
ಇಸ್ಲಾಮಾಬಾದ್: ಧರ್ಮದ ಹೆಸರಲ್ಲಿ ಭಾರತದ ಜತೆಗೆ ಕಾಲುಕೆದರಿ ಸಂಘರ್ಷಕ್ಕೆ ನಿಂತಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಂ ಮುನೀರ್‌ಗೆ ಇದೀಗ ಅಲ್ಲಿನ ಮುಸ್ಲಿಮ್ ಧರ್ಮದ ಪ್ರಮುಖರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಭಾರತಕ್ಕಿಂತ ಪಾಕಿಸ್ತಾನವೇ ಹೆಚ್ಚು ದಬ್ಬಾಳಿಕೆ ನಡೆಸುತ್ತಿದೆ. ಕನಿಷ್ಠ ಪಕ್ಷ ಭಾರತವು ಇಸ್ಲಾಮಾಬಾದ್‌ನ ಲಾಲ್ ಮಸೀದಿ ಅಥವಾ ವಜೀರಿಸ್ತಾನದ ಮೇಲೆ ಯಾವುದೇ ಬಾಂಬ್ ಹಾಕಿಲ್ಲ ಎಂದು ಪ್ರಭಾವಿ ದೇವೋಬಂದಿ ಧರ್ಮಗುರು ಮೌಲಾನ ಅಬ್ದುಲ್ ಅಜೀಜ್ ಘಾಜಿ ಅಸಮಾಧಾನ ಹೊರಹಾಕಿದ್ದಾರೆ.
ಘಾಜಿ ಅವರ ಈ ಹೇಳಿಕೆ ಇದೀಗ ಪಾಕಿಸ್ತಾನದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ. ಪಾಕಿಸ್ತಾನದ ಮಿಲಿಟರಿ ಆಡಳಿತ ಮತ್ತು ಜನರ ನಡುವೆ ಹೆಚ್ಚುತ್ತಿರುವ ಕಂದಕ ಈ ಹೇಳಿಕೆಯಿಂದ ಬಹಿರಂಗವಾಗಿದೆ.
ಯುದ್ಧಕ್ಕೆ ಯಾರೂ ಕೈಎತ್ತಲಿಲ್ಲ:
ಇಸ್ಲಾಮಾಬಾದ್‌ನ ಲಾಲ್ ಮಸೀದಿಯಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯೊಂದರಲ್ಲಿ ಭಾಷಣ ಮಾಡುವಾಗ, ಭಾರತದ ಜತೆಗೆ ಯುದ್ಧವಾದರೆ ಯಾರೆಲ್ಲ ಪಾಕಿಸ್ತಾನ ಬೆಂಬಲಿಸುತ್ತೀರೋ ಅವರೆಲ್ಲ ಕೈ ಎತ್ತಿ ಎಂದು ಮೌಲಾನಾ ಘಾಜಿ ಕೇಳಿದರು. ಆಗ ಅಲ್ಲಿ ನೆರೆದಿದ್ದ ಯಾವೊಬ್ಬನೂ ಕೈ ಎತ್ತಲಿಲ್ಲ. ಬಳಿಕ ಮಾತು ಮುಂದುವರಿಸಿದ ಮೌಲಾನಾ ಅವರು, ಪಾಕಿಸ್ತಾನದ ಮಿಲಿಟರಿ ಆಡಳಿತ ಮತ್ತು ಅಧಿಕಾರದಲ್ಲಿರುವ ಶ್ರೀಮಂತ ಅಧಿಕಾರಿಶಾಹಿ ವಿರುದ್ಧ ಕಿಡಿಕಾರಿದರು. ಪಾಕಿಸ್ತಾನವು ಭಾರತಕ್ಕಿಂತ ಹೆಚ್ಚು ದಬ್ಬಾಳಿಕೆ ಮಾಡುತ್ತದೆ. ಕನಿಷ್ಠ ಭಾರತವು ಲಾಲ್ ಮಸೀದಿ ಅಥವಾ ವಜೀರಿಸ್ತಾನಕ್ಕೆ ಬಾಂಬ್ ದಾಳಿ ನಡೆಸಿಲ್ಲ ಎಂದು ಹೇಳಿದರು.
ಪಶ್ತೂನಿಗರಿಂದ ಭಾರತಕ್ಕೆ ಬೆಂಬಲ:
ಮೌಲಾನಾ ಘಾಜಿ ಅವರ ರೀತಿಯಲ್ಲೇ ಇತ್ತೀಚೆಗೆ ಖೈಬರ್ ಪಕ್ತೂನ್‌ಖ್ವಾದ ಇಸ್ಲಾಮಿಕ್ ಪ್ರಚಾರಕರೊಬ್ಬರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನ ಸೇನೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ‘ಪಶ್ತೂನ್ ಪ್ರಜೆಗಳ ಮೇಲೆ ಪಾಕ್ ಸೇನೆ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಆರೋಪಿಸಿದ ಅವರು, ‘ಒಂದು ವೇಳೆ ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದರೆ ಪಶ್ತೂನಿಗರು ಭಾರತಕ್ಕೆ ಬೆಂಬಲ ನೀಡಲಿದ್ದಾರೆ. ಪಶ್ತೂನಿಗರ ವಿರುದ್ಧ ಪಾಕ್ ಸೇನೆ ಸಾಕಷ್ಟು ಅನ್ಯಾಯ ಮಾಡಿದೆ. ಹಾಗಿದ್ದಾಗ ನಾವು ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುತ್ತೇವೆ ಅಂದುಕೊಂಡಿದ್ದೀರಾ? ಖಂಡಿತಾ ಇಲ್ಲ’ ಎಂದು ಹೇಳಿದ್ದಾರೆ.
ಉಗ್ರ ಹಫೀಜ್ ಪ್ರೇರಿತ ರಾಜಕೀಯ ಪಕ್ಷದಿಂದ ಭಾರತ ವಿರೋಧಿ ರ್‍ಯಾಲಿ
ಲಾಹೋರ್: ಭಾರತ ಪಾಕಿಸ್ತಾನದ ವಿರುದ್ಧ ಜಲ ಒಪ್ಪಂದ ರದ್ದತಿಯಂಥ ಕಠಿಣ ಕ್ರಮ ಕೈಗೊಂಡಿದ್ದನ್ನು ವಿರೋಧಿಸಿ, ಉಗ್ರ ಹಫೀಜ್ ಸಯೀದ್ ಪ್ರೇರಿತ ಪಕ್ಷ ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಲಾಹೋರ್‌ನಲ್ಲಿ ಭಾರತ ವಿರೋಧಿ ರ್‍ಯಾಲಿ ನಡೆಸಿದೆ.‘ಕಾಶ್ಮೀರ ಪಾಕಿಸ್ತಾನದ ಕಂಠನಾಳ. ಕಾಶ್ಮೀರವನ್ನು ಸ್ವತಂತ್ರಗೊಳಿಸುವ ಪ್ರತಿಜ್ಞೆ ಮಾಡುತ್ತೇವೆ. ಭಾರತ ಸಿಂಧು ನದಿ ನೀರನ್ನು ತಡೆಹಿಡಿದರೆ ನಾವು ಮೌನವಾಗಿರುವುದಿಲ್ಲ’ ಎಂದು ಪಿಎಂಎಂಎಲ್ ಅಧ್ಯಕ್ಷ ಖಾಲಿದ್ ಮಸೂದ್ ಹೇಳಿದ್ದಾನೆ.ಪಿಎಂಎಂಎಲ್ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಹಫೀಜ್ ಸಯೀದ್ ಸ್ಥಾಪಿಸಿದ ಜಮಾತ್-ಉದ್-ದಾವಾ ಉಗ್ರ ಸಂಘಟನೆಯ ರಾಜಕೀಯ ಶಾಖೆಯಾಗಿದ್ದು, ಪಹಲ್ಗಾಂ ದಾಳಿ ಬಳಿಕ ದೇಶಾದ್ಯಂತ ಭಾರತವಿರೋಧಿ ರ್‍ಯಾಲಿಗಳನ್ನು ಪ್ರಾರಂಭಿಸಿದೆ.
ಪಹಲ್ಗಾಂ ದಾಳಿಕೋರರಿಗೆ ತಕ್ಕ ಶಿಕ್ಷೆಯಾಗಲಿ : ಪುಟಿನ್
ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗುತ್ತಿರುವ ಭಾರತಕ್ಕೆ ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದಲೂ ಬೆಂಬಲ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದೂರವಾಣಿ ಸಂಭಾಷಣೆ ವೇಳೆ ಪಹಲ್ಗಾಂ ದಾಳಿಯನ್ನು ‘ಕ್ರೂರ ಘಟನೆ’ ಎಂದು ಖಂಡಿಸಿದ ಪುಟಿನ್, ‘ದಾಳಿಕೋರರನ್ನು ಶಿಕ್ಷಿಸಿ’ ಎಂದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್, ‘ದಾಳಿಯಲ್ಲಿ ಮೃತಪಟ್ಟ ಅಮಾಯಕರಿಗೆ ಸಂತಾಪ ಸೂಚಿಸಿದ ಪುಟಿನ್, ಉಗ್ರವಾದದ ವಿರುದ್ಧದ ಭಾರತದ ಯುದ್ಧಕ್ಕೆ ಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಅಂತೆಯೇ ದಾಳಿಯನ್ನು ಕ್ರೂರ ಅಪರಾಧ ಎಂದು ಹೇಳಿರುವ ಅವರು, ಅದರ ಹಿಂದಿರುವವರನ್ನು ಶಿಕ್ಷಿಸಿ ಎಂದಿದ್ದಾರೆ’ ಎಂದು ತಿಳಿಸಿದ್ದಾರೆ.
ಇದೇ ವೇಳೆ, ‘ಭಾರತದೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ರಷ್ಯಾದ ಬೆಂಬಲವನ್ನು ಪುನರುಚ್ಚರಿಸಿದ ಪುಟಿನ್, ರಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳು ‘ಬಾಹ್ಯ ಪ್ರಭಾವ’ದಿಂದ ಪ್ರಭಾವಿತವಾಗಿಲ್ಲ ಎಂದು ಹೇಳಿದ್ದು, ಭಾರತ-ರಷ್ಯಾ ನಡುವಿನ ವಿಶೇಷ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಗಾಢಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ’ ಎಂದು ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ