ಅಮೆರಿಕದ ಹಾರುವ ಗ್ಯಾಸ್‌ ಸ್ಟೇಷನ್‌ ನಾಪತ್ತೆ ; ಎಮರ್ಜೆನ್ಸಿ ಸಂದೇಶ ರವಾನಿಸಿ ಕಾಣೆ

Published : May 06, 2026, 08:17 AM IST
US KC-135R Stratotanker

ಸಾರಾಂಶ

ಪರ್ಷಿಯನ್‌ ಕೊಲ್ಲಿಯ ಮೇಲೆ ಹಾರಾಟ ನಡೆಸುತ್ತಿದ್ದ ಅಮೆರಿಕದ ಸೇನಾ ಇಂಧನ ಪೂರೈಕೆ ವಿಮಾನ ಬೋಯಿಂಗ್‌ ಕೆಸಿ- 135 ಸ್ಟ್ರಾಟೋಟ್ಯಾಂಕರ್ ನಾಪತ್ತೆಯಾಗಿದೆ. ಇರಾನ್‌ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ನೀಡುತ್ತಿದ್ದ ಈ ವಿಮಾನ, ಕಣ್ಮರೆಯಾಗುವ ಮುನ್ನ ತುರ್ತು ಸಂದೇಶ ರವಾನಿಸಿತ್ತು

ವಾಷಿಂಗ್ಟನ್‌: ಅಮೆರಿಕದ ಸೇನಾ ವಿಮಾನಗಳಿಗೆ ಇಂಧನ ಪೂರೈಸುವ, ‘ಹಾರುವ ಗ್ಯಾಸ್‌ ಸ್ಟೇಷನ್‌’ ಬೋಯಿಂಗ್‌ ಕೆಸಿ- 135 ಸ್ಟ್ರಾಟೋಟ್ಯಾಂಕರ್ ವಿಮಾನ, ಇತ್ತೀಚೆಗೆ ಪರ್ಷಿಯನ್‌ ಕೊಲ್ಲಿಯ ಮೇಲೆ (ಕತಾರ್ ಮೇಲೆ) ಹಾರುವಾಗ ನಾಪತ್ತೆಯಾಗಿದೆ.

ಇರಾನ್‌ ವಿರುದ್ಧದ ಯುದ್ಧದಲ್ಲಿ ಅಮೆರಿಕ ಸೇನೆಗೆ ಬೆಂಬಲವಾಗಿ ವಿಮಾನವು ಮಧ್ಯಪ್ರಾಚ್ಯದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಾಪತ್ತೆ ಆಗುವ ಮುನ್ನ ಅದು ಎಮರ್ಜೆನ್ಸಿ (7700) ಸಂದೇಶ ರವಾನಿಸಿ ಕಾಣೆಯಾಗಿದೆ.

ವಿಮಾನದೊಳಗೆ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಫ್ಲೈಟ್‌ರಾಡಾರ್ ದತ್ತಾಂಶದಲ್ಲಿ ದಾಖಲಾಗಿದೆ. ಅದಕ್ಕೂ ಮುನ್ನ ಯುಎಇನಲ್ಲಿರುವ ಅಲ್‌ ಧಫ್ರಾ ವಾಯುನೆಲೆಯಿಂದ ಅದು ಹಾರಾಟ ನಡೆಸಿತ್ತು. ವಿಮಾನ ನಾಪತ್ತೆಯಲ್ಲಿ ಇರಾನ್ ಭಾಗಿಯಾಗಿದೆಯೇ ಎಂಬುದರ ಬಗ್ಗೆ ಅಮೆರಿಕ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೆಸಿ- 135 ಸ್ಟ್ರಾಟೋಟ್ಯಾಂಕರ್ ನಾಲ್ಕು ಟರ್ಬೊಫ್ಯಾನ್ ಎಂಜಿನ್‌ ಹೊಂದಿರುವ ಮಿಲಿಟರಿ ವಿಮಾನ. ಇದನ್ನು ಕಾರ್ಯಾಚರಣೆಯಲ್ಲಿರುವ ಯುದ್ಧ ವಿಮಾನಗಳಿಗೆ ಇಂಧನ ತುಂಬಲು ಬಳಸಲಾಗುತ್ತದೆ. 60 ವರ್ಷಗಳಿಗೂ ಹೆಚ್ಚು ಕಾಲ ಅಮೆರಿಕ ವಾಯುಪಡೆಯ ಕಾರ್ಯಾಚರಣೆಗಳಲ್ಲಿ ಬಳಕೆಯಾಗಿದೆ. ಇದು ಸುಮಾರು 37,600 ಕೆಜಿ ಸರಕು, ಹಲವಾರು ಜನ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ಯುಎಇ ಮೇಲಿನ ಇರಾನ್ ದಾಳಿಗೆ ಮೋದಿ ಗರಂ

ನವದೆಹಲಿ:ಮೂವರು ಭಾರತೀಯ ನಾಗರಿಕರು ಗಾಯಗೊಳ್ಳಲು ಕಾರಣವಾದ ಯುಎಇಯ ಪ್ರಮುಖ ಬಂದರು ಫುಜೈರಾ ಮೇಲಿನ ಇರಾನ್‌ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ‘ನಾಗರಿಕರ ಮೇಲಿನ ದಾಳಿ ಒಪ್ಪಲು ಸಾಧ್ಯವಿಲ್ಲ. ಭಾರತವು ಯುಎಇ ಜತೆಗೆ ನಿಲ್ಲಲಿದೆ’ ಎಂದು ಖಡಕ್ಕಾಗಿ ಹೇಳಿದ್ದಾರೆ.

ಫುಜೈರಾ ಬಂದರಿನಲ್ಲಿರುವ ಪ್ರಮುಖ ತೈಲ ಘಟಕದ ಮೇಲೆ ಸೋಮವಾರ ಇರಾನ್‌ನಿಂದ ಅಪ್ರಚೋದಿತ ಡ್ರೋನ್‌ ದಾಳಿ ನಡೆಸಲಾಗಿತ್ತು. ಇದರಲ್ಲಿ 3 ಭಾರತೀಯರು ಗಾಯಗೊಂಡಿದ್ದರು. ಈ ದಾಳಿ ಹಿಂದೆ ಇರಾನ್‌ ಕೈವಾಡವಿದೆ ಎಂದು ಯುಎಇ ಆರೋಪಿಸಿತ್ತು.

‘ಮೂವರು ಭಾರತೀಯರು ಗಾಯಗೊಳ್ಳಲು ಕಾರಣವಾದ ಯುಎಇ ಮೇಲಿನ ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ನಾಗರಿಕರು ಮತ್ತು ನಾಗರಿಕ ಮೂಲಸೌಲಭ್ಯಗಳ ಮೇಲಿನ ದಾಳಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ’ ಎಂದು ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಭಾರತವು ಯುಎಇ ಜತೆಗೆ ನಿಲ್ಲಲಿದೆ. ಮಾತುಕತೆ ಮತ್ತು ರಾಯಭಾರತ್ವದ ಮೂಲಕ ಎಲ್ಲಾ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಲು ಬೆಂಬಲ ನೀಡುತ್ತದೆ.ಹೋರ್ಮುಜ್‌ ಜಲಸಂಧಿಯಲ್ಲಿ ಸುರಕ್ಷಿತ ಮತ್ತು ಯಾವುದೇ ಅಡೆತಡೆ ಇಲ್ಲದ ಹಡಗು ಪ್ರಯಾಣವು ಪ್ರಾದೇಶಿಕ ಶಾಂತಿ, ಸ್ಥಿರತೆ ಹಾಗೂ ಅಂತಾರಾಷ್ಟ್ರೀಯ ಇಂಧನ ಭದ್ರತೆಗೆ ಅತ್ಯಗತ್ಯ’ ಎಂದು ಹೇಳಿದ್ದಾರೆ. ಇರಾನ್‌ನಿಂದ ಹಾರಿಸಲ್ಪಟ್ಟ 12 ಬ್ಯಾಲಿಸ್ಟಿಕ್‌ ಕ್ಷಿಪಣಿಗಳು, 3 ಕ್ರೂಸ್‌ ಕ್ಷಿಪಣಿಗಳು ಹಾಗೂ ನಾಲ್ಕು ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಯುಎಇ ಹೇಳಿಕೊಂಡಿದೆ.

ಮೂವರು ಭಾರತೀಯರಿಗೆ ಗಾಯ

ಇರಾನ್ ಮೂಲದ ಡ್ರೋನ್ ದಾಳಿಯ ನಂತರ ಯುಎಇಯ ಫುಜೈರಾ ಪೆಟ್ರೋಲಿಯಂ ಇಂಡಸ್ಟ್ರೀಸ್ ವಲಯ (ಎಫ್‌ಒಐಝ್)ದಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದೆ. ಆಗ ಮೂವರು ಭಾರತೀಯರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಇರಾನ್‌ನಿಂದ ಬಂದ ಡ್ರೋನ್ ದಾಳಿಯ ಪರಿಣಾಮವಾಗಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಬೆಂಕಿ ನಿಯಂತ್ರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರ ಬೆನ್ನಲ್ಲೇ ಇರಾನ್ ಮತ್ತೆ ದಾಳಿ ಆರಂಭಿಸಿದೆ ಎಂದು ಯುಎಇ ಆರೋಪಿಸಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಭಾರತದ ಆರು ಸಿಬ್ಬಂದಿಗೆ ಪಾಕಿಸ್ತಾನದಿಂದ ನೆರವು
'ಮೋದಿಯಂತಹ ನಾಯಕ ಸಿಕ್ಕಿದ್ದು ಭಾರತದ ಅದೃಷ್ಟ': ಬಂಗಾಳ ಗೆಲುವಿಗೆ ಪ್ರಧಾನಿಯನ್ನು ಅಭಿನಂದಿಸಿದ ಡೊನಾಲ್ಡ್ ಟ್ರಂಪ್!