
ಮುಸ್ಲಿಮರೇ ಹೆಚ್ಚಾಗಿರುವ ಅರಬ್ ದೇಶಗಳಲ್ಲಿ ಗೋಮಾಂಸದ ಮಾರಾಟ ಹೆಚ್ಚಿರಬಹುದು ಎಂದು ನೀವು ಊಹಿಸಿದ್ದರೆ ಅದು ಸರಿಯೇ. ಆದರೆ ಇನ್ನೊಂದು, ನೀವು ಊಹಿಸಿರದೇ ಇದ್ದ ಸಂಗತಿಯನ್ನು ನಾವೀಗ ಹೇಳೋಕೆ ಹೊರಟಿದ್ದೇವೆ. ನಿಮಗೆ ಗೊತ್ತಾ? ಪ್ರತಿವರ್ಷ ಕುವೈತ್ ಮತ್ತು ಇತರ ಅರಬ್ ರಾಷ್ಟ್ರಗಳು ಸುಮಾರು 1000 ಮೆಟ್ರಿಕ್ ಟನ್ ಹಸುವಿನ ಸಗಣಿಯನ್ನು ತರಿಸಿಕೊಳ್ಳುತ್ತಿವೆ. ತೈಲ ಮತ್ತು ಅನಿಲ ನಿಕ್ಷೇಪಗಳಿಂದ ಸಮೃದ್ಧವಾಗಿರುವ ಈ ದೇಶಗಳು ಹೈನುಗಾರಿಕೆಯಲ್ಲಿ ಬಲು ಹಿಂದೆ. ಹೀಗಾಗಿ ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳು ನಮ್ಮಂಥ ಏಷ್ಯಾದ ದೇಶಗಳಿಂದಲೇ ಅಲ್ಲಿಗೆ ಹೋಗಬೇಕು. ಇದೀಗ ಭಾರತದಿಂದ ಈ ದೇಶಗಳು ಬಯಸುತ್ತಿರುವುದು ಗೋಮೂತ್ರ ಮತ್ತು ಗೋಮಯ ಅರ್ಥಾತ್ ಸಗಣಿ. ಅದೂ ದೊಡ್ಡ ಪ್ರಮಾಣದಲ್ಲಿ. ಯಾಕಂತ ಇಲ್ಲಿ ನೋಡೋಣ.
ಇತ್ತೀಚೆಗೆ ಕುವೈತ್, ಭಾರತದಿಂದ 192 ಮೆಟ್ರಿಕ್ ಟನ್ ಹಸುವಿನ ಸಗಣಿಗೆ ಆರ್ಡರ್ ನೀಡಿತು. ಅದೇ ರೀತಿ ಇಲ್ಲಿನ ಇತರ ದೇಶಗಳು ಭಾರತದಿಂದ ಗಮನಾರ್ಹ ಪ್ರಮಾಣದ ಸಗಣಿ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿವೆ. ಅದಕ್ಕೆ ಕಾರಣ ಇಷ್ಟೆ- ಪುಡಿ ಮಾಡಿದ ಹಸುವಿನ ಸಗಣಿ ಬಳಸುವುದರಿಂದ ಖರ್ಜೂರ ಬೆಳೆಗಳ ಇಳುವರಿ ಹೆಚ್ಚಾಗುತ್ತದೆ ಎಂದು ಕೃಷಿ ವಿಜ್ಞಾನಿಗಳು ಸಂಶೋಧನೆಯ ಮೂಲಕ ಕಂಡುಹಿಡಿದಿದ್ದಾರೆ. ಇದು ಹಣ್ಣಿನ ಗಾತ್ರ ಮತ್ತು ಒಟ್ಟಾರೆ ಉತ್ಪಾದನಾ ಪ್ರಮಾಣ ಎರಡನ್ನೂ ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ. ಇದರ ಪರಿಣಾಮವಾಗಿ ಕುವೈತ್ ಮತ್ತು ಇತರ ಅರಬ್ ದೇಶಗಳಲ್ಲಿ ಹಸುವಿನ ಸಗಣಿಗೆ ಬೇಡಿಕೆ ಹೆಚ್ಚಾಗಿದೆ. ಇದು ಭಾರತದಿಂದ ಈ ಪ್ರದೇಶಗಳಿಗೆ ದೊಡ್ಡ ಪ್ರಮಾಣದ ರಫ್ತು ಮಾಡಲು ಕಾರಣವಾಗಿದೆ.
ಇತರ ದೇಶಗಳಲ್ಲಿ ಸಗಣಿ ಇಲ್ಲವೆ? ಇದೆ. ಆದರೆ ಭಾರತದ ಹಸುಗಳು ಸಾಮಾನ್ಯವಾಗಿ ಅದರಷ್ಟಕ್ಕೇ ಮೇದು, ರಾಸಾಯನಿಕದ ಅಂಶಗಳಿಲ್ಲದ ಸಗಣಿಯನ್ನು ಹೊರಹಾಕುತ್ತವೆ. ಇತರ ದೇಶಗಳಲ್ಲಿ ಕೃತಕ ಆಹಾರ, ರಾಸಾಯನಿಕ, ಔಷಧ, ಹಾಲು ಹೆಚ್ಚಿಸುವ ಇಂಜಕ್ಷನ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಹೀಗಾಗಿ ಭಾರತದ ದನದ ಸಗಣಿ ಸಾವಯವ. ಅರಬ್‌ಗಳಿಗೆ ಇದೇ ಬೇಕು.
ಭಾರತದಲ್ಲಿ ಸುಮಾರು 3 ಕೋಟಿ ದನಗಳಿರಬಹುದು. ಅವು ಪ್ರತಿದಿನ ಸುಮಾರು 3 ಕೋಟಿ ಟನ್ ಸಗಣಿ ಉತ್ಪಾದಿಸುತ್ತವೆ. ಭಾರತದಲ್ಲಿ ಹಸುವಿನ ಸಗಣಿಯನ್ನು ಹೊಲ ಗದ್ದೆ ತೋಟಗಳಿಗೆ ಗೊಬ್ಬರವಾಗಿ ಬಳಸಲಾಗುತ್ತದೆ, ಅತ್ಯಲ್ಪ ಮಾತ್ರ ಗೋಬರ್ ಗ್ಯಾಸ್‌ಗೆ ಹೋಗುತ್ತದೆ. ಹೆಚ್ಚಿನ ಭಾಗವನ್ನು ಬೆರಣಿಯಾಗಿ ಒಣಗಿಸಿ ಉರುವಲಿನ ರೂಪದಲ್ಲಿ ಬಳಸಲಾಗುತ್ತದೆ. ಚೀನಾ ಮತ್ತು ಯುಕೆಯಂತಹ ದೇಶಗಳಲ್ಲಿ ಹಸುವಿನ ಸಗಣಿಯಿಂದ ವಿದ್ಯುತ್ ಮತ್ತು ಜೈವಿಕ ಅನಿಲ ಉತ್ಪಾದಿಸುತ್ತಾರೆ. ಭಾರತದಲ್ಲಿ ಸಾಕಷ್ಟು ವ್ಯರ್ಥವೂ ಆಗುತ್ತದೆ. ಇದನ್ನು ಬಳಸಿ ಅರಬ್ ದೇಶಗಳಿಗೆ ಕಳಿಸುವ ಪ್ಲಾನ್ ಇದೀಗ ಇದೆ.
ಹಸುವಿನ ಸಗಣಿ ಸಾಮಾನ್ಯವಾಗಿ ಅಗ್ಗವೇ. ಆದರೆ ಗಲ್ಫ್ ದೇಶಗಳಲ್ಲಿ ಇದರ ಹೆಚ್ಚುತ್ತಿರುವ ಬೇಡಿಕೆಯು ಅದರ ಮೌಲ್ಯದಲ್ಲಿ ಏರಿಕೆಗೆ ಕಾರಣವಾಗಿದೆ. ಪ್ರಸ್ತುತ ಹಸುವಿನ ಸಗಣಿ ಪ್ರತಿ ಕಿಲೋಗ್ರಾಂಗೆ 30ರಿಂದ 50 ರೂ.ಗಳಿಗೆ ಮಾರಾಟವಾಗುತ್ತದೆ. ಬೇಡಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಕುವೈತ್, ಸೌದಿ ಅರೇಬಿಯಾ ಮತ್ತು ಯುಎಇಯಂತಹ ದೇಶಗಳಲ್ಲಿ ಭಾರತದಿಂದ ಹಸುವಿನ ಸಗಣಿ ಬಹಳ ಜನಪ್ರಿಯವಾಗುತ್ತಿದೆ. ಹೆಚ್ಚು ಮತ್ತು ಉತ್ತಮವಾದ ಖರ್ಜೂರ ಹಣ್ಣುಗಳನ್ನು ಬೆಳೆಯಲು ಭಾರತದಿಂದ ಹಸುವಿನ ಸಗಣಿ ಮತ್ತು ಹಸುವಿನ ಮೂತ್ರವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿವೆ.
2023–24ರ ಆರ್ಥಿಕ ವರ್ಷದಲ್ಲಿ, ಹಸುವಿನ ಸಗಣಿ ಮತ್ತು ಸಂಬಂಧಿತ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಭಾರತ ಸುಮಾರು ₹400 ಕೋಟಿ ಗಳಿಸಿದೆ. ಇದರಲ್ಲಿ ತಾಜಾ ಹಸುವಿನ ಸಗಣಿ- ₹125 ಕೋಟಿ. ಹಸುವಿನ ಸಗಣಿಯಿಂದ ತಯಾರಿಸಿದ ರಸಗೊಬ್ಬರಗಳು- ₹173.57 ಕೋಟಿ. ಕಾಂಪೋಸ್ಟ್ ಗೊಬ್ಬರ (ಸಮೃದ್ಧ ಮಣ್ಣಾಗಿ ಪರಿವರ್ತಿಸುವ ಹಸುವಿನ ಸಗಣಿ)- ₹88.02 ಕೋಟಿ ತಂದುಕೊಟ್ಟಿವೆ.
ಗೋಶಾಲೆಗಳಿಗೆ ಆರ್ಥಿಕ ಬಲ ತುಂಬಲು ಶಾಲೆಗಳಿಗೆ ಸಗಣಿಯಿಂದ ಪೇಂಟ್
ಭಾರತವು ಭವಿಷ್ಯದಲ್ಲಿ ಸಗಣಿ ರಫ್ತಿನಿಂದ ಇನ್ನೂ ಹೆಚ್ಚಿನದನ್ನು ಗಳಿಸಲು ದೊಡ್ಡ ಅವಕಾಶವಿದೆ. ಇದು ರಫ್ತು ಮೂಲಕ ಗ್ರಾಮೀಣ ಭಾರತದ ಜನ ಹೆಚ್ಚಿನ ಗಳಿಕೆ ಮಾಡಲು ಸಹಾಯ. ಹಳ್ಳಿಗಳಲ್ಲಿ ಹೊಸ ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಸೃಷ್ಟಿಸಬಹುದು. ಗ್ರಾಮೀಣ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ. ಪ್ರಪಂಚದಾದ್ಯಂತ ಸಾವಯವ ಕೃಷಿಯನ್ನು ಬೆಂಬಲಿಸಬಹುದು. ಆದ್ದರಿಂದ, ಒಂದು ಕಾಲದಲ್ಲಿ ತ್ಯಾಜ್ಯವೆಂದು ಪರಿಗಣಿಸಲ್ಪಟ್ಟದ್ದು ಈಗ ಕೃಷಿ ಮತ್ತು ರಫ್ತಿಗೆ ಅಮೂಲ್ಯವಾದ ಉತ್ಪನ್ನವಾಗುತ್ತಿದೆ.
ಕೂದಲಿಗೆ ಗೋ ಮೂತ್ರ, ಹಲ್ಲಿಗೆ ಸಗಣಿ ಬಳಸೋ ಇವರ ಕೈಯಲ್ಲಿ ಸದಾ ಮಷಿನ್ ಗನ್ ಇರುತ್ತೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ