯ, ಉಕ್ರೇನ್‌ಗೆ ಸೇರಿದ ಲುಹಾನ್‌ಸ್ಕ್‌ನ ಶೇ.93ರಷ್ಟುಮತ್ತು ಡೋನ್‌ಟೆಸ್ಕ್‌ನ ಶೇ.54ರಷ್ಟುಭಾಗ ನಮ್ಮ ವಶದಲ್ಲಿವೆ. ಈ ಎರಡೂ ಭಾಗಗಳನ್ನು ಸೇರಿ ಡೋನ್‌ಬಾಸ್ ಎನ್ನಲಾಗುತ್ತದೆ.
Ukraine Crisis ಮರಿಯುಪೋಲ್ ಚಿತ್ರಮಂದಿರದ ಮೇಲಿನ ದಾಳಿಯಲ್ಲಿ 300 ನಾಗರೀಕರ ಸಾವು, ಮಕ್ಕಳ ಸಂಖ್ಯೆ ಹೆಚ್ಚು!
ಇವುಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡುವುದು ನಮ್ಮ ಮುಂದಿನ ಮುಖ್ಯ ಗುರಿಯಾಗಿರಲಿದೆ ಎಂದು ಹೇಳಿದೆ. ಕಳೆದ 30 ದಿನಗಳ ಸತತ ಹೋರಾಟದ ಹೊರತಾಗಿಯೂ ಅಂದುಕೊಂಡ ರೀತಿಯಲ್ಲಿ ಉಕ್ರೇನ್ ವಶಪಡಿಸಿಕೊಳ್ಳುವುದು ರಷ್ಯಾಕ್ಕೆ ಸಾಧ್ಯವಾಗಿಲ್ಲ. ಉಕ್ರೇನ್ ಸೇನೆ ನಿರೀಕ್ಷೆಗೂ ಮೀರಿ ಪ್ರತಿರೋಧ ತೋರುತ್ತಿರುವುದು ರಷ್ಯಾಕ್ಕೆ ಭಾರೀ ಹಿನ್ನೆಡೆಯಾಗಿದೆ. ಕಳೆದ 30 ದಿನಗಳಲ್ಲಿ ರಷ್ಯಾದ 15000ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ. ಜೊತೆಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ನಷ್ಟವಾಗಿದೆ. ಅಲ್ಲದೆ ಯುದ್ಧ ಸಾರಿದ್ದಕ್ಕೆ ಜಾಗತಿಕ ಸಮುದಾಯ ದೊಡ್ಡ ಪ್ರಮಾಣದಲ್ಲಿ ನಿರ್ಬಂಧ ಹೇರಿದೆ. ಜೊತೆಗೆ ಆಂತರಿಕವಾಗಿಯೂ ಯುದ್ಧ ಸಾರಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಡೋಸ್‌ಬಾಸ್ ಹೆಸರಲ್ಲಿ ಇದು ರಷ್ಯಾ ಯುದ್ಧದಿಂದ ಹಿಂದೆ ಸರಿಯುತ್ತಿರುವ ಪ್ರಯತ್ನವಾಗಿರಬಹುದು. ಇದು ಪರೋಕ್ಷವಾಗಿ ರಷ್ಯಾಕ್ಕೆ ಯುದ್ಧದಲ್ಲಿ ಆದ ಸೋಲು ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ