
ಗಿಳಿಗಳು ಮನುಷ್ಯರಂತೆ ಮಾತನಾಡುವುದು ಎಲ್ಲರಿಗೂ ತಿಳಿದದ್ದೇ. ಅದರಲ್ಲಿಯೂ ಸ್ವಲ್ಪ ಪಳಗಿಸಿದರೆ ಗಿಳಿ ಅದರ ಮಾಲೀಕ ಹೇಳುವ ಎಲ್ಲಾ ಕೆಲಸಗಳನ್ನೂ ಮಾಡಿ ಮುಗಿಸುತ್ತದೆ. ತನ್ನ ಮಾಲೀಕರು ಮಾಡುವ ಕೆಲಸಗಳನ್ನು ತದೇಕ ಚಿತ್ತದಿಂದ ಆಲಿಸುತ್ತಾ ಅದನ್ನೇ ಅನುಕರಿಸುವಲ್ಲಿ ಗಿಳಿಯದ್ದು ಎತ್ತಿದ ಕೈ. ಇದೇ ಕಾರಣಕ್ಕೆ ಎರಡು ಗಿಳಿಗಳ ಕಥೆ ನೀವು ಕೇಳಿರಬಹುದು. ಒಂದೇ ಅಮ್ಮನಿಗೆ ಹುಟ್ಟಿದ ಎರಡು ಗಿಳಿಗಳ ಪೈಕಿ ಒಂದು ಕಟುಕನ ಮನೆಯಲ್ಲಿ ಬೆಳೆದರೆ, ಇನ್ನೊಂದು ಸಾಧುಗಳ ಮನೆಯಲ್ಲಿ ಬೆಳೆದ ಗಿಳಿಗಳ ಕಥೆ. ಕಟುಕನ ಮನೆಯ ಗಿಳಿ ಹೊಡಿ, ಬಡಿ, ಸಾಯಿಸು ಎನ್ನುತ್ತಿದ್ದರೆ, ಸಾಧು ಮನೆಯಲ್ಲಿ ಬೆಳೆದ ಗಿಳಿ, ಸುಶ್ರಾವ್ಯವಾಗಿ ಹಾಡುತ್ತಾ, ಪ್ರಾರ್ಥನೆ, ಭಜನೆ ಮಾಡುತ್ತಿರುವ ಕಥೆ ಕೇಳಿರಬಹುದು. ಅದೇ ರೀತಿ ಇಲ್ಲೊಂದು ತುಂಟ ಗಿಳಿ ಮನೆಯಲ್ಲಿ ಯಾರೂ ಇಲ್ಲದಾಗ ಅಮೆಜಾನ್ನಿಂದ ಏನೇನೋ ಆರ್ಡರ್ ಮಾಡಿ ಮಾಲೀಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇದು ಬ್ರಿಟನ್ನ ಸ್ಟೋರಿ. ಈ ಗಿಳಿ ಹೆಸರು ರೊಕ್ಕೊ. ಈ ಗಿಳಿಯು ಮನೆ ಮಾಲೀಕರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಅಮೆಜಾನ್‌ನ ಅಲೆಕ್ಸಾ ಉಪಕರಣ ಬಳಸಿ ತನಗೆ ಬೇಕಾದದ್ದನ್ನೆಲ್ಲಾ ಆರ್ಡರ್ ಮಾಡಿಬಿಟ್ಟಿದೆ. ಎಲ್ಲಾ ವಸ್ತುಗಳ ಮೇಲೆ ಕ್ಲಿಕ್ ಮಾಡಿ, ಟನ್‌ಗಟ್ಟಲೆ ವಸ್ತುಗಳ ಖರೀದಿಗೆ ಆರ್ಡರ್ ಮಾಡಿದೆ! ಅಷ್ಟಕ್ಕೂ ಗಿಳಿ ದನಿಯನ್ನು ಅನುಕರಿಸುವಲ್ಲಿ ನಿಸ್ಸೀಮ. ಅದರಲ್ಲಿಯೂ ಆಫ್ರಿಕನ್ ಬೂದು ಬಣ್ಣದ ಗಿಳಿಗಳು ಭಾಷಣವನ್ನು ಅನುಕರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದೇ ಜಾತಿಯ ಗಿಳಿ ಈ ಕಿತಾಪತಿ ಮಾಡಿದೆ. ಅಲೆಕ್ಸಾದಲ್ಲಿ ಧ್ವನಿ ಮೂಲಕವೇ ವಸ್ತುಗಳ ಖರೀದಿ ಮಾಡುವ ಅವಕಾಶವಿದೆ. ಈ ಅವಕಾಶವನ್ನೇ ಬಳಸಿಕೊಂಡಿರುವ ಈ ತುಂಟ ಗಿಳಿ, ತನಗೆ ಚೆಂದ ಚೆಂದ ಕಂಡಿರುವ ಆಹಾರಗಳನ್ನು ಆರ್ಡರ್ ಮಾಡಿದೆ.
ಬಾಸ್ ರಜೆ ಕೊಡ್ತಿಲ್ವಾ? ಹೀಗೆ ಮಾಡಿ ನೋಡಿ ಎಂದು ಟಿಪ್ಸ್ ಕೊಟ್ಟು ಪೇಚಿಗೆ ಸಿಲುಕಿದ ಯುವತಿ!
ದ್ರಾಕ್ಷಿ, ಕಲ್ಲಂಗಡಿ ಹಣ್ಣು, ಬ್ರಾಕೋಲಿ, ಐಸ್ ಕ್ರೀಂ, ಬ್ರೊಕೊಲಿ ಮಾತ್ರವಲ್ಲದೇ ಬಲ್ಬ್ ಮತ್ತು ಗಾಳಿಪಟವನ್ನೂ ಆರ್ಡರ್ ಮಾಡಿದೆ. ಅದೂ ಟನ್ ಗಟ್ಟಲೆ. ಮನೆಯೊಡತಿ ಮರಿಯನ್ ವಿಶ್ಚ್ನ್ಯೂಸ್ಕಿ ಕೆಲಸ ಮುಗಿಸಿ ಮನೆಗೆ ಬಂದಾಗ ಗಿಳಿ ಇನ್ನೂ ಆರ್ಡರ್ ಮಾಡುವಲ್ಲಿ ಬಿಜಿಯಾಗಿತ್ತು. ಇದನ್ನು ನೋಡಿ ಆಕೆಗೆ ಶಾಕ್ ಆಗಿ, ಅಮೆಜಾನ್ ಪರಿಶೀಲಿಸಿದಾಗ, ಅಲ್ಲಿ ಟನ್‌ಗಟ್ಟಲೆ ಆರ್ಡರ್ ಆಗಿರುವುದನ್ನು ನೋಡಿದ್ದಾಳೆ.
ಕೂಡಲೇ ಎಲ್ಲ ಆರ್ಡರ್‌ಗಳನ್ನು ಕ್ಯಾನ್ಸಲ್ ಮಾಡಿ, ಅಮೆಜಾನ್ ಕಸ್ಟಮರ್ ಕೇರ್ಗೆ ಕರೆ ಮಾಡಿ ಇರುವ ವಿಷಯವನ್ನು ತಿಳಿಸಿ ಕ್ಷಮೆ ಕೋರಿದ್ದಾಳೆ. ಅಷ್ಟಕ್ಕೂ ರೊಕ್ಕೊ ಈ ರೀತಿ ಕಿತಾಪತಿ ಮಾಡಿದ್ದು ಇದೇ ಮೊದಲಲ್ಲ. ಬರ್ಕ್‌ಷೈರ್‌ನಲ್ಲಿರುವ ರಾಷ್ಟ್ರೀಯ ಪ್ರಾಣಿ ಕಲ್ಯಾಣ ಟ್ರಸ್ಟ್ ಅಭಯಾರಣ್ಯದಲ್ಲಿ ಇದನ್ನು ಇರಿಸಲಾಗಿತ್ತು. ಆದರೆ, ಅಲ್ಲಿ ಅಸಭ್ಯ ಭಾಷೆಗಳನ್ನು ಮಾತನಾಡುತ್ತಿತ್ತು. ಪ್ರಾಣಿ ಸಂಗ್ರಹಾಲಯಕ್ಕೆ ಬರುವ ಪ್ರವಾಸಿಗರ ಮೇಲೆ ಅಶ್ಲೀಲ ಪದಗಳ ಬಳಕೆ ಮಾಡುತ್ತಿತ್ತು. ಆದ್ದರಿಂದ ಈ ಗಿಳಿಯನ್ನು ಮಾರಾಟ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಘಿಬ್ಲಿ ಫೋಟೋ ಬಳಸ್ತಿದ್ದೀರಾ? ಗೋಳೋ ಎಂದು ಅಳುವ ಮೊದ್ಲು ಸೈಬರ್ ಕ್ರೈಂನವರ ಈ ಎಚ್ಚರಿಕೆ ಕೇಳಿಬಿಡಿ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ