ಪಾಕಿಸ್ತಾನದಲ್ಲಿ ಮೆಡಿಕಲ್ ಎಮರ್ಜೆನ್ಸಿ! ಇರಾನ್-ಹಾರ್ಮುಜ್ ಬಿಕ್ಕಟ್ಟಿನ ಎಫೆಕ್ಟ್: ಜೀವ ಉಳಿಸುವ ಔಷಧಗಳಿಗಾಗಿ ಜನರ ಪರದಾಟ

Published : May 06, 2026, 10:29 PM IST
pakistan economic loss iran war oil import bill rise shahbaz sharif us iran conflict impact

ಸಾರಾಂಶ

ಅಮೆರಿಕ-ಇರಾನ್ ಸಂಘರ್ಷದಿಂದಾಗಿ ಪಾಕಿಸ್ತಾನದಲ್ಲಿ ತೀವ್ರ ಔಷಧಗಳ ಕೊರತೆ ಉಂಟಾಗಿದ್ದು, 'ವೈದ್ಯಕೀಯ ತುರ್ತು ಪರಿಸ್ಥಿತಿ' ನಿರ್ಮಾಣವಾಗಿದೆ. ಕಚ್ಚಾ ವಸ್ತುಗಳ ಆಮದು ಸ್ಥಗಿತ ಮತ್ತು ಸರ್ಕಾರದ ತೆರಿಗೆ ನೀತಿಗಳಿಂದಾಗಿ ಮಧುಮೇಹ, ಕ್ಯಾನ್ಸರ್‌ನಂತಹ ಕಾಯಿಲೆಗಳ ರೋಗಿಗಳು ಪ್ರಾಣಾಪಾಯ ಎದುರಿಸುತ್ತಿದ್ದಾರೆ.

ಇಸ್ಲಾಮಾಬಾದ್ (ಮೇ.6): ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಕಾರ್ಮೋಡ ಜಗತ್ತಿನ ಮೇಲೆ ಹಲವು ರೀತಿಯಲ್ಲಿ ಪ್ರಭಾವ ಬೀರುತ್ತಿದೆ. ಕೆಲವು ದೇಶಗಳು ತೈಲ ಕೊರತೆಯನ್ನು ಎದುರಿಸುತ್ತಿದ್ದರೆ, ಇನ್ನು ಕೆಲವು ಅನಿಲ ಕೊರತೆಯಿಂದ ಕಂಗಾಲಾಗಿವೆ. ಆದರೆ, ಪಾಕಿಸ್ತಾನದಲ್ಲಿ ಮಾತ್ರ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಅಲ್ಲಿ 'ವೈದ್ಯಕೀಯ ತುರ್ತು ಪರಿಸ್ಥಿತಿ' (Medical Emergency) ನಿರ್ಮಾಣವಾಗಿದೆ. ಜೀವ ರಕ್ಷಕ ಔಷಧಗಳ ತೀವ್ರ ಕೊರತೆಯಿಂದಾಗಿ ಜನರಲ್ಲಿ ಭೀತಿ ಆವರಿಸಿದೆ.

'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿಯ ಪ್ರಕಾರ, ಇರಾನ್ ಬಿಕ್ಕಟ್ಟಿನಿಂದಾಗಿ ಜಾಗತಿಕ ಪೂರೈಕೆ ಸರಪಳಿಯ ಮೇಲೆ ಭಾರಿ ಹೊಡೆತ ಬಿದ್ದಿದೆ. ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತಿದ್ದ ಸಾರಿಗೆ ಸ್ಥಗಿತಗೊಂಡಿರುವುದರಿಂದ ಅಥವಾ ವಿಳಂಬವಾಗುತ್ತಿರುವುದರಿಂದ ಶಿಪ್ಪಿಂಗ್ ವೆಚ್ಚ ಗಗನಕ್ಕೇರಿದೆ. ಪಾಕಿಸ್ತಾನದ ಔಷಧ ಉದ್ಯಮವು ಕಚ್ಚಾ ವಸ್ತುಗಳಿಗಾಗಿ ವಿದೇಶಿ ಆಮದಿನ ಮೇಲೆ ಅವಲಂಬಿತವಾಗಿದೆ. ಯುದ್ಧದ ಕಾರಣದಿಂದಾಗಿ ಈ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇವುಗಳ ಕೊರತೆಯು ಇಡೀ ದೇಶವನ್ನು ಕಾಡುತ್ತಿದೆ.

ಪ್ರಮುಖ ನಗರಗಳಲ್ಲಿ ಔಷಧಿಗಳ ಹಾಹಾಕಾರ

ಪಾಕಿಸ್ತಾನದ ಪ್ರಮುಖ ನಗರಗಳಾದ ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್ನಲ್ಲಿ ಔಷಧಗಳ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ಜನರಿಗೆ ಚಿಕಿತ್ಸೆ ಪಡೆಯುವುದು ಅಸಾಧ್ಯವಾಗಿದೆ. ಮಧುಮೇಹ (Diabetes), ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳು ಔಷಧ ಸಿಗದೆ ಪ್ರಾಣಾಪಾಯ ಎದುರಿಸುತ್ತಿದ್ದಾರೆ. ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ 2023 ರಿಂದಲೇ ಔಷಧಗಳ ಬೆಲೆ ಏರಿಕೆಯಾಗುತ್ತಿತ್ತು. 2024ರಲ್ಲಿ ಅಗತ್ಯ ಔಷಧಗಳ ಬೆಲೆಯನ್ನು ಸುಮಾರು 50% ಹೆಚ್ಚಿಸಲಾಗಿತ್ತು. 2025ರಲ್ಲಿ ಮತ್ತೆ ಬೆಲೆಯನ್ನು 30 ರಿಂದ 40% ರಷ್ಟು ಏರಿಕೆ ಮಾಡಲಾಯಿತು. ಇದರ ಜೊತೆಗೆ, ಶಹಬಾಜ್ ಷರೀಫ್ ಸರ್ಕಾರವು ಔಷಧ ಉತ್ಪಾದನೆಗೆ ಬಳಸುವ ಕಚ್ಚಾ ವಸ್ತುಗಳ ಮೇಲೆ 18% ಜಿಎಸ್‌ಟಿ (GST) ವಿಧಿಸಿರುವುದು ರೋಗಿಗಳ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿದೆ.

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಗಳು ಈ ಎಲ್ಲಾ ಬಿಕ್ಕಟ್ಟಿಗೆ ಕಾರಣವಾಗಿವೆ. ಈ ದಾಳಿಯಲ್ಲಿ ಇರಾನ್‌ನ ಮಿಲಿಟರಿ ನೆಲೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಗುರಿ ಮಾಡಲಾಗಿತ್ತು. ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಈ ದಾಳಿಯಲ್ಲಿ ಹತರಾಗಿದ್ದಾರೆ ಎಂಬ ಮಾಹಿತಿ ಇದೆ. ಈ ಗಂಭೀರ ಪರಿಸ್ಥಿತಿಯು ಜಾಗತಿಕವಾಗಿ ಕಚ್ಚಾ ತೈಲದ ಕೊರತೆಯನ್ನು ಸೃಷ್ಟಿಸಿರುವುದಲ್ಲದೆ, ಪಾಕಿಸ್ತಾನದಂತಹ ದೇಶಗಳನ್ನು ಔಷಧಿಗಳಿಗಾಗಿ ಹಾಹಾಕಾರ ಪಡುವಂತೆ ಮಾಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Met Gala: 1800 ಕ್ಯಾರಟ್​ ವಜ್ರದಲ್ಲಿ ಮಿಂಚಿದ ಇಶಾ ಅಂಬಾನಿ- ರಾಜ ಮನೆತನದ ಆಭರಣ: ಕ್ಯೂಟ್​ ಫೋಟೋಸ್​ ಇಲ್ಲಿವೆ
ಅಮೆರಿಕದ ಹಾರುವ ಗ್ಯಾಸ್‌ ಸ್ಟೇಷನ್‌ ನಾಪತ್ತೆ ; ಎಮರ್ಜೆನ್ಸಿ ಸಂದೇಶ ರವಾನಿಸಿ ಕಾಣೆ