'ಭಾರತವು ತನ್ನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಪ್ರಪಂಚದೊಂದಿಗೆ ಹಂಚಿ ಕೊಳ್ಳಲು ಸಿದ್ದವಾಗಿದೆ' ಎಂದರು ಹಾಗೂ 'ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಅಗತ್ಯ' ಎಂದ ಪ್ರಧಾನಿ ನರೇಂದ್ರ ಮೋದಿ
ವಿಶ್ವಸಂಸ್ಥೆ(ಸೆ.24): 'ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆಯೇ ಹೊರತು ಯುದ್ಧಭೂಮಿಯಲ್ಲಿ ಅಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಈ ಮೂಲಕ ಯುದ್ಧದಲ್ಲಿ ಮುಳುಗಿರುವ ಉಕ್ರೇನ್-ರಷ್ಯಾ ಹಾಗೂ ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಪರೋಕ್ಷವಾಗಿ ಶಾಂತಿ ಸಂದೇಶ ರವಾನಿಸಿದ್ದಾರೆ. ಅಲ್ಲದೆ, ಉಗ್ರವಾದದ ವಿರುದ್ದವೂ ಮತ್ತೆ ಚಾಟಿ ಬೀಸಿದ್ದಾರೆ. ಇದೇ ವೇಳೆ, 'ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ, ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಮುಖ್ಯವಾಗಿವೆ. ಸುಧಾರಣೆಯು ಪ್ರಸ್ತುತ ಕಾಲದ ಅತ್ಯಂತ ಅವಶ್ಯವಾದ ಕ್ರಮವಾಗಿದೆ' ಎಂದೂ ಮೋದಿ ಹೇಳಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿಯಂಥ ಮಹತ್ವದ ಸಂಸ್ಥೆಗಳಲ್ಲಿ ಭಾರತಕ್ಕೆ ಕಾಯಂ ಸ್ಥಾನ ಸಿಗಬೇಕು ಎಂಬ ಬೇಡಿಕೆಯನ್ನು ಪರೋಕ್ಷವಾಗಿ ಒತ್ತಿ ಹೇಳಿದ್ದಾರೆ.
ತಮ್ಮ ಅಮೆರಿಕ ಭೇಟಿಯ ಅಂತಿಮ ದಿನ ದಂದು ನ್ಯೂಯಾರ್ಕ್ ನಗರದಲ್ಲಿ ವಿಶ್ವಸಂಸ್ಥೆ ಯಲ್ಲಿ 'ಭವಿಷ್ಯದ ಶೃಂಗಸಭೆ' ಉದ್ದೇಶಿಸಿ ಮಾತನಾಡಿದ ಮೋದಿ, 'ಸುಸ್ಥಿರ ಅಭಿವೃದ್ಧಿಗೆ ಹಾಗೂ ಮಾನವ-ಕೇಂದ್ರಿತ ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
undefined
ಅಮೆರಿಕ ಜೊತೆ ಸಾವಿರಾರು ಕೋಟಿಯ ಒಪ್ಪಂದ; ಭಾರತ ಖರೀದಿಸುತ್ತಿರುವ ಎಂಕ್ಯು-9ಬಿ ಡ್ರೋನ್ ವಿಶೇಷತೆ ಏನು?
ಜನಕಲ್ಯಾಣ, ಆಹಾರ ಮತ್ತು ಆರೋಗ್ಯ ಬದ್ಧತೆ ಇಂದಿನ ಅಗತ್ಯ. ಭಾರತದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತುವ ಮೂಲಕ, ಸುಸ್ಥಿರ ಅಭಿವೃದ್ಧಿ ಯಶಸ್ವಿಯಾಗಬಹುದೆಂದು ನಾವು ಸಾಬೀತುಪಡಿಸಿದ್ದೇವೆ' ಎಂದರು.
'ಭಾರತವು ತನ್ನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಪ್ರಪಂಚದೊಂದಿಗೆ ಹಂಚಿ ಕೊಳ್ಳಲು ಸಿದ್ದವಾಗಿದೆ' ಎಂದರು ಹಾಗೂ 'ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಅಗತ್ಯ' ಎಂದರು.
ಉಗ್ರವಾದಕ್ಕೆ ಚಾಟಿ:
'ಜಾಗತಿಕ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಗಂಭೀರ ಬೆದರಿಕೆಯಾಗಿ ಮುಂದುವರಿದಿದೆ' ಎಂದ ಮೋದಿ, 'ಸೈಬರ್, ಸಾಗರ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳು ಸಂಘರ್ಷದ ಹೊಸ ರಂಗಭೂಮಿಗಳಾಗಿ ಹೊರ ಹೊಮ್ಮುತ್ತಿವೆ. ಈ ಎಲ್ಲ ಸಮಸ್ಯೆಗಳಲ್ಲಿ ವಿರುದ್ಧ ಜಾಗತಿಕ ಹೋರಾಟ ನಡೆಯಬೇಕು' ಎಂದರು.
ಪ್ಯಾಲೆಸ್ತೀನ್ ಅಧ್ಯಕ್ಷರ ಬಳಿ ಗಾಜಾ ಪರಿಸ್ಥಿತಿ ಬಗ್ಗೆ ಮೋದಿ ತೀವ್ರ ಕಳವಳ
ನ್ಯೂಯಾರ್ಕ್: ಅಮೆರಿಕ ಭೇಟಿಯ 2 ದಿನವಾದ ಭಾನುವಾರ ನ್ಯೂಯಾರ್ಕ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ಯಾಲೆಸ್ತೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಗಾಜಾದಲ್ಲಿನ ಪ್ರಸಕ್ತ ಮಾನವೀಯ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ವಲಯದಲ್ಲಿ ಆದಷ್ಟು ಶೀಘ್ರ ಶಾಂತಿ ಮತ್ತು ಸ್ಥಿರತೆ ಮರುಸ್ಥಾಪನೆಗೆ ಭಾರತ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.