
ವ್ಯಾಟಿಕನ್ ಸಿಟಿ: ಕಳೆದ ಸೋಮವಾರ ನಿಧನರಾದ ಕ್ರೈಸ್ತರ ಪರಮೋಚ್ಛ ಗುರು ಪೋಪ್ ಪ್ರಾನ್ಸಿಸ್ ಅಂತ್ಯಕ್ರಿಯೆ ಶನಿವಾರ ನಡೆಯಲಿದ್ದು, ಡೊನಾಲ್ಡ್ ಟ್ರಂಪ್, ಝೆಲೆನ್ಸ್ಕಿ, ಮುರ್ಮು ಸೇರಿದಂತೆ 130 ದೇಶಗಳ ಹಾಲಿ, ಮಾಜಿ ಮುಖ್ಯಸ್ಥರು ಅಂತಿಮ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.
ಪೋಪ್ ಅವರ ಪಾರ್ಥಿವ ಶರೀರದ ಮೂರು ದಿನಗಳ ಸಾರ್ವಜನಿಕ ಅಂತಿಮ ದರ್ಶನ ಶುಕ್ರವಾರ ರಾತ್ರಿ 7 ಗಂಟೆಗೆ ಮುಕ್ತಾಯಗೊಂಡಿದ್ದು, ಆ ಬಳಿಕ ಅಂತ್ಯಕ್ರಿಯೆ ಕ್ರಿಯೆ ಸಿದ್ದತೆ ಆರಂಭವಾಗಿದ್ದು ಅವರ ಶವದ ಪೆಟ್ಟಿಗೆಯನ್ನು ಮುಚ್ಚಲಾಗಿದೆ. ಅದಕ್ಕೂ ಮುನ್ನ ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ಪೋಪ್ ಅವರ ಮುಖದ ಮೇಲೆ ಬಿಳಿ ಬಟ್ಟೆ ಹಾಕಿ, ಪೋಪ್ ಅಧಿಕಾರವಧಿ ಸಮಯದಲ್ಲಿ ಮುದ್ರಿಸಲಾಗಿದ್ದ ನಾಣ್ಯಗಳನ್ನು ಹೊಂದಿರುವ ಒಂದು ಚೀಲವನ್ನು ಶವದ ಶವದ ಪೆಟ್ಟಿಗೆಯಲ್ಲಿಟ್ಟಿದ್ದಾರೆ.
ಭಾರತೀಯ ಕಾಲಮಾನ ಶನಿವಾರ ಮಧ್ಯಾಹ್ನ 1.30ಗೆ ವ್ಯಾಟಿಕನ್ ನಗರದ ಸೇಂಟ್ ಪೀಟರ್ಸ್ ಸ್ಕ್ರೇರ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪೋಪ್ ಪ್ರಾನ್ಸಿಸ್ ಅಂತ್ಯಕ್ರಿಯೆ ಸರಳವಾಗಿರಲಿದ್ದು, ಹಿಂದಿನ ಪೋಪ್‌ಗಳ ಅಂತ್ಯಕ್ರಿಯೆ ರೀತಿ ಮೂರು ಶವದ ಪೆಟ್ಟಿಗೆ ಬದಲು ಒಂದೇ ಶವದ ಪೆಟ್ಟಿಗೆಯಲ್ಲಿ ಇರಿಸಿ ಅಂತ್ಯಕ್ರಿಯೆ ಮಾಡಲಾಗುತ್ತದೆ.
ಪೋಪ್ ಹುದ್ದೆಗೇರಿದ್ದ ಲ್ಯಾಟಿನ್ ಅಮೆರಿಕದ ಮೊದಲ ಧರ್ಮಗುರು ಅಂತ್ಯಕ್ರಿಯೆಯಲ್ಲಿ 50 ರಾಷ್ಟ್ರಗಳ ಮುಖ್ಯಸ್ಥರು , 10 ರಾಜರು ಸೇರಿದಂತೆ 130 ಗಣ್ಯರು ಭಾಗಿಯಾಗುವ ನಿರೀಕ್ಷೆಯಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಪ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರನ್, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಇನ್ನು ಭಾರತದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವರಾದ ಕಿರಣ್ ರಿಜಿಜು, ಜಾರ್ಜ್ ಕುರಿಯನ್, ಗೋವಾ ಉಪ ಸಭಾಪತಿ ಜೋಶುವಾ ಡಿ ಸೋಜಾ ಕೂಡ ಪಾಲ್ಗೊಳ್ಳಲಿದ್ದಾರೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಭಾಗಿ
ಕ್ರೈಸ್ತರ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಭಾಗವಹಿಸಲು ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಏ.21 ರಂದು ನಿಧನ ಹೊಂದಿದ್ದ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ವ್ಯಾಟಿಕನ್ ನಗರದ ಪೀಟರ್ ಸ್ಕ್ವೇರ್‌ನಲ್ಲಿ ಇಂದು ನಡೆಯಲಿದೆ. ಈ ವೇಳೆ ಸರ್ಕಾರದ ಪರವಾಗಿ ಕೆ.ಜೆ. ಜಾರ್ಜ್, ಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬೇಕು ಎಂದು ನಿಯೋಜನೆ ಮಾಡಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ರಾಜ್ಯ ಶಿಷ್ಟಾಚಾರ ಇಲಾಖೆಯು ಆದೇಶ ಮಾಡಿದೆ.
ಇದನ್ನೂ ಓದಿ: Pope Francis: ಕೋಣೆಗೆ ಬೀಗ, 6 ದಿನದಲ್ಲಿ ಅಂತ್ಯಕ್ರಿಯೆ, ಹೊಸ ಪೋಪ್ ಆಯ್ಕೆ ಹೇಗೆ? ಏನಿದು ಕಪ್ಪು-ಬಿಳುಪು ಹೊಗೆ?
ಶಾಂತಿ-ಪ್ರೀತಿಯ, ಭರವಸೆಯ ದಾರಿದೀಪ
ಪೋಪ್ ಫ್ರಾನ್ಸಿಸ್ ಅವರು ದ್ವೇಷ, ಯುದ್ಧ, ವಿಭಜನೆಯಿಂದ ಮೋಡ ಕವಿದಿರುವ ಜಗತ್ತಿನಲ್ಲಿ ಶಾಂತಿ-ಪ್ರೀತಿಯ, ಭರವಸೆಯ ದಾರಿದೀಪವಾಗಿದ್ದರು, ಕರುಣೆ, ದಯೆಯೇ ಧರ್ಮಸಭೆಯ ಅತ್ಯಂತ ಶ್ರೇಷ್ಠ ಬಡಿತ ಎಂದು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ನಮ್ರತೆ, ಸಹಾನುಭೂತಿ ಮತ್ತು ಸುವಾರ್ತೆಗೆ ಅಚಲವಾದ ಬದ್ಧತೆಯೊಂದಿಗೆ ಮುನ್ನಡೆಸಿದರು. ಸತ್ಯ ಮತ್ತು ಧರ್ಮದ ಮಾರ್ಗಗಳನ್ನು ಅನುಸರಿಸಿ, ನಿಷ್ಟೆ, ಧೈರ್ಯ ಹಾಗೂ ಸಾರ್ವತ್ರಿಕ ಪ್ರೀತಿಯಿಂದ, ವಿಶೇಷವಾಗಿ ಬಡವರು, ನಿರ್ಗತಿಕರು, ಗಡಿಅಂಚಿನಲಿಲ್ಲಿ ನೆರವಿನ ಅಗತ್ಯವಿರುವ ಜನರಿಗಾಗಿ ಬದುಕಿದರು ಮತ್ತು ನಮಗೂ ಅದೇ ರೀತಿ ಮುಂದುವರಿಯುವಂತೆ ಸ್ಪೂರ್ತಿ ನೀಡಿದರು. ಅವರ ಅಧಿಕಾರವು ಶಾಂತಿ, ನ್ಯಾಯ, ಬಡವರ ಬಗ್ಗೆ ಕಾಳಜಿ ಮತ್ತು ಸೃಷ್ಟಿಯ ಮೇಲಿನ ಪ್ರೀತಿ, ದಣಿವರಿಯದ ಅನ್ವೇಷಣೆಯಿಂದ ಗುರುತಿಸಲ್ಪಟ್ಟಿತ್ತು ಎಂದರು.
ಇದನ್ನೂ ಓದಿ: 20 ವರ್ಷಗಳಿಂದ ನಿದ್ರೆಯಲ್ಲಿರುವ ʼಸ್ಲೀಪಿಂಗ್ ಪ್ರಿನ್ಸ್ʼ ಬಗ್ಗೆ ನಿಮಗೆ ಗೊತ್ತಾ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ