
ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು. ಪಾಕಿಸ್ತಾನದ ಹಿರಿಯ ಪತ್ರಕರ್ತನೊಬ್ಬ 2007ರಿಂದ 2010ರ ನಡುವೆ ಹಲವು ಬಾರಿ ಭಾರತಕ್ಕೆ ಭೇಟಿ ನೀಡಿ ಐಎಸ್‌ಐ ಪರವಾಗಿ ಬೇಹುಗಾರಿಕೆ ಮಾಡಿದ್ದೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಈ ವೇಳೆ ಉಪ ರಾಷ್ಟ್ರಪತಿಯಾಗಿದ್ದ ಹಮೀದ್ ಅನ್ಸಾರಿ ಅವರೇ ನನ್ನನ್ನು ಕಾರ್ಯಕ್ರಮವೊಂದಕ್ಕೆ ಸ್ವಾಗತಿಸಿದ್ದರು ಎಂದು ಪಾಕ್ ಪತ್ರಕರ್ತ ನುಸ್ರತ್ ಮಿರ್ಜಾ ಆರೋಪಿಸಿದ್ದ. ಇದರ ಬೆನ್ನಲ್ಲೇ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹಮೀದ್ ಅನ್ಸಾರಿ ಅವರ ಮೇಲೆ ಆರೋಪಗಳನ್ನು ಮಾಡಿದ್ದರು. ಪಾಕ್ ಮೂಲದ ಪತ್ರಕರ್ತನಿಗೆ ಭಾರತದಲ್ಲಿ ಬೇಹುಗಾರಿಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ, ಉತ್ತರಿಸಿ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಉಪ ರಾಷ್ಟ್ರಪತಿ, ಪತ್ರಕರ್ತ ನುಸ್ರತ್ ಮಿರ್ಜಾರನ್ನು ಸ್ವಾಗತಿಸಿಲ್ಲ ಎಂದು ತಿಳಿಸಿದ್ದಾರೆ. ಅವರನ್ನು ಸ್ವಾಗತಿಸುವುದಾಗಲೀ ಅಥವಾ ಆಹ್ವಾನ ಮಾಡಿರುವುದಾಗಲೀ ಶುದ್ಧ ಸುಳ್ಳು ಎಂದು ಹಮೀದ್ ಅನ್ಸಾರಿ ಅವರು ತಿಳಿಸಿದ್ದಾರೆ.
"ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಸರ್ಕಾರದ ಸಲಹೆಗಳೊಂದಿಗೆ ವಿದೇಶಾಂಗ ಸಚಿವಾಲಯ ಉಪ ರಾಷ್ಟ್ರಪತಿ ಆಹ್ವಾನಿಸಬೇಕಾದ ಗೌರವಾನ್ವಿತರ ಪಟ್ಟಿಯನ್ನು ನೀಡಲಾಗುತ್ತದೆ. ನನಗೆ ನುಸ್ರತ್ ಮಿರ್ಜಾ ಅವರ ಆಹ್ವಾನವೂ ಬಂದಿಲ್ಲ, ನಾನು ಅದನ್ನು ಎಂದಿಗೂ ಪಡೆದೂ ಇಲ್ಲ," ಎಂದು ಹಮೀದ್ ಅನ್ಸಾರಿ ಅವರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಮೀದ್ ಅನ್ಸಾರಿ ಅವರು ಭಾರತದ ಇರಾನ್ ರಾಯಭಾರಿಯಾಗಿದ್ದಾಗ ದೇಶದ ಭದ್ರತಾ ಹಿತಾಸಕ್ತಿಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂಬ ಬಿಜೆಪಿ ಆರೋಪವನ್ನು ಹಮೀದ್ ಅನ್ಸಾರಿ ಅಲ್ಲಗಳೆದಿದ್ದಾರೆ. ರಾಯಭಾರಿಯಾಗಿ ಸೇವೆ ಸಲ್ಲಿಸುವಾಗ ಅಂದಿನ ಸರ್ಕಾರಕ್ಕೆ ಮಾಹಿತಿ ಇರದ ಯಾವುದೇ ಕೆಲವನ್ನೂ ಮಾಡಿಲ್ಲ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಯುಪಿಎ ಸರ್ಕಾರದ ವೇಳೆ ಭಾರತಕ್ಕೆ ಭೇಟಿ, ISI ಪರ ಬೇಹುಗಾರಿಕೆ ಮಾಡಿದ್ದೆ ಎಂದ ಪಾಕ್ ಪತ್ರಕರ್ತ!
"ರಾಯಭಾರಿಯಾಗಿ ಸೇವೆ ಸಲ್ಲಿಸುವಾಗ ಎಲ್ಲಾ ಕಾಲಕ್ಕೂ ನಾನು ಏನು ಕೆಲಸ ಮಾಡುತ್ತಿದ್ದೇನೆ ಎಂಬುದನ್ನು ಅಂದಿನ ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದೆ. ದೇಶದ ಭದ್ರತೆ ಮತ್ತು ಸುರಕ್ಷತೆಯ ವಿಚಾರದಲ್ಲಿ ನನಗೆ ಬದ್ಧತೆಯಿದೆ. ಅದನ್ನು ಎಂದಿಗೂ ಗಾಳಿಗೆ ತೂರಿದವನಲ್ಲ ಮತ್ತು ಅಸಡ್ಡೆ ತೋರಿಸಿದರೆ ಆಗಬಹುದಾದ ದುರಂತಗಳ ಬಗ್ಗೆ ನನಗೆ ಅರಿವಿದೆ. ಭಾರತದ ಸರ್ಕಾರಕೆ ನಾನು ಮಾಡಿರುವ ಎಲ್ಲ ಕೆಲಸಗಳ ಅರಿವಿದೆ ಮತ್ತು ದಾಖಲಾತಿಗಳಿವೆ," ಎಂದು ಹಮೀದ್ ಅನ್ಸಾರಿ ಹೇಳಿದ್ದಾರೆ.
"ಟೆಹ್ರಾನ್‌ನಲ್ಲಿ ನನ್ನ ಅಧಿಕಾರಾವಧಿ ಮುಗಿದ ನಂತರ ನಾನು ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್‌ನ ಭಾರತದ ಪೂರ್ಣಪ್ರಮಾಣದ ಪ್ರತಿನಿಧಿಯಾಗಿ ನೇಮಿಸಲ್ಪಟ್ಟೆ. ನನ್ನ ಕೆಲಸದ ಬಗ್ಗೆ ವಿದೇಶದಲ್ಲಿ ಮತ್ತು ಭಾರತದಲ್ಲಿ ಅಪಾರ ಗೌರವವನ್ನು ಗಳಿಸಿದ್ದೇನೆ," ಎಂದು ಹಮೀದ್ ಅನ್ಸಾರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: US Drone Strike: ಐಸಿಸ್ ಸಿರಿಯಾ ಮುಖ್ಯಸ್ಥನ ಹತ್ಯೆ ಖಚಿತಪಡಿಸಿದ ಪೆಂಟಗನ್
ನುಸ್ರತ್ ಮಿರ್ಜಾ ಹೇಳಿದ್ದೇನು?:
ಪಾಕಿಸ್ತಾನದ ಅಂಕಣಕಾರ ನುಸ್ರತ್ ಮಿರ್ಜಾ ಅವರು ತಮ್ಮ ಭಾರತ ಪ್ರವಾಸದ ಸಮಯದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗಾಗಿ ಗೂಢಚಾರಿಕೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. 2007 ರಿಂದ 2010 ರ ಅವಧಿಯಲ್ಲಿ ಭಾರತದ ರಾಜಧಾನಿ ದೆಹಲಿ ಮತ್ತು ಅಲಿಗಢದಲ್ಲಿ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವೇಳೆ, ಐಎಸ್ಐಗೆ ಬೇಹುಗಾರಿಕೆ ನಡೆಸಿದ್ದಾಗಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಈ ಕುರಿತಾಗಿ ಇಂಡಿಯಾ ಟುಡೇ ಪತ್ರಿಕೆ ಕೂಡ ಪರಾಮರ್ಶೆ ಮಾಡಿದ್ದು, 2009ರ ಅಕ್ಟೋಬರ್ 27 ರಂದು ದೆಹಲಿಯ ಒಬೆರಾಯ್ ಹೋಟೆಲ್‌ನಲ್ಲಿ ನಡೆದ ಭಯೋತ್ಪಾದನೆ ವಿರುದ್ಧದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಿರ್ಜಾ ಭಾಗವಹಿಸಿದ್ದರು. ಪಾಕಿಸ್ತಾನಿ ಲೇಖಕರನ್ನು ಅಹ್ಮದ್ ಬುಖಾರಿ, ಜಾಮಾ ಮಸೀದಿಯ ಶಾಹಿ ಇಮಾಮ್ ಮತ್ತು ಯಾಹ್ಯಾ ಬುಖಾರಿ ಸ್ವಾಗತಿಸಿದ್ದರು. ಜಾಮಾ ಮಸೀದಿ ಯುನೈಟೆಡ್ ಫೋರಂ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಸಂಪುಟ ಸಚಿವ ಗುಲಾಂ ನಬಿ ಆಜಾದ್ ಕೂಡ ಭಾಗವಹಿಸಿದ್ದರು. ಮಧು ಕಿಶ್ವರ್ ಸೇರಿದಂತೆ ಇತರರು ಆಹ್ವಾನಿತರಾಗಿದ್ದರು. ಜುಲೈ 11 ರಂದು, ಮಿರ್ಜಾ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಇಲಾಖೆಯಿಂದ ವಿವಿಧ 'ಸವಲತ್ತು'ಗಳನ್ನು ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ