
ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ನಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರಜೆ ಸೇರಿದಂತೆ 26 ಜನರನ್ನು ಬಲಿತೆಗೆದುಕೊಂಡ ಉಗ್ರರ ದಾಳಿ ಬಗ್ಗೆ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಸಂಬಂಧ ಯಾವುದೇ ತಟಸ್ಥ, ಪಾರದರ್ಶಕ ಮತ್ತು ವಿಶ್ವಾಸಾರ್ಹ ತನಿಖೆಗೆ ಪಾಕಿಸ್ತಾನ ಮುಕ್ತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅಮಾಯಕರನ್ನು ಬಲಿ ತೆಗೆದುಕೊಂಡ ಬರೋಬ್ಬರಿ 5 ದಿನಗಳ ಬಳಿಕ ಬಂದ ಮೊದಲ ಪ್ರತಿಕ್ರಿಯೆ ಇದಾಗಿದೆ. ಭಯೋತ್ಪಾದಕ ದಾಳಿಗೆ ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬ ತನಿಖೆಯ ವಿವರಗಳನ್ನು ಭಾರತ ಇನ್ನೂ ಜಗತ್ತಿಗೆ ತೋರಿಸದಿರುವಾಗ ಇಸ್ಲಾಮಾಬಾದ್‌ನಿಂದ ಬಂದ ಮೊದಲ ಪ್ರತಿಕ್ರಿಯೆ ಇದಾಗಿದೆ.
ಕಾಕುಲ್‌ನಲ್ಲಿರುವ ಪಾಕಿಸ್ತಾನದ ಅಬೋಟಾಬಾದ್ ಬಳಿಯ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಭಾಷಣ ಮಾಡುತ್ತಾ ಮಾತನಾಡಿರುವ ಅಲ್ಲಿನ ಪ್ರಧಾನಿ ಷರೀಫ್, ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ದುರಂತವು ಭಾರತದ ನಿರಂತರ ಆರೋಪದ ಆಟಕ್ಕೆ ಮತ್ತೊಂದು ಉದಾಹರಣೆಯಾಗಿದೆ, ಇದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಮತ್ತು ಈಗ ಜವಾಬ್ದಾರಿಯುತ ದೇಶವಾಗಿ ತನ್ನ ಪಾತ್ರವನ್ನು ಮುಂದುವರೆಸುತ್ತಾ, ಪಾಕಿಸ್ತಾನವು ಯಾವುದೇ ತಟಸ್ಥ, ಪಾರದರ್ಶಕ ಮತ್ತು ವಿಶ್ವಾಸಾರ್ಹ ತನಿಖೆಯಲ್ಲಿ ಭಾಗವಹಿಸಲು ಮುಕ್ತವಾಗಿದೆ ಎಂದಿದ್ದಾರೆ.
ಅಭಿವೃದ್ಧಿಯಲ್ಲಿ ಭಾರತವನ್ನು ಸೋಲಿಸದಿದ್ದರೆ ನನ್ನ ಹೆಸರು ಷರೀಪೇ ಅಲ್ಲ, ಪಾಕ್ ಪ್ರಧಾನಿ ಶಪಥ!
ಈ ಸಮಾರಂಭದಲ್ಲಿ ಹಿರಿಯ ಮಿಲಿಟರಿ ಅಧಿಕಾರಿಗಳು ಕೂಡ ಭಾಗವಹಿಸಿದ್ದರು ಮತ್ತು ಷರೀಫ್ ಈಗಾಗಲೇ ತಯಾರು ಮಾಡಿ ಬರೆದ ಭಾಷಣವನ್ನು ಓದುತ್ತಿರುವಂತೆ ಕಂಡುಬಂದಿತು. ಇದು ಪಾಕಿಸ್ತಾನ ಪ್ರಧಾನಿಯವರ ಭಾಷಣವನ್ನು ಪಾಕಿಸ್ತಾನ ಸರ್ಕಾರ ಸಿದ್ಧಪಡಿಸಿ, ಪರಿಶೀಲಿಸಿ, ಅನುಮೋದಿಸಿದೆ ಎಂಬುದನ್ನು ಸೂಚಿಸುತ್ತದೆ.
ಪೆಹಲ್ಗಾಮ್ ದಾಳಿಯ ನಂತರ, ಪಾಕಿಸ್ತಾನ ತನಿಖೆಯಲ್ಲಿ ಭಾಗವಹಿಸಲು ಮುಂದೆ ಬಂದಿದ್ದು ಇದೇ ಮೊದಲಲ್ಲ. ಪಠಾಣ್‌ಕೋಟ್ ದಾಳಿಯ ಸಂದರ್ಭದಲ್ಲಿಯೂ 2016ರಲ್ಲಿ ಪಾಕಿಸ್ತಾನದ ತನಿಖಾಧಿಕಾರಿಗಳ ತಂಡ ಪಠಾಣ್‌ಕೋಟ್ ವಾಯುನೆಲೆಗೆ ಭೇಟಿ ನೀಡಿತ್ತು. ಈ ಬಾರಿ ಕೂಡ ಪಾಕಿಸ್ತಾನ, ಇಸ್ಲಾಮಾಬಾದ್‌ನಲ್ಲಿರುವ ವಿದೇಶಿ ರಾಯಭಾರಿಗಳಿಗೆ ಮಾಹಿತಿ ನೀಡಿದ್ದು, ಸನ್ನಿವೇಶ ಉಲ್ಬಣಗೊಳ್ಳುವ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದೆ. ಹಿತ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಮೂಲಕ ದೃಢಪಡಿಸಲಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಚಟುವಟಿಕೆಗಳು
ಭಾರತವು ಘಟನೆ ಬಳಿಕ ಹಲವು ತ್ವರಿತ ಚಟುವಟಿಕೆಗಳನ್ನು ಕೈಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು 13ಕ್ಕೂ ಹೆಚ್ಚು ವಿಶ್ವ ನಾಯಕರೊಂದಿಗೆ ದೂರವಾಣಿ ಮಾತುಕತೆಯನ್ನು ನಡೆಸಿದ್ದಾರೆ. ದೆಹಲಿಯಲ್ಲಿ 30ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಗಳಲ್ಲಿ, ಪಹಲ್ಗಾಮ್ ದಾಳಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ದಾಳಿಯ ಹಿಂದೆ ಪಾಕಿಸ್ತಾನದ ಭಾಗವಹಿಸುವಿಕೆಯ ಬಗ್ಗೆ ಸ್ಪಷ್ಟ ಪುರಾವೆಗಳನ್ನು ಚರ್ಚಿಸಲಾಗಿದೆ.
ಬಲೂಚಿಸ್ತಾನ ದಾಳಿ: ಪಾಕ್ ಸೇನೆಯ 10 ಯೋಧರು ಉಡೀಸ್!
ಪಹಲ್ಗಾಮ್ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಎಂಬ ಭಯೋತ್ಪಾದಕ ಗುಂಪಿನ "ಎಲೆಕ್ಟ್ರಾನಿಕ್ ಸಹಿ" ಪಾಕಿಸ್ತಾನದ ಕನಿಷ್ಠ ಎರಡು ಸ್ಥಳಗಳಲ್ಲಿ ಪತ್ತೆಯಾಗಿದೆ. ಇದು ಪಾಕಿಸ್ತಾನದ ನೇರ ಸಂಪರ್ಕವನ್ನು ತೋರಿಸುವ ಅತ್ಯಂತ ಪ್ರಮುಖ ಪುರಾವೆಯಾಗಿದೆ. ದಾಳಿಯಲ್ಲಿನ ಕೆಲ ಭಯೋತ್ಪಾದಕರ ಗುರುತು ಸಿಕ್ಕಿದ್ದು, ಉಗ್ರರು ಹಿಂದೆ ಪಾಕಿಸ್ತಾನದಲ್ಲಿ ಶಿಬಿರಗಳಲ್ಲಿ ತರಬೇತಿ ಪಡೆದು, ಕೆಲ ಸಮಯದ ಹಿಂದೆ ಭಾರತದ ಭೂಪ್ರದೇಶದಲ್ಲಿ ನುಸುಳಿದವರು ಎಂಬುದನ್ನು ಉನ್ನತ ಮಟ್ಟದ ತಂಡ ದೃಢಪಡಿಸಿದೆ.
ಭಾರತದ ರಾಜತಾಂತ್ರಿಕ ಕ್ರಮಗಳ ಉದ್ದೇಶ ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕಿಸುವುದು ಮತ್ತು ಅದರ ಮೇಲೆ ಭಾರಿ ಒತ್ತಡವನ್ನು ತರಲು ತಯಾರಾಗಿರುವುದಾಗಿದೆ. ಇದರಿಂದ ಪಾಕಿಸ್ತಾನದ ಭಯೋತ್ಪಾದಕತೆಯ ಕರಾಳ ಸತ್ಯವನ್ನು ಜಗತ್ತಿನ ಮುಂದಿಡಲು ಭಾರತ ಬದ್ಧವಾಗಿದೆ ಎಂಬುದನ್ನು ಈ ಎಲ್ಲಾ ಬೆಳವಣಿಗೆಗಳು ಸೂಚಿಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ